ಬಾಗಲಕೋಟೆ: ಕಾಂಗ್ರೆಸ್(Congress) ಪಕ್ಷದಲ್ಲಿ ಮೂರು ಗುಂಪುಗಳಿವೆ. ಖರ್ಗೆ, ಪರಮೇಶ್ವರ್ ಹಾಗೂ ಶಾಮನೂರು ಶಿವಶಂಕರಪ್ಪ ಅವರದೊಂದ್ದು ಗುಂಪು ಸೇರಿ ಒಟ್ಟಾರೆ ಮೂರು ಗುಂಪು ಇದೆ. ಇನ್ನೂ ಸಿದ್ಧರಾಮಯ್ಯ (Siddaramaiah) ಹಾಗೂ ಡಿ.ಕೆ.ಶಿವಕುಮಾರ್(DK Shivakumar) ಅವರಿಬ್ಬರು ಎಣ್ಣೆ, ನೀರು ಇದ್ದಂತೆ ಎಂದಿಗೂ ಸೇರುವುದಿಲ್ಲ. ಅವರಲ್ಲಿಯೇ ಒಡಕುಗಳಿವೆ ಎಂದು ಬಾಗಲಕೋಟೆಯಲ್ಲಿ ಸಚಿವ ಗೋವಿಂದ ಕಾರಜೋಳ ಹೇಳಿಕೆ ನೀಡಿದ್ದಾರೆ.
ಬಳಿಕ ಮಾತನಾಡಿದ ಅವರು, ಯೋಜನೆಗಳಿಗೆ ಹೆಸರು ಬದಲಿಸಿದ್ದೇ ಬಿಜೆಪಿಯ ಸಾಧನೆ ಎಂದ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಜನ ಹೀನಾಯವಾಗಿ ಸೋಲಿಸಿದರು. ಇದನ್ನು ಸಿದ್ದರಾಮಯ್ಯನವರು ಅರ್ಥ ಮಾಡಿಕೊಳ್ಳಬೇಕು. ಸಿದ್ದರಾಮಯ್ಯ ಕಾಲದಲ್ಲಿ ಕೊರೊನಾ, ಪ್ರವಾಹ ಇರಲಿಲ್ಲ. ಆದರೂ ಅವರು ಯಾವುದೇ ಅಭಿವೃದ್ಧಿ ಕೆಲಸ ಮಾಡಲಿಲ್ಲ. ಕೆಲಸ ಮಾಡಿಲ್ಲವೆಂದು ಜನ ಅವರನ್ನು ತಿರಸ್ಕರಿಸಿದ್ದಾರೆ ಅಷ್ಟೇ ಎಂದು ತಿಳಿಸಿದ್ದಾರೆ.
ಬಿಜೆಪಿ ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಹೋಗುವುದಿಲ್ಲ: ಸಚಿವ ಕಾರಜೋಳ
ಕಾಂಗ್ರೆಸ್ ಪಕ್ಷ ಮುಳುಗುವ ಹಡಗು. ಅಂತಹ ಪಕ್ಷಕ್ಕೆ ಬಿಜೆಪಿ ಶಾಸಕರು ಹೋಗುವುದಿಲ್ಲ. ಇನ್ನೂ ಬಿಜೆಪಿಯಲ್ಲಿ ವಲಸೆ ಶಾಸಕರು ಎಂದು ಯಾರೂ ಇಲ್ಲ. ಬಿಜೆಪಿಗೆ ಬಂದ ಬಳಿಕ ಅವರು ಪ್ರಾಥಮಿಕ ಸದಸ್ಯತ್ವ ಪಡೆದಿರುತ್ತಾರೆ. ಸಾಯುವವರೆಗೆ ಬಿಜೆಪಿಯಲ್ಲೇ ಇರುತ್ತೇವೆ ಎಂದಿದ್ದಾರೆ ಶಾಸಕರು. ಬೆಳಗಾವಿ ಜಿಲ್ಲೆಯ ಬಿಜೆಪಿಯಲ್ಲಿ ಭಿನ್ನಾಭಿಪ್ರಾಯ ಇಲ್ಲ ಎಂದು ಬಾಗಲಕೋಟೆಯಲ್ಲಿ ಸಚಿವ ಗೋವಿಂದ ಕಾರಜೋಳ ಸ್ಪಷ್ಟನೆ ನೀಡಿದ್ದಾರೆ.
ಬಳಿಕ ಮಾತನಾಡಿದ ಅವರು, ಟೀ ಕುಡಿಯಲು ಸೇರಿದರೂ ನೀವು ಭಿನ್ನಮತ ಸ್ಪೋಟ ಎಂದು ಹೇಳುತ್ತೀರಾ. ಭಿನ್ನಮತ ಇದೆ ಎನ್ನುವುದು ಮಾಧ್ಯಮಗಳ ಸೃಷ್ಟಿ. ಬೆಳಗಾವಿಯ ಬಿಜೆಪಿಯಲ್ಲಿ ಭಿನ್ನಾಭಿಪ್ರಾಯ ಇಲ್ಲ. ಕತ್ತಿ ಅವರ ಮನೆಯಲ್ಲಿ ರಮೇಶ್ ಜಾರಕಿಹೊಳಿ ಅವರಿಗೆ ಆಹ್ವಾನ ಇರಲಿಲ್ಲ ಅಂತ ಅಲ್ಲ ಎಂದು ಪಕ್ಷದ ಬಿರುಕು ಬಗ್ಗೆ ಹೇಳಿಕೆ ನೀಡಿದ್ದಾರೆ.
ಸಿದ್ದರಾಮಯ್ಯಗಿಂತ ಮೇಲಿದ್ದೇನೆಂದು ತೋರಿಸಲು ಡಿಕೆಶಿ ಪಾದಯಾತ್ರೆ: ಸಚಿವ ಆರ್. ಅಶೋಕ
ಕಾಂಗ್ರೆಸ್‌ನ ಮುಸುಕಿನ ಗುದ್ದಾಟ ಈಗ ಬೀದಿ ಜಗಳವಾಗಿದೆ. ಡಿಕೆಶಿ, ಸಿದ್ದರಾಮಯ್ಯ ಮುಸುಕಿನ ಗುದ್ದಾಟ ಬಯಲಾಗಿದೆ. ಸಿದ್ದರಾಮಯ್ಯಗಿಂತ ಮೇಲಿದ್ದೇನೆಂದು ತೋರಿಸಲು ಡಿ.ಕೆ.ಶಿವಕುಮಾರ್ ಪಾದಯಾತ್ರೆ ಮಾಡಿದ್ದಾರೆ. ನಾವು ಈ ಮಾತು ಹೇಳಿದಾಗ ನಾವೆಲ್ಲಾ ಒಂದು ಎಂದಿದ್ದರು. ಆದರೆ ಈಗ ಕಾಂಗ್ರೆಸ್ ಬೀದಿ ನಾಟಕ ಹೊರಗೆ ಬಂದಿದೆ. ಡಿಕೆಶಿ ಅಧಿಕಾರಕ್ಕೆ ಬರುವ ತಿರುಕನ ಕನಸು ಕಾಣುತ್ತಿದ್ದಾರೆ ಎಂದು ವಿಧಾನಸೌಧದಲ್ಲಿ ಕಂದಾಯ ಸಚಿವ ಆರ್.ಅಶೋಕ್ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ:
ಹಳೆಯ ಕಾರ್ಯಕ್ರಮಗಳಿಗೆ ಹೆಸರು ಬದಲಾವಣೆ ಮಾಡಿರುವುದೇ ಬಿಜೆಪಿಯವರ ಸಾಧನೆ: ವಿಪಕ್ಷ ನಾಯಕ ಸಿದ್ದರಾಮಯ್ಯ
Published On - 10:52 am, Sun, 30 January 22