ಹಳೆಯ ಕಾರ್ಯಕ್ರಮಗಳಿಗೆ ಹೆಸರು ಬದಲಾವಣೆ ಮಾಡಿರುವುದೇ ಬಿಜೆಪಿಯವರ ಸಾಧನೆ: ವಿಪಕ್ಷ ನಾಯಕ ಸಿದ್ದರಾಮಯ್ಯ

ಹಳೆಯ ಕಾರ್ಯಕ್ರಮಗಳಿಗೆ ಹೆಸರು ಬದಲಾವಣೆ ಮಾಡಿರುವುದೇ ಬಿಜೆಪಿಯವರ ಸಾಧನೆ: ವಿಪಕ್ಷ ನಾಯಕ ಸಿದ್ದರಾಮಯ್ಯ
ವಿಪಕ್ಷ ನಾಯಕ ಸಿದ್ದರಾಮಯ್ಯ

ಪ್ರಣಾಳಿಕೆ ಬಿಎಸ್​ವೈ, ಬೊಮ್ಮಾಯಿ ಸರ್ಕಾರಕ್ಕೆ ಅನ್ವಯವಾಗುತ್ತದೆ. ಇದರಲ್ಲಿ ನೀರಾವರಿಗೆ 6,300 ಕೋಟಿ ಖರ್ಚು ಮಾಡಿದ್ದೇವೆಂದು ಉಲ್ಲೇಖ ಮಾಡಿದ್ದರು. 5 ವರ್ಷದಲ್ಲಿ 1.5 ಲಕ್ಷ ಕೋಟಿ ಖರ್ಚು ಮಾಡುತ್ತೇವೆ ಎಂದಿದ್ದರು. ಆದರೆ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆ ಬಿಜೆಪಿಯವರು ಮರೆತಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.

TV9kannada Web Team

| Edited By: preethi shettigar

Jan 29, 2022 | 12:38 PM


ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಎರಡೂವರೆ ವರ್ಷವಾಗಿದೆ. ಬಿ.ಎಸ್.ಯಡಿಯೂರಪ್ಪ ನಂತರ ಬೊಮ್ಮಾಯಿ ಸಿಎಂ ಆಗಿದ್ದಾರೆ. ಬೊಮ್ಮಾಯಿ ಸಿಎಂ ಆಗಿ ನಿನ್ನೆಗೆ 6 ತಿಂಗಳು ಪೂರೈಕೆಯಾಗಿದೆ.  ಬಿಎಸ್​ವೈ(BS Yediyurappa) ಸಂಪುಟದಲ್ಲಿ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ(Basavaraj Bommai) ಈಗ ಸಿಎಂ ಆಗಿದ್ದಾರೆ. ಆದರೆ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆ ಬಿಜೆಪಿಯವರು ಮರೆತಿದ್ದಾರೆ. 2018ರ ಚುನಾವಣೆ ವೇಳೆ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿತ್ತು. ಪ್ರಣಾಳಿಕೆ ಬಿಎಸ್​ವೈ, ಬೊಮ್ಮಾಯಿ ಸರ್ಕಾರಕ್ಕೆ ಅನ್ವಯವಾಗುತ್ತದೆ. ಇದರಲ್ಲಿ ನೀರಾವರಿಗೆ 6,300 ಕೋಟಿ ಖರ್ಚು ಮಾಡಿದ್ದೇವೆಂದು ಉಲ್ಲೇಖ ಮಾಡಿದ್ದರು. 5 ವರ್ಷದಲ್ಲಿ 1.5 ಲಕ್ಷ ಕೋಟಿ ಖರ್ಚು ಮಾಡುತ್ತೇವೆ ಎಂದಿದ್ದರು. ಆದರೆ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆ ಬಿಜೆಪಿಯವರು ಮರೆತಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಹೇಳಿಕೆ ನೀಡಿದ್ದಾರೆ.

ಬಳಿಕ ಮಾತನಾಡಿದ ಅವರು, ಸಿಎಂ ಬೊಮ್ಮಾಯಿ ನಿನ್ನೆ ಸುಂದರವಾದ ಪುಸ್ತಕ ಬಿಡುಗಡೆ ಮಾಡಿದ್ದರು. ಈ ಸುಂದರ ಪುಸ್ತಕದಲ್ಲಿ ಸಾಧನೆಗಿಂತ ಭರವಸೆಗಳೇ ಹೆಚ್ಚಾಗಿದೆ. ಹಲವಾರು ಹಳೆಯ ಕಾರ್ಯಕ್ರಮಗಳಿಗೆ ಹೆಸರು ಬದಲಿಸಿದ್ದಾರೆ. ಹೆಸರು ಬದಲಾವಣೆ ಮಾಡಿರುವುದೇ ಬಿಜೆಪಿಯವರ ಸಾಧನೆ ಎಂದು ತಿಳಿಸಿದ್ದಾರೆ.

ಹೆಚ್​.ಕೆ.ಪಾಟೀಲ್,​ ಸಚಿವರಾಗಿದ್ದಾಗ ಗ್ರಾಮಸೇವಾ ಕೇಂದ್ರ ಆರಂಭ ಮಾಡಲಾಗಿತ್ತು. ಗ್ರಾಮಸೇವಾ ಕೇಂದ್ರವನ್ನು ಗ್ರಾಮಒನ್​ ಕೇಂದ್ರವಾಗಿ ಪರಿವರ್ತನೆ ಮಾಡಲಾಗಿದೆ. ಇದಕ್ಕೆ ಇಷ್ಟು ಪ್ರಚಾರ ಬೇಕಾ? ಇನ್ನೂ ಕಲ್ಯಾಣ ಕರ್ನಾಟಕ ಭಾಗಕ್ಕೆ 1 ಸಾವಿರ ಕೋಟಿ ರೂಪಾಯಿ ಕೊಟ್ಟಿರಬಹುದು ಆದರೆ ಕಲ್ಯಾಣ ಕರ್ನಾಟಕಕ್ಕೆ 3,500 ಕೋಟಿ ಕೊಡುತ್ತೇವೆ ಅಂದಿದ್ದಾರೆ. ಅಂದರೆ ಈ ವರ್ಷ ಒಂದೇ ಒಂದು ರೂಪಾಯಿ ಕೊಡುವುದಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ರಾಜಧಾನಿ ಬೆಂಗಳೂರಿಗೂ ಯಾವುದೇ ಹೊಸ ಯೋಜನೆ ಇಲ್ಲ. ಪುಕ್ಸಟ್ಟೆ ಪ್ರಚಾರಕ್ಕಾಗಿ ಕೋಟಿ ಕೋಟಿ ಖರ್ಚು ಮಾಡಿದ್ದಾರೆ. ಸಮರ್ಥವಾಗಿ ಕೊವಿಡ್​ ನಿರ್ವಹಣೆ ಮಾಡಿದ್ದೇವೆಂದು ಹೇಳಿದ್ದಾರೆ. ಕೊರೊನಾ 2ನೇ ಅಲೆಯಲ್ಲಿ ಜನ ಬೀದಿ ಬೀದಿಯಲ್ಲಿ ಮೃತಪಟ್ಟರು. ಕೊರೊನಾದಿಂದ 3.5 ಲಕ್ಷ ಜನ ಮೃತಪಟ್ಟಿದ್ದಾರೆ. ಆಕ್ಸಿಜನ್ ಬೆಡ್​ ಸಿಗಲಿಲ್ಲ, ವೆಂಟಿಲೇಟರ್​ ಸಿಗಲಿಲ್ಲ, ಬೆಡ್​ ಸಿಗಲಿಲ್ಲ. ಔಷಧ ಕೊಡಲಿಲ್ಲ, ಆಕ್ಸಿಜನ್ ಕೊರತೆಯಿಂದ ಸೋಂಕಿತರು ಸಾವನ್ನಪ್ಪಿದ್ದಾರೆ. ಸರ್ಕಾರ ಸುಳ್ಳು ಲೆಕ್ಕ ಹೇಳಿಕೊಂಡು ತಿರುಗುತ್ತಿದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ಕೊರೊನಾದಿಂದ ಮೃತಪಟ್ಟವರ ಸಂಖ್ಯೆಯಲ್ಲೂ ಸುಳ್ಳು ಹೇಳಿದೆ ಸರ್ಕಾರ: ಸಿದ್ದರಾಮಯ್ಯ

ದಾಖಲೆಗಳಲ್ಲಿ 38 ಸಾವಿರ ಜನ ಕೊರೊನಾದಿಂದ ಮೃತಪಟ್ಟಿದ್ದಾರೆಂದು ಹೇಳಿದ್ದಾರೆ. ದಾಖಲೆ ಪ್ರಕಾರ 38 ಸಾವಿರ ಕುಟುಂಬಗಳಿಗೆ ಪರಿಹಾರ ನೀಡಿಲ್ಲ. ಮೃತಪಟ್ಟ 38 ಸಾವಿರ ಜನರ ಪೈಕಿ 13,451 ಜನರಿಗೆ ಪರಿಹಾರ ನೀಡಿದ್ದಾರೆ. ಇನ್ನೂ ಕೊರೊನಾ ಸಂದರ್ಭದಲ್ಲಿ 1,53,000 ಜನರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಎನ್​ಸಿಆರ್​ಬಿ ದಾಖಲೆ ಪ್ರಕಾರ 1,53,000 ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರೆಲ್ಲ ಉದ್ಯೋಗ ನಷ್ಟ, ನಿರುದ್ಯೋಗದಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅಷ್ಟೇ ಅಲ್ಲದೇ ಕಾರ್ಮಿಕ ಇಲಾಖೆಯಿಂದ 237.9 ಕೋಟಿ ಖರ್ಚು ಜಾಹೀರಾತು ನೀಡಿದ್ದಾರೆ. ಕಾರ್ಮಿಕ ಕಲ್ಯಾಣ ನಿಧಿ ಹಣ ನೀಡಿ ಸಾಧನೆ ಎಂದು ಜಾಹೀರಾತು ಮಾಡಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

2020-21ನೇ ಸಾಲಿನಲ್ಲಿ ಭತ್ತ ಖರೀದಿ ಕೇಂದ್ರ ಆರಂಭಿಸಿಲ್ಲ: ಸಿದ್ದರಾಮಯ್ಯ

ಸರ್ಕಾರ ಘೋಷಿಸಿದಂತೆ ಖರೀದಿ ಕೇಂದ್ರ ಆರಂಭಿಸಿಲ್ಲ. ಎಂಎಸ್​ಪಿ ನೀಡಿ ಖರೀದಿ ಪ್ರಮಾಣವನ್ನು ಸರ್ಕಾರ ಇಳಿಸಿದೆ. ರಾಜ್ಯದಲ್ಲಿ ಅಂದಾಜು 30 ಲಕ್ಷ ಟನ್ ಭತ್ತ ಬೆಳೆಯುತ್ತಾರೆ. ಸರ್ಕಾರ 5 ಲಕ್ಷ ಟನ್​ ಭತ್ತ ಖರೀದಿಸುವುದಾಗಿ ಹೇಳಿದೆ. ರಾಜ್ಯದಲ್ಲಿ 14-15 ಲಕ್ಷ ಟನ್ ರಾಗಿ ಬೆಳೆಯುತ್ತಾರೆ. ಸರ್ಕಾರ 2 ಲಕ್ಷ ಟನ್​ ರಾಗಿ ಖರೀದಿಸುವುದಾಗಿ ಹೇಳಿದೆ. ರಾಜ್ಯ ಸರ್ಕಾರ 40,330 ಕ್ವಿಂಟಾಲ್​ ತೊಗರಿ ಖರೀದಿಸಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಬಳಿಕ ಮಾತನಾಡಿದ ಅವರು, ಮೋದಿ ಬಾಯಿ ಬಿಟ್ಟರೆ ಮೇಕ್ ಇನ್ ಇಂಡಿಯಾ ಅಂತಾರೆ. ದೇಶದಲ್ಲಿ 7.5 ಲಕ್ಷ ಕೋಟಿ ಮೌಲ್ಯದ ಪದಾರ್ಥ ಆಮದಾಗಿದೆ. ದೇಶದಿಂದ ಕೇವಲ 1.5 ಲಕ್ಷ ಮೌಲ್ಯದ ವಸ್ತುಗಳು ರಫ್ತಾಗಿದೆ. ಕೊರೊನಾ ವೇಳೆ 12.5 ಲಕ್ಷ ಕೋಟಿ ಕಾರ್ಪೊರೇಟ್ ಆದಾಯ ಕುಂಠಿತವಾದರೂ ಇವರ ಆದಾಯ ದ್ವಿಗುಣ. ಕಾರ್ಪೊರೇಟ್​ ಆದಾಯ ದ್ವಿಗುಣವಾಗಿದ್ದರೂ 30 ಪರ್ಸೆಂಟ್ ತೆರಿಗೆಯಿಂದ 22 ಪರ್ಸೆಂಟ್​ಗೆ ಇಳಿಸಿದ್ದಾರೆ. ಪ್ರಧಾನಿ ಮೋದಿ, ಬಿಜೆಪಿಯವರಿಗೆ ಬಡವರ ಬಗ್ಗೆ ಕಾಳಜಿಯಿಲ್ಲ. ಬಡವರ ಹೊಟ್ಟೆಗೆ ಹೊಡೆದು ಉಳ್ಳವರ ಖಜಾನೆ ತುಂಬಿಸಿದ್ದಾರೆ ಎಂದು ಹೇಳಿದ್ದಾರೆ.

ಬಿಜೆಪಿ ಅವಧಿಯಲ್ಲಿ ಬಡವರು, ದಲಿತರಿಗೆ ಅನ್ಯಾಯವಾಗಿದೆ: ವಿಪಕ್ಷ ನಾಯಕ ಸಿದ್ದರಾಮಯ್ಯ

ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದವರ ಬಗ್ಗೆ ಭಾರಿ ಮಾತಾಡುತ್ತಾರೆ. ನಮ್ಮ ಅವಧಿಯಲ್ಲಿ ಎಸ್​ಸಿಪಿ, ಟಿಎಸ್​ಪಿಗೆ 30,150 ಕೋಟಿ ಅನುದಾನ ನೀಡಿದ್ದಾರೆ. ಆದರೆ ಬಿಜೆಪಿ ಅವಧಿಯಲ್ಲಿ 25 ಸಾವಿರ ಕೋಟಿ ಮಾತ್ರ ಮೀಸಲು ಇಟ್ಟಿದ್ದಾರೆ. ಗಂಗಾಕಲ್ಯಾಣ ಯೋಜನೆಗೆ ಕೇವಲ 30 ಕೋಟಿ ಮೀಸಲಿಟಿದ್ದಾರೆ. ಭವ್ಯ ಭವಿಷ್ಯಕ್ಕಾಗಿ ಭರವಸೆಯ ಹೆಜ್ಜೆಗಳು ಎಂದು ಪುಸ್ತಕ ಪ್ರಕಟ ಮಾಡಿದ್ದಾರೆ. ಕೇವಲ ಜಾಹೀರಾತು ನೀಡಿದರೆ ಯಾರಿಗೂ ಪ್ರಯೋಜನವಿಲ್ಲ. ಸ್ವಯಂ ಉದ್ಯೋಗಕ್ಕೆ ಎಸ್​ಸಿಪಿಗೆ 50 ಕೋಟಿಗೆ ಇಳಿಸಿದ್ದಾರೆ. ಸ್ವಯಂ ಉದ್ಯೋಗಕ್ಕೆ ಟಿಎಸ್​ಪಿಗೆ 30 ಕೋಟಿಗೆ ಇಳಿಸಿದ್ದಾರೆ. ಬಿಜೆಪಿ ಅವಧಿಯಲ್ಲಿ ಬಡವರು, ದಲಿತರಿಗೆ ಅನ್ಯಾಯವಾಗಿದೆ. ಭ್ರಷ್ಟಾಚಾರ ಮಾಡಿರುವುದೇ ಬಿಜೆಪಿಯವರ ಸಾಧನೆಯಾಗಿದೆ. ಭ್ರಷ್ಟಾಚಾರ, ವೈಫಲ್ಯಗಳೇ ಈ ಸರ್ಕಾರದ ಸಾಧನೆಯಾಗಿದೆ ಎಂದು ಬೆಂಗಳೂರಿನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ:

ಸಿಎಂ ಇಬ್ರಾಹಿಂ ನನ್ನ ಸ್ನೇಹಿತ, ಅವರು ಕಾಂಗ್ರೆಸ್​​ನಲ್ಲಿರುತ್ತಾರೆ: ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಹುಟ್ಟುಹಬ್ಬದ ಶುಭಾಷಯ ಕೋರಲು ಖ್ಯಾತ ಜ್ಯೋತಿಷಿಗಳೂ ಆಗಮಿಸಿದರು!


Follow us on

Related Stories

Most Read Stories

Click on your DTH Provider to Add TV9 Kannada