ಹೇ ನಾಗರಾಜ್, ಇಮ್ಮಿಡಿಯಟ್ ಆರ್ಡರ್ ಮಾಡು: ಸಚಿವ ಎಂಟಿಬಿ ನಾಗರಾಜ್ ಜೊತೆ ಸಿದ್ದರಾಮಯ್ಯ ಖಡಕ್ ಮಾತು

ಹೇ ನಾಗರಾಜ್, ಇಮ್ಮಿಡಿಯಟ್ ಆರ್ಡರ್ ಮಾಡು: ಸಚಿವ ಎಂಟಿಬಿ ನಾಗರಾಜ್ ಜೊತೆ ಸಿದ್ದರಾಮಯ್ಯ ಖಡಕ್ ಮಾತು
ಸಚಿವ ಎಂಟಿಬಿ ನಾಗರಾಜ್ ಮತ್ತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ

Guledagudda: ಪ್ರತಿಪಕ್ಷ ನಾಯಕನ ಹುದ್ದೆ ಎಂದರೆ ಅದು ಮುಖ್ಯಮಂತ್ರಿ ಸ್ಥಾನಕ್ಕೆ ಸಮ ಎಂದು ಪುರಸಭೆ ಸದಸ್ಯರು ಸಿದ್ದರಾಮಯ್ಯ ಅವರ ಮನವೊಲಿಸಿದರು.

TV9kannada Web Team

| Edited By: Ghanashyam D M | ಡಿ.ಎಂ.ಘನಶ್ಯಾಮ

Jan 24, 2022 | 3:39 PM

ಬಾಗಲಕೋಟೆ: ಗುಳೇದಗುಡ್ಡ ಪುರಸಭೆಯಲ್ಲಿ ಹಲವು ಪ್ರಮುಖ ಹುದ್ದೆಗಳು ಖಾಲಿಯಿರುವ ಬಗ್ಗೆ ಬಹುದಿನಗಳಿಂದ ಸ್ಥಳೀಯರಲ್ಲಿ ಅಸಮಾಧಾನ ವ್ಯಕ್ತವಾಗುತ್ತಿತ್ತು. ಶಾಸಕ ಸಿದ್ದರಾಮಯ್ಯ (Siddaramaih) ಅವರ ಪ್ರವಾಸದ ಸಂದರ್ಭದಲ್ಲಿಯೂ ಇದು ಪ್ರತಿಧ್ವನಿಸಿತು. ಪುರಸಭೆಯ ಹಲವು ಸದಸ್ಯರು ಈ ಕುರಿತು ಮಾತನಾಡಿ, ಇಲ್ಲಿ ಕಿರಿಯ ಎಂಜಿನಿಯರ್ (ಜೆಇ), ಪ್ರಥಮ ದರ್ಜೆ ಸಹಾಯಕ (ಎಫ್​ಡಿಸಿ) ಮತ್ತು ದ್ವಿತೀಯ ದರ್ಜೆ ಸಹಾಯಕರು (ಎಸ್​ಡಿಸಿ) ಹುದ್ದೆಗಳು ಖಾಲಿಯಿವೆ. ಈ ಬಗ್ಗೆ ಹಲವು ಬಾರಿ ಸರ್ಕಾರಕ್ಕೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ತಕ್ಷಣ ನಗರಾಭಿವೃದ್ಧಿ ಸಚಿವ ಎಂಟಿಬಿ ನಾಗರಾಜ್ (MTB Nagaraj) ಅವರಿಗೆ ಕರೆ ಮಾಡಿದ ಸಿದ್ದರಾಮಯ್ಯ, ‘ಹೇ ನಾಗರಾಜ್, ನನ್ನ ಕ್ಷೇತ್ರದ ಗುಳೇದಗುಡ್ಡಕ್ಕೆ ಬಂದಿದ್ದೆ. ಇಲ್ಲಿ ಪುರಸಭೆಯ ಸದಸ್ಯರ ಕಂಪ್ಲೇಂಟ್ ಏನು ಅಂದ್ರೆ, ಸ್ಟಾಫ್ ಕೊರತೆ. ಇಮ್ಮಿಡಿಯಟ್ ಆಗಿ ಆರ್ಡರ್ ಮಾಡು’ ಎಂದು ಖಡಕ್ ಆಗಿ ಮಾತಾಡಿದರು. ‘ಒಂದು ಲೆಟರ್ ಕಳಿಸ್ತೀನಿ, ಬೇಗ ಕೆಲಸ ಮಾಡಿಕೊಡು’ ಎಂದರು.

ಇದಕ್ಕೂ ಮೊದಲು ಪುರಸಭೆಯ ಖಾಲಿ ಹುದ್ದೆಗಳನ್ನು ತುಂಬಲು ಸಿದ್ದರಾಮಯ್ಯ ಅವರನ್ನು ಸದಸ್ಯರು ಒತ್ತಾಯಿಸಿದರು. ಈಗ ನಮ್ಮ ಸರ್ಕಾರ ಇಲ್ವಲ್ಲಯ್ಯಾ, ನಮ್ಮ ಸರ್ಕಾರ ಇದ್ದು, ನಾನು ಸಿಎಂ ಆಗಿದ್ರೆ ನಿಂತ ಜಾಗದಲ್ಲೇ ಆರ್ಡರ್ ಮಾಡ್ತಿದ್ದೆ ಎಂದು ಸಿದ್ದರಾಮಯ್ಯ ಅಸಹಾಯಕತೆ ತೋಡಿಕೊಂಡರು. ಪ್ರತಿಪಕ್ಷ ನಾಯಕನ ಹುದ್ದೆ ಎಂದರೆ ಅದು ಮುಖ್ಯಮಂತ್ರಿ ಸ್ಥಾನಕ್ಕೆ ಸಮ ಎಂದು ಪುರಸಭೆ ಸದಸ್ಯರು ಸಿದ್ದರಾಮಯ್ಯ ಅವರ ಮನವೊಲಿಸಿದರು. ಅದು ಹೆಸರಿಗಷ್ಟೇ ಮುಖ್ಯಮಂತ್ರಿ ಸ್ಥಾನ. ಹೊಸ ಹುದ್ದೆ ಬೇಕು ಅಂದ್ರೆ ಸಂಬಳಕ್ಕೆ ದುಡ್ಡು ಕೊಡಬೇಕು. ಅದನ್ನ ಕೊಡೋರು, ಪಾಪ ಈ ಸರ್ಕಾರದಲ್ಲಿ ದುಡ್ಡಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು. ಇದು ಹೊಸ ತಾಲ್ಲೂಕು. ಅಗತ್ಯಕ್ಕೆ ತಕ್ಕಷ್ಟು ಸಿಬ್ಬಂದಿ ಇಲ್ಲ. ಅಧಿಕಾರಿಗಳು ಇತ್ತಕಡೆಗೆ ಹೆಚ್ಚು ಗಮನಕೊಡಬೇಕು ಎಂದು ನುಡಿದರು. ಪುರಸಭೆ ಖಾಲಿ ಹುದ್ದೆ ತುಂಬಲು, ಸಚಿವ ಎಂಟಿಬಿ. ನಾಗರಾಜ್ ಹಾಗೂ ಇಲಾಖೆ ಕಾರ್ಯದರ್ಶಿಗೆ ಸಿದ್ದರಾಮಯ್ಯ ಫೋನ್ ಮಾಡಿ ಮಾತನಾಡಿದ್ದರು.

ಬಾದಾಮಿಯಿಂದ್ಲೇ ಸ್ಪರ್ಧಿಸಲಿ ಸಿದ್ದರಾಮಯ್ಯ ಸಿದ್ದರಾಮಯ್ಯ ಇನ್ನು ಮುಂದೆ ಬಾದಾಮಿಯಿಂದಲೇ ಸ್ಪರ್ಧಿಸಬೇಕು. ಇಲ್ಲಿಂದಲೇ ಸ್ಪರ್ಧಿಸಿ ಮುಖ್ಯಮಂತ್ರಿ ಆಗಬೇಕು ಎಂದು ವ್ಯಕ್ತಿಯೊಬ್ಬರು ದೊಡ್ಡ ಧ್ವನಿಯಲ್ಲಿ ಕೂಗಿದರು. ‘ಹೆ ಇದು ಚುನಾವಣೆ ಅಲ್ಲ ನಡೀ’ ಎಂದರು ಸಿದ್ದರಾಮಯ್ಯ. ‘ಆಯ್ತು, ನೀನು ಹೇಳಿದಂತೆ ಆಗಲಿ. ಈಗ ಹೇಳಿದ್ದಿಯಲ್ಲ ನಡಿ’ ಎಂದು ನಗುತ್ತಾ ಕೈಕುಲುಕಿ ಹೋದರು.

ಜಾಲಪ್ಪ ಟ್ರಸ್ಟ್ ಬಗ್ಗೆ ನಾನು ಮಾತಾಡಲ್ಲ ಆರ್.ಎಲ್.ಜಾಲಪ್ಪ ಟ್ರಸ್ಟ್ ವಿಚಾರದಲ್ಲಿ ನಾನು ಏನೊಂದೂ ಪ್ರತಿಕ್ರಿಯಿಸುವುದಿಲ್ಲ. ಅದು ಖಾಸಗಿ ಸಂಸ್ಥೆ, ಆ ಬಗ್ಗೆ ನಾನು ಮಾತನಾಡುವುದಿಲ್ಲ ಎಂದು ಗುಳೇದಗುಡ್ಡದಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು. ಮೊದಲು ನಾನು ಜಾಲಪ್ಪ ಟ್ರಸ್ಟ್​ಗೆ ಫೌಂಡರ್ ಟ್ರಸ್ಟಿ ಆಗಿದ್ದೆ. ಜಾಲಪ್ಪ ಇರುವಾಗಲೇ, ನಾನು ಮುಖ್ಯಮಂತ್ರಿ ಆಗಿದ್ದಾಗಲೇ ಟ್ರಸ್ಟಿ ಸ್ಥಾನದಿಂದ ನನ್ನನ್ನು ತೆಗೆದಿದ್ದರು. ಈಗ ಅಲ್ಲಿ ಏನೆಲ್ಲಾ ಬೆಳವಣಿಗೆ ಆಗಿದ ಎಂಬ ಮಾಹಿತಿ ನನ್ನಲ್ಲಿ ಇಲ್ಲ. ಗೊತ್ತಿಲ್ಲದೆ ಮಾತಾಡೋದು ಚೆನ್ನಾಗಿ ಕಾಣಿಸಲ್ಲ ಎಂದರು.

ಮಹದಾಯಿಗಾಗಿ ಕಾಂಗ್ರೆಸ್ ಪಾದಯಾತ್ರೆ: ಎಂ.ಬಿ.ಪಾಟೀಲ ಪ್ರತಿಕ್ರಿಯೆ ಬೆಳಗಾವಿ: ಮಹದಾಯಿಗಾಗಿ ಕಾಂಗ್ರೆಸ್ ಪಾದಯಾತ್ರೆ ಮಾಡುವ ಕುರಿತು ಮಾಜಿ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ಸೋಮವಾರ ಪ್ರತಿಕ್ರಿಯಿಸಿದರು. ಮಹದಾಯಿ ಯೋಜನೆಯಲ್ಲಿ ನಮಗೆ ಕೇವಲ 3.9 ಟಿಎಂಸಿ ನೀರು ಸಿಗುತ್ತದೆ. ಇದು ಯಾವುದಕ್ಕೂ ಸಾಕಾಗುವುದಿಲ್ಲ. ನಮಗೆ ಸಂಪೂರ್ಣವಾಗಿ 7.5 ಟಿಎಂಸಿ ನೀರು ಸಿಗಲೇಬೇಕು ಎಂಬುದು ನಮ್ಮ ನಿಲುವಾಗಿದೆ. ಪಾದಯಾತ್ರೆಗೆ ಸಂಬಂಧಿಸಿದಂತೆ ಅಧಿಕೃತವಾಗಿ ನಮ್ಮ ಕೆಪಿಸಿಸಿ ಕಾರ್ಯಾಧ್ಯಕ್ಷರು, ಶಾಸಕಾಂಗ ಪಕ್ಷದ ನಾಯಕರು ನಿರ್ಧಾರ ಮಾಡುತ್ತಾರೆ ಎಂದರು.

ಈಗಾಗಲೇ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಅಧಿಕೃತವಾಗಿ ಮಹದಾಯಿ ಯೋಜನೆಗೆ ಆಗ್ರಹಿಸಿ ಪಾದಯಾತ್ರೆ ಮಾಡುವ ಬಗ್ಗೆ ನಿಲುವು ತೆಗೆದುಕೊಂಡಿದ್ದಾರೆ. ಹೇಳಿಕೆಯನ್ನೂ ಕೊಟ್ಟಿದ್ದಾರೆ. ಗೋವಾದವರು ಕೇವಲ ರಾಜಕೀಯ ಕಾರಣಕ್ಕಾಗಿ ಮಾತ್ರ ವಿರೋಧ ಮಾಡುತ್ತಿದ್ದಾರೆ. ವಿರೋಧ ಮಾಡುವುದರಲ್ಲಿ ಯಾವುದೇ ಹುರುಳಿಲ್ಲ ಎಂಬುದು ಅವರಿಗೂ ಈಗ ತಿಳಿದಿದೆ. ಈ ಬಗ್ಗೆ ಜಲಸಂಪನ್ಮೂಲ ಇಲಾಖೆ, ಇಲ್ಲವೇ ಬಿಜೆಪಿ ಪಕ್ಷದಿಂದ ಸ್ಪಷ್ಟೀಕರಣ ಕೊಡಲಿ ಎಂದು ಆಗ್ರಹಿಸಿದರು.

ಎರಡೆರಡು ಪೇಜ್ ಅನಾಮಧೇಯ ಜಾಹೀರಾತು ಕೊಟ್ಟಿರುವುದು ಇತಿಹಾಸದಲ್ಲಿ ಇದೇ ಮೊದಲು. ನಮ್ಮ ರಾಜ್ಯ, ಅವರ ರಾಜ್ಯದ ನಿಲುವುಗಳು ಬೇರೆಬೇರೆ ಇರುವಂತೆ ಪಕ್ಷದ ನಿಲುವುಗಳೂ ಬೇರೆ ಇರುತ್ತವೆ. ರಾಜಕೀಯವಾಗಿ ಸ್ಥಾನ ಹೊಂದಾಣಿಕೆ ಮಾಡಿಕೊಳ್ಳುವಾಗ ಪಕ್ಷದ ವಿಚಾರ ಬರುತ್ತದೆ. ಆದರೆ ನೀರಿನ ಹಕ್ಕು ಬಂದಾಗ ಯಾವುದೇ ರೀತಿ ರಾಜಿ ಆಗುವ ಪ್ರಶ್ನೆಯೇ ಇಲ್ಲ ಎಂದರು.

ಗೋವಾ ಚುನಾವಣೆ ಕುರಿತು ಪ್ರತಿಕ್ರಿಯಿಸಿದ ಅವರು, ಬಿಜೆಪಿ, ಕಾಂಗ್ರೆಸ್, ಮತ್ಯಾವುದೇ ಪಕ್ಷ ಅಧಿಕಾರಕ್ಕೆ ಬರುತ್ತದೆ ಎನ್ನುವ ಪ್ರಶ್ನೆ ಬರುವುದಿಲ್ಲ. ರಾಜಕೀಯವಾಗಿ ನಾನು ಹೇಳುವುದಾದರೆ ನಿಶ್ಚಿತವಾಗಿ ನಮ್ಮ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತದೆ. ಅಲ್ಲಿ ಯಾವುದೇ ಪಕ್ಷದ ಸರ್ಕಾರ ಅಧಿಕಾರಕ್ಕೆ ಬಂದರೂ ಆ ರಾಜ್ಯ ಪರವಾಗಿ ನಿಲುವು ತಳೆಯುತ್ತದೆ. ನಮಗೆ ನಮ್ಮ ರಾಜ್ಯದ ನಿಲುವು ತೆಗೆದುಕೊಳ್ಳಲು ಹಕ್ಕು ಇರುತ್ತದೆ. ಚುನಾವಣೆಯಲ್ಲಿ ನಾವು ಯಾವುದೇ ರೀತಿ ರಾಜಿ, ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ಸ್ವಯಂಘೋಷಿತ ಸಂವಿಧಾನ ಪಂಡಿತ ಸಿದ್ದರಾಮಯ್ಯ; ಹೆಚ್​ಡಿ ಕುಮಾರಸ್ವಾಮಿ ಸರಣಿ ಟ್ವೀಟ್ ಇದನ್ನೂ ಓದಿ: ಭಾರತೀಯ ಆಡಳಿತ ಸೇವೆಯ ನಿಯಮ 1954ಕ್ಕೆ ತಿದ್ದುಪಡಿ ಮೂಲಕ ಕೇಂದ್ರ ನಿಯಂತ್ರಣ ಸಾಧಿಸಲು ಹೊರಟಿದೆ -ಸಿದ್ದರಾಮಯ್ಯ ಅಸಮಾಧಾನ

Follow us on

Related Stories

Most Read Stories

Click on your DTH Provider to Add TV9 Kannada