ಭಾರತೀಯ ಆಡಳಿತ ಸೇವೆಯ ನಿಯಮ 1954ಕ್ಕೆ ತಿದ್ದುಪಡಿ ಮೂಲಕ ಕೇಂದ್ರ ನಿಯಂತ್ರಣ ಸಾಧಿಸಲು ಹೊರಟಿದೆ -ಸಿದ್ದರಾಮಯ್ಯ ಅಸಮಾಧಾನ
'ಭಾರತೀಯ ಆಡಳಿತ ಸೇವೆಯ (ಸಿಬ್ಬಂದಿ) ನಿಯಮ 1954’ ಕ್ಕೆ ತಿದ್ದುಪಡಿ ತರುವುದರ ಮೂಲಕ ರಾಜ್ಯಗಳ ಆಡಳಿತಗಳ ಮೇಲೆ ಕೇಂದ್ರ ಸರ್ಕಾರ ನಿಯಂತ್ರಣ ಸಾಧಿಸಲು ಹೊರಟಿದೆ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅಸಮಾಧಾನ.
ಬೆಂಗಳೂರು: ‘ಭಾರತೀಯ ಆಡಳಿತ ಸೇವೆಯ (ಸಿಬ್ಬಂದಿ) ನಿಯಮ 1954’ ಕ್ಕೆ ತಿದ್ದುಪಡಿ ತರುವುದರ ಮೂಲಕ ರಾಜ್ಯಗಳ ಆಡಳಿತಗಳ ಮೇಲೆ ಕೇಂದ್ರ ಸರ್ಕಾರ ನಿಯಂತ್ರಣ ಸಾಧಿಸಲು ಹೊರಟಿದೆ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಈ ಬಗ್ಗೆ ರಾಜ್ಯ ಸರ್ಕಾರ ತನ್ನ ವಿರೋಧ ವ್ಯಕ್ತಪಡಿಸಬೇಕು. ಪ್ರತಿ ಪಕ್ಷಗಳ ಜೊತೆ ಚರ್ಚಿಸಿ ಕೇಂದ್ರದ ನಿಲುವಿಗೆ ತನ್ನ ವಿರೋಧ ತಿಳಿಸಬೇಕು ಎಂದು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.
ಅಧಿಕಾರಿಗಳ ಮೇಲಿನ ನಿಯಂತ್ರಣವೆಂದರೆ, ಆಡಳಿತದ ಮೇಲಿನ ನಿಯಂತ್ರಣವೆಂದು ಅರ್ಥ. ರಾಜ್ಯ ಸರ್ಕಾರಗಳಿಗೆ ತನ್ನ ಅಧಿಕಾರಿಗಳ ಮೇಲೆ ನಿಯಂತ್ರಣವಿಲ್ಲದಿದ್ದರೆ ಜನರ ಕೆಲಸಗಳನ್ನು ಹೇಗೆ ಮಾಡಿಸುವುದು? ರಾಜ್ಯಗಳ ಚುನಾಯಿತ ಸರ್ಕಾರಗಳ ಮೇಲೆ ನಿಯಂತ್ರಣ ಸಾಧಿಸುವ ಉದ್ದೇಶದಿಂದ ಕೇಂದ್ರವು ಈ ದುಷ್ಟ ತಿದ್ದುಪಡಿಯನ್ನು ತರಲು ಹೊರಟಿದೆ. ಇದರಿಂದ ಕೇಂದ್ರ, ರಾಜ್ಯಗಳ ನಡುವೆ ನೇರವಾದ ಹಿತಾಸಕ್ತಿ ಸಂಘರ್ಷ ಪ್ರಾರಂಭವಾಗುತ್ತದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ರಾಜ್ಯಗಳನ್ನು ಕೇಂದ್ರಾಡಳಿತ ಪ್ರದೇಶಗಳ ಮುಂದುವರಿದ ರೂಪ ಎಂದು ಪರಿಗಣಿಸಿದಂತೆ ಮೋದಿಯವರ ಸರ್ಕಾರ ಭಾವಿಸಿದಂತೆ ಕಾಣುತ್ತಿದೆ. ಸೌಹಾರ್ದ ಸಂಬಂಧದ ಆಡಳಿತ ನಡೆಸಿ, ಜನರ ಕೆಲಸ ಮಾಡಬೇಕಾದ ಕಡೆ ತನಗೆ ವಿರೋಧಿಯಾದ ಪಕ್ಷಗಳು ಆಡಳಿತ ನಡೆಸುತ್ತಿರುವ ರಾಜ್ಯ ಸರ್ಕಾರಗಳನ್ನು ಹೇಗೆ ನಿಯಂತ್ರಿಸುವುದು ಎನ್ನುವ ಕೆಟ್ಟ ಉದ್ದೇಶ ಮಾತ್ರ ಈ ತಿದ್ದುಪಡಿಯ ಹಿಂದೆ ಇದೆ. ನರೇಂದ್ರ ಮೋದಿಯವರು ಪ್ರಧಾನಮಂತ್ರಿ ಆದ ಬಳಿಕ ಅವರ ಸರ್ಕಾರದ ಆಡಳಿತ ವೈಖರಿ ರಾಜ್ಯಗಳ ಸಂವಿಧಾನಬದ್ಧ ಹಕ್ಕುಗಳಿಗೆ ಗಂಡಾಂತರಗಳು ಬಂದೆರಗುತ್ತಲೆ ಇವೆ ಎಂದರು.
ಮೋದಿಯವರ ಸರ್ಕಾರದ ಈ ಸರ್ವಾಧಿಕಾರಿ, ಒಕ್ಕೂಟ ತತ್ವ ವಿರೋಧಿ ಧೋರಣೆಯನ್ನು ಈಗಾಗಲೇ ಆರು ರಾಜ್ಯಗಳು ಖಂಡಿಸಿರುವುದು ಮಾತ್ರವಲ್ಲದೆ ಯಾವುದೇ ಹಂತದಲ್ಲೂ ದಾಳಿಯನ್ನು ರಾಜ್ಯಗಳು ಸಹಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯ ತಿಳಿಸಿವೆಯೆಂಬ ಮಾಹಿತಿ ಇದೆ. ಉಳಿದ ರಾಜ್ಯಗಳ ಜನರಲ್ಲೂ ಬಿಜೆಪಿಯ ವಿರುದ್ಧ ಆಕ್ರೋಶ ಮಡುಗಟ್ಟುತ್ತಿದೆ. ಈ ಆಕ್ರೋಶವು ಮುಂದೊಂದು ದಿನ ಅನಾಹುತಕಾರಿ ದಿಕ್ಕಿನ ಕಡೆಗೆ ತಿರುಗಿಬಿಡಬಹುದೆಂಬ ಆತಂಕ ನನ್ನನ್ನು ಕಾಡುತ್ತಿದೆ. ಅದಾಗದಂತೆ ನೋಡಿಕೊಳ್ಳಬೇಕೆಂದರೆ ನಮ್ಮ ಸಂವಿಧಾನ ಪಿತೃಗಳ ಆಶಯವೇನಿದ್ದವು ಅವುಗಳಂತೆ ನಡೆದುಕೊಳ್ಳಿ ಎಂದು ಕೇಂದ್ರದ ಬಿಜೆಪಿ ಸರ್ಕಾರಕ್ಕೆ ತಿಳಿಸಿ ಹೇಳಬೇಕು. ಆದ್ದರಿಂದ ತುರ್ತಾಗಿ ವಿರೋಧ ಪಕ್ಷಗಳ ಜೊತೆ ಚರ್ಚಿಸಿ ರಾಜ್ಯದ ವಿರೋಧವನ್ನು ಒಕ್ಕೂಟ ಸರ್ಕಾರಕ್ಕೆ ತಿಳಿಸಬೇಕು ಎಂದು ಒತ್ತಾಯಿಸುತ್ತೇನೆ ಎಂದು ಹೇಳಿದರು.
ಈ ಬಗ್ಗೆ ರಾಜ್ಯ ಸರ್ಕಾರ ತನ್ನ ವಿರೋಧ ವ್ಯಕ್ತಪಡಿಸಬೇಕು. ಪ್ರತಿ ಪಕ್ಷಗಳ ಜೊತೆ ಚರ್ಚಿಸಿ ಕೇಂದ್ರದ ನಿಲುವಿಗೆ ತನ್ನ ವಿರೋಧ ತಿಳಿಸಬೇಕು ಎಂದು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಈಗಾಲೇ ಪತ್ರದ ಮೂಲಕ ಒತ್ತಾಯಿಸಿದ್ದಾರೆ.
ಇದನ್ನು ಓದಿ: ಗುತ್ತಿಗೆದಾರರಿಂದ ನಾನು ಒಂದು ರೂ ಪಡೆದಿಲ್ಲ, ಸಾಬೀತು ಪಡಿಸಿದರೆ ರಾಜಕೀಯಕ್ಕೆ ಗುಡ್ಬೈ ಹೇಳುವೆ: ಸಿದ್ದರಾಮಯ್ಯ ಸವಾಲ್