Siddeshwara Swamiji: ಕೃಷ್ಣ, ಮಲಪ್ರಭಾ ಹಾಗೂ ಘಟಪ್ರಭಾ ಮಡಿಲಲ್ಲಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ಲೀನ
ತ್ರಿವೇಣಿ ಸಂಗಮದಲ್ಲಿ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಚಿತಾಭಸ್ಮ ವಿಸರ್ಜನೆಯ ಬಳಿಕ ಸ್ವಾಮೀಜಿಗಳು ವಿಶೇಷ ವಾಹನದಲ್ಲಿ ಗೋಕರ್ಣದತ್ತ ಪ್ರಯಾಣ ಬೆಳೆಸಿದ್ದಾರೆ.
ಬಾಗಲಕೋಟೆ: ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ದೇಶ್ವರಶ್ರೀ ಅವರ ಚಿತಾಭಸ್ಮವನ್ನು ಕೃಷ್ಣಾ, ಮಲಪ್ರಭಾ, ಘಟಪ್ರಭಾ ನದಿ ಸಂಗಮದಲ್ಲಿ ವಿಸರ್ಜನೆ ಮಾಡಲಾಗಿದೆ. ಜ್ಞಾನ ಯೋಗಾಶ್ರಮದ ಶ್ರೀ ಬಸವಲಿಂಗ ಸ್ವಾಮೀಜಿಗಳ ನೇತೃತ್ವದಲ್ಲಿ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕೂಡಲಸಂಗಮದ ಬಸವಣ್ಣನ ಐಕ್ಯಮಂಟಪದ ಬಳಿ ಚಿತಾಭಸ್ಮ ವಿಸರ್ಜನೆ ಮಾಡಲಾಗಿದೆ. ಮಠಾಧೀಶರು ವಿಶೇಷ ವಾಹನಗಳಲ್ಲಿ ಚಿತಾಭಸ್ಮ ತಂದು ಬೋಟ್ಗಳಲ್ಲಿ ತೆರಳಿ ನದಿಯಲ್ಲಿ ಚಿತಾಭಸ್ಮ ವಿಸರ್ಜಿಸಿದ್ದಾರೆ.
ಮೊದಲಿಗೆ ಕೂಡಲಸಂಗಮೇಶ್ವರನ ಆವರಣದಲ್ಲಿ ಪೂಜೆ ಪುನಸ್ಕಾರ ಸಲ್ಲಿಸಿ ಬಳಿಕ ತ್ರಿವೇಣಿ ಸಂಗಮದಲ್ಲಿ ಚಿತಾಭಸ್ಮ ವಿಸರ್ಜನೆ ಮಾಡಲಾಗಿದೆ. ಈ ಪುಣ್ಯ ಕಾರ್ಯದಲ್ಲಿ ಬಸವಲಿಂಗ ಸ್ವಾಮೀಜಿ, ಪಂಚಮಸಾಲಿ ಬಸವಜಯಮೃತ್ಯುಂಜಯ ಸ್ವಾಮೀಜಿ, ಜ್ಞಾನಯೋಗಾಶ್ರಮದ ಸ್ವಾಮೀಜಿಗಳು ಭಾಗಿಯಾಗಿದ್ದರು. ಹಾಗೂ ಚಿತಾಭಸ್ಮ ನೋಡುವುದಕ್ಕೆ ಸಹಸ್ರಾರು ಜನ ಭಕ್ತರು ಆಗಮಿಸಿದ್ದರು.
ಗೋಕರ್ಣದತ್ತ ಮಠಾಧೀಶರ ಪ್ರಯಾಣ
ಇನ್ನು ತ್ರಿವೇಣಿ ಸಂಗಮದಲ್ಲಿ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಚಿತಾಭಸ್ಮ ವಿಸರ್ಜನೆಯ ಬಳಿಕ ಸ್ವಾಮೀಜಿಗಳು ವಿಶೇಷ ವಾಹನದಲ್ಲಿ ಗೋಕರ್ಣದತ್ತ ಪ್ರಯಾಣ ಬೆಳೆಸಿದ್ದಾರೆ. ಸಾಯಂಕಾಲ 5ರ ಸುಮಾರಿಗೆ ಗೋಕರ್ಣ ತಲುಪಲಿದ್ದು ಅಲ್ಲಿ ಚಿತಾಭಸ್ಮ ವಿಸರ್ಜನೆ ಮಾಡಲಿದ್ದಾರೆ.
ಇದನ್ನೂ ಓದಿ: Siddeshwara Swamiji: ಶತಮಾನದ ಸಂತ ಸಿದ್ದೇಶ್ವರ ಸ್ವಾಮೀಜಿಗೆ ರಂಗೋಲಿ ಮೂಲಕ ಭಾವಪೂರ್ಣ ಶ್ರದ್ಧಾಂಜಲಿ
ಚಿತಾಭಸ್ಮ ವಿಸರ್ಜನೆಗೆ ಅಧಿಕಾರಿಗಳು ಬಹಳ ಅನುಕೂಲ ಮಾಡಿದ್ದಾರೆ
ಸಿದ್ದೇಶ್ವರಶ್ರೀ ಚಿತಾಭಸ್ಮ ವಿಸರ್ಜನೆ ಬಳಿಕ ಬಸವಲಿಂಗ ಸ್ವಾಮೀಜಿ ಮಾತನಾಡಿದರು. ಕೂಡಲಸಂಗಮದ ಬಗ್ಗೆ ಸಿದ್ದೇಶ್ವರಶ್ರೀ ಬಹಳ ಅಭಿಮಾನ ಹೊಂದಿದ್ದರು. ಚಿತಾಭಸ್ಮ ವಿಸರ್ಜನೆಗೆ ಅಧಿಕಾರಿಗಳು ಬಹಳ ಅನುಕೂಲ ಮಾಡಿದ್ದಾರೆ. ಬಸವಣ್ಣನವರ ಐಕ್ಯಸ್ಥಳ, ಕೂಡಲಸಂಗಮದ ಬಗ್ಗೆ ಸಿದ್ದೇಶ್ವರ ಸ್ವಾಮೀಜಿಗೆ ಅಪಾರ ಒಲವಿತ್ತು. ಕೃಷ್ಣಾ, ಘಟಪ್ರಭಾ, ಮಲಪ್ರಭಾ ನದಿ ಸಂಗಮದಲ್ಲಿ ಚಿತಾಭಸ್ಮ ವಿಸರ್ಜನೆ ಮಾಡಿದ್ದೇವೆ. ಬಸವಣ್ಣ, ಸಿದ್ದೇಶ್ವರ ಸ್ವಾಮೀಜಿ ವಿಜಯಪುರ ಜಿಲ್ಲೆಯಲ್ಲಿ ಜನಿಸಿದವರು. ಜಗಜ್ಯೋತಿಯ ಜೊತೆ ಜ್ಞಾನಜ್ಯೋತಿಯ ಚಿತಾಭಸ್ಮ ವಿಸರ್ಜನೆ ಮಾಡಿದ್ದೇವೆ. ಸಿದ್ದೇಶ್ವರ ಸ್ವಾಮೀಜಿ ಇಚ್ಛೆಯಂತೆ ಗೋಕರ್ಣಕ್ಕೆ ತೆರಳಿ ಸಾಗರ, ಸಂಗಮದಲ್ಲಿ ವಿಸರ್ಜನೆ ಮಾಡುತ್ತೇವೆ ಎಂದು ಜ್ಞಾನಯೋಗಾಶ್ರಮದ ಅಧ್ಯಕ್ಷ ಬಸವಲಿಂಗ ಸ್ವಾಮೀಜಿ ತಿಳಿಸಿದರು.
ಇದೇ ವೇಳೆ ವಿಜಯಪುರ ಡಿಸಿ ವಿಜಯ್ ಮಹಾಂತೇಶ್ ದಾನಮ್ಮನವರ್ ಮಾತನಾಡಿದ್ದು, ಕೂಡಲಸಂಗಮದ ತ್ರಿವೇಣಿ ಸಂಗಮದಲ್ಲಿ ಚಿತಾಭಸ್ಮ ವಿಸರ್ಜಿಸಲಾಗಿದೆ. ಸಿದ್ದೇಶ್ವರಶ್ರೀಗಳ ಇಚ್ಛೆಯಂತೆ ನದಿಯಲ್ಲಿ ಚಿತಾಭಸ್ಮ ವಿಸರ್ಜಿಸಲಾಗಿದೆ. ಸಾಗರದಲ್ಲೂ ಸಿದ್ದೇಶ್ವರಶ್ರೀಗಳ ಚಿತಾಭಸ್ಮ ವಿಸರ್ಜನೆ ಮಾಡಲಾಗುವುದು. ವಿವಿಧ ಮಠಾಧೀಶರು, ಭಕ್ತರ ಸಮ್ಮುಖದಲ್ಲಿ ಚಿತಾಭಸ್ಮ ವಿಸರ್ಜಿಸಲಾಗಿದೆ. ಸಂಜೆ 5ರೊಳಗೆ ಗೋಕರ್ಣದಲ್ಲಿ ಸಿದ್ದೇಶ್ವರಶ್ರೀಗಳ ಚಿತಾಭಸ್ಮ ವಿಸರ್ಜನೆ ಮಾಡುತ್ತೇವೆ ಎಂದರು.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ