ರಾಮಚರಿತೆ ಸಾರುತ್ತಿರುವ ಬಾಗಲಕೋಟೆಯ ಸೀತೆಮನೆ ಗ್ರಾಮ; ಬರಗಾಲದಲ್ಲೂ ಬತ್ತದ ಸೀತಾ ಹೊಂಡ
ಅಯೋದ್ಯೆಯಲ್ಲಿ ಭವ್ಯ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. ಜನವರಿ 22 ರಂದು ರಾಮಲಲ್ಲಾನ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ನೆರವೇರಲಿದೆ. ಹೇಳಿ ಕೇಳಿ, ರಾಮನ ವಿಚಾರದಲ್ಲಿ ಉತ್ತರ ಪ್ರದೇಶಕ್ಕೂ ಕರ್ನಾಟಕಕ್ಕೂ ಸಂಬಂಧ ಇದೆ. ರಾಮಭಕ್ತ ಹನುಮಂತ ಜನಿಸಿದ್ದು ಕರ್ನಾಟಕದ ಅಂಜನಾದ್ರಿಯಲ್ಲಿ ಎಂದು ನಂಬಲಾಗಿದೆ. ಆದರೆ, ರಾಮಚರಿತೆ ಸಾರುವ ಬಾಗಲಕೋಟೆಯಲ್ಲಿರುವ ಸೀತೆಮನೆ ಗ್ರಾಮದ ಬಗ್ಗೆ ನಿಮಗೆಷ್ಟು ಗೊತ್ತು? ಈ ಬಗ್ಗೆ ಮಾಹಿತಿ ಇಲ್ಲಿದೆ.
ಬಾಗಲಕೋಟೆ, ಜ.2: ಶ್ರೀರಾಮನ ವಿಚಾರದಲ್ಲಿ ಉತ್ತರ ಪ್ರದೇಶ ಹಾಗೂ ಕರ್ನಾಟಕಕ್ಕೂ ಸಂಬಂಧ ಇದೆ. ರಾಮಭಕ್ತ ಹನುಮಂತ ಜನಿಸಿದ್ದು ಕರ್ನಾಟಕದ ಅಂಜನಾದ್ರಿಯಲ್ಲಿ ಎಂದು ನಂಬಲಾಗಿದೆ. ಅದೇ ರೀತಿ, ರಾಮಚರಿತೆ ಸಾರುವ ರಾಜ್ಯದ ಮತ್ತೊಂದು ಪ್ರದೇಶವೇ ಸೀತೆಮನೆ ಗ್ರಾಮ (Sitamane Village). ಬಾಗಲಕೋಟೆ (Bagalkot) ತಾಲೂಕಿನಲ್ಲಿರುವ ಈ ಗ್ರಾಮಕ್ಕೆ ಮೊದಲು ಸೀತಾಮಣಿ ಎಂದು ಹೆಸರಿತ್ತು. ಈ ಹೆಸರು ಯಾಕೆ ಬಂತು ಮತ್ತು ಈ ಹೆಸರು ಸೀತೆಮನೆಯಾಗಿ ಬದಲಾಗಿದ್ದು ಹೇಗೆ ಎಂಬ ಮಾಹಿತಿ ಇಲ್ಲಿದೆ.
ಬಾಗಲಕೋಟೆ ತಾಲೂಕಿನ ಸೀತೆಮನೆ ಗ್ರಾಮದಲ್ಲಿ ಸೀತೆಗೆ ಮಹರ್ಷಿ ವಾಲ್ಮೀಕಿ ಆಸರೆ ನೀಡಿದ್ದರು. ವಶಿಷ್ಟ ರಾಮಾಯಣದಲ್ಲಿ ಸೀತೆ ಇಲ್ಲಿ ಬಂದು ವಾಸವಿದ್ದಳೆಂಬ ಉಲ್ಲೇಖವಿದೆ. ಇಲ್ಲೇ ಲವ-ಕುಶರಿಗೆ ಸೀತಾ ಮಾತೆ ಜನ್ಮ ನೀಡಿದ್ದು. ಸೀತೆಗೆ ಹೆರಿಗೆಯಾದ ಕೊಠಡಿಗೆ ಸೀತೆ ಪ್ರಸೂತಿ ಗೃಹ ಹೆಸರಡಿಸಲಾಗಿದೆ.
ಇದನ್ನೂ ಓದಿ: ತುಮಕೂರಿನಲ್ಲೂ ಇದೆ ರಾಮ ಸಂಚರಿಸಿರುವ ಕುರುಹು: ನಾಮದ ಚಿಲುಮೆ ಹೇಳುತ್ತಿದೆ ಅಯೋಧ್ಯಾಪತಿ ಬಂದು ಹೋಗಿರುವ ಕಥೆ
ಅಷ್ಟೇ ಅಲ್ಲದೆ, ವಾಲ್ಮೀಕಿ ಮಹರ್ಷಿ ಕುಟೀರದ ಜೊತೆಗೆ ಲವಕುಶರು ಸ್ನಾನ ಮಾಡಿಸಿದ್ದರ ಪ್ರತೀಕವಾಗಿ ಲವಕುಶ ಹೆಸರಿನ ಹೊಂಡಗಳಿವೆ. ಸೀತಾಮಾತೆ ಒಬ್ಬಳೇ ಇರುವ ದೇಶದ ಏಕೈಕ ದೇವಸ್ಥಾನವೂ ಇಲ್ಲೇ ಇದೆ. ರಾವಣ ಸೀತೆಯನ್ನು ಅಪಹರಿಸಿಕೊಂಡು ಹೋಗುವಾಗ ತಾಳಿಯ ಕರಿಮಣಿಯನ್ನು ಈ ಜಾಗದಲ್ಲಿ ಸೀತೆ ಎಸೆದಿದ್ದಳಂತೆ. ಇದೇ ಕಾರಣಕ್ಕೆ ಗ್ರಾಮಕ್ಕೆ ಸೀತೆಮಣಿ ಎಂದು ಹೆಸರು ಬಂತು.
ನಂತರ ಕಾಲ ಕಾಲಕ್ಕೆ ಬದಲಾಗಿ ಸೀತೆಮನೆ ಎಂದು ಗ್ರಾಮದ ಹೆಸರು ಬದಲಾಯಿತು. ಸೀತೆಮನೆಯಲ್ಲಿ ಸೀತೆ ಸ್ನಾನ ಮಾಡುತ್ತಿದ್ದ ಹೊಂಡ ಇದ್ದು, ವರ್ಷವಿಡೀ ನೀರಿನಿಂದ ತುಂಬಿರುತ್ತದೆ. ಎಷ್ಟೇ ವರ್ಷ ಬರ ಬಿದ್ದರೂ ಸೀತಾ ಹೊಂಡ ಬತ್ತುವುದಿಲ್ಲ.
ಸೀತೆ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸೀತೆ ದೇವಸ್ಥಾನದಲ್ಲಿರುವ ಸೀತೆಯ ವಿಗ್ರಹದ ಕೊರಳಿನಲ್ಲಿ ಶಿವಲಿಂಗವಿದೆ. ಇಂದು ಸೀತೆ ದೇವಸ್ಥಾನದಲ್ಲಿ ವೀರಶೈವ ಲಿಂಗಾಯತರು ಪೂಜೆ ನೆರವೇರಿಸಿದ್ದಾರೆ. ಮಕ್ಕಳಾಗದವರು ತೊಟ್ಟಿಲು ಕಟ್ಟಿ ಹರಕೆ ಇಡುತ್ತಾರೆ. ಲವಕುಶರಂತ ಮಕ್ಕಳ ಕೊಡವ್ವ ತಾಯಿ ಎಂದು ಭಕ್ತರು ಬೇಡಿಕೊಳ್ಳುತ್ತಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ