ಐತಿಹಾಸಿಕ ಬೆಂಕಿ ಬಬಲಾದಿ ಮಠದ ಕಾಲಜ್ಞಾನ ವಾಣಿಗೆ ಅಪಸ್ವರ: ಏನದು?

| Updated By: ಗಂಗಾಧರ​ ಬ. ಸಾಬೋಜಿ

Updated on: Mar 03, 2025 | 3:00 PM

ಬಾಗಲಕೋಟೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಕೊಪ್ಪದ ಗಂಗಾಧರ ಅಜ್ಜನವರ ವಂಶಸ್ಥ ರವೀಂದ್ರ ಮುತ್ಯಾ, ಕಾಲಜ್ಞಾನ ಪುಸ್ತಕ ನನ್ನ ಬಳಿ ಇದ್ದಾಗ ಕಾಲಜ್ಞಾನ ಹೇಳುವುದಕ್ಕೆ ಹೇಗೆ ಸಾಧ್ಯ. ಮೂಲ‌ಬಬಲಾದಿ ಕಾಲಜ್ಞಾನ ಪುಸ್ತಕದ ಪ್ರಕಾರ ಕಾಲಜ್ಞಾನ ಸಾರಿಲ್ಲ. ಇದು ಜನರ ದಾರಿ ತಪ್ಪಿಸುವ ವಾಣಿ ಎಂದು ಆರೋಪಿಸಿದ್ದಾರೆ.

ಐತಿಹಾಸಿಕ ಬೆಂಕಿ ಬಬಲಾದಿ ಮಠದ ಕಾಲಜ್ಞಾನ ವಾಣಿಗೆ ಅಪಸ್ವರ: ಏನದು?
ಐತಿಹಾಸಿಕ ಬೆಂಕಿ ಬಬಲಾದಿ ಮಠದ ಕಾಲಜ್ಞಾನ ವಾಣಿಗೆ ಅಪಸ್ವರ: ಏನದು?
Follow us on

ಬಾಗಲಕೋಟೆ, ಮಾರ್ಚ್​​ 03: ವಿಜಯಪುರದ ಬೆಂಕಿ ಬಬಲಾದಿ ಸದಾಶಿವ ಮುತ್ಯಾನಮಠದ (Babaladi Sadashiva Mutya) ಶ್ರೀ ಸದಾಶಿವ ಮುತ್ಯಾ ನಿನ್ನೆ ಸ್ಪೋಟಕ ಕಾಲಜ್ಞಾನ ಭವಿಷ್ಯ ನುಡಿದಿದ್ದರು. ಆದರೆ ಇದೀಗ ಅವರ ಕಾಲಜ್ಞಾನ ವಾಣಿ ಬಗ್ಗೆ ಅಪಸ್ವರ ಕೇಳಿಬಂದಿದೆ. ಈ‌ ವರ್ಷದ ಬಬಲಾದಿ ‌ಕಾಲಜ್ಞಾನ ನೈಜ‌ಕಾಲ ಜ್ಞಾನವಾಣಿಯಲ್ಲ. ಮೂಲ‌ಬಬಲಾದಿ ಕಾಲಜ್ಞಾನ ಪುಸ್ತಕದ ಪ್ರಕಾರ ಕಾಲಜ್ಞಾನ ಸಾರಿಲ್ಲ. ಇದು ಜನರ ದಾರಿ ತಪ್ಪಿಸುವ ವಾಣಿ ಎಂದು ಕೊಪ್ಪದ ಗಂಗಾಧರ ಅಜ್ಜನವರ ವಂಶಸ್ಥ ರವೀಂದ್ರ ಮುತ್ಯಾ ಹೇಳಿದ್ದಾರೆ.

ಇವರು ಹೇಳುವ ಕಾಲಜ್ಞಾನ ಯಾರು ಬರೆದುಕೊಟ್ಟಿದ್ದು?

ವಿಜಯಪುರ ಬಬಲಾದಿ ಮಠದಿಂದ ಅಂತರ ಕಾಯ್ದುಕೊಂಡಿರುವ ರವಿಂದ್ರ ಮುತ್ಯಾ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಗುರುನಾಥ ಮುತ್ಯಾ ಅವರು ಬರೆದ ಕಾಲಜ್ಞಾನವಾಣಿ ಉಲ್ಲೇಖವಿರುವ ಮೂಲ ಪುಸ್ತಕ ನನ್ನ ಬಳಿ ಇದೆ. ಪುಸ್ತಕ ಇರೋದು ಅದೊಂದೆ. ಅದನ್ನು ನೋಡಿ ದೈವಿಭಾವದಿಂದ ಕಾಲಜ್ಞಾನ ಹೇಳಬೇಕು. ಆ ಪುಸ್ತಕ ನನ್ನ ಬಳಿ ಇದ್ದಾಗ ಕಾಲಜ್ಞಾನ ಹೇಳುವುದಕ್ಕೆ ಹೇಗೆ ಸಾಧ್ಯ. ಇವರು ಹೇಳುವ ಕಾಲಜ್ಞಾನ ಯಾರು ಬರೆದುಕೊಟ್ಟಿದ್ದು? ಬಬಲಾದಿ ಕಾಲಜ್ಞಾನ ಅಂತ ಈ ವರ್ಷ ತಪ್ಪು ಸಂದೇಶ ಹೋಗಿದೆ. 400 ವರ್ಷಗಳ ಹಿಂದೆ ಬರೆದಿಟ್ಟ ಕಾಲಜ್ಞಾನ ಇದಲ್ಲ ಎಂದು ನಾನು ಸ್ಪಷ್ಟವಾಗಿ ‌ಹೇಳುತ್ತೇನೆ‌‌ ಎಂದಿದ್ದಾರೆ.

ಇದನ್ನೂ ಓದಿ: ರಾಜ್ಯ ರಾಜಕೀಯದಲ್ಲಿ ಮತ್ತಷ್ಟು ಬದಲಾವಣೆ: ಬಬಲಾದಿಯ ಸದಾಶಿವ ಮುತ್ಯಾ ಕಾಲಜ್ಞಾನ ಭವಿಷ್ಯ

ಮೂಲ ಕೊಪ್ಪದ ಗಂಗಾಧರ ಅಜ್ಜನವರ ವಂಶಸ್ಥರಿಂದ ಕಾಲಜ್ಞಾನ ಹೇಳಿಕೆ ನಡೆದುಕೊಂಡು ಬಂದಿದೆ. ಪ್ರತಿವರ್ಷ ಕಾಲಜ್ಞಾನ ಹೇಳುತ್ತಿದ್ದ ನಮಗೆ ಈ ಬಾರಿ ಅವಕಾಶ ನೀಡಿಲ್ಲ ಎಂದು ವಿಜಯಪುರ ಜಿಲ್ಲೆಯ ಬಬಲಾದಿ ಮಠದ ಸಿದ್ದು ಹೊಳಿಮಠ ವಿರುದ್ಧ ರವೀಂದ್ರ ಮುತ್ಯಾ ಆರೋಪ ಮಾಡಿದ್ದಾರೆ. ಸಂಪ್ರದಾಯದಂತೆ ಈ ವರ್ಷ ಕಾಲಜ್ಞಾನ ಹೇಳಿಕೆಗೆ ಅವಕಾಶ ನೀಡಿಲ್ಲ. ಈ ಬಾರಿ ಹೇಳಿದ ಹೇಳಿಕೆ ಕಾಲಜ್ಞಾನದ್ದೂ ಅಲ್ಲವೇ ಅಲ್ಲ. ಬಬಲಾದಿಯಲ್ಲಿ ಕಾಲಜ್ಞಾನ ಈ ಬಾರಿ ಹೇಳಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಾರಿ ಬಬಲಾದಿಯಲ್ಲಿ ಸಿದ್ದು ಹೊಳಿಮಠ ಕಾಲಜ್ಞಾನ ಸಾರಲು ಅವಕಾಶ ನೀಡಿಲ್ಲ. ಕಳೆದ 4 ತಲೆಮಾರುಗಳಿಂದ ನಮ್ಮ ವಂಶಸ್ಥರೇ ಕಾಲಜ್ಞಾನ ಹೇಳಿಕೆ ಹೇಳುತ್ತಾ ಬಂದಿದ್ದಾರೆ. 2008 ರಿಂದ 2024ರವರೆಗೂ ನಾನೇ ಕಾಲಜ್ಞಾನ ಸಾರುತ್ತಿದ್ದೆ. ಇದನ್ನು ಸಿದ್ದು ಹೊಳಿಮಠ ಮಾಧ್ಯಮಗಳ ಮುಂದೆ ಹೇಳುತ್ತಿದ್ದರು. ಆದರೆ ಈ ಬಾರಿ ಮಾತ್ರ ಹೊಳೆ ದಂಡೆಯಲ್ಲಿ ಕಾಲಜ್ಞಾನ ಸಾರಲು ಅವಕಾಶ ನೀಡಲಿಲ್ಲ. ಈ ಬಾರಿ ಸಿದ್ದು ಹೊಳಿಮಠ ಹೇಳಿದ್ದು ಕಪೋಲಕಲ್ಪಿತ ವಾಣಿ.

ಇದನ್ನೂ ಓದಿ: Kodi Sri Prediction: ಕರ್ನಾಟಕದ ಬಗ್ಗೆ ಮಹತ್ವದ ಭವಿಷ್ಯ ನುಡಿದ ಕೋಡಿಮಠದ ಶ್ರೀಗಳು

ಮಠಕ್ಕೆ ಹೋದಾಗ ಸಿದ್ದು ಹೊಳಿಮಠ ಮತ್ತು ಬೆಂಬಲಿಗರು ನಮ್ಮನ್ನ ತಡೆದಿದ್ದಾರೆ. ಪೋಲಿಸರ ರಕ್ಷಣೆಯಲ್ಲಿ ನಾವು ಮರಳಿ ಬಂದಿದ್ದೇನೆ. ಈ ಬಗ್ಗೆ ಮೊದಲೇ ಡಿಸಿ ಮತ್ತು ಎಸ್​ಪಿ ಅವರಿಗೆ ತಿಳಿಸಿದ್ದೆ.  ಇದರಿಂದ ಈ ಬಾರಿ ಕಾಲಜ್ಞಾನ ಸಾರಲು ಅವಕಾಶ ನೀಡದೇ ಇರೋದಕ್ಕೆ ನಮಗೆ ನೋವಾಗಿದೆ ಎಂದು ಹೇಳಿದ್ದಾರೆ. ಸಂಪ್ರದಾಯದಂತೆ ಈ ಬಾರಿ ಮತ್ತೇ ನಾವೇ ಕಾಲಜ್ಞಾನ ಹೇಳಿಕೆ ನೀಡಲಿದ್ದೇವೆ. ಈ ಬಾರಿ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಬುದ್ನಿ ಗ್ರಾಮದಲ್ಲಿ ಕಾಲಜ್ಞಾನ ಹೇಳಿಕೆ ಹೇಳಲಿದ್ದೇವೆ ಎಂದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.