Hampi Utsav 2023: ಮನ ಸೆಳೆಯುತ್ತಿರುವ ಹಂಪಿ ಉತ್ಸವ: ಜಿಲ್ಲೆಯ ಜೀವ ವೈವಿಧ್ಯತೆ ಅನಾವರಣ

ವಿಶ್ವ ವಿಖ್ಯಾತ ಹಂಪಿಯಲ್ಲಿ ಇಂದಿನಿಂದ(ಜ. 27) 3 ದಿನಗಳ ಕಾಲ ಹಂಪಿ ಉತ್ಸವ ನಡೆಯಲಿದೆ. ಸಿಎಂ ಬಸವರಾಜ ಬೊಮ್ಮಾಯಿ ಅವರು ಚಾಲನೆ ನೀಡಿದರು.

Hampi Utsav 2023: ಮನ ಸೆಳೆಯುತ್ತಿರುವ ಹಂಪಿ ಉತ್ಸವ: ಜಿಲ್ಲೆಯ ಜೀವ ವೈವಿಧ್ಯತೆ ಅನಾವರಣ
ಹಂಪಿ ಉತ್ಸವ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Jan 27, 2023 | 7:25 PM

ಬಳ್ಳಾರಿ: ಹಂಪಿ ಉತ್ಸವದ (Hampi Utsav 2023) ಅಂಗವಾಗಿ ವಿರೂಪಾಕ್ಷ ದೇವಾಲಯ ಹಾಗೂ ಎದುರು ಗಣಪತಿ ದೇವಾಲಯದ ಬೀದಿಗೆ ಹೊಂದಿಕೊಂಡತೆ ಪಕ್ಕದಲ್ಲಿರುವ ಮಾತಂಗ ಪರ್ವತದ ಬಯಲಿನಲ್ಲಿ ಏರ್ಪಡಿಸಲಾಗಿರುವ ವಸ್ತು ಪ್ರದರ್ಶನ ಪ್ರವಾಸಿಗರು ಹಾಗೂ ಸಾರ್ವಜನಿಕರ ಮನ ಸೆಳೆಯುತ್ತಿವೆ. ಶಿಲ್ಪಕಲೆ ಹಾಗೂ ಚಿತ್ರಕಲಾ ಶಿಬಿರ, ಮರಳು ಶಿಲ್ಪ ಪ್ರದರ್ಶನ, ಮತ್ಸ್ಯ ಮೇಳ, ಫಲಪುಷ್ಪ ಹಾಗೂ ವಸ್ತು ಪ್ರದರ್ಶನ ಮಳಿಗೆಗಳು ನೋಡುಗರನ್ನು ಹಂಪಿಯ ಐತಿಹಾಸಿಕ ಸ್ಮಾರಗಳ ಜೊತೆಗೆ ಪೈಪೋಟಿಗೆ ಬಿದ್ದಂದತೆ ಕೈ ಬಿಸಿ ಕರೆಯುತ್ತಿವೆ. ಜಿಲ್ಲೆಯ ಪರಿಸರ ಹಾಗೂ ಜೀವ ವೈವಿದ್ಯತೆಯನ್ನು ಪರಿಚಯಿಸಿ ಕೊಡುವ ನಿಟ್ಟಿನಲ್ಲಿ ಅರಣ್ಯ ಇಲಾಖೆಯಿಂದ ನಿರ್ಮಾಣ ಮಾಡಿರುವ ಅರಣ್ಯ ಪ್ರದರ್ಶನ ಮಳಿಗೆ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿದೆ. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ವಿಜಯ್ ಭಾಸ್ಕರ್ ಹಾಗೂ ವಲಯ ಅರಣ್ಯ ಅಧಿಕಾರಿ ವಿನಯ್.ಕೆ.ಎಸ್ ವಿಶೇಷ ಆಸಕ್ತಿ ವಹಿಸಿ ಅರಣ್ಯ ಪ್ರದರ್ಶನ ಮಳಿಗೆಯ ಪರಿಕಲ್ಪನೆಯನ್ನು ರೂಪಿಸಿದ್ದಾರೆ. ಜಿಲ್ಲೆಯಲ್ಲಿನ ಕುರುಚಲು ಕಾಡು ಅಲ್ಲಿನ ಪ್ರಾಣಿ ಪಕ್ಷಿಗಳ ಕುರಿತು ಜನರಲ್ಲಿ ತಿಳುವಳಿಕೆ ಮೂಡಿಸುತ್ತಿದ್ದಾರೆ.

ಗಂಧದ ಗುಡಿ ಹಾಗೂ ಕಾಂತಾರ ಚಲನಚಿತ್ರದ ತುಣಕುಗಳು

ಈ ಬಾರಿಯ ಅರಣ್ಯ ಇಲಾಖೆ ವಸ್ತುಪ್ರದರ್ಶನದಲ್ಲಿ ಜನರಿಗೆ ಕಾಡಿನ ಬಗ್ಗೆ ಒಲವು ಮೂಡಿಸಲು ಡಾ. ರಾಜಕುಮಾರ್ ಅಭಿನಯದ ಗಂದಧ ಗುಡಿ ಹಾಗೂ ರಿಷಬ್ ಶೆಟ್ಟಿ ಅಭಿನಯದ ಕಾಂತಾರ ಚಲನಚಿತ್ರದ ತುಣುಕುಗಳನ್ನು ಪ್ರದರ್ಶಿಸಲಾಗುತ್ತಿದೆ. ಅರಣ್ಯ ಇಲಾಖೆ ಈ ವಿನೂತನ ಪ್ರಯತ್ನ ಜನರ ಮೆಚ್ಚುಗೆ ಗಳಿಸುತ್ತಿದೆ. ವಿದೇಶಿ ಪ್ರವಾಸಿಗರು ಸಹ ಕತೂಹಲದಿಂದ ಅರಣ್ಯ ಇಲಾಖೆ ಪ್ರದರ್ಶನವನ್ನು ವೀಕ್ಷಿಸುವುದು ಕಂಡುಬಂತು.

ಇದನ್ನೂ ಓದಿ: Hampi Utsav 2023: ವಿಶ್ವ ವಿಖ್ಯಾತ ಹಂಪಿ ಉತ್ಸವಕ್ಕೆ ಇಂದು ಸಿಎಂ ಬೊಮ್ಮಾಯಿ ಚಾಲನೆ

ನಲಿ-ಕಲಿ ಹಾಗೂ ಕಲಿಕಾ ಸಾಮಗ್ರಿಗಳ ಪ್ರದರ್ಶನ

ಈ ಬಾರಿಯ ವಸ್ತುಪ್ರದರ್ಶನದಲ್ಲಿ ಹೊಸಪೇಟೆ ನಗರದ ಆಶ್ರಯ ಕಾಲೋನಿ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠ‌ ಶಾಲೆಯ, ರಾಜ್ಯ ಪ್ರಶಸ್ತಿ ಪುರಸ್ಕೃತ ಭಾಷ ಶಿಕ್ಷಕ ಮಧುಸೂಧನ ಅವರ ನೇತೃತ್ವದಲ್ಲಿ ನಿರ್ಮಿಸಲಾಗಿರುವ ನಲಿ-ಕಲಿ, ಕಲಿಕಾ ಚೇತರಿಕೆ ಹಾಗೂ ಕಲಿಕಾ ಸಾಮಗ್ರಿಗಳ ವಸ್ತು ಪ್ರದರ್ಶನ ಶಿಕ್ಷಣ ಪ್ರೇಮಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಶಿಕ್ಷಕರು ಹಾಗೂ ಶಾಲಾ ಮಕ್ಕಳನ್ನು ಆಕರ್ಷಿಸುವಲ್ಲಿ ಸಫಲವಾಗಿದೆ.

ಶಿಕ್ಷಕ ಮಧುಸೂಧನ ತಮ್ಮ ಸ್ವಂತ ಹಣ ರೂ.1.50 ಲಕ್ಷ ವ್ಯಯಿಸಿ ಕಲಿಕಾ ಸಾಮಾಗ್ರಿಗಳನ್ನು ರಚಿಸಿ ಪ್ರದರ್ಶನದಲ್ಲಿ ಇರಿಸಿದ್ದಾರೆ. ಇವರ ಈ ಶಿಕ್ಷಣ ಪ್ರೇಮಕ್ಕೆ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯಿಂದ ಸೂಕ್ತ ಪ್ರೋತ್ಸಾಹವನ್ನು ಸಹ ನೀಡಲಾಗಿದೆ. ಶಿಕ್ಷಣ ಸಚಿವರು, ನಾಡಿನ ಹೆಸರಾಂತ ಸಾಹಿತಿಗಳು ಹಾಗೂ ಶಿಕ್ಷಣ ಇಲಾಖೆ ಉನ್ನತ ಅಧಿಕಾರಿಗಳು ಶಿಕ್ಷಕ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಶಿಕ್ಷಣ ಇಲಾಖೆಯಲ್ಲಿ ಮಕ್ಕಳಿಗೆ ಕೊಡ ಮಾಡುವ ಎಲ್ಲಾ ಯೋಜನೆಗಳ ಕುರಿತು ಮಳಿಗೆಯಲ್ಲಿ ಮಾಹಿತಿ ದೊರೆಯುತ್ತಿದೆ. ಇದರೊಂದಿಗೆ ವಿಜ್ಞಾನದ ಪ್ರಯೋಗಿಕ ವಸ್ತುಗಳು, ಹಳೆಯ ನಾಣ್ಯ, ಕನ್ನಡ, ಗಣಿತ, ಸಮಾಜ ಸೇರಿದಂತೆ ಇತರೆ ವಿಷಯಗಳ ಕಲಿಕಾ ಉಪಕರಣಗಳು, ಶಿಕ್ಷಕ ಮಧುಸೂಧನ ಅರಳಿ ಎಲೆಯಲ್ಲಿ ರಚಿಸಿದ ಚಿತ್ರಗಳು, ಕಲಾಕೃತಿಗಳನ್ನುವಪ್ರದರ್ಶನಕ್ಕೆ ಇಡಲಾಗಿದೆ.

ಇದನ್ನೂ ಓದಿ: Hampi Utsava: ಹಂಪಿ ಉತ್ಸವದಲ್ಲಿ ಕಣ್ಮನ ಸೆಳೆಯುತ್ತಿದೆ ಫಲಪುಷ್ಪ ಪ್ರದರ್ಶನ

ಕಣ್ಮನ ಸೆಳೆದ ಫಲಪುಷ್ಪ ಪ್ರದರ್ಶನ

ತೋಟಗಾರಿಕೆ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ವಿಶೇಷ ಫಲಪುಷ್ಪ ಪ್ರದರ್ಶನ ಕಣ್ಮನ ಸೆಳೆಯಿತು. ಪ್ರದರ್ಶನದಲ್ಲಿ ಹೂ, ಹಣ್ಣು ಸೇರಿದಂತೆ ವಿವಿಧ ಆಹಾರ ಪದಾರ್ಥಗಳಿಂದ ತಯಾರಿಸಿದ ಚಿತ್ತಾಕರ್ಷಕ ಪ್ರದರ್ಶನಗಳನ್ನು ಸಾರ್ವಜನಿಕರು ಕಣ್ತುಂಬಿಕೊಂಡರು. ಹೂವಿನಲ್ಲಿ ವಿಶೇಷವಾಗಿ ಸೈಕಲ್, ಪಕ್ಷಿ ಸೇರಿದಂತೆ ಗ್ರಾಮೀಣ ಸೊಗಡಿನ ಆಕೃತಿಗಳನ್ನು ಬಳಸಿ ವಿಶೇಷ ಮೆರುಗು ನೀಡಲಾಗಿತ್ತು. ಬಗೆಬಗೆಯ ಆಹಾರ ಪದಾರ್ಥಗಳನ್ನು ಬಳಸಿ ಕರ್ನಾಟಕ ರಾಜ್ಯ ಹಾಗೂ ತರಕಾರಿ ಪದಾರ್ಥಗಳನ್ನು ಬಳಸಿ ವಿಜಯನಗರ ಜಿಲ್ಲೆಯ ನಕಾಶೆಯನ್ನು ನಿರ್ಮಿಸಲಾಗಿತ್ತು. ಸಾರ್ವಜನಿಕರು ಪ್ರದರ್ಶನವನ್ನು ಕಣ್ತುಂಬಿಕೊಳ್ಳುವುದು ಮಾತ್ರವಲ್ಲದೇ ತಮ್ಮ ಅದರ ಮುಂಭಾಗದಲ್ಲಿ ಫೋಟೋ ತೆಗೆಸಿಕೊಂಡರು. ಗಾನಗಂಧರ್ವ ಪಂಡಿತ ಪುಟ್ಟರಾಜ ಗವಾಯಿ, ಸಿದ್ಧೇಶ್ವರ ಸ್ವಾಮೀಜಿ ಅವರ ರಂಗೋಲಿ ಚಿತ್ರಕಲೆ ಮುಖ್ಯಕರ್ಷಣೆಯಲ್ಲಿ ಒಂದಾಗಿತ್ತು.

ಅರಳಿ ಮರದ ಎಲೆಯಲ್ಲಿ ಸಿಎಂ, ಕಾಂತಾರ, ಚಿತ್ರಗಳು:

ಪ್ರದರ್ಶನದಲ್ಲಿ ಅರಳಿ ಮರದ ಎಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕಾಂತಾರ ಚಿತ್ರದ ದೈವ, ಚಿತ್ರನಟ ಡಾ.ರಾಜ್‌ಕುಮಾರ್, ಕುವೆಂಪು ಸೇರಿದಂತೆ ವಿವಿಧ ಮಹನೀಯರ ಸೂಕ್ಷ್ಮರಚನೆ ನೋಡುಗರಿಗೆ ಬೆರಗು ಮೂಡಿಸಿದವು. ಇಕ್ಕೆಬನಾಹೂ ಜೋಡಣೆಯಿಂದ ಉಗ್ರನರಸಿಂಹ, ಬಿದಿರಿನಿಂದ ಸಾಸುವೆ ಕಾಳು ಗಣಪ ಹಾಗೂ ತೆಂಗಿನಕಾಯಿಯಲ್ಲಿ ತಯಾರಿಸಿದ ವಿವಿಧ ಕರಕುಶಲವನ್ನು ಪ್ರದರ್ಶನಕ್ಕೆ ಇಡಲಾಗಿತ್ತು.

ಹಂಪಿ ಸ್ಮಾರಕಗಳ ನಡುವೆ ಮತ್ಸ್ಯಲೋಕ

ವಸ್ತುಪ್ರದರ್ಶನದಲ್ಲಿ ಹಂಪಿ ಸ್ಮಾರಕಗಳ ನಡುವೆ ಮತ್ಸ್ಯಲೋಕ ಅನಾವರಣಗೊಂಡಿದೆ. ವಿವಿಧ ಬಣ್ಣ ಬಣ್ಣದ ಮೀನುಗಳು ನೋಡಗರನ್ನು ವಿಸ್ಮಯಗೊಳಿಸುತ್ತಿವೆ. ಇದರೊಂದಿಗೆ ಮೀನು ಉತ್ಪಾದನೆಯ ತಳಿಗಳು ಹಾಗೂ ಮಿನುಗಾರಕೆ ಇಲಾಖೆ ಯೋಜನೆಗಳ ಕುರಿತ ಮಾಹಿತಿ ಫಲಕಗಳನ್ನು ಪ್ರದರ್ಶದಲ್ಲಿ ಅಳವಡಿಸಲಾಗಿದೆ ಎಂದು ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕ ನಾಡನಗೌಡ ಬಸವನಗೌಡ ತಿಳಿಸಿದರು.

ಸಾಹಿತ್ಯಾಸಕ್ತರಿಗೆ ಪ್ರಿಯವಾದ ಪುಸ್ತಕ ಪ್ರದರ್ಶನ

ಪುಸ್ತಕ ಪ್ರದರ್ಶನ ಸಾಹಿತ್ಯಾಸಕ್ತರಿಗೆ ಅನುಕೂಲವಾಗುವ ಜೊತೆಗೆ ಪುಸ್ತಕಗಳ ಮಾಹಿತಿ ಸಿಕ್ಕಂತಾಯಿತು. ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗ ಸೇರಿದಂತೆ ಆವಿಷ್ಕಾರ ಪ್ರಗತಿ ಪರ ಸಾಂಸ್ಕೃತಿಕ ಸಂಘ, ಶಾಂತಿ ಪ್ರಕಾಶನ, ವಿಜಯವಾಹಿನಿ, ಕದಂಬ, ಯಾಜಿ ಪ್ರಕಾಶನ, ಅಹನಾ ಪ್ರಕಾಶನ, ಎಸ್.ಪಿ.ಬುಕ್ ಹೌಸ್ ಪ್ರಕಟಿಸಿರುವ ಪುಸ್ತಕಗಳು ಸೇರಿದಂತೆ ಹೊಸಪೇಟೆಯ ನಗರ ಕೇಂದ್ರ ಗ್ರಂಥಾಲಯ ಸಹ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದವು. ಜೊತೆಗೆ ಪ್ರಸಾರಾಂಗದಿಂದ ಶೇ.50ರಷ್ಟು ರಿಯಾಯಿತಿ ಕೂಡ ನೀಡಲಾಗಿದೆ.

ಇದರೊಂದಿಗೆ ‘ಪಶು ಸಂಪತ್ತು‌ ದೇಶದ ಸಂಪತ್ತು‌’ ಎನ್ನುವ ಶೀರ್ಷಿಕೆಯೊಂದಿಗೆ ಪಶುಪಾಲನೆ ಮತ್ತು ಪಶು ವೈಧ್ಯಕೀಯ ಇಲಾಖೆ ಪ್ರದರ್ಶನ ಮಳಿಗೆ, ಕೃಷಿ ಇಲಾಖೆಯ ‘ಸ್ವಾವಲಂಬಿ ಬದುಕಿಗೆ ಸಮಗ್ರ ಮತ್ತು ಸುಸ್ಥಿರ ಕೃಷಿ ಮಾದರಿ ಪ್ರಾತ್ಯಕ್ಷಿಕೆ’, ರೇಷ್ಮೆ ಕೃಷಿಗೆ ಉತ್ತೇಜನ ನೀಡುವ ರೇಷ್ಮೇ ಇಲಾಖೆ ಮಳಿಗೆ, ಜಿಲ್ಲಾ ಪಂಚಾಯಿತಿಯ ನರೇಗಾ ಮಾಹಿತಿ ಕೇಂದ್ರ, ಜಲಜೀವನ್ ಮಿಷನ್, ಆರೋಗ್ಯ ಇಲಾಖೆಯ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಆರೋಗ್ಯ ಸೇವೆಗಳ ಕುರಿತ ಮಾಹಿತಿಯ ಮಳಿಗೆಗಳು ಸರ್ಕಾರದ ಯೋಜನೆಗಳನ್ನು ಜನರ ಮುಂದೆ ತೆರೆದಿಡುತ್ತಿವೆ. ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ, ಅಂಚೆ ಇಲಾಖೆ ಸೇರಿದಂತೆ ವಿವಿಧ ಮಹಿಳಾ ಸ್ವ ಸಹಾಯ ಉತ್ಪದಾನೆ ಸಂಘಗಳು‌, ಕರ ಕುಶಲ ವಸ್ತುಗಳು ಮಳಿಗೆಗಳು ಮಳಿಗೆಗಳು ಪ್ರದರ್ಶನದಲ್ಲಿವೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.