ಬಳ್ಳಾರಿ, (ಅಕ್ಟೋಬರ್ 03): ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಅವರಿಗೆ ಬಳ್ಳಾರಿ ಜಿಲ್ಲಾ ಪ್ರವೇಶಕ್ಕೆ ಸುಪ್ರೀಂಕೋರ್ಟ್ ಅನುಮತಿ ನೀಡಿದೆ. ಈ ಹಿನ್ನೆಲೆಯಲ್ಲಿ ಜನಾರ್ದನ ರೆಡ್ಡಿ ಅವರು ಬಹಳ ವರ್ಷಗಳ ಬಳಿಕ ಬಳ್ಳಾರಿಗೆ ಆಗಮಿಸಿದ್ದಾರೆ. ಜಿಲ್ಲೆಗೆ ಪ್ರವೇಶ ಮಾಡುತ್ತಿದ್ದಂತೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ 5 ಸಾವಿರ ಕೋಟಿ ರೂ. ಬೇನಾಮಿ ಆಸ್ತಿಯ ಬಾಂಬ್ ಸಿಡಿಸಿದ್ದಾರೆ. ಬಳ್ಳಾರಿಯಲ್ಲಿಂದು ಮಾತನಾಡಿರುವ ರೆಡ್ಡಿ, ಸಿದ್ದರಾಮಯ್ಯ 5 ಸಾವಿರ ಕೋಟಿ ರೂ. ಬೇನಾಮಿ ಆಸ್ತಿ ಮಾಡಿದ್ದಾರೆ. ಸಿದ್ದರಾಮಯ್ಯ ಅವರ ಕುಟುಂಬಸ್ಥರು, ಸಂಬಂಧಿಕರ ಮೂಲಕ ಐದು ಸಾವಿರ ಕೋಟಿ ರೂ. ಆಸ್ತಿ ಬೇನಾಮಿಯಾಗಿ ಮಾಡಿದ್ದಾರೆ. ಇದೆಲ್ಲ ತನಿಖೆ ಆಗಬೇಕು ಆಗ್ರಹಿಸಿದ್ದಾರೆ.
ಸಿದ್ದರಾಮಯ್ಯ ಹಿಂದೆ ಮಾಡಿದ್ದನ್ನ ಈಗ ಅನುಭವಿಸಬೇಕಾಗಿದೆ. ಮೂಡಾ ಪ್ರಕರಣದಲ್ಲಿ ಕೇವಲ ಹದಿನಾಲ್ಕು ಸೈಟು, 62 ಕೋಟಿ ವಿಚಾರ ಅಲ್ಲ. ಹಿಂದೆ ಅಡ್ವಾಣಿ ಅವರು ಯಡಿಯೂರಪ್ಪ ಹಾಗೂ ನಮ್ಮೆಲರಿಗು ರಾಜಿನಾಮೆ ಕೊಡಲು ಒಂದೇ ಮಾತು ಹೇಳಿದಾಗ ನಾವೆಲ್ಲಾ ರಾಜಿನಾಮೆ ಕೊಟ್ಟು ಸರ್ಕಾರವನ್ನೇ ವಿಸರ್ಜನೆ ಮಾಡಿದ್ದೆವು. ಈಗ ಕಾಂಗ್ರೆಸ್ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ಮುಡಾ ಹಗರಣ: ಇಡಿಗೆ 500ಕ್ಕೂ ಹೆಚ್ಚು ದಾಖಲೆ ಕೊಟ್ಟು ಬಂದ ಸ್ನೇಹಮಯಿ ಕೃಷ್ಣ ಹೇಳಿದ್ದಿಷ್ಟು
ಬಳ್ಳಾರಿಯಲ್ಲಿ ಹಲವು ಸ್ಟೀಲ್ ಕಂಪನಿಗಳು ಬರಬೇಕಿತ್ತು. ಆದ್ರೆ ಸಿದ್ದರಾಮಯ್ಯ ಅದಕ್ಕೆ ಕಲ್ಲು ಹಾಕಿ, ಜನರ ಉದ್ಯೋಗ ಕಸಿದರು. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಕೋಟಿ ಕೋಟಿ ಹಣ ಲೂಟಿ ಆಗಿದೆ. ಸಿದ್ದರಾಮಯ್ಯ ಸದನದಲ್ಲಿ 180 ಕೊಟಿ ಅಲ್ಲ 82 ಕೋಟಿ ರೂ. ಎಂದು ಒಪ್ಪಿಕೊಂಡಿದ್ದಾರೆ.. ಇಲ್ಲಿ ಕೇವಲ ನಾಗೇಂದ್ರ ಮಾತ್ರ ಅಲ್ಲ, ಇಡೀ ಸರ್ಕಾರ ಭಾಗಿಯಾಗಿದೆ ಎಂದು ಆರೋಪಸಿದರು.
ಬಳ್ಳಾರಿಯಿಂದ ದೂರ ಇದ್ದು ನೋವು ಅನುಭವಿಸಿದ್ದೇನೆ. ಇವತ್ತು ನನ್ನ ಹುಟ್ಟೂರಿಗೆ ಮರಳಿದೆ ಎನ್ನುವ ಖುಷಿ ಇದೆ. ಬಳ್ಳಾರಿ ಜನರಿಗೆ ಎಂದೆಂದಿಗೂ ಚಿರರುಣಿಯಾಗಿರುವೆ. ಆ ದೇವರಿಗೆ ನಾನು ಒಂದೇ ಪ್ರಾರ್ಥನೆ ಮಾಡಿದ್ದೆ. ಬಳ್ಳಾರಿಗೆ ಹೋಗಿ ಜನಸೇವೆ ಮಾಡ್ಬೇಕೆಂದು ಪ್ರಾರ್ಥಿಸಿದ್ದೆ. ಸುಳ್ಳು ಆರೋಪ ಮಾಡಿ ನನ್ನ ತುಳಿಯುವ ಕೆಲಸ ಮಾಡಿದ್ರು. ಬಳ್ಳಾರಿಯನ್ನ ಅಭಿವೃದ್ಧಿ ಮಾಡುವುದು ನನ್ನ ಕೆಲಸ . ಇಲ್ಲಿನ ಜನರಿಗೆ ಉದ್ಯೋಗ ಸಿಗುವಂತೆ ಕೆಲಸ ಮಾಡುವೆ ಎಂದು ಭರವಸೆ ನೀಡಿದರು.
ಬಳ್ಳಾರಿಯಲ್ಲಿ ಬಿಜೆಪಿಗೆ ಬಾರೀ ಹಿನ್ನೆಡೆಯಾಗಿರುವ ಬಗ್ಗೆ ಮಾತನಾಡಿರುವ ರೆಡ್ಡಿ, ಬಳ್ಳಾರಿಯಲ್ಲಿ ಈ ಹಿಂದೆ ಒಬ್ಬ ಗ್ರಾಮ ಪಂಚಾಯ್ತಿ ಸದಸ್ಯ ಸಹ ಬಿಜೆಪಿ ಅವರು ಇರಲಿಲ್ಲ. ನಾವೆಲ್ಲ ಯಡಿಯೂರಪ್ಪನವರ ಜೊತೆ ಒಗ್ಗಟ್ಟಾಗಿ ಕೆಲಸ ಮಾಡಿ ಬಳ್ಳಾರಿಯಲ್ಲಿ ಬಿಜೆಪಿಯನ್ನು ಕಟ್ಟಿದ್ದೇವೆ. ಈಗ ಮತ್ತೆ ಬಳ್ಳಾರಿಯಲ್ಲಿ ಹಿನ್ನಡೆಯಾಗಿದೆ, ಎಲ್ಲವನ್ನೂ ಸರಿ ಮಾಡುವೆ. ಇಂದಿನಿಂದ ದಸರಾ ಆರಂಭವಾಗಿದೆ. ಇದೇ ದಿನ ನಾನು ಬಳ್ಳಾರಿಗೆ ಬಂದಿರುವೆ. ಸಂಡೂರು ಉಪಚುನಾವಣೆ ವೇಳೆಯೇ ನಾನು ಬಂದಿರುವೆ. ಉಸ್ತುವಾರಿ ಕೊಡದಿದ್ದರೂ ಒಬ್ಬ ಕಾರ್ಯಕರ್ತನಾಗಿ ಬಿಜೆಪಿಯನ್ನ ಗೆಲ್ಲುಸುವೆ ಎಂದು ಸ್ಪಷ್ಟಪಡಿಸಿದರು.
ನಾಳೆಯೇ ಸಂಡೂರಿನ ಕುಮಾರಸ್ವಾಮಿ ದೇವರ ದರ್ಶನಕ್ಕೆ ಹೊಗುವೆ. ನಾಳೆ ಸಂಡೂರಿನಿಂದ ಪಾದಯಾತ್ರೆ ಮೂಲಕ ತೆರಳಿ ದರ್ಶನದ ಬಳಿಕ ಚುನಾವಣೆ ತಯಾರಿ ನಡೆಸುವೆ. ಶ್ರೀರಾಮುಲು ಅವರಿಗೆ ಅನಾರೊಗ್ಯ ಹಿನ್ನೆಲೆ ಅವರು ಇಂದು ಬಂದಿಲ್ಲ. ಅದನ್ನ ಸಾರ್ವಜನಿಕವಾಗಿ ಹೇಳಲು ಆಗಲ್ಲ, ಜನರ ಮಧ್ಯೆ ಬಂದ್ರೆ ಇಂಮ್ಯೂನಿಟಿ ಸಮಸ್ಯೆ ಆಗತ್ತೆ ಬರಬೇಡ ಅಂತಾ ನಾನೇ ಹೇಳಿದ್ದೆ. ನನ್ನ ಸೋಹದರ(ಸೋಮಶೇಖರ್ ರೆಡ್ಡಿ) ನಮ್ಮ ನಡುವೆ ಮುನಿಸಿಲ್ಲ. ಪಕ್ಷ ಅಂತಾ ಬಂದಾಗ ಯಾವುದು ಮುಖ್ಯ ಅಲ್ಲ. ಬಳ್ಳಾರಿ ಅಂದ್ರೆ ಹಂಪಿ ಎನ್ನುವ ಹಾಗಿತ್ತು, ಈಗ ಬಳ್ಳಾರಿಯಿಂದ ದೂರ ಮಾಡಿದವರು ರಾಜಕೀಯ ವನವಾಸ ಅನುಭವಿಸುತ್ತಿದ್ದಾರೆ ಎಂದು ಪರೋಕ್ಷವಾಗಿ ಆನಂದ್ ಸಿಂಗ್ಗೆ ಟಾಂಗ್ ಕೊಟ್ಟರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:10 pm, Thu, 3 October 24