ಜನಾರ್ದನ ರೆಡ್ಡಿ ಮಾಡೆಲ್ ಹೌಸ್‌ಗೆ ಬೆಂಕಿ ಪ್ರಕರಣಕ್ಕೆ ಸ್ಫೋಟಕ ತಿರುವು: ರೀಲ್ಸ್ ಮಾಡಲು ಹೋಗಿ ಬೆಂಕಿ ಹಚ್ಚಿದ್ರಾ ಅಪ್ರಾಪ್ತರು?
ಬಳ್ಳಾರಿಯ ಜನಾರ್ದನ ರೆಡ್ಡಿ ಅವರ ಮಾಡೆಲ್ ಹೌಸ್‌ಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್ ಸಿಕ್ಕಿದೆ. 6 ಅಪ್ರಾಪ್ತರು ಸೇರಿದಂತೆ 8 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ರೀಲ್ಸ್ ಮಾಡಲು ಹೋಗಿ ಅಜಾಗರೂಕತೆಯಿಂದ ಬೆಂಕಿ ಹಚ್ಚಿರುವ ಸಾಧ್ಯತೆಯೂ ಇದೆ ಎಂದು ಪೊಲೀಸ್ ಮೂಲಗಳು ಹೇಳಿದ್ದು ಕುತೂಹಲಕ್ಕೆ ಕಾರಣವಾಗಿದೆ. ಆದರೆ, ರಾಜಕೀಯ ವೈಷಮ್ಯದ ಆಯಾಮದಲ್ಲಿ ತನಿಖೆಯಾಗಬೇಕೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಬಳ್ಳಾರಿ, ಜನವರಿ 24: ಬಳ್ಳಾರಿಯಲ್ಲಿ (Ballari) ಗಂಗಾವತಿ ಶಾಸಕ ಜನಾರ್ದನ ರೆಡ್ಡಿಗೆ (Janardhan Reddy) ಸೇರಿದ ಮಾಡೆಲ್ ಹೌಸ್‌ಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಇದೀಗ ಸ್ಫೋಟಕ ಟ್ವಿಸ್ಟ್ ದೊರೆತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಅಪ್ರಾಪ್ತರು ಸೇರಿ ಒಟ್ಟು 8 ಜನರನ್ನು ಬಳ್ಳಾರಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಬಳ್ಳಾರಿಯ ಕೌಲ್‌ಬಜಾರ್ ಪ್ರದೇಶದ ನಿವಾಸಿಗಳಾದ 8 ಜನರನ್ನು ವಶಕ್ಕೆ ಪಡೆಯಲಾಗಿದ್ದು, ಸಾಮಾಜಿಕ ಜಾಲತಾಣಗಳಿಗಾಗಿ ರೀಲ್ಸ್ ಮಾಡುತ್ತಿರುವ ವೇಳೆ ಅಜಾಗರೂಕತೆಯಿಂದ ಅಥವಾ ದುರುದ್ದೇಶದಿಂದ ಮಾಡೆಲ್ ಹೌಸ್‌ಗೆ ಬೆಂಕಿ ಹಚ್ಚಿರುವ ಶಂಕೆ ವ್ಯಕ್ತವಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಕುರಿತು ಪೊಲೀಸರು ಹಲವು ಆಯಾಮಗಳಲ್ಲಿ ತನಿಖೆ ಮುಂದುವರೆಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿ ರುಕ್ಮಿಣಿ ಅವೆನ್ಯೂ ಲೇಔಟ್‌ನಲ್ಲಿರುವ ಸೈಟ್ ಇಂಜಿನಿಯರ್ ರಿಜ್ವಾನ್ ಅವರು ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನಲ್ಲಿ ಉಲ್ಲೇಖಿಸಿದ ಪ್ರಕಾರ, ಶುಕ್ರವಾರ ಸಂಜೆ ಸುಮಾರು 5.30ರ ವೇಳೆಗೆ 20 ರಿಂದ 25 ವರ್ಷ ವಯಸ್ಸಿನ 8ರಿಂದ 10 ಮಂದಿ ಕಿಡಿಗೇಡಿಗಳು ಮಾಡೆಲ್ ಹೌಸ್‌ಗೆ ಬೆಂಕಿ ಹಚ್ಚಿದ್ದಾರೆ ಎನ್ನಲಾಗಿದೆ.
ಈ ಮಾಡೆಲ್ ಹೌಸ್ ಜನಾರ್ದನ ರೆಡ್ಡಿ ಅವರ ಪತ್ನಿ ಅರುಣಾ ಲಕ್ಷ್ಮೀ ಅವರಿಗೆ ಸೇರಿದ್ದಾಗಿದೆ. ಬೆಂಕಿಯಿಂದ ಟಿವಿ, ಕುರ್ಚಿಗಳು, ಸೋಫಾ ಸೆಟ್‌ಗಳು, ಕಿಚನ್ ಸೆಟ್, ಎಸಿ, ಫ್ರಿಡ್ಜ್, ವುಡನ್ ಬಾಗಿಲುಗಳು ಸೇರಿದಂತೆ ಹಲವು ವಸ್ತುಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ. ಅಂದಾಜು 1.25 ಕೋಟಿ ರೂ. ಮೌಲ್ಯದ ವಸ್ತುಗಳು ಹಾನಿಯಾಗಿವೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಅದೃಷ್ಟವಶಾತ್, ಈ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ರಾಜಕೀಯ ಆಯಾಮದಲ್ಲೂ ತನಿಖೆ?
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ‘ಬಳ್ಳಾರಿಯನ್ನು ಭಸ್ಮ ಮಾಡುತ್ತೇವೆ’ ಎಂಬ ಶಾಸಕ ಭರತ್ ರೆಡ್ಡಿ ಹೇಳಿಕೆಯನ್ನು ಗಮನದಲ್ಲಿಟ್ಟುಕೊಂಡು ತನಿಖೆ ನಡೆಸಬೇಕು ಎಂದು ರಿಜ್ವಾನ್ ದೂರಿನಲ್ಲಿ ಒತ್ತಾಯಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ರಾಜಕೀಯ ಪ್ರೇರಿತ ಕೃತ್ಯವೇ ಎಂಬ ಅಂಶವನ್ನೂ ಪರಿಶೀಲಿಸುತ್ತಿದ್ದಾರೆ.
ಪ್ರಕರಣದ ಹಿನ್ನೆಲೆ
ಈ ಮಾಡೆಲ್ ಹೌಸ್ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಪತ್ನಿಗೆ ಸೇರಿದ್ದು ಎನ್ನಲಾಗಿದೆ. ಜಿ ಸ್ಕ್ವೇರ್ ಲೇಔಟ್‌ನಲ್ಲಿರುವ ಈ ಆಸ್ತಿ ಒಟ್ಟು 109 ಎಕರೆ ವ್ಯಾಪ್ತಿಯ ಲೇಔಟ್‌ನ ಭಾಗವಾಗಿದೆ. ಈ ಮಾಡೆಲ್ ಹೌಸ್‌ಗೆ ಬೆಂಕಿ ಹಚ್ಚಿರುವುದರ ಹಿಂದೆ ಕಾಂಗ್ರೆಸ್ ಬೆಂಬಲಿಗರ ಕೈವಾಡವಿದೆ ಎಂಬ ಗಂಭೀರ ಆರೋಪಗಳು ಶುಕ್ರವಾರ ಕೇಳಿಬಂದಿದ್ದವು.
ಇದನ್ನೂ ಓದಿ: ಬಳ್ಳಾರಿ ಬ್ಯಾನರ್ ಗಲಾಟೆ ಮಾಸುವ ಮುನ್ನವೇ ರೆಡ್ಡಿ,ಶ್ರೀರಾಮುಲುಗೆ ಸೇರಿದ ಮಾಡೆಲ್ ಹೌಸ್‌ಗೆ ಬೆಂಕಿ
ಈ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಶಾಸಕ ಸೋಮಶೇಖರ್ ರೆಡ್ಡಿ, ಹಿಂದಿನ ಬ್ಯಾನರ್ ಗಲಾಟೆ ಸಂದರ್ಭದಲ್ಲೇ ಬೆಂಕಿ ಹಚ್ಚುವ ಬೆದರಿಕೆ ಹಾಕಲಾಗಿತ್ತು. ಅದಕ್ಕೆ ಸಾಕ್ಷಿ ಎಂಬಂತೆ ಈಗ ಈ ಘಟನೆ ನಡೆದಿದೆ ಎಂದು ಆರೋಪಿಸಿದ್ದಾರೆ. ಈ ಪ್ರಕರಣವು ಮುಂದಿನ ದಿನಗಳಲ್ಲಿ ರಾಜಕೀಯ ವಲಯದಲ್ಲಿ ಮತ್ತಷ್ಟು ಅಲ್ಲೋಲಕಲ್ಲೋಲ ಸೃಷ್ಟಿಸುವ ಸಾಧ್ಯತೆ ಇದೆ. ಸದ್ಯ ಪೊಲೀಸರು ವಶಕ್ಕೆ ಪಡೆದವರನ್ನು ವಿಚಾರಣೆ ನಡೆಸುತ್ತಿದ್ದಾರೆ.