ರೊಟ್ಟಿ ತರಲು ಹೋದ ಅಂಕಲ್‌ಗೆ ಆಂಟಿ ಮೇಲೆ ಪ್ರೀತಿ: ರೊಟ್ಟಿ ಜಾರಿ ತಪ್ಪಕ್ಕೆ ಬಿತ್ತು ಆದ್ರೆ….
ಇದು ರೊಟ್ಟಿಯಿಂದ ಹುಟ್ಟಿದ ಲವ್ ಸ್ಟೋರಿ. ರೊಟ್ಟಿಗೆ ಹೋದವನ್ನು ಬುಟ್ಟಿಗೆ ಹಾಕಿಕೊಂಡಳು. ಬಳಿಕ ಇಬ್ಬರೂ ಅಪ್ಪಟ ಯುವ ಜೋಡಿಯಂತೆ ವಿಮಾನದಲ್ಲಿ ಸುತ್ತಾಡಿದ್ದರು. ಆಕೆಗೆ ಮದುವೆಯಾಗಿದೆ. ಈಕೆಗೂ ಮದುವೆಯಾಗಿದೆ. ಇಬ್ಬರಿಗೂ ಮಕ್ಕಳಿವೆ. ಆದರೂ ತಮಗೆ ಮೊದಲೊಂದು ಮದುವೆಯಾಗಿದೆ, ತಮಗೆ ಮಕ್ಕಳಿದ್ದಾರೆ ಎನ್ನುವುದನ್ನು ಮರೆತು ಅವರಿಬ್ಬರೂ ಅಪ್ಪಟ ಯುವ ಜೋಡಿಯಂತೆ ಎಲ್ಲೊಂದರಲ್ಲಿ ಸುತ್ತಾಡುತ್ತಿದ್ದರು. ಆದ್ರೆ, ಇದೀಗ ರೊಟ್ಟಿಗೆ ಬಂದವನ ಜೇಬು ಖಾಲಿ ಮಾಡಿ ಕೈಗೆ ಚಿಪ್ಪುಕೊಟ್ಟು ಹೋಗಿದ್ದಾಳೆ.
ಬಳ್ಳಾರಿ, (ಜನವರಿ 24): ಪ್ರೀತಿಗೆ ಹೊತ್ತು ಗೊತ್ತಿಲ್ಲ ಪ್ರೀತಿಗೆ ಕಾರಣ ಬೇಕಿಲ್ಲ ಎನ್ನುವ ಸಿನಿಮಾ ಹಾಡು ಕೇಳಿದ್ದೇವೆ. ಆದ್ರೆ, ಇಲ್ಲೋರ್ವ ಅಂಕಲ್‌ಗೆ ರೊಟ್ಟಿ ತರಲು ಹೋಗಿದ್ದಾಗ ರೊಟ್ಟಿ ಮಾರುತ್ತಿದ್ದ ಆಂಟಿ ಮೇಲೆಯೇ ಲವ್ ಆಗಿದೆ. ಮಹಿಳೆ ಹೆಸರು ಸುಜಾತಾ. ಈಗಾಗಲೇ ಮದುವೆಯಾಗಿ ಒಂದು ಮಗು ಇದೆ. ಪ್ರಿಯಕರನ ಹೆಸರು ಸಿದ್ದಗೊಂಡ ಸೌದತ್ತಿ. ಲಾರಿ ಚಾಲಕನಾಗಿದ್ದ. ಈತನಿಗೂ ಮದುವೆಯಾಗಿ ಎರಡೂ ಮಕ್ಕಳಿವೆ. ಆದರೂ ಇವರಿಬ್ಬರ ನಡುವೆ ಪ್ರೇಮಾಕುರವಾಗಿದೆ. ಸಿದ್ದಗೊಂಡ ಸೌದತ್ತಿ ಲಾರಿ ಚಾಲಕನಾಗಿದ್ದರೂ ಸಹ ಪ್ರೇಯಸಿಯನ್ನು ಖುಷಿಪಡಿಸಲು ವಿಮಾನದಲ್ಲಿ ಸುತ್ತಾಡಿಸಿದ್ದಾನೆ. ಅಲ್ಲದೇ ಕನ್ಯಾಕುಮಾರಿ, ತಿರುಪತಿ, ಮಧುರೈ , ಕೊಚ್ಚಿ ಧಾರ್ಮಿಕ ಕ್ಷೇತ್ರ ದರ್ಶನವನ್ನೂ ಮಾಡಿಸಿದ್ದಾರೆ. ಆದ್ರೆ, ಇದೀಗ ಸುಜಾತಾ ಕೈಕೊಟ್ಟಿದ್ದಾಳೆ. ಈ ಹಿನ್ನೆಲೆಯಲ್ಲಿ ಸಿದ್ದಗೊಂಡ ಸೌದತ್ತಿ, ಕಳೆದುಕೊಂಡ ರೊಟ್ಟಿಗಾಗಿ ಹುಡುಕುತ್ತಾ ಬೀದಿ ಬೀದಿ ಅಲೆಯುತ್ತಾ ಕೊನೆಗೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ.
ಚಾಲಕನಿಗೆ ರೊಟ್ಟಿ ಮೇಲೆ ಲವ್ ಆಗಿದ್ದೇಗೆ?
ಸುಜಾತಾ ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ರೊಟ್ಟಿ ಮಾರುತ್ತಿದ್ದಳು. ಸಿದ್ದಗೊಂಡ ಸೌದತ್ತಿ ಸಾಂಗ್ಲಿಯ ಜತ್ತ ತಾಲೂಕಿನ ಮುಚ್ಚಂಡಿ ಗ್ರಾಮದವನು. ಒಂದು ದಿನ ಸಿದ್ದಗೊಂಡ ಸೌದತ್ತಿ ಅಚಾನಕ್ ಆಗಿ ರೊಟ್ಟಿ ತಿನ್ನಲು ಅಂಗಡಿಗೆ ಹೋಗಿದ್ದ. ರೊಟ್ಟಿ ಹುಡಿಕಿಕೊಂಡು ಬಂದ ಸಿದ್ದಗೊಂಡಗೆ ಸುಜಾತಾ ರೊಟ್ಟಿಯ ಜತೆಗೆ ಪ್ರೀತಿಯನ್ನು ಕೊಟ್ಟಿದ್ದಳು. ಅದೊಂದು ದಿನ ಸುಜಾತಾ ಮೇಲೆ ಸಿದ್ದಗೊಂಡ ಸೌದತ್ತಿಗೆ ಲವ್ ಹೆಚ್ಚಾಯಿತು. ಊರು ಬಿಟ್ಟು ಓಡಿ ಹೋಗೋಣ್ವಾ ಎಂದು ಮನೆ ಬಿಟ್ಟು ಆಚೆ ಬಂದಿದ್ದರು.
ಅಪ್ಪಟ ಯುವ ಜೋಡಿಯಂತೆ ಸುತ್ತಾಟ
ಊರು ಬಿಟ್ಟು ಓಡಿ ಬಂದ ಸುಜಾತಾ ಮತ್ತು ಸಿದ್ದಗೊಂಡ ಇಬ್ಬರೂ ಬಳ್ಳಾರಿಯ ಗೌಳರಹಟ್ಟಿಯಲ್ಲಿ ವಾಸವಾಗಿದ್ದರು., ನವವಿವಾಹಿತರಂತೆ ಸಂಸಾರ ಶುರು ಮಾಡಿದ್ದರು. ಅಲ್ಲದೇ ತಮಗೆ ಮೊದಲೊಂದು ಮದುವೆಯಾಗಿದೆ, ತಮಗೆ ಮಕ್ಕಳಿದ್ದಾರೆ ಎನ್ನುವುದನ್ನು ಮರೆತು ಅವರಿಬ್ಬರೂ ಅಪ್ಪಟ ಯುವ ಜೋಡಿಯಂತೆ ಎಲ್ಲೊಂದರಲ್ಲಿ ಸುತ್ತಾಡುತ್ತಿದ್ದರು. ಪ್ರೇಯಸಿಯನ್ನು ಲವ್ನಲ್ಲಿ ತೇಲಾಡಿಸಬೇಕೆಂದು ಸಿದ್ದಗೊಂಡ ಚಾಲಕನಾಗಿದ್ದರೂ ಸಹ ವಿಮಾನದಲ್ಲಿ ಸುತ್ತಾಡಿಸಿದ್ದಾನೆ. ಅಲ್ಲದೇ ಕನ್ಯಾಕುಮಾರಿ, ತಿರುಪತಿ, ಮಧುರೈ , ಕೊಚ್ಚಿ ಸೇರಿದಂತೆ ಧಾರ್ಮಿಕ ಕ್ಷೇತ್ರ ದರ್ಶನವನ್ನೂ ಮಾಡಿಸಿದ್ದಾನೆ. ಹೀಗೆ ಸುಮಾರು ಆರು ತಿಂಗಳ ಕಾಲ ಅವರಿಬ್ಬರೂ ಪ್ರೇಮ ಪಕ್ಷಿಗಳಂತೆ ಓಡಾಡಿದ್ದರು. ಖುಷಿಯಾಗಿದ್ದರು.
ಗಂಡನನ್ನೇ ತೊರೆದುಬಂದಿದ್ದ ಸುಜಾತ
ಈ ನಡುವೆ ಸುಜಾತಾಳ ಗಂಡ ಪತ್ನಿ ಕಾಣೆಯಾಗಿದ್ದಾಳೆ ಎಂದು ಮಹಾರಾಷ್ಟ್ರದ ಸಾಂಗ್ಲಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದ. ಸಾಂಗ್ಲಿ ಪೊಲೀಸರು ಆಕೆ ಬಳ್ಳಾರಿಯಲ್ಲಿರುವುದನ್ನು ಪತ್ತೆ ಹಚ್ಚಿ ನೋಟಿಸ್ ಕಳುಹಿಸಿದ್ದರು. ಸುಜಾತಾ ಸಾಂಗ್ಲಿ ಪೊಲೀಸ್ ಠಾಣೆಗೆ ಹೋಗಿ ಬಂದಿದ್ದಳು. ಅಲ್ಲಿ ನಡೆದ ಪಂಚಾಯಿತಿಕೆಯಲ್ಲಿ ತಾನು ಸಿದ್ದಗೊಂಡ ಸೌದತ್ತಿ ಜತೆಗೇ ಹೋಗುವುದಾಗಿ ಸುಜಾತಾ ಹೇಳಿ ಬಂದಿದ್ದಳು. ಅಲ್ಲದೇ ಸಿದ್ದಗೊಂಡ ಸೌದತ್ತಿ ಸಗ ಸಾಂಗ್ಲಿ ಪೋಲಿಸ್ ಠಾಣೆಯಲ್ಲಿ ಮುಚ್ಚಳಿಕೆ ಬರೆದು ಕೊಟ್ಟ ಸುಜಾತಾಳನ್ನು ಮತ್ತೆ ಬಳ್ಳಾರಿಗೆ ಕರೆದುಕೊಂಡು ಬಂದಿದ್ದ.
ಈ ಗ್ಯಾಂಪ್ನಲ್ಲಿ ಸುಜಾತಾಳಿ ಬೇರೆ ವ್ಯಕ್ತಿಯ ಪರಿಚಯವಾಗಿದ್ದು, ಆತನೊಂದಿಗೆ ಮೊಬೈಲ್ ಮೂಲಕ ಸಂಪರ್ಕ ಸಾಧಿಸಿದ್ದಾಳೆ. ಅವರಿಬ್ಬರು ತುಂಬಾ ಹೊತ್ತು ಮಾತನಾಡುತ್ತಿದ್ದುದನ್ನು ಕಂಡು ಸಿದ್ದಗೊಂಡ ರೇಗಿದ್ದಾನೆ. ಇದೆಲ್ಲ ಕಾಮನ್ ಎಂದುಕೊಳ್ಳುತ್ತಿರುವಾಗಲೇ ಒಂದು ದಿನ ಸಿದ್ದಗೊಂಡ ಲಾರಿ ಕೆಲಸ ಮುಗಿಸಿ ಮನೆಗೆ ಬಂದು ಮಲಗಿಕೊಂಡಿದ್ದಾನೆ. ಬೆಳಗಾಗುವಷ್ಟರಲ್ಲೇ ಎದ್ದು ನೋಡಿದರೆ ಸುಜಾತಾ ಮನೆಯಲ್ಲಿಲ್ಲ.
ಭಗ್ನ ಪ್ರೇಮಿಯಂತಾದ ಸಿದ್ದಗೊಂಡ ಸೌದತ್ತಿ
ಆದ್ರೆ, ಇದೀಗ ಸಿದ್ದಗೊಂಡ ಸೌದತ್ತಿ ಪ್ರೇಯಸಿಯನ್ನು ಕಳೆದುಕೊಂಡ ಭಗ್ನ ಪ್ರೇಮಿಯಂತಾಗಿದ್ದು, ಆಕೆಯನ್ನು ರೈಲು, ಬಸ್ ನಿಲ್ದಾಣ, ದೇವಸ್ಥಾನದಲ್ಲಿ ಹುಡುಕಿದ್ದಾನೆ. ಆದ್ರೆ, ಪ್ರೀತಿಯ ರೊಟ್ಟಿ ಕಾಣದಿದ್ದಕ್ಕೆ ಅಂತಿಮವಾಗಿ ಸಿದ್ದಗೊಂಡ ಸೌದತ್ತಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ನನ್ನ ಪ್ರೇಯಸಿಯನ್ನು ಹುಡುಕಿ ಕೊಡಿ ಎಂದು ಬಳ್ಳಾರಿ ಮಹಿಳಾ ಠಾಣೆಗೆ ದೂರು ನೀಡಿದ್ದಾನೆ.
ರೊಟ್ಟಿಗೆ ಬಂದವನನ್ನು ಬುಟ್ಟಿಗೆ ಹಾಕಿಕೊಂಡಿದ್ದ ಸುಜಾತ ವಿಮಾನದಲ್ಲಿ ಹಾರಾಡಿ, ಎಲ್ಲೊಂದರಲ್ಲಿ ಸುತ್ತಾಡಿ ಮಸ್ತ್ ಎಂಜಾಯ್ ಮಾಡಿ ಕೊನೆಗೆ ಸಿದ್ದಗೊಂಡ ಸೌದತ್ತಿ ಕೈಗೆ ಚಿಪ್ಪುಕೊಟ್ಟು ಹೋಗಿದ್ದಾಳೆ.