ಅಲೆಮಾರಿ ವಿದ್ಯಾರ್ಥಿಗೆ ಮನೆ ಬಾಗಿಲಲ್ಲೇ ಪಾಲಿಟೆಕ್ನಿಕ್ ಕೋರ್ಸ್ ಪ್ರವೇಶಾತಿ; ಉಚಿತ ಶಿಕ್ಷಣದ ಭರವಸೆ ನೀಡಿದ ಸಚಿವರು
ಮೌನೇಶ್ ಪೋಷಕರ ಜತೆಯೂ ಮಾತನಾಡಿದ ಸಚಿವರು, ನಿಮ್ಮ ಪುತ್ರನಿಗೆ ಉಚಿತ ಶಿಕ್ಷಣ ನೀಡಲಾಗುವುದು. ಯಾವುದೇ ಚಿಂತೆ ನಿಮಗೆ ಬೇಡ. ಎಲ್ಲವನ್ನೂ ಸರಕಾರವೇ ನೋಡಿಕೊಳ್ಳಲಿದೆ. ತದ ನಂತರ ಉದ್ಯೋಗ ಅಥವಾ ಉನ್ನತ ಶಿಕ್ಷಣಕ್ಕೆ ತೆರಳಬೇಕಾದರೂ ಸರಕಾರ ಸದಾ ಸಹಕಾರ ನೀಡುತ್ತದೆ ಎಂದು ಹೇಳಿದ್ದಾರೆ.
ಬಳ್ಳಾರಿ: ಪ್ರತಿಭೆಯಿಂದಲೇ ತನ್ನ ಮನೆ ಬಾಗಿಲಲ್ಲೇ ಪಾಲಿಟೆಕ್ನಿಕ್ ಶಿಕ್ಷಣಕ್ಕೆ ಪ್ರವೇಶ ಪಡೆದ ಬಳ್ಳಾರಿ ತಾಲೂಕಿನ ಕುಡುತಿನಿ ಗ್ರಾಮದ ಪ್ರತಿಭಾವಂತ ವಿದ್ಯಾರ್ಥಿ ಇತರರಿಗೆ ಮಾದರಿಯಾಗಿದ್ದಾನೆ. ಅಲೆಮಾರಿ ವಿದ್ಯಾರ್ಥಿ ಎಂ.ಮೌನೇಶ್ ಪ್ರತಿಭೆ ಕಂಡು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಡಿಪ್ಲೊಮಾ ಶಿಕ್ಷಣವನ್ನು ಸರ್ಕಾರದಿಂದಲೇ ಉಚಿತವಾಗಿ ನೀಡುವ ಭರವಸೆ ನೀಡಿದ್ದಾರೆ.
ಖುದ್ದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ವಿದ್ಯಾರ್ಥಿ ಮೌನೇಶ್ ಮತ್ತವರ ಪೋಷಕರಿಗೆ ಕರೆ ಮಾಡಿ ಮಾತನಾಡಿದ್ದಾರೆ. ಹತ್ತನೇ ತರಗತಿಯಲ್ಲಿ ಶೇ.90ರಷ್ಟು ಅಂಕ ಪಡೆದು ತೇರ್ಗಡೆಯಾದ ವಿದ್ಯಾರ್ಥಿಯನ್ನು ಶ್ಲಾಘಿಸಿದ ಅವರು, ಮುಂದಿನ ಮೂರು ವರ್ಷಗಳ ವಿದ್ಯಾಭ್ಯಾಸವನ್ನು ಸರಕಾರ ಸಂಪೂರ್ಣ ಉಚಿತವಾಗಿ ನೀಡಲಿದೆ ಎಂದು ಭರವಸೆ ನೀಡಿದ್ದಾರೆ.
ಮೌನೇಶ್ ಪೋಷಕರ ಜತೆಯೂ ಮಾತನಾಡಿದ ಸಚಿವರು, ನಿಮ್ಮ ಪುತ್ರನಿಗೆ ಉಚಿತ ಶಿಕ್ಷಣ ನೀಡಲಾಗುವುದು. ಯಾವುದೇ ಚಿಂತೆ ನಿಮಗೆ ಬೇಡ. ಎಲ್ಲವನ್ನೂ ಸರಕಾರವೇ ನೋಡಿಕೊಳ್ಳಲಿದೆ. ತದ ನಂತರ ಉದ್ಯೋಗ ಅಥವಾ ಉನ್ನತ ಶಿಕ್ಷಣಕ್ಕೆ ತೆರಳಬೇಕಾದರೂ ಸರಕಾರ ಸದಾ ಸಹಕಾರ ನೀಡುತ್ತದೆ ಎಂದು ಹೇಳಿದ್ದಾರೆ.
ಪ್ರಾಂಶುಪಾಲರ ಕಾರ್ಯಕ್ಕೆ ಮೆಚ್ಚುಗೆ ವಿದ್ಯಾರ್ಥಿಯ ಮನೆ ಬಾಗಿಲಿಗೇ ತೆರಳಿ ಪ್ರವೇಶಾತಿ ನೀಡಿದ ವಿಜಯನಗರ ಜಿಲ್ಲೆಯ ಕೂಡ್ಲಿಗಿಯ ಸರಕಾರಿ ಪಾಲಿಟೆಕ್ನಿಕ್ ಪ್ರಾಂಶುಪಾಲರು, ಬೋಧಕ ಸಿಬ್ಬಂದಿಯನ್ನು ಇದೇ ವೇಳೆ ಸಚಿವ ಅಶ್ವತ್ಥನಾರಾಯಣ ಅವರು ಮನಸಾರೆ ಶ್ಲಾಘಿಸಿದ್ದಾರೆ. ಪ್ರಾಂಶುಪಾಲರಾದ ಎಸ್.ಮಲ್ಲಪ್ಪ ಅವರಿಗೆ ಕರೆ ಮಾಡಿ ಮಾತನಾಡಿದ ಸಚಿವರು, ನೀವು ಬಹಳ ಒಳ್ಳೆಯ ಕೆಲಸ ಮಾಡಿದ್ದೀರಿ. ಆ ವಿದ್ಯಾರ್ಥಿಗೆ ತಗುಲುವ ಎಲ್ಲ ವೆಚ್ಚವನ್ನೂ ಸರಕಾರವೇ ಭರಿಸಲಿದೆ. ನಿಮ್ಮದೇ ವೆಚ್ಚದಲ್ಲಿ ಬಡ ವಿದ್ಯಾರ್ಥಿಯೊಬ್ಬರನ್ನು ದತ್ತು ಪಡೆದು, ಅವರ ಮನೆ ಬಾಗಿಲಿಗೇ ಹೋಗಿ ದಾಖಲು ಮಾಡಿಕೊಂಡಿರುವ ಕ್ರಮ ಮಾದರಿಯಾದದ್ದು ಎಂದು ತಿಳಿಸಿದ್ದಾರೆ.
ಇದೊಂದು ಅತ್ಯುತ್ತಮ ಪ್ರಯತ್ನ. ಪಾಲಿಟೆಕ್ನಿಕ್ ಪ್ರಾಚಾರ್ಯರು, ಬೋಧಕರ ಬದ್ಧತೆ ನನ್ನ ಹೃದಯ ಗೆದ್ದಿದೆ. ತಾಂತ್ರಿಕ ಮತ್ತು ಉನ್ನತ ಶಿಕ್ಷಣವನ್ನು ವಿದ್ಯಾರ್ಥಿಗಳ ಮನೆ ಬಾಗಿಲಿಗೇ ತಲುಪಿಸಬೇಕು ಎಂಬ ರಾಷ್ಟ್ರೀಯ ಶಿಕ್ಷಣ ನೀತಿಯ ಆಶಯವನ್ನು ಹಾಗೂ ಶೈಕ್ಷಣಿಕ ಸಮಾನತೆಯನ್ನೂ ಇವರು ಆರಂಭದಲ್ಲೇ ಸಾಕಾರ ಮಾಡಿದ್ದಾರೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಸಂತಸ ವ್ಯಕ್ತಪಡಿಸಿದರು.
ಈ ವರ್ಷದಿಂದ ಹೊಸದಾಗಿ ಆರಂಭ ಮಾಡಲಾದ ಡಿಪ್ಲೊಮಾ ಕೋರ್ಸ್ಗಳಲ್ಲಿ ಒಂದಾದ ಸೈಬರ್ ಫಿಸಿಕಲ್ ಸಿಸ್ಟಮ್ಸ್ ಅಂಡ್ ಸೆಕ್ಯೂರಿಟಿ ವಿಭಾಗದ ಕೊನೆಯ ಒಂದು ಸೀಟು ಉಳಿದಿತ್ತು. ಆ ಸೀಟಿಗೆ ಬಹಳ ಬೇಡಿಕೆ ಇದ್ದರೂ ಪಾಲಿಟೆಕ್ನಿಕ್ ಪ್ರಾಚಾರ್ಯರಾದ ಎಸ್.ಮಲ್ಲಪ್ಪ, ಇತರೆ ಬೋಧಕರು ಹಾಗೂ ಸಿಬ್ಬಂದಿ ಬಳ್ಳಾರಿ ತಾಲೂಕಿನ ಕುಡಿತಿನಿ ಗ್ರಾಮದ ಗುಡಿಸಲಿನಲ್ಲಿ ವಾಸಿಸುವ ಅಲೆಮಾರಿ ಜನಾಂಗದ ಬಡ ಪ್ರತಿಭಾವಂತ ವಿದ್ಯಾರ್ಥಿ ಎಂ.ಮೌನೇಶ್ಗೆ ನೀಡಿದ್ದಾರೆ.
ವಿದ್ಯಾರ್ಥಿ ವೆಚ್ಚ ಭರಿಸಲು ಒಪ್ಪಿದ್ದ ಪ್ರಾಚಾರ್ಯರು ವಿದ್ಯಾರ್ಥಿ ಎಂ.ಮೌನೇಶ್ಗೆ ಮೂರು ವರ್ಷದಲ್ಲಿ ಆಗುವ ಎಲ್ಲ ಖರ್ಚು-ವೆಚ್ಚವನ್ನು ನಾನೇ ಭರಿಸುವುದಾಗಿ ಹೇಳಿದ್ದೆ. ಬಳಿಕ ಮಾನ್ಯ ಸಚಿವರು ಸರಕಾರವೇ ಎಲ್ಲ ವೆಚ್ಚ ಭರಿಸಲಿದೆ ಎಂದು ಘೋಷಣೆ ಮಾಡಿದರು. ಹಾಗೆಯೇ ಡಿಪ್ಲೊಮಾದಲ್ಲಿ ಈಗಾಗಲೇ ಅಳವಡಿಸಿಕೊಂಡಿರುವ ಜಾಗತಿಕ ಮಟ್ಟಕ್ಕೆ ಸಮನಾದ ಪಠ್ಯಕ್ರಮ, ಡಿಜಿಟಲ್ ಶಿಕ್ಷಣ, ಕಲಿಕಾ ನಿರ್ವಹಣಾ ವ್ಯವಸ್ಥೆ (LMS), ಸ್ಮಾರ್ಟ್ ಕ್ಲಾಸ್ ರೂಂ ಹಾಗೂ ಉಚಿತ ವಿದ್ಯಾರ್ಥಿಗಳಿಗೆ ಟ್ಯಾಬ್ಲೆಟ್ ಪಿಸಿ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ಈ ವಿದ್ಯಾರ್ಥಿಗೆ ಒದಗಿಸಲಾಗುವುದು ಎಂದು ಪ್ರಾಂಶುಪಾಲ ಎಸ್. ಮಲ್ಲಪ್ಪ ತಿಳಿಸಿದ್ದಾರೆ.
ಮೌನೇಶ್ ಬಹಳ ಬಡತನದಲ್ಲಿದ್ದಾನೆ. ಅವರು ಒಂದು ಕೊಳಗೇರಿಯಲ್ಲಿ ವಾಸ ಮಾಡುತ್ತಿದ್ದು, ಅಲ್ಲಿ ಸುಮಾರು 150 ಮನೆಗಳಿವೆ. ನಾನು, ನಮ್ಮ ಬೋಧಕರು ಮತ್ತು ಸಿಬ್ಬಂದಿ ಜತೆ ತೆರಳಿ ಅಲ್ಲಿನ ಜನರಿಗೆ ಅರಿವು ಮೂಡಿಸುವ ಪ್ರಯತ್ನ ಮಾಡಿದ್ದೇನೆ. ನಮಗೆ ಸರಕಾರದಿಂದಲೂ ಉತ್ತಮ ಪ್ರೋತ್ಸಾಹವಿದೆ. ಪಾಲಿಟೆಕ್ನಿಕ್ನಲ್ಲಿ ಕಲಿಯಲು ಸಾಕಷ್ಟು ಸೌಲಭ್ಯಗಳಿವೆ. ಇದೆಲ್ಲವನ್ನೂ ನಾನು ಜನರಿಗೆ ವಿವರಿಸಿ ಹೇಳಿದ್ದೇನೆ. ಎಲ್ಲರಿಗೂ ಮೌನೇಶ್ ದಾಖಲಾತಿ ಮತ್ತು ದತ್ತು ಸ್ವೀಕಾರ ವಿಷಯ ಪ್ರೇರಣೆ ನೀಡಿದೆ ಎಂದು ಪ್ರಾಂಶುಪಾಲ ಎಸ್. ಮಲ್ಲಪ್ಪ ಹೇಳಿದರು.
ಪಾಲಿಟೆಕ್ನಿಕ್ನ ಸಹೋದ್ಯೋಗಿಗಳು ಮುಂದಿನ ವರ್ಷದಿಂದ ತಲಾ ಒಬ್ಬೊಬ್ಬ ಬಡ ವಿದ್ಯಾರ್ಥಿಯನ್ನು ದತ್ತು ತೆಗೆದುಕೊಂಡು ಓದಿಸುವ ಸಂಕಲ್ಪ ಮಾಡಿದ್ದಾರೆ. ಪ್ರಾಚಾರ್ಯರೊಬ್ಬರು ಅಲೆಮಾರಿ ವಿದ್ಯಾರ್ಥಿಗೆ ಮನೆ ಬಾಗಿಲಲ್ಲೇ ಪ್ರವೇಶಾತಿ ನೀಡಿರುವ ಕಾರ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಸ್ವತ: ಉನ್ನತ ಶಿಕ್ಷಣ ಸಚಿವರೇ ಪ್ರಾಚಾರ್ಯರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವರದಿ:ಬಸವರಾಜ ಹರನಹಳ್ಳಿ
ಇದನ್ನೂ ಓದಿ:
75 ವರ್ಷದಿಂದ ಮಕ್ಕಳಿಗೆ ಉಚಿತ ಶಿಕ್ಷಣ: ದಣಿವರಿಯದೆ ದುಡಿಯುತ್ತಾರೆ ಈ ಶತಾಯುಷಿ ಶಿಕ್ಷಕ!
Published On - 9:49 am, Sun, 5 September 21