ಕೆರೆಗಳಿಗೆ ಸಕ್ಕರೆ ಕಾರ್ಖಾನೆಯ ಕಲುಷಿತ ನೀರು: ಸಂಕಷ್ಟಕ್ಕೆ ಸಿಲುಕಿದ ಬಳ್ಳಾರಿಯ ಅನ್ನದಾತರು
ಹಲವು ಗ್ರಾಮಗಳ ರೈತರು ಕಲುಷಿತ ನೀರಿನಿಂದ ಕಂಗೆಟ್ಟಿದ್ದಾರೆ. ಬೆಳೆಹಾನಿಯಿಂದ ನಷ್ಟ ಅನುಭವಿಸುತ್ತಿದ್ದಾರೆ.
ಬಳ್ಳಾರಿ: ಮೈಲಾರ್ ಸಕ್ಕರೆ ಕಾರ್ಖಾನೆಯು ಕಲುಷಿತ ನೀರನ್ನು (Polluted Water) ಕೆರೆಗಳಿಗೆ ಹರಿಬಿಡುತ್ತಿರುವುದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೂವಿನಹಡಗಲಿ ತಾಲ್ಲೂಕಿನ (Huvinahadagali Taluk) ಹಲವು ಹಳ್ಳಿಗಳಲ್ಲಿ ಕಲುಷಿತ ನೀರಿನಿಂದಾಗಿ ಕರೆಯಲ್ಲಿರುವ ಮೀನು, ಕೆರೆ ನೀರು ಕುಡಿಯುವ ಕುರಿ ಮತ್ತಿತರ ಜಾನುವಾರುಗಳು ಸಾವನ್ನಪ್ಪಿವೆ. ಸುತ್ತಲ ಹತ್ತಾರು ಹಳ್ಳಿಗಳ ಕುಡಿಯುವ ನೀರಿನಲ್ಲೂ ಮಾಲಿನ್ಯದ ಅಂಶಗಳು ಕಂಡು ಬಂದಿವೆ. ಜಿಲ್ಲಾಡಳಿತ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿಯು ಈ ಬಗ್ಗೆ ನೊಟೀಸ್ ನೀಡಿದರೂ ಕಾರ್ಖಾನೆ ಸಿಬ್ಬಂದಿ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಬೀರಬ್ಬಿ, ಅರಳಿಹಳ್ಳಿ, ಅರಳಿಹಳ್ಳಿ ತಾಂಡಾ, ಕಂತೆಬೆನ್ನೂರ, ಮಕರಬ್ಬಿ, ಅಂಗೂರು, ಗಿರಿಯಾರಪುರ ಸೇರಿದಂತೆ ಹಲವು ಗ್ರಾಮಗಳ ರೈತರು ಕಲುಷಿತ ನೀರಿನಿಂದ ಕಂಗೆಟ್ಟಿದ್ದಾರೆ. ಬೆಳೆಹಾನಿಯಿಂದ ನಷ್ಟ ಅನುಭವಿಸುತ್ತಿದ್ದಾರೆ.
ಮಲಿನ ನೀರು ಹರಿಬಿಡುವ ಜೊತೆಗೆ ಮತ್ತೊಂದು ರೀತಿಯಲ್ಲಿಯೂ ಕಾರ್ಖಾನೆಯು ಅನ್ನದಾತರಿಗೆ ಅನ್ಯಾಯ ಮಾಡಿದೆ. ಉದ್ಯೋಗ ನೀಡುವುದಾಗಿ ನಂಬಿಸಿ ಎಂಟು ವರ್ಷಗಳ ಹಿಂದೆ ನೂರಾರು ಎಕರೆ ಜಮೀನು ಖರೀದಿಸಿದೆ. ಆದರೆ ಕಾರ್ಖಾನೆ ಆರಂಭಗೊಂಡ ನಂತರ ರೈತ ಕುಟುಂಬಗಳಿಗೆ ಕೆಲಸವೂ ಇಲ್ಲ, ಭೂಮಿಯೂ ಇಲ್ಲ ಎನ್ನುವಂತಾಗಿದೆ. ಭೂಮಿ ನೀಡಿದ ರೈತರಿಗೆ ಸೆಕ್ಯೂರಿಟಿ ಕೆಲಸ ಕೊಡುತ್ತಿದೆ ಎಂದು ರೈತ ಕುಟುಂಬಗಳು ಆಕ್ರೋಶ ವ್ಯಕ್ತಪಡಿಸಿವೆ.
ಮಲಿನ ನೀರು ಹರಿಸಬಾರದು ಎಂದು ಜಿಲ್ಲಾಧಿಕಾರಿ ನೊಟೀಸ್ ಜಾರಿ ಮಾಡಿದ ನಂತರವೂ ಕಾರ್ಖಾನೆಯಿಂದ ನೀರು ಹರಿಯವುದು ನಿಂತಿಲ್ಲ. ಮಧ್ಯರಾತ್ರಿಯ ಹೊತ್ತಿನಲ್ಲಿ ಸರ್ಕಾರಿ ಜಮೀನಿಗೆ ಕಾರ್ಖಾನೆಯು ತ್ಯಾಜ್ಯದ ನೀರು ಹರಿಬಿಡುತ್ತಿದೆ. ಇದರಿಂದಾಗಿ ಬೋರವೆಲ್ಗಳು ಹಾಳಾಗುತ್ತಿವೆ. ಅಂತರ್ಜಲವೂ ಮಲಿನಗೊಂಡಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರೈತರು ಹೋರಾಟ ನಡೆಸಿ, ಪ್ರತಿಭಟನೆ ಮಾಡಿದರೂ ಕಾರ್ಖಾನೆಯ ಆಡಳಿತ ಮಂಡಳಿ ಬಗ್ಗಿಲ್ಲ ಎಂದು ಹೇಳಲಾಗಿದೆ.
ಕಲುಷಿತ ನೀರು ಹರಿಸಿಲ್ಲ: ಕಾರ್ಖಾನೆ ಆಡಳಿತ ಮಂಡಳಿ ಪ್ರತಿಕ್ರಿಯೆ
ರೈತರ ಆರೋಪಗಳ ಬಗ್ಗೆ ಪ್ರತಿಕ್ರಿಯೆ ಪಡೆಯಲು ಕಾರ್ಖಾನೆಯ ಆಡಳಿತ ಮಂಡಳಿಯನ್ನು ‘ಟಿವಿ 9’ ಪ್ರತಿನಿಧಿ ಸಂಪರ್ಕಿಸಿದರು. ಕಾರ್ಖಾನೆ ಪರವಾಗಿ ಪ್ರತಿಕ್ರಿಯಿಸಿದ ಎಚ್ಆರ್ ವಿಭಾಗದ ಮುಖ್ಯಸ್ಥ ಚನ್ನಬಸಪ್ಪ ಅಂಗಡಿ, ‘ನಾವು ಕಾರ್ಖಾನೆಯ ಕಲುಷಿತ ನೀರನ್ನು ಕೆರೆಗೆ ಹರಿಸಿಲ್ಲ. ರಾಸಾಯನಿಕದ ಅಂಶಗಳಿರುವ ನೀರನ್ನು ಕಾರ್ಖಾನೆಯಿಂದ ಹೊರಗೆ ಬಿಟ್ಟಿಲ್ಲ. ಕಾರ್ಖಾನೆ ಆವರಣದಲ್ಲಿಯೇ ಸಂಸ್ಕರಣೆ ಮಾಡಲಾಗುತ್ತಿದೆ. ಇತ್ತೀಚೆಗೆ ಮಳೆ ಬಂದಾಗ ಸ್ವಲ್ಪ ನೀರು ಹೊರಗೆ ಹೋಗಿರಬಹುದು’ ಎಂದು ವಿವರಿಸಿದರು.
‘ಜಮೀನು ಖರೀದಿ ಮಾಡುವಾಗಲೇ ರೈತರಿಗೆ ನಿಗದಿತ ಮೊತ್ತಕ್ಕಿಂತ ಹೆಚ್ಚಿನ ಬೆಲೆ ಕೊಟ್ಟಿದ್ದೇವೆ. ಭೂಮಿ ಕೊಟ್ಟ ರೈತರ ಕುಟುಂಬ ಮಕ್ಕಳ ಅವರ ವಿದ್ಯಾರ್ಹತೆ ಆಧಾರದ ಮೇಲೆ ಉದ್ಯೋಗ ಕೊಟ್ಟಿದ್ದೇವೆ. ಸಾಕಷ್ಟು ಸ್ಥಳೀಯರಿಗೆ ಉದ್ಯೋಗ ಕೊಟ್ಟಿದ್ದೇವೆ, ಆದರೆ ಎಲ್ಲರಿಗೂ ಉದ್ಯೋಗ ಕೊಡಲು ಆಗುವುದಿಲ್ಲ’ ಎಂದರು.