AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಡ್ಕರಿ ಭೇಟಿಯಾದ ಕುಮಾರಸ್ವಾಮಿ: ಬೆಂಗಳೂರು ಸ್ಯಾಟಲೈಟ್ ಟೌನ್ ರಿಂಗ್ ರೋಡ್ ಶೀಘ್ರ ಅನುಷ್ಠಾನದ ಭರವಸೆ

ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ಅವರು ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ಬೆಂಗಳೂರಿನ ಸ್ಯಾಟಲೈಟ್ ಟೌನ್ ರಿಂಗ್ ರೋಡ್ (STTRR) ಯೋಜನೆಯ ತ್ವರಿತ ಅನುಷ್ಠಾನ ಸಂಬಂಧ ಮಾತುಕತೆ ನಡೆಸಿದ್ದಾರೆ. ಯೋಜನೆಯನ್ನು ಶೀಘ್ರದಲ್ಲೇ ಅನುಷ್ಠಾನಗೊಳಿಸುವ ಬಗ್ಗೆ ಗಡ್ಕರಿ ಭರವಸೆ ನೀಡಿರುವುದಾಗಿ ಕುಮಾರಸ್ವಾಮಿ ತಿಳಿಸಿದ್ದಾರೆ. ಅಲ್ಲದೆ, ಕರ್ನಾಟಕದ ಇನ್ನೂ ಅನೇಕ ಯೋಜನೆಗಳ ಬಗ್ಗೆ ಉಭಯ ಸಚಿವರು ಚರ್ಚೆ ನಡೆಸಿದ್ದಾರೆ. ಅವುಗಳ ವಿವರ ಇಲ್ಲಿದೆ.

ಗಡ್ಕರಿ ಭೇಟಿಯಾದ ಕುಮಾರಸ್ವಾಮಿ: ಬೆಂಗಳೂರು ಸ್ಯಾಟಲೈಟ್ ಟೌನ್ ರಿಂಗ್ ರೋಡ್ ಶೀಘ್ರ ಅನುಷ್ಠಾನದ ಭರವಸೆ
ಹೆಚ್‌ಡಿ ಕುಮಾರಸ್ವಾಮಿ & ನಿತಿನ್ ಗಡ್ಕರಿ
Ganapathi Sharma
|

Updated on: Jan 09, 2025 | 9:04 AM

Share

ಬೆಂಗಳೂರು, ಜನವರಿ 9: ಬೆಂಗಳೂರಿನ ಸ್ಯಾಟಲೈಟ್ ಟೌನ್ ರಿಂಗ್ ರೋಡ್ (ಎಸ್‌ಟಿಆರ್‌ಆರ್) ಯೋಜನೆಗೆ ಸಂಬಂಧಿಸಿದಂತೆ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್‌ಡಿ ಕುಮಾರಸ್ವಾಮಿ ಬುಧವಾರ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರನ್ನು ದೆಹಲಿಯಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಬೆಂಗಳೂರಿನ ಸಂಚಾರ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ಹಮ್ಮಿಕೊಳ್ಳಲಾಗಿರುವ ಪ್ರಮುಖ ಯೋಜನೆ ಸ್ಯಾಟಲೈಟ್ ಟೌನ್ ರಿಂಗ್ ರೋಡ್ ಯೋಜನೆಯ ಮೌಲ್ಯಮಾಪನ ಸಂಬಂಧ ಅವರು ಮಾತುಕತೆ ನಡೆಸಿದ್ದಾರೆ.

ಎಸ್‌ಟಿಆರ್‌ಆರ್ ಯೋಜನಾ ಪ್ರಸ್ತಾವನೆಯನ್ನು ಸರ್ಕಾರಿ ಖಾಸಗಿ ಸಹಭಾಗಿತ್ವದ ಮೌಲ್ಯಮಾಪನ ಸಮಿತಿಗೆ (ಪಿಪಿಪಿಎಸಿ) ಶೀಘ್ರದಲ್ಲೇ ಸಲ್ಲಿಸಲಾಗುವುದು. ಯೋಜನೆಯನ್ನು ಶೀಘ್ರ ಅನುಷ್ಠಾನಗೊಳಿಸಲಾಗುವುದು ಎಂದು ಗಡ್ಕರಿ ಭರವಸೆ ನೀಡಿರುವುದಾಗಿ ಕುಮಾರಸ್ವಾಮಿ ತಿಳಿಸಿದ್ದಾರೆ.

ಸ್ಯಾಟಲೈಟ್ ಟೌನ್ ರಿಂಗ್ ರೋಡ್ ಯೋಜನೆಗೆ ಆರಂಭದಲ್ಲಿ 2013 ರಲ್ಲಿ ಪ್ರಸ್ತಾವ ಸಲ್ಲಿಕೆಯಾಗಿತ್ತು. ಆದರೆ ವಿವಿಧ ಕಾರಣಗಳಿಂದಾಗಿ ಯೋಜನೆ ವಿಳಂಬವಾಗಿತ್ತು.

ಎಲ್ಲೆಲ್ಲಿ ಹಾದುಹೋಗಲಿದೆ ಸ್ಯಾಟಲೈಟ್ ಟೌನ್ ರಿಂಗ್ ರೋಡ್?

ದಾಬಸ್‌ಪೇಟೆ, ದೊಡ್ಡಬಳ್ಳಾಪುರ, ದೇವನಹಳ್ಳಿ, ಸೂಲಿಬೆಲೆ, ಹೊಸಕೋಟೆ, ಆನೇಕಲ್, ಕನಕಪುರ, ರಾಮನಗರ ಮತ್ತು ಮಾಗಡಿ ಸೇರಿದಂತೆ ಬೆಂಗಳೂರಿನ ಸುತ್ತಮುತ್ತಲಿನ ಎಂಟು ಕೈಗಾರಿಕಾ ಪಟ್ಟಣಗಳನ್ನು ಸಂಪರ್ಕಿಸುವಂತೆ ಸ್ಯಾಟಲೈಟ್ ಟೌನ್ ರಿಂಗ್ ರೋಡ್ ಯೋಜನೆಯನ್ನು ವಿನ್ಯಾಸಗೊಳಿಸಲಾಗಿದೆ.

ನಾಲ್ಕರಿಂದ ಆರು ಪಥಗಳ ರಸ್ತೆ

ನಾಲ್ಕರಿಂದ ಆರು ಪಥಗಳ ನಿಯಂತ್ರಿತ-ಪ್ರವೇಶ ರಸ್ತೆಯು ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ ಮತ್ತು ತಮಿಳುನಾಡಿನ ಹೊಸೂರಿಗೆ ಸಂಪರ್ಕ ಕಲ್ಪಿಸುತ್ತದೆ. ಇದು ಸುಗಮ ಸಾರಿಗೆಯನ್ನು ಖಅತರಿಪಡಿಸಲಿದೆ ಎಂದು ಮೂಲಗಳು ಹೇಳಿವೆ. ಕೈಗಾರಿಕಾ ಸರಕುಗಳನ್ನು ಸಾಗಿಸುವ ಭಾರೀ ವಾಹನಗಳು ಬೆಂಗಳೂರು ನಗರ ಪ್ರವೇಶಿಸುವುದನ್ನು ತಡೆಯುವ ಗುರಿಯನ್ನು ಎಸ್‌ಟಿಆರ್‌ಆರ್ ಹೊಂದಿದೆ. ಇದರಿಂದಾಗಿ ಬೆಂಗಳೂರಿನ ಟ್ರಾಫಿಕ್ ಕಡಿಮೆ ಮಾಡುವ ಉದ್ದೇಶ ಹೊಂದಲಾಗಿದೆ.

ರೈತರಿಗೆ ತ್ವರಿತ ಪರಿಹಾರಕ್ಕೆ ಗಡ್ಕರಿ ಸೂಚನೆ

ಸ್ಯಾಟಲೈಟ್ ಟೌನ್ ರಿಂಗ್ ರೋಡ್​ಗಾಗಿ ಮಾಡುವ ಭೂಸ್ವಾಧೀನಕ್ಕೆ ರೈತರಿಗೆ ತ್ವರಿತವಾಗಿ ಪರಿಹಾರವನ್ನು ವಿತರಿಸುವಂತೆ ಗಡ್ಕರಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ಕುಮಾರಸ್ವಾಮಿ ಮಾಹಿತಿ ನೀಡಿದ್ದಾರೆ. ಈ ಯೋಜನೆಯು ಕರ್ನಾಟಕದಲ್ಲಿ ಸರಿಸುಮಾರು 135 ಕಿಮೀ ವ್ಯಾಪಿಸಲಿದ್ದು, ಅಂದಾಜು ವೆಚ್ಚ 4,750 ಕೋಟಿ ರೂ. ಆಗಿದೆ.

ಕೇಂದ್ರ ಸರ್ಕಾರದ ಈ ಮಹತ್ವಾಕಾಂಕ್ಷೆಯ ಉಪಕ್ರಮವು ಕೈಗಾರಿಕಾ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡುವುದರ ಜತೆಗೆ, ಬೆಂಗಳೂರಿನ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ನೆರವಾಗಲಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಮಂಡ್ಯ ರಿಂಗ್​ ರೋಡ್ ಸೇರಿ ಹಲವು ಯೋಜನೆಗಳ ಬಗ್ಗೆ ಚರ್ಚೆ

ಮಂಡ್ಯ ರಿಂಗ್ ರೋಡ್ ಯೋಜನೆಯ ಬಾಕಿ ಉಳಿದಿರುವ ಕಾಮಗಾರಿ ಸೇರಿದಂತೆ ಕರ್ನಾಟಕದ ಪ್ರಮುಖ ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಬಗ್ಗೆಯೂ ಗಡ್ಕರಿ ಜತೆ ಮಾತುಕತೆ ನಡೆಸಿರುವುದಾಗಿ ಕುಮಾರಸ್ವಾಮಿ ತಿಳಿಸಿದ್ದಾರೆ. ಸಾಮಾಜಿಕ ಮಾಧ್ಯಮ ಎಕ್ಸ್ ಸಂದೇಶದಲ್ಲಿ ಅವರು ವಿವರಗಳನ್ನು ಹಂಚಿಕೊಂಡಿದ್ದಾರೆ.

ಕುಮಾರಸ್ವಾಮಿ ಎಕ್ಸ್ ಸಂದೇಶ

ಪಾಂಡವಪುರ ಮತ್ತು ಕಿರಂಗೂರು NH-150 (ಜೇವರ್ಗಿ-ಚಾಮರಾಜನಗರ ಹೆದ್ದಾರಿ ಅಭಿವೃದ್ಧಿ), ಆಂಧ್ರಪ್ರದೇಶ ಮತ್ತು ಕರ್ನಾಟಕದ ಕುಪ್ಪಂ-ಬಂಗಾರಪೇಟೆ-ಕೋಲಾರ-ಚಿಂತಾಮಣಿ ಸಂಪರ್ಕಿಸುವ NH-42, ಗಜಾನನ ವೃತ್ತ (ಚಿಂತಾಮಣಿ) ಮತ್ತು ಚೇಳೂರು ನಡುವೆ NH-69 ಕಾಮಗಾರಿ ಸೇರಿದಂತೆ ವಿವಿಧ ಕಾಮಗಾರಿಗಳ ಬಗ್ಗೆ ಚರ್ಚಿಸಿರುವುದಾಗಿ ಕುಮಾರಸ್ವಾಮಿ ತಿಳಿಸಿದ್ದಾರೆ.

ಇದನ್ನೂ ಓದಿ: ಪ್ರಯಾಣಿಕರಿಗೆ ಮತ್ತೊಂದು ಶಾಕ್​: ಬಿಎಂಟಿಸಿ ಬಸ್ ಪಾಸ್​​ ದರ ಏರಿಕೆ!

ಸಚಿವರು ನಮ್ಮ ಮನವಿಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಮತ್ತು ಈ ಎಲ್ಲಾ ಯೋಜನೆಗಳನ್ನು ಪರಿಶೀಲಿಸುವುದಾಗಿ ಭರವಸೆ ನೀಡಿದ್ದಾರೆ. ಕರ್ನಾಟಕದ ಹೆದ್ದಾರಿಗಳ ಅಭಿವೃದ್ಧಿಗೆ ನಿರಂತರ ಬೆಂಬಲಕ್ಕಾಗಿ ಗಡ್ಕರಿ ಅವರಿಗೆ ಧನ್ಯವಾದಗಳು ಎಂದು ಕುಮಾರಸ್ವಾಮಿ ಉಲ್ಲೇಖಿಸಿದ್ದಾರೆ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ