ಯಾವುದೇ ಸಮುದಾಯವನ್ನೂ ಗುರಿಯಾಗಿಸಿಲ್ಲ: ಸಂಸದ ತೇಜಸ್ವಿ ಸೂರ್ಯ
MP Tejasvi Surya On Bengaluru Bed Scam: ನಾವು ಬದಲಾವಣೆ ಮಾಡಿದ ತಕ್ಷಣ ನಾಳೆ ಬೆಳಗ್ಗೆಯೇ ಸಾವಿರಾರು ಬೆಡ್ ಸಿಕ್ಕಿಬಿಡುತ್ತದೆ ಅಂತಲ್ಲ, ಆದರೆ ಎಲ್ಲರಿಗೂ ಬೆಡ್ ಸಿಗುವ, ಅತ್ಯಂತ ಜನಸಾಮಾನ್ಯರು ಬೆಡ್ ಪಡೆಯಲು ತೊಂದರೆ ಅನುಭವಿಸದ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ವಿವರಿಸಿದರು.
ಬೆಂಗಳೂರು: ಬೆಡ್ ಬ್ಲಾಕಿಂಗ್ ಅವ್ಯವಹಾರವನ್ನು ಮಟ್ಟ ಹಾಕುವುದೇ ನಮ್ಮ ಉದ್ದೇಶವಾಗಿತ್ತು. ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ಅವ್ಯವಹಾರಕ್ಕೆ ಕಡಿವಾಣ ಹಾಕಲು ಪ್ರಯತ್ನಿಸಿದ್ದೇವೆ. ಸಿಎಂ ಯಡಿಯೂರಪ್ಪ ಮತ್ತು ಸರ್ಕಾರದ ಸಹಕಾರದಿಂದ ಬೆಡ್ ಬ್ಲಾಕಿಂಗ್ ದಂಧೆಗೆ ಕಡಿವಾಣ ಹಾಕಲಾಗುತ್ತಿದೆ. ಕೋರ್ಟ್, ಲೋಕಾಯುಕ್ತರು ಸಹ ಇದನ್ನು ಪರಿಗಣಿಸಿದ್ದಾರೆ. ಯಾವುದೇ ಸಮುದಾಯವನ್ನು ನಾವು ಗುರಿಯಾಗಿಸಿರಲಿಲ್ಲ ಎಂದು ಸಂಸದ ತೇಜಸ್ವಿ ಸೂರ್ಯ ಸುದ್ದಿಗೋಷ್ಠಿ ನಡೆಸಿ ತಿಳಿಸಿದರು.
ನೂರು ಗಂಟೆಗಳಲ್ಲಿ ಬದಲಾವಣೆ ತರುವ ಸ್ಪಷ್ಟ ಗುರಿ ಇತ್ತು. ಬದಲಾವಣೆ ತಂದೇ ನಾನು ಜನರ ಮುಂದೆ ಬಂದಿದ್ದೇನೆ. ಕ್ಷೇತ್ರದ ಜನರು ಬಯಸಿದ ಕೆಲಸವನ್ನು ನಾನು ಮಾಡಿದ್ದೇನೆ. ಶಾಸಕರು ತಮ್ಮ ಕ್ಷೇತ್ರದವರಿಗೆ ಬೆಡ್ ಕೇಳುವುದು ಸಹಜ. ಶಾಸಕ ಸತೀಶ್ ರೆಡ್ಡಿ ಸೇರಿ ಯಾರೇ ತಪ್ಪು ಮಾಡಿದ್ರೂ ಶಿಕ್ಷೆಯಾಗಲಿ ಎಂದು ಅವರು ಸ್ಪಷ್ಟನೆ ನೀಡಿದರು. ಜತೆಗೆ ಸುದ್ದಿಗೋಷ್ಠಿಯಲ್ಲಿ ಕಳೆದ ನೂರು ಗಂಟೆಗಳಲ್ಲಿ ತಂದ ಬದಲಾವಣೆಗಳನ್ನು ಮಾಧ್ಯಮಗಳಿಗೆ ವಿವರಿಸಿದರು.
ತೇಜಸ್ವಿ ಸೂರ್ಯ ತಿಳಿಸಿದ ಬದಲಾವಣೆಗಳು ನಾನು ಈ ಮುನ್ನ ಘೋಷಣೆ ಮಾಡಿದಂತೆಯೇ ನೂರು ಗಂಟೆಗಳಲ್ಲಿ ಬಿಬಿಎಂಪಿ ಬೆಡ್ ಹಂಚಿಕೆ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ಮಾಡಿದ್ದೇವೆ. ಯಾರ ಹೆಸರಲ್ಲಿ ಬೆಡ್ ಬುಕ್ ಆಗುತ್ತೋ ಅವರ ಮೊಬೈಲ್ಗೆ ಆಟೋಮ್ಯಾಟಿಕ್ ಆಗಿ ಮೆಸೇಜ್ ಬರುತ್ತೆ. ಮೆಸೇಜ್ನಲ್ಲಿ ಯಾವ ಆಸ್ಪತ್ರೆ, ಬೆಡ್ ಆಸ್ಪತ್ರೆ ಮತ್ತು ಅಗತ್ಯ ದಾಖಲಾತಿಗಳ ವಿವರ ಇರುತ್ತೆ. ಇದೇ ಮೆಸೇಜ್ ಇನ್ನು ಎರಡು ದಿನಗಳಲ್ಲಿ ಆಸ್ಪತ್ರೆಯ ನೋಡಲ್ ಅಧಿಕಾರಿಗೂ ಬರುತ್ತೆ. ಇದರಿಂದ ಬೆಡ್ ಇಲ್ಲ ಎನ್ನುವ ಸಮಸ್ಯೆ ಬಗೆಹರಿಯಲಿದೆ ಎಂದು ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ತಿಳಿಸಿದರು.
16 ಜನರ ಮೇಲೆ ಅಪರಾಧ ಹೊರಿಸಿದ್ದು ನಾನಲ್ಲ; ಅವರನ್ನು ಬಿಬಿಎಂಪಿ ಮೊದಲೇ ಕೆಲಸದಿಂದ ತೆಗೆದಿತ್ತು- ಸಂಸದ ತೇಜಸ್ವಿ ಸೂರ್ಯ
ಮುಂಚೆ ಬೆಡ್ ಅಲಾಟ್ ಆದ ನಂತರ ಹತ್ತು ಗಂಟೆಗಳ ಕಾಲ ಸಮಯ ನೀಡಲಾಗಿತ್ತು. ಆದರೆ ಬೆಡ್ ಸಿಕ್ಕಿ ಅಷ್ಟೊಂದು ಹೊತ್ತು ಯಾರಿಗೂ ಅಗತ್ಯವಿಲ್ಲ, ಇದರಿಂದಲೇ ಅವ್ಯವಹಾರ ಆಗುತ್ತಿತ್ತು. ಈಗ ಅದನ್ನು ಬದಲಾಯಿಸಿ, ಸೋಂಕಿತರಿಗೆ ಬೆಡ್ ಅಲಾಟ್ ಆಗಿ ನಾಲ್ಕೇ ಗಂಟೆಗಳಲ್ಲಿ ಸೋಂಕಿತ ಆಸ್ಪತ್ರೆಗೆ ತೆರಳಬೇಕು ಎಂದು ಬದಲಾಯಿಸಲಾಗಿದೆ ಎಂದರು.
ಮೃತಪಟ್ಟ ಸೋಂಕಿತರ ಹೆಸರಲ್ಲೂ ಬೆಡ್ ಹಂಚಿ ಮಾಡಿ ದುರ್ಬಳಕೆ ಮಾಡಿರುವುದು ಗಮನಕ್ಕೆ ಬಂದಿತ್ತು. ಈಗ ಬಿಬಿಎಂಪಿ ಮ್ಯಾನ್ಯುವಲ್ ಅನ್ಬ್ಲಾಕ್ ಮಾಡಲು ಸಾಧ್ಯವಿಲ್ಲದಂತೆ ವ್ಯವಸ್ಥೆ ಮಾಡಲಾಗಿದೆ. ಈ ನಾಲ್ಕು ಬದಲಾವಣೆಗಳನ್ನು ನೂರು ಗಂಟೆಗಳಲ್ಲಿ ತರುವುದಾಗಿ ಘೋಷಿಸಿದ್ದೆವು. ನಂದನ್ ನೀಲೇಕಣಿ, ಇನ್ಫೋಸಿಸ್, ಬಿಬಿಎಂಪಿ ಆಯುಕ್ತರು, ಕೆಲವು ಸಂಸ್ಥೆಗಳು ಮತ್ತು ಅಧಿಕಾರಿಗಳು ಈ ಬದಲಾವಣೆಗಳನ್ನು ತರಲು ಸತತ ಶ್ರಮಿಸಿದ್ದಾರೆ ಎಂದರು.
ಈಗಿನ ವ್ಯವಸ್ಥೆಯಲ್ಲಿ ಡಿಸ್ಚಾರ್ಜ್ ಆದರೂ ಅವರ ಡಿಸ್ಚಾರ್ಜ್ ಆಗಿದ್ದಾರೆ ಎಂದು ತೋರಿಸುತ್ತಿಲ್ಲ. ಬೆಡ್ ಆಕ್ಯುಪೈಡ್ ಎಂದೇ ತೋರಿಸುತ್ತಿದೆ. ಅಂತಹ ಬೆಡ್ಗಳನ್ನು ಬಳಸಿ ಖಾಸಗಿಯವರು ಹಣ ಮಾಡುತ್ತಿದ್ದರು. ಆದರೆ ಮುಂದಿನ ನೂರು ಗಂಟೆಗಳಲ್ಲಿ ಡಿಸ್ಚಾರ್ಜ್ ಆದ ಮರು ನಿಮಿಷವೇ ಆ ವ್ಯಕ್ತಿ ಡಿಸ್ಚಾರ್ಜ್ ಆಗಿದ್ದಾರೆ ಎಂದು ರಿಯಲ್ ಟೈಮ್ ಡಾಟಾ ಅಪ್ಡೇಟ್ ಆಗಲಿದೆ ಎಂದು ತಿಳಿಸಿದರು.
ನಾವು ಬದಲಾವಣೆ ಮಾಡಿದ ತಕ್ಷಣ ನಾಳೆ ಬೆಳಗ್ಗೆಯೇ ಸಾವಿರಾರು ಬೆಡ್ ಸಿಕ್ಕಿಬಿಡುತ್ತದೆ ಅಂತಲ್ಲ, ಆದರೆ ಎಲ್ಲರಿಗೂ ಬೆಡ್ ಸಿಗುವ, ಅತ್ಯಂತ ಜನಸಾಮಾನ್ಯರು ಬೆಡ್ ಪಡೆಯಲು ತೊಂದರೆ ಅನುಭವಿಸದ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ವಿವರಿಸಿದರು.
ಇದನ್ನೂ ಓದಿ: ಬೆಂಗಳೂರು ದಕ್ಷಿಣ ಭಾಗದವರು ಆಕ್ಸಿಜನ್ ಬೇಕಿದ್ದಲ್ಲಿ 080- 61914960ಕ್ಕೆ ಕರೆ ಮಾಡಿ: ಸಂಸದ ತೇಜಸ್ವಿ ಸೂರ್ಯ (Bangalore South MP Tejasvi Surya says he did not targeted any one personally and just did reveal the Bed scam during Covid pandemic)