ಲೋಕಸಭೆ ಚುನಾವಣೆ ಬಳಿಕ ದೊಡ್ಡ ಬದಲಾವಣೆ: ಅಪ್ಪ ಮಕ್ಕಳ ವಿರುದ್ಧ ಯತ್ನಾಳ್ ಮತ್ತೆ ವಾಗ್ದಾಳಿ
ವಿಜಯಪುರ ತಾಲೂಕಿನ ತೊರವಿ ಗ್ರಾಮದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಲೋಕಸಭೆ ಚುನಾವಣೆ ಬಳಿಕ ಬಹಳ ದೊಡ್ಡ ಬದಲಾವಣೆಯಾಗುತ್ತದೆ. ಬದಲಾವಣೆಯಾಗಬೇಕೆಂಬ ಕೂಗು ಕರ್ನಾಟಕ ಬಿಜೆಪಿಯಲ್ಲಿ ಏಳುತ್ತೆ. ನಾಯಕರು, ಕಾರ್ಯಕರ್ತರ ಜತೆ ನಡೆದುಕೊಂಡ ರೀತಿ ಸರಿಯಲ್ಲ ಎಂದು ಬಿಎಸ್ ಯಡಿಯೂರಪ್ಪ ಮತ್ತು ವಿಜಯೇಂದ್ರ ವಿರುದ್ಧ ಮತ್ತೆ ವಾಗ್ದಾಳಿ ಮಾಡಿದ್ದಾರೆ.
ವಿಜಯಪುರ, ಮಾರ್ಚ್ 29: ಲೋಕಸಭೆ ಚುನಾವಣೆ ಬಳಿಕ ಬಹಳ ದೊಡ್ಡ ಬದಲಾವಣೆಯಾಗುತ್ತದೆ. ಬದಲಾವಣೆಯಾಗಬೇಕೆಂಬ ಕೂಗು ಕರ್ನಾಟಕ ಬಿಜೆಪಿಯಲ್ಲಿ ಏಳುತ್ತೆ. ನಾಯಕರು, ಕಾರ್ಯಕರ್ತರ ಜತೆ ನಡೆದುಕೊಂಡ ರೀತಿ ಸರಿಯಲ್ಲ ಎಂದು ಬಿಎಸ್ ಯಡಿಯೂರಪ್ಪ ಮತ್ತು ವಿಜಯೇಂದ್ರ ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಮತ್ತೆ ವಾಗ್ದಾಳಿ ಮಾಡಿದ್ದಾರೆ. ವಿಜಯಪುರ ತಾಲೂಕಿನ ತೊರವಿ ಗ್ರಾಮದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಎಸ್ ಯಡಿಯೂರಪ್ಪ ಬಿಟ್ಟರೆ ಬಿಜೆಪಿ ಮುಳುಗಿ ಹೋಗುತ್ತೆ ಎಂದುಕೊಂಡಿರಬಹುದು. ನಾವಂತೂ ಯಡಿಯೂರಪ್ಪ ನಾಯಕತ್ವ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ವಾಗ್ದಾಳಿ ಮಾಡಿದ್ದಾರೆ.
ಮೊದಲಿನಿಂದಲೂ ಬಿಎಸ್ ಯಡಿಯೂರಪ್ಪ ಜೊತೆಗೆ ಯಾವ ಸಮುದಾಯಗಳು ಇಲ್ಲ. ಪ್ರಮುಖವಾಗಿ ನಮ್ಮ ಪಂಚಮಸಾಲಿ ಸಮುದಾಯ ಜೊತೆಗಿಲ್ಲ. ನಮ್ಮ ಸಮುದಾಯಕ್ಕೆ ಬಿ.ಎಸ್.ಯಡಿಯೂರಪ್ಪ ಮೋಸ ಮಾಡಿದ್ದಾರೆ. ಪಂಚಮಸಾಲಿ ಮೀಸಲಾತಿ ವಿಚಾರದಲ್ಲಿ ಅಡ್ಡಿ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರದಲ್ಲಿ ಶೆ.50ರಷ್ಟು ಕಮಿಷನ್: ಬಸನಗೌಡ ಪಾಟೀಲ್ ಯತ್ನಾಳ್ ಗಂಭೀರ ಆರೋಪ
BJP ಟಿಕೆಟ್ ಹಂಚಿಕೆ ವಿಚಾರವಾಗಿ ನಾಯಕರ ಅಸಮಾಧಾನ ವಿಚಾರವಾಗಿ ಮಾತನಾಡಿದ ಅವರು, ಟಿಕೆಟ್ ಹಂಚಿಕೆಯ ವಿಚಾರವಾಗಿ ಭಿನ್ನಮತ ಅವರಿಂದಲೇ ಆಗುತ್ತಿದೆ. ತುಮಕೂರಿನಲ್ಲಿ ಬಿ.ಎಸ್.ಯಡಿಯೂರಪ್ಪ ಶಿಷ್ಯ ಜೆ.ಸಿ.ಮಾಧುಸ್ವಾಮಿ. ಯಡಿಯೂರಪ್ಪ ಕೆಜೆಪಿ ಮಾಡಿದಾಗ ಚಂದ್ರಪ್ಪ ರಾಜೀನಾಮೆ ನೀಡಿ ಹೋಗಿದ್ದರು. ಈಗ ಅವರನ್ನು ಕರೆದು ಮಾತನಾಡಿಸದೆ ಟಿಕೆಟ್ ಘೋಷಣೆ ಮಾಡಿದ್ದಾರೆ ಎಂದಿದ್ದಾರೆ.
ಚಿತ್ರದುರ್ಗದಲ್ಲಿ ಕಾರಜೋಳಗೆ ಕೊಡದಿದ್ದರೆ ಪ್ರಚಾರ ಮಾಡಲ್ಲ ಎಂದಿದ್ದಾರೆ. ಹೀಗಾಗಿ ಯಡಿಯೂರಪ್ಪ ಬ್ಲಾಕ್ಮೇಲ್ ಮಾಡಿ ಕಾರಜೋಳಗೆ ಟಿಕೆಟ್ ಕೊಡಿಸಿದ್ದಾರೆ. ಈ ವಿಚಾರವನ್ನು ಶಾಸಕ ಚಂದ್ರಪ್ಪ ಹೇಳಿದ್ದಾರೆ. ದಾವಣಗೆರೆಯಲ್ಲಿ ರೇಣುಕಾಚಾರ್ಯ ಇದೇ ಯಡಿಯೂರಪ್ಪ ಶಿಷ್ಯ. ನನಗೂ ಬೇರೆ ಜಿಲ್ಲೆಗೆ ಹೋಗಿ ಲೋಕಸಭೆಗೆ ನಿಲ್ಲುವಂತೆ ಸೂಚಿಸಿದ್ದರು. ನಾವು ಬೇರೆ ಜಿಲ್ಲೆಗೆ ಹೋಗಿ ಅಲ್ಲಿಯ ಕಾರ್ಯಕರ್ತರಿಗೆ ತೊಂದರೆ ಕೊಡಬಾರದು.
ಇದನ್ನೂ ಓದಿ: ಬೆಂಗಳೂರು ರಾಮೇಶ್ವರಂ ಕೆಫೆ ಸ್ಫೋಟವನ್ನು ಭಜರಂಗದಳದ ಮೇಲೆ ಹಾಕುವವರಿದ್ದರು ಅಯೋಗ್ಯ ನನ್ಮಕ್ಕಳು: ಯತ್ನಾಳ್
ಶೆಟ್ಟರ್ ಬಲಿಕೊಡ್ತಾರೋ, ಹೆಬ್ಬಾಳ್ಕರ್ ಜತೆ ಒಳ ಒಪ್ಪಂದವಿದೆಯೋ ಗೊತ್ತಿಲ್ಲ. ಸಚಿವೆ ಹೆಬ್ಬಾಳ್ಕರ್ಗೆ ಅನುಕೂಲ ಆಗುವಂತಹ ಕುತಂತ್ರವಿರಬಹುದು. ಇದನ್ನೆಲ್ಲ ಮಾಡುತ್ತಿರುವವರು ಅದೇ ಅಪ್ಪ ಮಕ್ಕಳು. ಅಪ್ಪ ಮಕ್ಕಳಿಗೆ ಕಳಕಳಿ ಇದ್ದರೆ ಕೆ.ಎಸ್.ಈಶ್ವರಪ್ಪಗೆ ಟಿಕೆಟ್ ಕೊಡಬೇಕಿತ್ತು. ಮತ್ತೊಬ್ಬರಿಗೆ ತ್ಯಾಗ ಮಾಡುವ ಕಥೆ ಹೇಳುವ ನೀವು ತ್ಯಾಗ ಮಾಡಿ. ನಮ್ಮಲ್ಲ ಕುರುಬ ಸಮುದಾಯಕ್ಕೆ ಪ್ರಾತಿನಿಧ್ಯ ಕೊಟ್ಟಿಲ್ಲ. ಕೆ.ಎಸ್.ಈಶ್ವರಪ್ಪ ಟಿಕೆಟ್ ಕೇಳಿರುವುದರಲ್ಲಿ ಯಾವ ತಪ್ಪಿಲ್ಲ ಎಂದು ಹೇಳಿದ್ದಾರೆ.
ದಿಂಗಾಲೇಶ್ವರ ಸ್ವಾಮೀಜಿ ಯಡಿಯೂರಪ್ಪ ಚೇಲಾ
ದಿಂಗಾಲೇಶ್ವರ ಸ್ವಾಮೀಜಿ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ಮಾಡಿದ ಯತ್ನಾಳ್, ಸಿಎಂ ಸ್ಥಾನದಿಂದ ಇಳಿಸುವಾಗ ಬಿಜೆಪಿ ನಾಯಕರನ್ನು ಹೆದರಿಸಿದರು. ದಿಂಗಾಲೇಶ್ವರಶ್ರೀ ಸೇರಿ ಇತರೆ ಶ್ರೀಗಳು ನಾಯಕರನ್ನು ಅಂಜಿಸಿದರು. ದೇಶದಲ್ಲಿ ಹಿಂದುತ್ವ ಉಳಿಯಬೇಕು, ಭಾರತ ಜಗತ್ತಿನ ಗುರುವಾಗಬೇಕು. ಯಾರು ಏನೇ ಅಂದರೂ ಪ್ರಲ್ಹಾದ್ ಜೋಶಿ ಗೆಲ್ಲುತ್ತಾರೆ. ಇಂತಹದ್ದನ್ನೆಲ್ಲಾ ಮಾಡುವರು ಅಪ್ಪ ಮಕ್ಕಳೇ ಎಂದು ವಾಗ್ದಾಳಿ ಮಾಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.