ಮತ್ತೊಂದು ಮಗ್ಗುಲಿಗೆ ಹೊರಳಿದ ಬಿಜೆಪಿ ಬಣಬಡಿದಾಟ: ವಿಜಯೇಂದ್ರ ವಿರುದ್ಧ ಲಿಂಗಾಯತ ಅಸ್ತ್ರ ಹೂಡಿದ ಯತ್ನಾಳ್

| Updated By: ರಮೇಶ್ ಬಿ. ಜವಳಗೇರಾ

Updated on: Feb 25, 2025 | 9:32 PM

ರಾಜ್ಯಾಧ್ಯಕ್ಷರ ಬದಲಾವಣೆಗೆ ಸಮರ ಸಾರಿರುವ ಬಸನಗೌಡ ಪಾಟೀಲ್ ಯತ್ನಾಳ್ ಸುಮ್ಮನೆ ಏನೂ ಕೂತಿಲ್ಲ. ವಿಜಯೇಂದ್ರ ಬದಲಾವಣೆಗೆ ಪಟ್ಟು ಹಿಡಿದಿರುವ ರೆಬೆಲ್ಸ್​ ಟೀಂಗೆ ಎಷ್ಟೇ ಏನೇ ಹಿನ್ನಡೆಯಾದರೂ ತಮ್ಮ ನಿರ್ಧಾರದಿಂದ ಹಿಂದೆ ಸರಿಯುತ್ತಿಲ್ಲ. ಕೇಂದ್ರ ಬಿಜೆಪಿ ಶಿಸ್ತು ಸಮಿತಿ ನೋಟಿಸ್​ ಕೊಟ್ಟರೂ ಡೋಂಟ್​ಕೇರ್ ಅಂತಿದ್ದಾರೆ. ಪಕ್ಷದಲ್ಲೇ ಎಷ್ಟೇ ವಿರೋಧವ್ಯಕ್ತವಾಗುತ್ತಿದ್ದರೂ ತಲೆಕೆಡಿಸಿಕೊಳ್ಳುತ್ತಿಲ್ಲ. ಯಾಕೆಂದ್ರೆ ಯತ್ನಾಳ್ ಹೂಡಿರುವ ಅಸ್ತ್ರ ಸಮಾನ್ಯವಾದ್ದದ್ದು ಅಲ್ಲವೇ ಅಲ್ಲ ಅದುವೇ ಲಿಂಗಾಯತ ವರ್ಸಸ್​ ಲಿಂಗಾಯತ.

ಮತ್ತೊಂದು ಮಗ್ಗುಲಿಗೆ ಹೊರಳಿದ ಬಿಜೆಪಿ ಬಣಬಡಿದಾಟ: ವಿಜಯೇಂದ್ರ ವಿರುದ್ಧ ಲಿಂಗಾಯತ ಅಸ್ತ್ರ ಹೂಡಿದ ಯತ್ನಾಳ್
Yatnal And Vijayendra
Follow us on

ಬೆಂಗಳೂರು, (ಫೆಬ್ರವರಿ 25): ಕರ್ನಾಟಕದಲ್ಲಿ ಲಿಂಗಾಯತ ಪರಮೋಚ್ಛ ನಾಯಕ ಅಂತಾನೇ ಬಿಎಸ್​ ಯಡಿಯೂರಪ್ಪ ಗುರುತಿಸಿಕೊಂಡಿದ್ದಾರೆ. ಲಿಂಗಾಯತರ ದೊಡ್ಡ ಶಕ್ತಿಯೇ ಬಿಎಸ್​ವೈ ಕುಟುಂಬಕ್ಕೆ ಇದೆ. ಆದರೂ ಕೂಡ ರಾಜ್ಯಾಧ್ಯಕ್ಷರ ಬದಲಾವಣೆಗೆ ವಿಜಯೇಂದ್ರ ವಿರುದ್ಧವೇ ಸೆಡ್ಡು ಹೊಡೆದು, ಶಾಸಕ ಯತ್ನಾಳ್ ನಿಂತಿರುವುದಕ್ಕೂ ಕಾರಣ ಇದೆ. ಕೇವಲ ಅವರ ಪರ ಮಾತ್ರ ಲಿಂಗಾಯತ ನಾಯಕರು ಇಲ್ಲ, ನಮ್ಮ ಜೊತೆಯೂ ಲಿಂಗಾಯತ ನಾಯಕರು ಇದ್ದಾರೆ ಎಂದು ಸಂದೇಶ ರವಾನೆ ಮಾಡುವುದಕ್ಕೆ ಇದೀಗ ಹೊರಟ್ಟಿದ್ದಾರೆ. ಘಟಾನುಘಟಿ ಲಿಂಗಾಯತ ನಾಯಕರ ಸಂಪರ್ಕವನ್ನಿಟ್ಟುಕೊಂಡೇ, ಅಸ್ತ್ರವನ್ನ ಹೂಡಿದ್ದಾರೆ.

ಹೌದು. ಬಿಜೆಪಿ ರಾಜ್ಯಾಧ್ಯಕ್ಷನಾಗಿ ಸ್ಪರ್ಧೆ ಮಾಡಲು ನಮ್ಮ ಬಣವೂ ರೆಡಿ ಇದೆ ಎಂದು ಈ ಹಿಂದೆಯೇ ಯತ್ನಾಳ್​ ಸಾರಿ ಸಾರಿ ಹೇಳಿದ್ದರು. ಲಿಂಗಾಯತ ಕೋಟಾ ಅಂತಾ ಬಂದ್ರೆ ಐ ಆ್ಯಮ್ ರೆಡಿ ಅಂತಾನೂ ಮೆಸೇಜ್ ಪಾಸ್ ಮಾಡಿದ್ದರು. ಇದಿಷ್ಟೇ ಅಲ್ಲ, ಇತ್ತೀಚೆಗಷ್ಟೇ ಯತ್ನಾಳ್, ನಾನು ರೇಸ್​ನಲ್ಲಿ ಇದ್ದೇ ಇದ್ದೀನಿ, ಸಿಎಂ ಸ್ಥಾನದ ರೇಸ್​ನಲ್ಲೂ ಇದ್ದೀನಿ ಅನ್ನೋ ಮೂಲಕ ತಮ್ಮ ವರ್ಚಸ್ಸು ಏನು ಎನ್ನುವ ಸಂದೇಶ ರವಾನಿಸುವ ಪ್ರಯತ್ನ ಮಾಡಿದ್ದರು.

ಇದನ್ನೂ ಓದಿ: ಬಿಜೆಪಿ ಕೇಂದ್ರ ಶಿಸ್ತು ಸಮಿತಿ ನೋಟಿಸ್​ಗೆ ಉತ್ತರ ನೀಡಿದ ಬಸನಗೌಡ ಪಾಟೀಲ್ ಯತ್ನಾಳ್

ಯತ್ನಾಳ್ ನೇತೃತ್ವದಲ್ಲಿ ಲಿಂಗಾಯತ ಮುಖಂಡರ ಸಭೆ!

ಇಂದು (ಫೆಬ್ರವರಿ 25) ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ಶಾಸಕ ಯತ್ನಾಳ್ ನೇತೃತ್ವದಲ್ಲಿ ಮುಖ್ಯವಾದ ಸಭೆಯೊಂದು ನಡೆಯಿತು. ಸಭೆಯಲ್ಲಿ ಪ್ರಮುಖ ವೀರಶೈವ ಲಿಂಗಾಯತ ಮುಖಂಡರು ಭಾಗಿಯಾಗಿದ್ದರು. ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ್, ಶಾಸಕ ಬಿ.ಪಿ.ಹರೀಶ್ ಸೇರಿ ಹಲವು ಪ್ರಮುಖ ಲಿಂಗಾಯತ ಮುಖಂಡರು ಸಭೆಯಲ್ಲಿ ಉಪಸ್ಥಿತರಿದ್ದರು. ಇನ್ನು ಭಿನ್ನರ ಸಭೆಯಲ್ಲಿ ಕೆ.ಎಸ್​.ಈಶ್ವರಪ್ಪ ಪುತ್ರ ಕಾಂತೇಶ್ ಕೂಡ ಕಾಣಿಸಿಕೊಂಡಿದ್ದಾರೆ. ಇನ್ನು ಸಭೆ ಆರಂಭಕ್ಕೂ ಮುನ್ನವೇ ಎಲ್ಲರಿಗೂ ಧೈರ್ಯ ತುಂಬಿದ ಯತ್ನಾಳ್, ನಾಯಕತ್ವದ ವಿಚಾರವಾಗಿ ಎಲ್ಲರೂ ಮುಕ್ತವಾಗಿ ಅಭಿಪ್ರಾಯ ತಿಳಿಸಿ.. ಯಾರಿಗೂ ಅಂಜಬೇಡಿ ಎಂದು ಹೇಳಿದರು.

ಇನ್ನು ಸಭೆಯಲ್ಲಿ ವಿಜಯೇಂದ್ರ ನಡೆಯಿಂದ ಲಿಂಗಾಯತರಿಗೆ ಹಿನ್ನಡೆ ಆಗುವ ಸಾಧ್ಯತೆ ಇದೆ ಎಂದು ಲಿಂಗಾಯತ ಮುಖಂಡರು ಆಕ್ರೋಶ ಹೊರಹಾಕಿದ್ದಾರೆ. ಸಭೆ ಬಳಿಕ ಸಮುದಾಯದ ಬಿಜೆಪಿ ಮುಖಂಡ ಉಮೇಶ್ ಮಹಾಬಲ ಶೆಟ್ಟಿ ಮಾತನಾಡಿ, ಪ್ರತಿಯೊಂದು ಜಿಲ್ಲೆಗಳಿಂದ ಮೂರ್ನಾಲ್ಕು ಜನ ಬಂದಿದ್ದೇವೆ. ಬಿಜೆಪಿ ಮೊದಲಿಂದಲೂ ಕುಟುಂಬ ರಾಜಕಾರಣಕ್ಕೆ ವಿರೋಧಿಸುತ್ತಾ ಬಂದಿದೆ. ಆದರೆ ಯಡಿಯೂರಪ್ಪ ಅವರ ಮಗನಿಗೆ ಜವಾಬ್ದಾರಿ ಕೊಡೋ ಮೂಲಕ ಕುಟುಂಬ ರಾಜಕಾರಣಕ್ಕೆ ‌ಮಣೆ ಹಾಕಲಾಗಿದೆ. ಇದರ ಬಗ್ಗೆ ಸಭೆಯಲ್ಲಿ ಚರ್ಚೆ ಆಗಿದೆ. ವಿಜಯೇಂದ್ರ ನೇತೃತ್ವದಲ್ಲಿ ಪಕ್ಷಕ್ಕೆ ಹಿನ್ನಡೆ ಆಗಿದೆ. ರಾಜ್ಯಾಧ್ಯಕ್ಷರ ಬದಲಾವಣೆ ಆಗಬೇಕು .ನಾವು ತಂಡ ‌ಮಾಡಿಕೊಂಡು ಹೋಗಿ ಹೈಕಮಾಂಡ್ ಮುಂದೆ ನಮ್ಮ ಸಭೆಯ ನಿರ್ಣಯ ತಿಳಿಸುತ್ತೇವೆ ಎಂದರು.

ಲಿಂಗಾಯತ ಮುಖಂಡ ವೀರೇಶ್ ಮಾತನಾಡಿ, ವಿಜಯೇಂದ್ರ ಪ್ರತಿಯೊಂದರಲ್ಲೂ ಅಸಮರ್ಥರು ಅಂತ ಗೊತ್ತಾಗಿದೆ. ವಿಜಯೇಂದ್ರರಿಂದ ಪಕ್ಷಕ್ಕೆ ಲಾಭವಾಗುತ್ತಿಲ್ಲ. ಯತ್ನಾಳ್​ ವಿರುದ್ಧ ವಿಜಯೇಂದ್ರ ಎತ್ತಿ ಕಟ್ಟುವ ಕೆಲಸ ಮಾಡುತ್ತಿದ್ದಾರೆ. ಮುಂದೆ ಬಿಜೆಪಿ ಅಧಿಕಾರಕ್ಕೆ ಬರಬೇಕು ಅಂದ್ರೆ ಈಗಿನ ರಾಜ್ಯಾಧ್ಯಕ್ಷರು ಬದಲಾಗಬೇಕು. ಯತ್ನಾಳ್, ಸೋಮಣ್ಣ, ಬೊಮ್ಮಾಯಿ ಯಾರಿಗೇ ಬೇಕಾದರೂ ರಾಜ್ಯಾಧ್ಯಕ್ಷ ಮಾಡಲಿ. ಇವರು ಎಲ್ಲರನ್ನೂ ಜತೆಗೆ ತಗೊಂಡು ಹೋಗುತ್ತಾರೆ. ವಿಜಯೇಂದ್ರರಿಂದ ಹೋರಾಟ ಸಾಧ್ಯವಿಲ್ಲ, ಪಕ್ಷಕ್ಕೂ ನಷ್ಟ. ವಿಜಯೇಂದ್ರ ಮುಂದುವರೆದರೆ ನಮ್ಮ ಸಮುದಾಯಕ್ಮೂ ಕೆಟ್ಟ ಹೆಸರು ಎಂದು ಹೇಳಿದರು.

ಅದೇನೇ ಹೇಳಿ ಬಿಜೆಪಿಯಲ್ಲಿ ಬಣ ಬಡಿದಾಟ, ಇದೀಗ ಮತ್ತೊಂದು ಮಗ್ಗುಲಿಗೆ ಹೊರಳಿದೆ. ಲಿಂಗಾಯತರ ಶಕ್ತಿ ಯಾರ ಕಡೆ ಇದೆ ನೋಡೇ ಬಿಡೋಣ ಎನ್ನುವ ಮಟ್ಟಿಗೆ ಯುದ್ಧ ನಡೆಯುತ್ತಿದ್ದು, ಮುಂದೆ ಏನಾಗಲಿದೆ ಎನ್ನುವುದನ್ನು ಕಾದುನೋಡಬೇಕಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ