ಮೃತ್ಯುಂಜಯ ಸ್ವಾಮೀಜಿ ಹಾಗೂ ಭಕ್ತರಿಂದ ಜೀವ ಬೆದರಿಕೆ: ಬಹಿರಂಗ ಕ್ಷಮೆಯಾಚಿಸಿದ ಮಾಜಿ MLC
ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರ ಭಕ್ತರು ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಎಂಬಂತೆ ನಮ್ಮನ್ನು ಹೆದರಿಸುವ ತಂತ್ರ ಮಾಡುತ್ತಿದ್ದಾರೆ ಎಂದು ಮಾಜಿ ವಿಧಾನಪರಿಷತ್ ಸದಸ್ಯ ಆರೋಪಿಸಿದ್ದಾರೆ.
ಹುಬ್ಬಳ್ಳಿ: ಬಸವಜಯ ಮೃತ್ಯುಂಜಯ ಸ್ವಾಮೀಜಿ (Basava Jaya Mruthyunjaya Swamiji ) ಹಾಗೂ ಅವರ ಭಕ್ತರು ನನಗೆ ಜೀವ ಬೆದರಿಕೆ ಹಾಕುತ್ತಿದ್ದಾರೆ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಕೆ.ಸಿ.ಪುಟ್ಟಸಿದ್ದಶೆಟ್ಟಿ ಗಂಭೀರ ಆರೋಪ ಮಾಡಿದ್ದಾರೆ.
ಹುಬ್ಬಳ್ಳಿಯಲ್ಲಿ ಇಂದು(ಅಕ್ಟೋಬರ್.13) ಮಾತನಾಡಿದ ಕೆ.ಸಿ.ಪುಟ್ಟಸಿದ್ದಶೆಟ್ಟಿ, ಬಸವಜಯ ಮೃತ್ಯುಂಜಯ ಸ್ವಾಮೀಜಿ ಹಾಗೂ ಅವರ ಭಕ್ತರು ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಎಂಬಂತೆ ನಮ್ಮನ್ನು ಹೆದರಿಸುವ ತಂತ್ರ ಮಾಡುತ್ತಿದ್ದಾರೆ. ಮೀಸಲಾತಿಯನ್ನು ವಾಮ ಮಾರ್ಗದಿಂದ ಪಡೆಯಲು ಸಾಧ್ಯವಿಲ್ಲ. ಪಂಚಮಸಾಲಿ ಸಮಾಜದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹಾಗೂ ಅವರ ಭಕ್ತರ ಭಾವನೆಗಳಿಗೆ ಧಕ್ಕೆಯಾಗಿದ್ದರೇ ನಾನು ಬಹಿರಂಗ ಕ್ಷಮೆ ಕೋರುತ್ತೇನೆ ಎಂದು ಸ್ಪಷ್ಟಪಡಿಸಿದರು.
ಮೀಸಲಾತಿಗಾಗಿ ಜಯಮೃತ್ಯುಂಜಯ ಶ್ರೀ ನಡೆಸುತ್ತಿರುವ ಹೋರಾಟಕ್ಕೆ ಮಾಜಿ MLC ವಿರೋಧ
ಕರ್ನಾಟಕ ರಾಜ್ಯ ಕಾಯಕ ಸಮಾಜಗಳ ಒಕ್ಕೂಟವು ಅತಿ ಹಿಂದೂಳಿದ ವರ್ಗಗಳ ಜನರ ಧ್ವನಿಯಾಗಿದೆ. ಜನರ ಅಭಿವೃದ್ಧಿಗಿರುವ ಮೀಸಲಾತಿ ಸಂರಕ್ಷಣೆಗಾಗಿ ರಾಜ್ಯ ವ್ಯಾಪಿ ಹೋರಾಟ ಮಾಡಲಾಗುತ್ತಿದೆ. ಇದು ಯಾವುದೇ ಸಮಾಜದ ವಿರುದ್ಧವಲ್ಲ. ಆದರೆ ಕೂಡಲ ಸಂಗಮ ಪೀಠಾಧ್ಯಕ್ಷ ಬಸವ ಜಯ ಮೃತ್ಯುಂಜಯ ಸ್ವಾಮೀಜಿಯವರ ಭಕ್ತರು ನಮ್ಮ ಮೇಲೆ ಜೀವ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿದರು,
ಕಾಯಕ ಸಮಾಜಕ್ಕಿರುವ ಶೇ.15 ರಷ್ಟು ಮೀಸಲಾತಿ ಉಳಿವಿಗಾಗಿ ಮಾತನಾಡಿದ್ದೇನೆ. ಅಂದು ನಾನು ಆಡಿದ ಮಾತುಗಳು ಪಂಚಮಸಾಲಿ ಜನಾಂಗದ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಆ ಸಮಾಜದ ಧುರೀಣರು ವ್ಯಕ್ತಪಡಿಸಿದ್ದಾರೆ. ಅಲ್ಲದೇ ನನಗೆ ಮತ್ತು ನನ್ನ ಸ್ನೇಹಿತರಿಗೆ ಜೀವ ಬೆದರಿಕೆ ಕೂಡಾ ಹಾಕಿದ್ದಾರೆ ಎಂದರು.
ನಾವು ಅತಿ ಹಿಂದುಳಿದ ಸಮಾಜಗಳ ಜನರು. ನಮ್ಮ ಮೇಲೆ ತೋಳಬಲ ಪ್ರದರ್ಶಿಸುತ್ತಿದ್ದಾರೆ. ಹಿಂದೂಳಿದ ವರ್ಗಗಳಿಗೆ ಇರುವ ಮೀಸಲಾತಿ ಮತ್ತು ರಾಜಕಾರಣ ಕುರಿತು ಅ. 15 ರಂದು ಹುಬ್ಬಳ್ಳಿಯ ಅಕ್ಕನ ಬಳಗದಲ್ಲಿ ಚಿಂತನ ಮಂಥನ ಸಭೆ ಹಮ್ಮಿಕೊಳ್ಳಲಾಗಿದೆ. ಅಲ್ಲಿ ಸಂವಿಧಾನ ತಜ್ಞರು ಈ ಕುರಿತು ವಿಸ್ತ್ರತವಾಗಿ ಚರ್ಚೆ ಮಾಡಲಿದ್ದಾರೆ. ಹೀಗಾಗಿ ಚಿಂತನ ಮಂಥನ ಸಭೆ ವಂಚಿತ ಸಮಾಜಗಳಿಗೆ ಸಾಮಾಜಿಕ ನ್ಯಾಯ ಪಡೆಯಲು ನಡೆಸುತ್ತಿರುವ ಚಳವಳಿಯ ಒಂದು ಭಾಗವಾಗಿದೆ ಎಂದು ತಿಳಿಸಿದರು.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ