ಕೊರೊನಾ ಕಾಲದಲ್ಲಿ ಜನರ ನೆರವಿಗೆ ನಿಂತ ಬೆಳಗಾವಿಯ ಆಪತ್ಬಾಂಧವ; ಸಾರ್ವಜನಿಕರಿಂದ ಮೆಚ್ಚುಗೆ

ಲಾಕ್​ಡೌನ್ ಆಗಿರುವ ಈ ಕಾಲಘಟ್ಟದಲ್ಲಿ ಮನೆಯಿಂದ ಆಸ್ಪತ್ರೆಗೆ ಹೋಗಲು ಆಗದವರಿಗೆ ಆಟೋ ಮೂಲಕ ಉಚಿತವಾಗಿ ಆಸ್ಪತ್ರೆ ಸೇರಿಸುವ ಕೆಲಸ ಮಾಡುತ್ತಿದ್ದಾರೆ. ಇದಕ್ಕಾಗಿ ಆರು ಆಟೋಗಳನ್ನ ಮೀಸಲಿಟ್ಟಿದ್ದು, ಇದರಲ್ಲಿ ಒಂದು ಆಟೋ ಆ್ಯಂಬುಲೆನ್ಸ್ ಮಾದರಿಯಲ್ಲಿ ಸುರೇಂದ್ರ ನಿರ್ಮಾಣ ಮಾಡಿದ್ದಾರೆ.

ಕೊರೊನಾ ಕಾಲದಲ್ಲಿ ಜನರ ನೆರವಿಗೆ ನಿಂತ ಬೆಳಗಾವಿಯ ಆಪತ್ಬಾಂಧವ; ಸಾರ್ವಜನಿಕರಿಂದ ಮೆಚ್ಚುಗೆ
ಸುರೇಂದ್ರ ಅನಗೋಳ್ಕರ್
preethi shettigar

|

Apr 30, 2021 | 9:02 AM

ಬೆಳಗಾವಿ: ಕೊರೊನಾ ತಡೆಗಟ್ಟಲು ಸರ್ಕಾರ ಹದಿನಾಲ್ಕು ದಿನಗಳ ಕಾಲ ಲಾಕ್​ಡೌನ್ ಘೋಷಣೆ ಮಾಡಿದೆ. ಆದರೆ ಬಡವರ್ಗದ ಜನರು ತಿನ್ನಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಜೊತೆಗೆ ಆಸ್ಪತ್ರೆಗೆ ಹೋಗಲು ಒದ್ದಾಡುವ ಸ್ಥಿತಿ ಕೂಡ ಇದೀಗ ನಿರ್ಮಾಣವಾಗಿದೆ. ಆಸ್ಪತ್ರೆಯಲ್ಲಿರುವ ರೋಗಿಗಳ ಸಂಬಂಧಿಕರಿಗೆ ಊಟವಿಲ್ಲದೆ ಉಪವಾಸ ಮಲಗುವ ಸ್ಥಿತಿ ಇದೆ. ಆದರೆ ಇಂತಹ ಸಂದಿಗ್ದ ಸ್ಥಿತಿಯಲ್ಲಿ ಬೆಳಗಾವಿಯಲ್ಲೊಬ್ಬರು ಕೊವಿಡ್ ಆಪತ್ಬಾಂಧವರಾಗಿ ಕೆಲಸ ಮಾಡುತ್ತಿದ್ದಾರೆ. ಆ ಮೂಲಕ ಇಡೀ ರಾಜ್ಯದ ಜನರಿಗೆ ಮಾದರಿಯಾಗಿದ್ದಾರೆ.

ಸಾಮಾಜಿಕ ಕಾರ್ಯಕರ್ತ ಸುರೇಂದ್ರ ಅನಗೋಳ್ಕರ್ ಬಡವರ ನೆರವಿಗೆ ನಿಂತಿದ್ದಾರೆ. ಒಂದು ಕರೆ ಮಾಡಿದರೆ ಆ್ಯಂಬುಲೆನ್ಸ್, ಆಟೋ ಮನೆಗೆ ಬರುತ್ತದೆ. ಅನಾಥ ಶವಗಳಿದ್ದರೆ ಅಥವಾ ಶವ ತೆಗೆದುಕೊಂಡು ಹೋಗಲು ಯಾವುದೇ ವಾಹನ ಇಲ್ಲದಿದ್ದರೆ ನೆರವಿಗೆ ದಾವಿಸುತ್ತಾರೆ. ಇಷ್ಟೇ ಅಲ್ಲಾ ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳ ಜೊತೆಗೆ ಬಂದ ಸಂಬಂಧಿಕರಿಗೆ ಉಚಿತ ಊಟವು ಸಿಗುತ್ತದೆ. ಈ ಮೂರು ಕೆಲಸವನ್ನ ಸುರೇಂದ್ರ ಅನಗೋಳ್ಕರ್ ಒಬ್ಬರೇ ಮಾಡುತ್ತಿದ್ದಾರೆ ಎನ್ನುವುದು ವಿಶೇಷ.

ಬೆಳಗಾವಿ ನಗರದ ವಿಜಯನಗರದ ನಿವಾಸಿಯಾದ ಸುರೇಂದ್ರ ಅನಗೋಳ್ಕರ್ ಅವರಿಗೆ ಮದುವೆಯಾಗಿದ್ದು, ಒಂದು ಗಂಡು ಒಂದು ಹೆಣ್ಣು ಮಗಳಿದ್ದಾರೆ. ಈ ವ್ಯಕ್ತಿ ತಮ್ಮದೆ ಆದ ಹೆಲ್ಪ್ ಫಾರ್ ನೀಡಿ ಎನ್ನುವ ಸಂಸ್ಥೆ ಮಾಡಿಕೊಂಡಿದ್ದು, ಅದಕ್ಕೆ ಕರೆ ಮಾಡಿದರೆ ಸಾಕು ನೆರವಿಗೆ ನಿಲ್ಲುತ್ತಾರೆ. ಇಲೆಕ್ಟ್ರಾನಿಕ್ ಸೆಕ್ಯೂರಿಟಿ ಬಿಜಿನೆಸ್ ಮಾಡ್ತಿರುವ ಇವರು ಮುಂಬೈ, ಗೋವಾ ಮತ್ತು ಬೆಳಗಾವಿಯ ಪ್ರತಿಷ್ಠಿತ ಹೋಟೆಲ್​ಗಳಲ್ಲಿ ಸಿಸಿಟಿವಿ ಕೂಡಿಸಿದ್ದು, ಅದರ ಮೆಂಟೆನೆನ್ಸ್ ಮಾಡುವ ಉದ್ಯಮ ಇವರದ್ದಾಗಿದೆ.

ಹೊಸದಾಗಿ ಸಿಸಿಟಿವಿ ಕೂರಿಸಿದ್ದರಿಂದ ಬಂದ ಹಣವನ್ನ ಕುಟುಂಬ ನಿರ್ವಹಣೆಗೆ ಬಳಸುತ್ತಿದ್ದಾರೆ. ಹೋಟೆಲ್​ಗಳಲ್ಲಿ ಕೂರಿಸಿದ್ದ ಸಿಸಿಟಿವಿ ಮೆಂಟೆನೇನ್ಸ್​​​ಗೆ ಎಂದು ಬರುವ ಹಣವನ್ನ ಬಡವರ್ಗದವರಿಗೆ ಮೀಸಲಿಟ್ಟಿದ್ದಾರೆ. ಮುಖ್ಯವಾಗಿ ಕೊವಿಡ್ ಸಂದರ್ಭದಲ್ಲಿ ತಮ್ಮ ಕೈಲಾದ ಸಹಾಯ ಮಾಡುವುದರ ಮೂಲಕ ಸಮಾಜದ ನೆರವಿಗೆ ನಿಂತಿದ್ದಾರೆ ಎಂದು ಸಹಾಯ ಪಡೆದುಕೊಂಡ ಸರ್ಪರಾಜ್ ಹೇಳಿದ್ದಾರೆ.

ಲಾಕ್​ಡೌನ್ ಆಗಿರುವ ಈ ಕಾಲಘಟ್ಟದಲ್ಲಿ ಮನೆಯಿಂದ ಆಸ್ಪತ್ರೆಗೆ ಹೋಗಲು ಆಗದವರಿಗೆ ಆಟೋ ಮೂಲಕ ಉಚಿತವಾಗಿ ಆಸ್ಪತ್ರೆ ಸೇರಿಸುವ ಕೆಲಸ ಮಾಡುತ್ತಿದ್ದಾರೆ. ಇದಕ್ಕಾಗಿ ಆರು ಆಟೋಗಳನ್ನ ಮೀಸಲಿಟ್ಟಿದ್ದು, ಇದರಲ್ಲಿ ಒಂದು ಆಟೋ ಆ್ಯಂಬುಲೆನ್ಸ್ ಮಾದರಿಯಲ್ಲಿ ಮಾಡಿದ್ದಾರೆ. ಇದರಲ್ಲಿ ಆಕ್ಸಿಜನ್ ಸೇರಿದಂತೆ ಆ್ಯಂಬುಲೆನ್ಸ್​ನಲ್ಲಿ ಎನೆಲ್ಲಾ ಸೌಲಭ್ಯ ಇರುತ್ತದೆ ಅದೆಲ್ಲಾ ಸೌಲಭ್ಯ ಒಂದು ಆಟೋದಲ್ಲಿದೆ.

ಹೆಲ್ಪ್ ಫಾರ್ ನೀಡಿ ಎಂಬ ವೆಬ್ ಸೈಟ್ ಮಾಡಿಕೊಂಡಿದ್ದು, ನಗರದ ಕೆಲವು ಕಡೆಗಳಲ್ಲಿ ಸುರೇಂದ್ರ ತಮ್ಮ ನಂಬರ್ ಕೂಡ ಹಚ್ಚಿದ್ದಾರೆ. ಇದನ್ನ ನೋಡಿಕೊಂಡು ತುರ್ತು ಸೇವೆ ಬೇಕೆಂದವರು ಕರೆ ಮಾಡಿದರೆ ಅವರು ಕರೆ ಮಾಡಿದ ಹದಿನೈದು ನಿಮಿಷದ ಒಳಗಾಗಿ ಒಂದು ಆಟೋ ಆ ಸ್ಥಳ ತಲುಪಿರುತ್ತದೆ. ಬೆಳಗಾವಿ ರೈಲು ನಿಲ್ದಾಣದ ಮುಂಭಾಗದಲ್ಲೇ ಈ ಆಟೋಗಳು ನಿಲ್ಲುತ್ತವೆ.

ರೈಲಿನಲ್ಲಿ ಬರುವ ರೋಗಿಗಳಿಗೆ, ಗರ್ಭಿಣಿಯರಿಗೆ ಉಚಿತವಾಗಿ ಸೇವೆ ನೀಡುತ್ತಿದ್ದಾರೆ. ಇದರ ಜೊತೆಗೆ ನಗರದಲ್ಲಿ ಯಾವುದೇ ಕಾಲೋನಿಯಿಂದ ಯಾರಾದರೂ ತುರ್ತಾಗಿ ಆಸ್ಪತ್ರೆಗೆ ಹೋಗಬೇಕು ಎಂದು ಕರೆ ಮಾಡಿದರೆ ಅಲ್ಲಿಗೂ ಇವರು ಹೋಗಿ ಅವರನ್ನ ಸುರಕ್ಷಿತವಾಗಿ ಆಸ್ಪತ್ರೆ ಸೇರಿಸುತ್ತಾರೆ. ಈ ಆಟೋಗಳು ಸುರೇಂದ್ರ ಅವರ ಸ್ವಂತದ್ದಲ್ಲ ಈ ಆಟೋ ಡ್ರೈವರ್​ಗಳಿಗೆ ಸುರೇಂದ್ರ ಕಷ್ಟ ಕಾಲದಲ್ಲಿ ಸಹಾಯ ಮಾಡಿದ್ದಕ್ಕೆ ಇಂದು ಸುರೇಂದ್ರ ಅವರ ಕೆಲಸಕ್ಕೆ ಇವರೆಲ್ಲಾ ಕೈ ಜೋಡಿಸಿದ್ದಾರೆ. ಈ ಆಟೋ ಡ್ರೈವರ್​ಗಳಿಗೆ ಪೆಟ್ರೋಲ್ ಖರ್ಚನ್ನು ಮಾತ್ರ ಸುರೇಂದ್ರ ನೀಡುತ್ತಿದ್ದಾರೆ.

ಎರಡು ಶವ ಸಾಗಿಸುವ ಆ್ಯಂಬುಲೆನ್ಸ್ ಇಟ್ಟುಕೊಂಡಿದ್ದು, ಇದೀಗ ಕೊವಿಡ್ ಸಂದರ್ಭದಲ್ಲಿ ನಿತ್ಯವೂ ಐದರಿಂದ ಆರೇಳು ಶವಗಳನ್ನ ಸಾಗಿಸ್ತಿದ್ದಾರೆ. ಇನ್ನೂ ಬರೀ ಉಚಿತ ಆಟೋ ಮತ್ತು ಆ್ಯಂಬುಲೆನ್ಸ್ ಸೇವೆ ಅಷ್ಟೇ ಮಾಡದ ಇವರು ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ನಿತ್ಯವೂ ಒಂದೊತ್ತಿನ ಊಟವನ್ನ ಕೂಡ ನೀಡುತ್ತಿದ್ದಾರೆ. ಆಸ್ಪತ್ರೆಯಲ್ಲಿ ರೋಗಿಗಳಿಗೆ ಮಾತ್ರ ಊಟ ನೀಡಲಾಗುತ್ತದೆ. ಆದರೆ ದೂರದ ಊರುಗಳಿಂದ ಬಂದ ಸಂಬಂಧಿಕರು ಊಟಕ್ಕಾಗಿ ಪರದಾಡುತ್ತಾರೆ. ಕೆಲವರು ಹಣವಿಲ್ಲದೆ ಉಪವಾಸ ಮಲಗುತ್ತಾರೆ. ಇದನ್ನ ನೋಡಿದ ಸುರೇಂದ್ರ ನಿತ್ಯ 200 ಜನರಿಗೆ ಅನ್ನ ಸಾಂಬಾರ್ ನೀಡಿ ಮಾನವೀಯತೆ ಮೆರೆಯುತ್ತಿದ್ದಾರೆ. ಸದ್ಯ ಕುಂದಾನಗರಿಯಲ್ಲಿ ಸುರೇಂದ್ರ ಅನಗೋಳ್ಕರ್ ಕೊರೊನಾ ಆಪತ್ಭಾಂಧವರಾಗಿದ್ದು, ಇವರ ಈ ಸಾಮಾಜಿಕ ಕೆಲಸಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ:

100 ಕೋಟಿ ಸಿನಿಮಾದಲ್ಲಿ ನಟಿಸುವುದಕ್ಕಿಂತ ಸಹಾಯ ಮಾಡುವುದರಲ್ಲಿ ಖುಷಿ ಸಿಗುತ್ತೆ : ನಟ ಸೋನು ಸೂದ್

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada