ಕಂದಾಯ ಇಲಾಖೆಯ ಕೆಳ ಹಂತದಲ್ಲಿ ಭ್ರಷ್ಟಾಚಾರ ಇದೆ: ಸದನದಲ್ಲೇ ಒಪ್ಪಿಕೊಂಡ ಸಚಿವ ಕೃಷ್ಣಬೈರೇಗೌಡ

|

Updated on: Dec 19, 2024 | 7:55 AM

ಕಂದಾಯ ಇಲಾಖೆಯಲ್ಲಿ ಭ್ರಷ್ಟಾಚಾರ ಇರುವುದು ನಿಜ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಅವರೇ ಒಪ್ಪಿಕೊಂಡಿದ್ದಾರೆ. ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ವಿಧಾನಮಂಡಲ ಅಧಿವೇಶನದಲ್ಲಿ ಮಾತನಾಡಿದ ಅವರು ಭ್ರಷ್ಟಾಚಾರ, ಪೋಡಿ ಪರಿಷ್ಕರಣೆ, ಇ-ಖಾತಾ ವಿತರಣೆ ಸಮಸ್ಯೆಗಳ ಬಗ್ಗೆ ಹಾಗೂ ಭ್ರಷ್ಟಾಚಾರ ತಡೆಗೆ ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ವಿವರಗಳು ಇಲ್ಲಿವೆ.

ಕಂದಾಯ ಇಲಾಖೆಯ ಕೆಳ ಹಂತದಲ್ಲಿ ಭ್ರಷ್ಟಾಚಾರ ಇದೆ: ಸದನದಲ್ಲೇ ಒಪ್ಪಿಕೊಂಡ ಸಚಿವ ಕೃಷ್ಣಬೈರೇಗೌಡ
ಕೃಷ್ಣಬೈರೇಗೌಡ
Follow us on

ಬೆಳಗಾವಿ, ಡಿಸೆಂಬರ್ 19: ಕಂದಾಯ ಮತ್ತು ಭೂಮಾಪನ ಇಲಾಖೆಯಲ್ಲಿ ಕೆಳ ಹಂತದಲ್ಲಿ ಭ್ರಷ್ಟಾಚಾರ ನಡೆಯುಯತ್ತಿರುವುದು ನಿಜ ಎಂದು ಖುದ್ದು ಕಂದಾಯ ಸಚಿವ ಕೃಷ್ಣಬೈರೇಗೌಡ ಅವರೇ ಒಪ್ಪಿಕೊಂಡಿದ್ದಾರೆ. ವಿಧಾನಪರಿಷತ್‌ನಲ್ಲಿ ಬುಧವಾರ ಮಾತನಾಡಿದ ಅವರು, ಕೆಳಮಟ್ಟದಲ್ಲಿ ಭ್ರಷ್ಟಾಚಾರ ತಡೆಯುವುದು ಸುಲಭವಲ್ಲ. ಇದು ಹಿಂದೆಯೂ ಇತ್ತು ಮತ್ತು ಈಗಲೂ ಮುಂದುವರಿಯುತ್ತಿದೆ. ಆದರೆ ನಾವು ಅದನ್ನು ತಡೆಯಲು ಪ್ರಯತ್ನಿಸುತ್ತಿದ್ದೇವೆ ಎಂದರು.

ರೈತರ ಪೋಡಿ ಪರಿಷ್ಕರಣೆ ವಿಳಂಬದ ಕುರಿತು ಕಾಂಗ್ರೆಸ್‌ ಎಂಎಲ್‌ಸಿ ರಾಮೋಜಿಗೌಡ ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರಿಸುವ ಸಂದರ್ಭದಲ್ಲಿ ಸಚಿವರು ಭ್ರಷ್ಟಾಚಾರ ತಡೆಯುವ ಬಗ್ಗೆ ಅಸಹಾಯಕತೆ ವ್ಯಕ್ತಪಡಿಸಿದರು.

ಇ-ಖಾತಾ ಅಳವಡಿಕೆ ಕುರಿತು ಬಿಜೆಪಿ ಎಂಎಲ್ಸಿ ಶಶಿಲ್ ನಮೋಶಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕೃಷ್ಣಬೈರೇಗೌಡ, ನಾನು ಅಕ್ರಮಗಳನ್ನು ತಡೆಯಲು ಬಂದಿದ್ದೇನೆಯೇ ಹೊರತು ಭ್ರಷ್ಟಾಚಾರವನ್ನು ಬೆಂಬಲಿಸಲು ಅಲ್ಲ. ನಕಲಿ ದಾಖಲೆಗಳನ್ನು ತಯಾರಿಸಿ ನೋಂದಣಿಗೆ 40 ರಿಂದ 50 ಸಾವಿರ ರೂ. ವಿಧಿಸುವುದನ್ನು ಬೆಂಬಲಿಸಬೇಕೆಂದು ನೀವು ಬಯಸುತ್ತೀರಾ ಎಂದು ಮರು ಪ್ರಶ್ನೆ ಮಾಡಿದ್ದಾರೆ.

ಇ-ಖಾತಾವನ್ನು ವಿರೋಧಿಸುವ ಸದನದ ಸದಸ್ಯರು ಸರ್ಕಾರವು ಅಕ್ರಮವಾಗಿ ಆದಾಯವನ್ನು ಗಳಿಸಬೇಕೆಂದು ಬಯಸುತ್ತಾರೆಯೇ ಎಂದು ಸಚಿವರು ಪ್ರಶ್ನಿಸಿದ್ದಾರೆ. ಇ-ಖಾತಾ ಜಾರಿಗೆ ಬಂದಾಗ ಆರಂಭದಲ್ಲಿ ಅನಾನುಕೂಲತೆಗಳಿದ್ದವು ಎಂಬ ಅಂಶವನ್ನು ಒಪ್ಪಿಕೊಂಡ ಕೃಷ್ಣಬೈರೇಗೌಡ, ಶೇ 90ರಷ್ಟು ಸಮಸ್ಯೆ ಬಗೆಹರಿದಿದೆ ಎಂದು ಸದನಕ್ಕೆ ತಿಳಿಸಿದ್ದಾರೆ.

ಬಿಬಿಎಂಪಿಯಿಂದ ಪ್ರತಿದಿನ 3000 ಇ-ಖಾತಾ ವಿತರಣೆ

ನಾವು ಆರಂಭದಲ್ಲಿ ಹೆಣಗಾಡಿದ್ದೇವೆ. ಆಗ ಸ್ವೀಕರಿಸಿದ 15,000 ಅರ್ಜಿಗಳಲ್ಲಿ ಕೇವಲ 300 ಅರ್ಜಿಗಳನ್ನು ಮಾತ್ರ ವಿಲೇವಾರಿ ಮಾಡಲು ನಮಗೆ ಸಾಧ್ಯವಾಯಿತು. ಆದರೆ ಈಗ ಎಲ್ಲವೂ ಸಹಜ ಸ್ಥಿತಿಗೆ ಬಂದಿದ್ದು, ಬಿಬಿಎಂಪಿ ಇದುವರೆಗೆ 54,000 ಇ-ಖಾತಾಗಳನ್ನು ನೀಡಿದೆ. ಪ್ರತಿದಿನ ಸುಮಾರು 3,000 ಇ-ಖಾತಾಗಳನ್ನು ನೀಡುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಮುಗಿಯದ ಇ-ಖಾತಾ ಸಂಕಷ್ಟ, ಸರ್ವರ್​ ಸಮಸ್ಯೆ, ಅಧಿಕಾರಿಗಳ ನಡೆಯಿಂದ ಜನ ಕಂಗಾಲು

ಪುರಸಭೆ ಆಡಳಿತ ಮಟ್ಟದಲ್ಲಿ ಭ್ರಷ್ಟಾಚಾರ ತಡೆಯಲು ಇ-ಖಾತಾ ಸಹಕಾರಿಯಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ