ಪಂಚಮಸಾಲಿ 2ಎ ಮೀಸಲಾತಿ ಹೋರಾಟ: ಲಾಠಿ ಚಾರ್ಜ್ ನ್ಯಾಯಾಂಗ ತನಿಖೆಗೆ ಬಿಜೆಪಿ ಪಟ್ಟು, ನಿಲುವು ಬದಲಿಸದ ಸರ್ಕಾರ
ಪಂಚಮಸಾಲಿ 2A ಮೀಸಲಾತಿ ಕಿಚ್ಚು ಬೆಳಗಾವಿ ಅಧಿವೇಶನವನ್ನೂ ಬಿಟ್ಟಿಲ್ಲ. ಒಂದೆಡೆ ರಾಜ್ಯ ಸರ್ಕಾರದ ವಿರುದ್ಧ ರೋಷಾವೇಶ, ಪೊಲೀಸರ ವಿರುದ್ಧ ಆಕ್ರೋಶ ಹಾಗೂ ಜಿಲ್ಲೆ ಜಿಲ್ಲೆಯಲ್ಲೂ ಪ್ರತಿಭಟನೆ ನಡೆದಿದ್ದರೆ ಮತ್ತೊಂದೆಡೆ, ಬಿಜೆಪಿ ನಾಯಕರು ಉಭಯ ಸದನಗಳಲ್ಲಿ ವಿಷಯ ತಂದು ಸರ್ಕಾರದ ಮೇಲೆ ಮುಗಿಬಿದ್ದಿದ್ದಾರೆ.
ಬೆಳಗಾವಿ, ಡಿಸೆಂಬರ್ 13: ಪಂಚಮಸಾಲಿ 2ಎ ಮೀಸಲಾತಿ ಹೋರಾಟಗಾರರ ಮೇಲೆ ನಡೆದ ಲಾಠಿಚಾರ್ಜ್ ವಿಚಾರವಾಗಿ ಚರ್ಚೆ ನಡೆಸುವಂತೆ ವಿಧಾನಸಭೆಯಲ್ಲಿ ಬಿಜೆಪಿ ನಾಯಕರು ಗುರುವಾರ ಪಟ್ಟು ಹಿಡಿದರು. ವಿಧಾನಪರಿಷತ್‌ನಲ್ಲೂ ಇದೇ ರೀತಿ ನಡೆಯಿತು. ಇದೇ ವೇಳೆ ಮಾತನಾಡಿದ ಗೃಹ ಸಚಿವ ಪರಮೇಶ್ವರ್, ಲಾಠಿಚಾರ್ಜ್ ಮಾಡಿದ್ದನ್ನು ಸರ್ಮಥಿಸಿಕೊಂಡರು. ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಬಂದವರನ್ನು ಬಿಟ್ಟು ಬಿಡಬೇಕಿತ್ತಾ ಎಂದು ಪ್ರಶ್ನಿಸಿದರು.
ಗೃಹ ಸಚಿವರ ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಹೋರಾಟ ಮಾಡುವುದು ತಪ್ಪಲ್ಲ. ಹಿಂದೆ ಮುರುಗೇಶ್ ನಿರಾಣಿಯವರನ್ನ ಸಂಪುಟಕ್ಕೆ ಸೇರಿಸಿಕೊಂಡಿರಲಿಲ್ಲ. ಹೀಗಾಗಿ ಮೀಸಲಾತಿ ಹೆಸರಲ್ಲಿ ಹೋರಾಟ ಶುರು ಮಾಡಿದ್ದರು ಎಂದರು. ಇದು ಬಿಜೆಪಿ ಸದಸ್ಯರನ್ನು ಕೆರಳಿಸಿತು.
ವಿಧಾನಸಭೆಯಲ್ಲೂ ಪಂಚಮಸಾಲಿ ಹೋರಾಟದ ವಿಚಾರವಾಗಿ ಮಾತನಾಡಿದ ಶಾಸಕ ವಿಜಯಾನಂದ್ ಕಾಶಪ್ಪನವರ್, ಇದು ಬಿಜೆಪಿ ಪ್ರಾಯೋಜಿತ ಹೋರಾಟ, ಗಲಾಟೆಯಲ್ಲಿ ಕಲ್ಲು ತೂರಿದವರು ಆರ್ಎಸ್ಎಸ್ನವರು ಎಂದು ಆರೋಪಿಸಿದರು. ಆಗ ದೊಡ್ಡ ಜಟಾಪಟಿಯೇ ನಡೆಯಿತು.
ಸಿದ್ದರಾಮಯ್ಯಗೆ ಹಿಂದೂಗಳ ಮೇಲೆ ದ್ವೇಷವೇಕೆ: ಯತ್ನಾಳ್ ಪ್ರಶ್ನೆ
ಪಂಚಮಸಾಲಿ ಮೀಸಲಾತಿ ಒತ್ತಾಯ ಸಂವಿಧಾನ ವಿರೋಧಿ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಯನ್ನು ವಿಧಾನಸಭೆಯಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರಸ್ತಾಪಿಸಿದರು. ಸಿಎಂಗೆ ಹಿಂದೂಗಳು ಎಂದರೆ ದ್ವೇಷವೇಕೆ ಎಂದು ಪ್ರಶ್ನಿಸಿದರು. ಇದರಿಂದ ಸಿಟ್ಟಿಗೆದ್ದ ಸಚಿವ ಸಂತೋಷ್ ಲಾಡ್ ವಾಕ್ಸಮರ ಆರಂಭಿಸಿದರು.
ಏತನ್ಮಧ್ಯೆ, ಮೀಸಲಾತಿ ಬಗ್ಗೆ ಚರ್ಚಿಸಲು ಜಯಮೃತ್ಯುಂಜಯ ಸ್ವಾಮೀಜಿಗೆ ಸಿಎಂ ಸಿದ್ದರಾಮಯ್ಯ ಸಮಯ ನೀಡಿದರು. ತಮ್ಮ ಜೊತೆ 10 ಜನ ಕರೆದುಕೊಂಡು ಬರುವುದಕ್ಕೆ ಸಿಎಂ ಹೇಳಿದ್ದಾರೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸುವರ್ಣಸೌಧದಲ್ಲಿ ಹೇಳಿದರು. ಇದೇ ವಿಚಾರವನ್ನ ಶಾಸಕ ವಿಜಯಾನಂದ ಕಾಶಪ್ಪನವರ್ ಕೂಡಾ ವಿಧಾನಸಭೆಯಲ್ಲಿ ಹೇಳಿದರು. ಆದರೆ, ಸಿಎಂ ಮಾತುಕತೆಗೆ ಕರೆದಿದ್ದಾರೆ ಎಂದು ಸಚಿವರು ಹೇಳಿಲ್ಲ, ಬೇಕಿದ್ದರೆ ಆಣೆ ಮಾಡುತ್ತೇನೆ ಎಂದು ಸಿ.ಸಿ.ಪಾಟೀಲ್ ಸ್ಪಷ್ಟಪಡಿಸಿದರು.
ಗೃಹ ಸಚಿವ ವಿರುದ್ಧ ಜಯಮೃತ್ಯುಂಜಯ ಶ್ರೀ ಆಕ್ರೋಶ
ಒಂದೆಡೆ ಸರ್ಕಾರ ಲಾಠಿಚಾರ್ಜ್ ಬಗ್ಗೆ ಸದನದಲ್ಲಿ ಸಮರ್ಥನೆಗೆ ಇಳಿದರೆ ಮತ್ತೊಂದೆಡೆ, ಜಯಮೃತ್ಯುಂಜಯ ಸ್ವಾಮೀಜಿ ಗೃಹಸಚಿವರ ವಿರುದ್ಧ ಆಕ್ರೋಶ ಹೊರಹಾಕಿದರು. ನೀವು ಲಾಠಿ ಏಟುಕೊಟ್ಟರೆ, ನಾವು ವೋಟಿನ ಏಟು ಕೊಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ: ಕಲ್ಲು ತೂರಿದವರು ನಮ್ಮ ಸಮಾಜದವರಲ್ಲ, ಬಿಜೆಪಿ, ಆರ್ಎಸ್ಎಸ್ನವರು: ಕಾಶಪ್ಪನವರ್ ಹೊಸ ಬಾಂಬ್
ಇನ್ನು, ಹುಬ್ಬಳ್ಳಿ, ಗದಗ, ಕಲಬುರಗಿ, ಹಾವೇರಿ, ಬಾಗಲಕೋಟೆ ಸೇರಿದಂತೆ ಹಲವೆಡೆ ಲಾಠಿಚಾರ್ಜ್ ಖಂಡಿಸಿ ಪ್ರತಿಭಟನೆ ನಡೆಯಿತು. ಸರ್ಕಾರದ ವಿರುದ್ಧ ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ