Belagavi News: ಖಾಸಗಿ ವಿಡಿಯೋ ತೋರಿಸಿ ಕಿರುಕುಳ ಪ್ರಕರಣ, ಕಾಂಗ್ರೆಸ್ ಯುವ ನಾಯಕಿ ನವ್ಯಶ್ರೀ ವಿರುದ್ಧ ದೂರು
ಚನ್ನಪಟ್ಟಣ ಮೂಲದ ನವ್ಯಶ್ರೀ ರಾಮಚಂದ್ರರಾವ್ ವಿರುದ್ದ ಬೆಳಗಾವಿಯ ಎಪಿಎಂಸಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ತೋಟಗಾರಿಕೆ ಇಲಾಖೆ ಅಧಿಕಾರಿ ರಾಜಕುಮಾರ ಟಾಕಳೆ ದೂರು ನೀಡಿದ್ದಾರೆ.
ಬೆಳಗಾವಿ: ಕಾಂಗ್ರೆಸ್ ಯುವ ನಾಯಕಿ ಚನ್ನಪಟ್ಟಣ ಮೂಲದ ನವ್ಯಶ್ರೀ ರಾಮಚಂದ್ರರಾವ್ ವಿರುದ್ದ ಬೆಳಗಾವಿಯ ಎಪಿಎಂಸಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ತೋಟಗಾರಿಕೆ ಇಲಾಖೆ ಅಧಿಕಾರಿ ರಾಜಕುಮಾರ ಟಾಕಳೆಯಿಂದ ದೂರು ನೀಡಿದ್ದಾರೆ. ನವ್ಯಶ್ರೀ ಮತ್ತು ಆಕೆಯ ಆಪ್ತ ತಿಲಕ್ ಇಬ್ಬರ ಮೇಲೆ ಸೆಕ್ಷನ್ 384, 448, 504, 506, 34ಅಡಿಯಲ್ಲಿ ಕೇಸ್ ದಾಖಲು ಮಾಡಲಾಗಿದೆ. 384 – ಸುಲಿಗೆ, 448 – ಮನೆಗೆ ಅತಿಕ್ರಮ ಪ್ರವೇಶ, 504 – ಶಾಂತಿಭಂಗಗೊಳಿಸುವ ಉದ್ದೇಶದ ನಿಂದನೆ, 506 – ಬೆದರಿಕೆ, 34 – ಕ್ರಿಮಿನಲ್ ಉದ್ದೇಶ, ಸಕ್ಷೆನ್ ಅಡಿಯಲ್ಲಿ ಕೇಸ್ ದಾಖಲಾಗಿದೆ. ತನ್ನಗೆ ತನ್ನ ಕುಟುಂಬಕ್ಕೆ ನವ್ಯಶ್ರೀಯಿಂದ ರಕ್ಷಣೆ ನೀಡುವಂತೆ ಪೊಲೀಸರಲ್ಲಿ ಮನವಿ ಮಾಡಿದ್ದು, ಬೆಳಗಾವಿಯ ಎಪಿಎಂಸಿ ಠಾಣೆಯಲ್ಲಿ ತಡರಾತ್ರಿ ದೂರು ದಾಖಲಾಗಿದೆ.
ಈ ಹಿಂದೆ ಬೆಳಗಾವಿಗೆ ಆಗಮಿಸಿದ್ದ ನವ್ಯಶ್ರೀ, ಆಗ ಸಚಿವರ ಪಿಎಸ್ ಆಗಿದ್ದ ರಾಜಕುಮಾರ್ ಅವರ ಪರಿಚಯ ಮಾಡಿಕೊಂಡಿದ್ದರು. ಪರಿಚಯದಿಂದ ಇಬ್ಬರ ನಡುವೆ ಸ್ನೇಹವಾಗಿತ್ತು. ನನಗೆ ಮದುವೆಯಾಗಿ ಮಕ್ಕಳು ಇರುವುದು ಆಕೆಗೆ ಗೊತ್ತಿದ್ದರು ಪ್ರೀತಿ, ಪ್ರೇಮವೆನ್ನುತ್ತಿದ್ದಳು. ನಮ್ಮಿಬ್ಬರ ಮಧ್ಯೆ ದೈಹಿಕ ಸಂಪರ್ಕವೂ ಆಗಿದೆ. ಇದ್ದಕ್ಕಿದಂತೆ ಖಾಸಗಿ ಕ್ಷಣದ ವಿಡಿಯೋ ಚಿತ್ರೀಕರಿಸಿಕೊಂಡು ನವ್ಯಶ್ರೀ ಮತ್ತು ಆಕೆಯ ಆಪ್ತ ತಿಲಕ್ ಇಬ್ಬರೂ ಸೇರಿ ನನಗೆ ಬೆದರಿಕೆ ಹಾಕುವುದರೊಂದಿಗೆ ಹಣಕ್ಕಾಗಿ ಡಿಮ್ಯಾಂಡ್ ಮಾಡಿದರು. 50 ಲಕ್ಷ ರೂ. ಕೊಡು ಇಲ್ಲವೆಂದಾದರೇ ಖಾಸಗಿ ವಿಡಿಯೋವನ್ನು ನಿನ್ನ ಹೆಂಡತಿಗೆ ಕಳುಹಿಸುತ್ತೇವೆ ಎಂದು ಬೆದರಿಕೆ ಹಾಕಿದ್ದರು. ಇಬ್ಬರೂ ಮಾನಸಿಕ ಹಿಂಸೆ ನೀಡಿದ್ದಾರೆ. ಸುಳ್ಳು ಕೇಸ್ ದಾಖಲಿಸಿ ಜೈಲಿಗೆ ಕಳುಹಿಸುವುದಾಗಿ ಹೇಳುತ್ತಿದ್ದರು ಎಂದು ಸಂತ್ರಸ್ತ ದೂರಿನಲ್ಲಿ ಹೇಳಿದ್ದಾರೆ.
ರಾಜಕುಮಾರ್ ಟಾಕಳೆ ನನ್ನ ಗಂಡ: ನವ್ಯಶ್ರೀ
ಸಾಮಾಜಿಕ ಜಾಲತಾಣಗಳಲ್ಲಿ ನನ್ನ ಖಾಸಗಿ ವಿಡಿಯೋ ಹಾಕಿದ್ದಾರೆ. ಈ ಬಗ್ಗೆ ಬೆಳಗಾವಿ ಪೊಲೀಸ್ ಆಯುಕ್ತರಿಗೆ ದೂರು ಕೊಡುತ್ತೇನೆ ಎಂದು ಬೆಳಗಾವಿಯಲ್ಲಿ ಯುವ ಕಾಂಗ್ರೆಸ್ ನಾಯಕಿ ನವ್ಯಶ್ರೀ ಹೇಳಿಕೆ ನೀಡಿದರು. ಕಳೆದ 15 ದಿನಗಳಿಂದ ನಾನು ಭಾರತದಲ್ಲಿ ಇರಲಿಲ್ಲ. ರಾಜಕುಮಾರ್ ಟಾಕಳೆ ನನ್ನ ಗಂಡ. ರಾಜಕುಮಾರ್ ಟಾಕಳೆರನ್ನ ನಾನು ಮದುವೆಯಾಗಿದ್ದೇನೆ. ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಎಲ್ಲಾ ದಾಖಲೆಗಳನ್ನ ಕೊಡ್ತೀನಿ. ಇಡೀ ರಾಜ್ಯದಲ್ಲಿ ನನ್ನ ಬಗ್ಗೆ ಯಾವುದೇ ದೂರು ಇಲ್ಲ. ರಾಜಕಾರಣದಲ್ಲಿ ಮುಂದೆ ಬರ್ತಿನಿ ಎಂದು ಈ ರೀತಿ ಮಾಡಿದ್ದಾರೆ ಎಂದು ನಗರದಲ್ಲಿ ಯುವ ಕಾಂಗ್ರೆಸ್ ನಾಯಕಿ ನವ್ಯಶ್ರೀ ಹೇಳಿದರು.
ಕಾಂಗ್ರೆಸ್ ಯುವ ಕಾರ್ಯಕರ್ತೆ ಬೆಳಗಾವಿಯಲ್ಲಿ ಪ್ರತ್ಯಕ್ಷ:
ಕಾಂಗ್ರೆಸ್ ಯುವ ಕಾರ್ಯಕರ್ತೆ ನವ್ಯಶ್ರೀ ಬೆಳಗಾವಿಯಲ್ಲಿ ಪ್ರತ್ಯಕ್ಷವಾಗಿದ್ದು, ನಿನ್ನೆಯಷ್ಟೇ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ನವ್ಯಶ್ರೀ ವಿರುದ್ಧ ಕೇಸ್ ದಾಖಲಾಗಿತ್ತು. ತೋಟಗಾರಿಕೆ ಇಲಾಖೆ ಅಧಿಕಾರಿ ರಾಜಕುಮಾರ ದೂರು ನೀಡಿದ್ದರು. ಇದೀಗ ರಾಜಕುಮಾರ ವಿರುದ್ಧ ದೂರು ದಾಖಲಿಸಲು ಬೆಳಗಾವಿಗೆ ನವ್ಯಶ್ರೀ ಆಗಮಿಸಿದ್ದಾರೆ. ನವ್ಯಶ್ರೀ ವಿಚಾರ ಗೊತ್ತಾಗುತ್ತಿದ್ದಂತೆ ಹೊಟೆಲ್ ಸಿಬ್ಬಂದಿ ಅವರನ್ನು ಖಾಲಿ ಮಾಡಿಸಿದರು.
Published On - 11:39 am, Tue, 19 July 22