ಬೆಳಗಾವಿಯಲ್ಲಿ ಮತ್ತೋರ್ವ ಬಾಣಂತಿ ಸಾವು: ತರಾತುರಿಯಲ್ಲಿ ಮೃತದೇಹ ಕೊಟ್ಟು ಕಳಿಸಿದ ವೈದ್ಯರು
ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಲ್ಲಿ ಹೆರಿಗೆಯಾದ ಬಳಿಕ 25 ವರ್ಷದ ಪೂಜಾ ಖಡಕಬಾವಿ ಎಂಬ ಬಾಣಂತಿ ಮೃತಪಟ್ಟಿದ್ದಾರೆ. ಆಸ್ಪತ್ರೆಯ ವೈದ್ಯರು ಹೃದಯ ಸಂಬಂಧಿ ಸಮಸ್ಯೆಯಿಂದ ಸಾವು ಸಂಭವಿಸಿದೆ ಎಂದು ಹೇಳಿದ್ದಾರೆ. ಆದರೆ, ಪೋಸ್ಟ್‌ಮಾರ್ಟಂ ಮಾಡದೆ ಶವವನ್ನು ಕುಟುಂಬಕ್ಕೆ ಹಸ್ತಾಂತರಿಸಿದ್ದು ಅನುಮಾನಕ್ಕೆ ಕಾರಣವಾಗಿದೆ. ಈ ಘಟನೆಯಿಂದ ಕುಟುಂಬಸ್ಥರಿಗೆ ಆಘಾತ ಎದುರಾಗಿದೆ.
ಬೆಳಗಾವಿ, ಡಿಸೆಂಬರ್ 26: ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲಿ ಬಾಣಂತಿಯರ ಸಾವು (Death) ಮುಂದುವರೆದಿದೆ. ಇತ್ತೀಚೆಗೆ ವೈದ್ಯರ ನಿರ್ಲಕ್ಷ್ಯಕ್ಕೆ ಬಾಣಂತಿ ಸಾವು ಪ್ರಕರಣ ಬೆಳಕಿಗೆ ಬಂದಿತ್ತು. ಇದೀಗ ಮತ್ತೋರ್ವ ಬಾಣಂತಿ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಜಿಲ್ಲೆಯ ಗೋಕಾಕ್ ತಾಲೂಕಿನ ಕುಂದರಗಿ ಗ್ರಾಮದ ಪೂಜಾ ಅಡಿವೆಪ್ಪ ಖಡಕಬಾವಿ(25) ಮೃತ ಬಾಣಂತಿ. ಮಗಳ ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಡಿ.24ರಂದು ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ಪೂಜಾ ದಾಖಲಾಗಿದ್ದರು. ನಿನ್ನೆ ಮಧ್ಯಾಹ್ನ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಬಳಿಕ ಫಿಟ್ಸ್ ಬಂದು ಮೃತಪಟ್ಟಿರುವುದಾಗಿ ಪೂಜಾ ಸಂಬಂಧಿಕರಿಗೆ ಆಸ್ಪತ್ರೆ ವೈದ್ಯರು ಹೇಳಿದ್ದಾರೆ. ಬಳಿಕ ಪೋಸ್ಟ್ಮಾರ್ಟಮ್ ನಡೆಸದೇ ತರಾತುರಿಯಲ್ಲಿ ಬಾಣಂತಿ ಶವಕೊಟ್ಟು ವೈದ್ಯರು ಕಳಿಸಿದ್ದಾರೆ ಎನ್ನಲಾಗಿದೆ.
ಇದರಲ್ಲಿ ನಮ್ಮದು ಯಾವುದೇ ನಿರ್ಲಕ್ಷ್ಯ ಇಲ್ಲ: ವೈದ್ಯ ವಸಂತ್ ಕಬ್ಬೂರ
ಈ ಬಗ್ಗೆ ಬಿಮ್ಸ್ ಆಸ್ಪತ್ರೆಯ ಹೆರಿಗೆ ವೈದ್ಯ ವಸಂತ್ ಕಬ್ಬೂರ ಮಾಧ್ಯಮದವರೊಂದಿಗೆ ಮಾತನಾಡಿದ್ದು, ಡಿ.24ರಂದು ಪೂಜಾ ಎಂಬುವರು ಆಸ್ಪತ್ರೆಗೆ ದಾಖಲಾಗಿದ್ದರು. ಪೂಜಾಗೆ 3 ಮಕ್ಕಳಾಗಿದ್ವು, ಒಂದು ಆಪರೇಷನ್ ಆಗಿತ್ತು. ಬಿಮ್ಸ್ ಆಸ್ಪತ್ರೆಗೆ ಬಂದಾಗಲೇ ಪೂಜಾಗೆ ಪ್ರಜ್ಞೆ ಇರಲಿಲ್ಲ. ಕೂಡಲೇ ಅವರನ್ನು ನಾವು ಐಸಿಯುಗೆ ಶಿಫ್ಟ್ ಮಾಡಿದ್ದೆವು ಎಂದಿದ್ದಾರೆ.
ಇದನ್ನೂ ಓದಿ: ಬೆಳಗಾವಿ ಬಿಮ್ಸ್ನಲ್ಲಿ ಮತ್ತೊಬ್ಬ ಬಾಣಂತಿ ಸಾವು: ವೈದ್ಯರ ವಿರುದ್ಧ ಆಕ್ರೋಶ
ಪರೀಕ್ಷಿಸಿದ ಬಳಿಕ ಹೃದಯ ವೀಕ್ ಇದೆ ಎಂದು ಹೇಳಿದ್ವಿ. ಪೂಜಾಗೆ ಹೆರಿಗೆಯಾದ ಮೇಲೆ ಹೃದಯ ದೊಡ್ಡದಾಗಿತ್ತು. ಹೃದಯ ಪಂಪಿಂಗ್ ಆಗದೇ ಇಂದು ಪೂಜಾ ಮೃತಪಟ್ಟಿದ್ದಾರೆ. ಮಗು 1.6 ಕೆಜಿ ಇದೆ, ಅದಕ್ಕೂ ಐಸಿಯುನಲ್ಲಿ ಚಿಕಿತ್ಸೆ ಕೊಡುತ್ತಿದ್ದೇವೆ. ಇದರಲ್ಲಿ ನಮ್ಮದು ಯಾವುದೇ ನಿರ್ಲಕ್ಷ್ಯ ಇಲ್ಲ ಎಂದು ಹೇಳಿದ್ದಾರೆ.
ವೈದ್ಯರ ನಿರ್ಲಕ್ಷ್ಯ: ಬಾಣಂತಿ ಸಾವು
ಇನ್ನು ಇತ್ತೀಚೆಗೆ ವೈದ್ಯರ ನಿರ್ಲಕ್ಷ್ಯಕ್ಕೆ ಇದೇ ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲಿ ಬಾಣಂತಿಯೊಬ್ಬರು ಮೃತಪಟ್ಟಿದ್ದರು. ಜಿಲ್ಲೆಯ ಹುಕ್ಕೇರಿ ತಾಲೂಕಿನ ಗೌಡವಾಡ ಗ್ರಾಮದಲ್ಲಿ ನಿವಾಸಿ ವೈಶಾಲಿ ಕೊಟಬಾಗಿ (20) ಮೃತ ಪಟ್ಟ ಬಾಣಂತಿ.
ವೈಶಾಲಿಗೆ ಕಳೆದ ಮೂರು ದಿನಗಳ ಹಿಂದೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಆಗ ತಕ್ಷಣವೇ ಹುಕ್ಕೇರಿ ತಾಲೂಕು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆದರೆ ವೈದ್ಯರು ಇಲ್ಲದ ಕಾರಣಕ್ಕೆ ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. ಬಿಮ್ಸ್ ಆಸ್ಪತ್ರೆ ಹೆರಿಗೆ ವಾರ್ಡ್ನಲ್ಲಿ ದಾಖಲಾದ ವೈಶಾಲಿಗೆ ಬೆಳಗ್ಗೆಯೇ ಹೆರಿಗೆ ಆಗಿದೆ. ಹೆಣ್ಣು ಮಗುವಿಗೆ ಜನ್ಮಕೊಟ್ಟ ವೈಶಾಲಿ ಆರೋಗ್ಯವಾಗಿ ಇದ್ದರು.
ಇದನ್ನೂ ಓದಿ: ಬಳ್ಳಾರಿ ಬಾಣಂತಿಯರ ಸಾವಿಗೆ ಔಷಧ ಮಾತ್ರ ಕಾರಣವಲ್ಲ: ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಸ್ಫೋಟಕ ಹೇಳಿಕೆ
ಇಡೀ ದಿನ ಕುಟುಂಬಸ್ಥರು ಭೇಟಿಯಾಗಿ ಆರೋಗ್ಯ ವಿಚಾರಿಸಿ ಖುಷಿಯಿಂದ ವಾಪಾಸ್ ಆಗಿದ್ದರು. ಆದರೆ ಬೆಳಗ್ಗೆಯಿಂದಲೇ ವೈಶಾಲಿಗೆ ಎದೆನೋವು ಕಾಣಿಸಿಕೊಂಡಿತ್ತು. ವೈದ್ಯರು ವೈಶಾಲಿಯನ್ನ ತೀವ್ರ ನಿಗಾ ಘಟಕಕ್ಕೆ ಶಿಫ್ಟ್ ಮಾಡಿದ್ದಾರೆ. ಆದರೆ ಚಿಕಿತ್ಸೆ ಫಲಿಸದೇ ವೈಶಾಲಿ ಮೃತಪಟ್ಟಿದ್ದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:29 pm, Thu, 26 December 24