ಬೆಳಗಾವಿಯಲ್ಲಿ ಕಾಂಗ್ರೆಸ್ನಿಂದ ಬೃಹತ್ ಪ್ರತಿಭಟನಾ ಮೆರವಣಿಗೆ; ಟ್ರ್ಯಾಕ್ಟರ್ ಮೂಲಕವೇ ಸುವರ್ಣಸೌಧಕ್ಕೆ ಪ್ರವೇಶ
ಕರ್ನಾಟಕ ಸರ್ಕಾರ ಪ್ರತಿ ಹಂತದಲ್ಲಿಯೂ ಲಂಚ ಪಡೆಯುತ್ತಿದ್ದಾರೆ. ಗುತ್ತಿಗೆದಾರರ ಸಂಘದ ಅಧ್ಯಕ್ಷರು ಕೂಡ ಆರೋಪ ಮಾಡಿದ್ದಾರೆ. ಕಮಿಷನ್ ಪಡೆಯುತ್ತಿದ್ದಾರೆಂದು ಆರೋಪ ಮಾಡಿದ್ದಾರೆ. ಪ್ರಧಾನಿ ಮೋದಿ ನಮ್ಮ ಸರ್ಕಾರದ ವಿರುದ್ಧ ಆರೋಪಿಸಿದ್ದರು- ಕಾಂಗ್ರೆಸ್.
ಬೆಳಗಾವಿ: ಜಿಲ್ಲೆಯಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದೆ. ಈ ನಡುವೆ ಕಾಂಗ್ರೆಸ್ ನಾಯಕರು ಸರ್ಕಾರದ ವಿರುದ್ಧ ದಿಕ್ಕಾರ ಕೂಗುತ್ತಾ ಪ್ರತಿಭಟನೆ ನಡೆಸಿದ್ದಾರೆ. ಸರ್ಕಾರದ ವಿರುದ್ಧ ಗುತ್ತಿಗೆದಾರರು ಮಾಡಿದ ಕಮಿಷನ್ ಆರೋಪವನ್ನು ಮುಂದಿಟ್ಟು ಕಾರ್ಯಕರ್ತರು ಕಾಂಗ್ರೆಸ್ ಕಚೇರಿಯಿಂದ ಸುವರ್ಣಸೌಧದವರೆಗೆ ಮೆರವಣಿಗೆ ಮಾಡಿದ್ದಾರೆ. ಕಾಂಗ್ರೆಸ್ ಭವನದಿಂದ ಸಂಗೊಳ್ಳಿ ರಾಯಣ್ಣ ವೃತ್ತ, ಆರ್ಟಿಓ ಸರ್ಕಲ್, ಅಶೋಕ ಸರ್ಕಲ್, ಹಳೆಯ ಗಾಂಧಿ ನಗರ ಮಾರ್ಗವಾಗಿ ತೆರಳಿ, ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಕಾಂಗ್ರೆಸ್ ಮೆರವಣಿಗೆ ಮಾಡಿದೆ.
ಪ್ರತಿಭಟನೆ ವೇಳೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಏಕೆ ಬೇಕು? ರಾಜ್ಯದ ನೆಮ್ಮದಿ ಕೆಡಿಸಲು ಈ ವಿಷಯ ಪ್ರಸ್ತಾಪಿಸುತ್ತಿದ್ದಾರೆ. ನಾವೆಲ್ಲ ಹಿಂದೂಗಳು, ಗಾಂಧೀಜಿ, ರಾಮ ಎಲ್ಲ ಹಿಂದೂಗಳು. ನಾವೆಲ್ಲರೂ ಹಿಂದೂಗಳಲ್ಲವೇ? ಬಿಜೆಪಿಯವರು ಸೀತೆಯ ಬಗ್ಗೆ ಏಕೆ ಪ್ರಸ್ತಾಪಿಸುವುದಿಲ್ಲ ಅಂತ ವಾಗ್ದಾಳಿ ನಡೆಸಿದ್ದಾರೆ.
ಸರ್ಕಾರದವರು ಪ್ರತಿ ಹಂತದಲ್ಲಿಯೂ ಲಂಚ ಪಡೆಯುತ್ತಿದ್ದಾರೆ. ಗುತ್ತಿಗೆದಾರರ ಸಂಘದ ಅಧ್ಯಕ್ಷರು ಕೂಡ ಆರೋಪ ಮಾಡಿದ್ದಾರೆ. ಕಮಿಷನ್ ಪಡೆಯುತ್ತಿದ್ದಾರೆಂದು ಆರೋಪ ಮಾಡಿದ್ದಾರೆ. ಪ್ರಧಾನಿ ಮೋದಿ ನಮ್ಮ ಸರ್ಕಾರದ ವಿರುದ್ಧ ಆರೋಪಿಸಿದ್ದರು. 10 ಪರ್ಸೆಂಟ್ ಸರ್ಕಾರ ಎಂದು ಆರೋಪ ಮಾಡಿದ್ದರು. ಹೀಗಾಗಿ ಕಮಿಷನ್ ಆರೋಪದ ಬಗ್ಗೆ ತನಿಖೆಯಾಗಬೇಕು. ನಮ್ಮ ಸರ್ಕಾರದಿಂದ ಈವರೆಗಿನ ಆರೋಪ ಬಗ್ಗೆ ತನಿಖೆ ಆಗಲಿ ಅಂತ ಶಿವಕುಮಾರ್ ಆಗ್ರಹಿಸಿದ್ದಾರೆ.
ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನಾ ಱಲಿ ನಡೆಸಿದ್ದಾರೆ. ಱಲಿ ಹಿನ್ನೆಲೆ ಬೆಳಗಾವಿ ನಗರ, ರಾಷ್ಟ್ರೀಯ ಹೆದ್ದಾರಿ, ಬೆಳಗಾವಿಯ ಸುವರ್ಣಸೌಧದ ಬಳಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಪ್ರತಿ ವೃತ್ತದಲ್ಲಿಯೂ ಹೆಚ್ಚುವರಿಯಾಗಿ ಪೊಲೀಸರನ್ನ ನಿಯೋಜನೆ ಮಾಡಲಾಗಿದೆ.
ಇದೇ ವೇಳೆ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ನಾವು ಮುಖ್ಯಮಂತ್ರಿಯನ್ನು ಕೇಳಿ ಪ್ರತಿಭಟನಾ ಮಾಡಬೇಕಾ? ಪ್ರತಿಭಟನೆ ಮಾಡುವುದು ನಮ್ಮ ಹಕ್ಕು ಅಂತ ಹೇಳಿಕೆ ನೀಡಿದ್ದಾರೆ.
ಕಾಂಗ್ರೆಸ್ ಬೃಹತ್ ಪ್ರತಿಭಟನಾ ಮೆರವಣಿಗೆಯಲ್ಲಿ ಎಸ್ಆರ್ ಪಾಟೀಲ್, ಹೆಚ್ಕೆ ಪಾಟೀಲ್, ಸಲೀಂ ಅಹ್ಮದ್ ರಮೇಶ್ ಕುಮಾರ್, ಕೆಜೆ ಜಾರ್ಜ್, ಲಕ್ಷ್ಮೀ ಹೆಬ್ಬಾಳ್ಕರ್, ಪ್ರಿಯಾಂಕ್ ಖರ್ಗೆ ಸೇರಿ ಹಲವು ನಾಯಕರು ಭಾಗಿಯಾಗಿದ್ದರು. ಆದರೆ ತವರು ಜಿಲ್ಲೆಯಲ್ಲಿಯೇ ಧರಣಿ ನಡೆಯುತ್ತಿದ್ದರೂ ಸತೀಶ್ ಜಾರಕಿಹೊಳಿ ಮಾತ್ರ ಗೈರಾಗಿದ್ದರು.
ಪೊಲೀಸರ ಮಧ್ಯೆ ವಾಗ್ವಾದ ಪೊಲೀಸರು ಬ್ಯಾರಿಕೇಡ್ ಹಾಕಿ ಕಾಂಗ್ರೆಸ್ ಮೆರವಣಿಗೆಯನ್ನು ತಡೆದಿದ್ದಾರೆ. ಈ ವೆಳೆ ಕಾಂಗ್ರೆಸ್ ಕಾರ್ಯಕರ್ತರು, ಪೊಲೀಸರ ಮಧ್ಯೆ ವಾಗ್ವಾದ ನಡೆದಿದೆ. ಬ್ಯಾರಿಕೇಡ್ ನುಗ್ಗಿ ಒಳಗಡೆ ಹೋಗುವುದಕ್ಕೆ ಪ್ರಯತ್ನಿಸಿದ್ದಾರೆ. ಸುವರ್ಣಸೌಧದ ಗೇಟ್ ಬಳಿ ಭಾರಿ ಹೈಡ್ರಾಮಾ ನಡೆದಿದೆ. ಒಳಗೆಡೆ ಬಿಡುವಂತೆ ಎಸ್‌ಪಿ ಜತೆ ವಿಪಕ್ಷ ನಾಯಕ ಸಿದ್ದರಾಮಯ್ಯ, ಎಸ್ ಆರ್ ಪಾಟೀಲ್ ಮಾತುಕತೆ ನಡೆಸಿದ್ದಾರೆ. ಪೊಲೀಸರ ವಿರುದ್ಧ ಡಿಕೆಶಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಶಾಸಕರ ಬಳಿಯೇ ಪೊಲೀಸರು ಪಾಸ್ ಕೇಳುತ್ತಿದ್ದಾರೆ ಅಂತ ಕಿಡಿ ಕಾರಿದ್ದಾರೆ. ಅದು ಹೇಗೆ ಬಿಡಲ್ಲವೋ ನಾವು ಕೂಡ ನೋಡುತ್ತೇವೆ. ನಮ್ಮನ್ನು ಒಳಗಡೆ ಬಿಡದಿದ್ದರೇ ಇಲ್ಲಿಯೇ ಮಲಗಿ ಬಿಡುತ್ತೇವೆ ಅಂತ ಶಿವಕುಮಾರ್ ಹೇಳಿದ್ದಾರೆ. ಇದೇ ವೇಳೆ ಬ್ಯಾರಿಕೇಡ್ ತೆಗೆಸಪ್ಪಾ ಅಂತ ಎಸ್‌ಪಿಗೆ ಸಿದ್ದರಾಮಯ್ಯ ಆವಾಜ್ ಹಾಕಿದ್ದಾರೆ.
ಕಿಡಿಕಾರಿದ ಲಕ್ಷ್ಮೀ ಹೆಬ್ಬಾಳ್ಕರ್ ಜನಧ್ವನಿಯಾಗಿ ಕಾಂಗ್ರೆಸ್ ಪ್ರತಿಭಟನಾ ಱಲಿ ಮಾಡುತ್ತಿದೆ. ಆದರೆ ಕಾಂಗ್ರೆಸ್ ಮೆರವಣಿಗೆಯನ್ನು ರಾಜ್ಯ ಸರ್ಕಾರ ತಡೆಯುತ್ತಿದೆ ಅಂತ ರಾಜ್ಯ ಸರ್ಕಾರದ ವಿರುದ್ಧ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಕಿಡಿಕಾರಿದ್ದಾರೆ. ಈ ಸರ್ಕಾರಕ್ಕೆ ಕಣ್ಣು, ಕಿವಿ ಎರಡೂ ಇಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 2023ರ ಚುನಾವಣೆಯಲ್ಲಿ ಸೋಲುತ್ತೇವೆಂಬ ಭಯವಿದೆ. ರಾಜ್ಯ ಬಿಜೆಪಿ ನಾಯಕರಿಗೆ ಭಯ ಶುರುವಾಗಿದೆ ಅಂತ ಹೇಳಿದ್ದಾರೆ.
ಬ್ಯಾರಿಕೆಡ್ ಮೇಲೆ ಹತ್ತಿ ಒಳಗೆ ಬರಲು ಕೋನರೆಡ್ಡಿ ಯತ್ನ ಬ್ಯಾರಿಕೆಡ್ ಮೇಲೆ ಹತ್ತಿ ಒಳ ಬರಲು ಮಾಜಿ ಶಾಸಕ ಕೋನರೆಡ್ಡಿ ಯತ್ನಿಸಿದ್ದಾರೆ. ಒಳಗೆ ಬಿಡದಿದ್ದರೆ ನಾವು ಜಂಪ್ ಮಾಡುತ್ತೇವೆ ಅಂತ ಮಾಜಿ ಶಾಸಕ ಹೇಳಿದ್ದಾರೆ.
ಟ್ರ್ಯಾಕ್ಟರ್ ಮೂಲಕವೇ ಪ್ರವೇಶ ಮಾಡಿದ ಕಾಂಗ್ರೆಸ್ ನಾಯಕರು ಟ್ರ್ಯಾಕ್ಟರ್ ಮೂಲಕವೇ ಕಾಂಗ್ರೆಸ್ ನಾಯಕರು ಸುವರ್ಣಸೌಧಕ್ಕೆ ಪ್ರವೇಶ ಮಾಡಿದ್ದಾರೆ. ಕಾಂಗ್ರೆಸ್ ಶಾಸಕ ಭೈರತಿ ಸುರೇಶ್ ಟ್ರ್ಯಾಕ್ಟರ್ ಚಾಲನೆ ಮಾಡಿದರು. ಭಾರಿ ಹೈಡ್ರಾಮಾ ಬಳಿಕ ಸುವರ್ಣಸೌಧಕ್ಕೆ ಕಾಂಗ್ರೆಸ್ ನಾಯಕರು ಪ್ರವೇಶ ಮಾಡಿದ್ದಾರೆ.
ಸುವರ್ಣಸೌಧದ ಬಳಿ ಕಾಂಗ್ರೆಸ್ ಧರಣಿ ಸುವರ್ಣಸೌಧದ ಪಶ್ಚಿಮ ದ್ವಾರದ ಬಳಿ ಕಾಂಗ್ರೆಸ್ ಧರಣಿ ನಡೆಸಿದೆ. ಭ್ರಷ್ಟ ಬಿಜೆಪಿಗೆ ಧಿಕ್ಕಾರ ಎಂದು ಘೋಷಣೆ ಕೂಗಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ
ಆಶ್ಲೆ ಇಂಟರ್ ನ್ಯಾಷನಲ್ ಸ್ಕೂಲ್ ವಿರುದ್ಧ ಮತಾಂತರ ಯತ್ನ ಆರೋಪ, ಶಾಲೆ ವಿರುದ್ದ ಕ್ರಮಕ್ಕೆ ಹಿಂದೂ ಜಾಗರಣ ವೇದಿಕೆ ಆಗ್ರಹ
Sunil Gavaskar: ಈ ಎಲ್ಲ ಬೆಳವಣಿಗೆಗೆ ಕೊಹ್ಲಿ ಅಂದು ನೀಡಿದ ಆ ಒಂದು ಹೇಳಿಕೆ ಕಾರಣ ಎಂದ ಸುನೀಲ್ ಗವಾಸ್ಕರ್
Published On - 12:22 pm, Thu, 16 December 21