AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Belagavi: ಗುಟಕಾ ತಿಂದು ಉಗಿದ ಎಂಬ ಕಾರಣಕ್ಕೆ ವ್ಯಕ್ತಿಯ ಬರ್ಬರ ಕೊಲೆ

ಬೈಲಹೊಂಗಲ ತಾಲೂಕಿನ ಅನಿಗೋಳ ಗ್ರಾಮದಲ್ಲಿ ಗುಟಕಾ ತಿಂದು ಉಗಿದ ಎಂಬ ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಲಾಗಿದೆ.

Belagavi: ಗುಟಕಾ ತಿಂದು ಉಗಿದ ಎಂಬ ಕಾರಣಕ್ಕೆ ವ್ಯಕ್ತಿಯ ಬರ್ಬರ ಕೊಲೆ
ಸಾಂದರ್ಭಿಕ ಚಿತ್ರ
TV9 Web
| Updated By: ಕಿರಣ್ ಹನುಮಂತ್​ ಮಾದಾರ್|

Updated on: Jan 08, 2023 | 3:35 PM

Share

ಬೆಳಗಾವಿ: ಜಿಲ್ಲೆಯ ಬೈಲಹೊಂಗಲ ತಾಲೂಕಿನ ಅನಿಗೋಳ ಗ್ರಾಮದ ನಿವಾಸಿ ಮಂಜುನಾಥ ಸುಣಗಾರ ಎಂಬಾತ ಗುಟಕಾ ತಿನ್ನಲೆಂದು ಮನೆಯಿಂದ ಹೊರಬಂದಿದ್ದು, ಸ್ನೇಹಿತನ ಜೊತೆ ಪಾನ್ ಶಾಪ್ ಬಳಿ ನಿಂತಿದ್ದಾನೆ. ಆಗ ಅಲ್ಲಿಯೇ ನಿಂತಿದ್ದ ಅಜಯ್ ಹಿರೇಮಠ ಪಾನ್ ತಿಂದು ಉಗುಳಿದಾಗ ಅದು ಮಂಜುನಾಥ ಸುಣಗಾರಗೆ ಸಿಡಿದಿದೆ. ಏಕೆ ಉಗುಳಿದೆ ಎಂದು ಪ್ರಶ್ನಿಸಿದಕ್ಕೆ ಅಜಯ್ ಮಂಜುನಾಥನೊಂದಿಗೆ ಜಗಳ ಮಾಡಿ ನಂತರ ಅಲ್ಲೇ ಇದ್ದ ಕಲ್ಲಿನಿಂದ ಕೊಲೆ ಮಾಡಿದ್ದಾನೆ.

ಮಂಜುನಾಥ್ ತನ್ನ ಬಳಿ ಇದ್ದ ಸ್ವಲ್ಪ ಜಮೀನಿನಲ್ಲಿ ವ್ಯವಸಾಯ ಮಾಡುತ್ತ ಜೀವನ ಸಾಗಿಸುತ್ತಿದ್ದ, ಇತ್ತ ತಾಯಿ, ಪತ್ನಿ, ಇಬ್ಬರು ಮಕ್ಕಳ ಜೊತೆ ವಾಸವಿದ್ದ ಮಂಜುನಾಥ ಸುಣಗಾರ ತಾನಾಯ್ತು ತನ್ನ ಕೆಲಸ ಆಯ್ತು ಅಂತಾ ಇದ್ದವ. ಕುಡಿತದ ಚಟವಿದ್ದರೂ ಯಾರ ಜೊತೆಯೂ ಜಗಳ ಮಾಡಿಕೊಂಡವನಲ್ಲ. ಇತ್ತ ಅವತ್ತು ಗ್ರಾಮಸ್ಥರೆಲ್ಲಾ 2023ರ ಹೊಸ ವರ್ಷದ ಸಂಭ್ರದಮಲ್ಲಿದ್ದರು. ಕುಟುಂಬದವರ ಜೊತೆ ಜಾತ್ರೆಗೆ ತೆರಳಿದ್ದ ಮಂಜುನಾಥ ಸುಣಗಾರ ಸಂಜೆಯೇ ಮನೆಗೆ ವಾಪಸ್ ಆಗಿದ್ದ. ಎಂದಿನಂತೆ ಮದ್ಯಪಾನ ಮಾಡಿ ಮನೆಗೆ ಹೋಗಿ ಊಟ ಮಾಡಿ ಗುಟಕಾ ತಿಂದು ಬರ್ತೀನಿ ಎಂದು ಪತ್ನಿಗೆ ಹೇಳಿ ಪಾನ್​ಶಾಪ್​ಗೆ ಹೋಗಿದ್ದ ಅಲ್ಲಿಯೇ ಗುಟ್ಕಾ ಹಾಕಿಕೊಂಡು ನಿಂತಿದ್ದ. ಈ ವೇಳೆ ಅಜಯ್ ಎಂಬಾತನು ಅಲ್ಲಿಯೇ ಬಂದು ಪಾನ್ ತಿನ್ನುತ್ತಿದ್ದ. ಉಗುಳುವ ವಿಚಾರದಲ್ಲಿ ಮಂಜುನಾಥ ಹಾಗೂ ಅಜಯ್ ಎಂಬಾತನ ನಡುವೆ ಗಲಾಟೆ ನಡೆದಿದೆ. ಪಾಪಿ ಅಜಯ್ ಮಂಜುನಾಥ್ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ಪರಾರಿಯಾಗಿದ್ದ.

ಕೊಲೆ ವಿಚಾರ ಕುಟುಂಬಸ್ಥರಿಗೆ ಗೊತ್ತಾಗುತ್ತಿದ್ದಂತೆ ಸ್ಥಳಕ್ಕೆ ಬಂದು ನೋಡಿದಾಗ ಮಂಜುನಾಥ ಸಾವನ್ನಪ್ಪಿದ್ದ. ಇತ್ತ ಸ್ಥಳಕ್ಕೆ ಭೇಟಿ ನೀಡಿದ್ದ ಬೈಲಹೊಂಗಲ ಠಾಣೆ ಪೊಲೀಸರು ಪರಿಶೀಲನೆ ನಡೆಸಿ ಕೇಸ್ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡು, ಕೊಲೆ ಮಾಡಿ ಪರಾರಿಯಾಗಿದ್ದ ಅಜಯ್ ಹಿರೇಮಠನನ್ನು ಟೆಕ್ನಿಕಲ್ ಎವಿಡೆನ್ಸ್ ಆಧಾರದಲ್ಲಿ ಬಂಧಿಸಿದ್ದಾರೆ. ಇನ್ನು ಕೊಲೆ ಮಾಡಿದ ಆರೋಪಿ ಅಜಯ್ ಹಿರೇಮಠ ವೃತ್ತಿಯಲ್ಲಿ ವಾಹನ ಚಾಲಕನಾಗಿದ್ದು, ಗ್ರಾಮಸ್ಥರ ಜೊತೆ ಕಿರಿಕ್ ಮಾಡಿ ಕಾಲು ಕೆರೆದು ಜಗಳಕ್ಕೆ ಬರುತ್ತಿದ್ದನಂತೆ‌. ಹಿಂದೆಯೂ ಆತನ ವಿರುದ್ಧ ಕೊಲೆ ಕೇಸ್ ಇದ್ದು, ಜಾಮೀನಿನ ಮೇಲೆ ಹೊರಬಂದು ಹಳೆಯ ಚಾಳಿ ಮುಂದುವರಿಸಿದ್ದ ಎನ್ನುತ್ತಿದ್ದಾರೆ. ತನಿಖಾಧಿಕಾರಿ ಬೈಲಹೊಂಗಲ ಸಿಪಿಐ ವಿರೂಪಾಕ್ಷ ಸಾಲಿಮಠ ಸ್ಥಳಕ್ಕೆ ಭೇಟಿ‌ ನೀಡಿ ಪರಿಶೀಲನೆ ನಡೆಸಿ ಕೃತ್ಯಕ್ಕೆ ಬಳಸಿದ್ದ ಕಲ್ಲು ಜಪ್ತಿ ಮಾಡಿದ್ದಾರೆ. ಆರೋಪಿ ಅಜಯ್ ಹಿರೇಮಠನನ್ನು ಬಂಧಿಸಿದ್ದು ತನಿಖೆ ಮುಂದುವರಿದಿದೆ. ಆರೋಪಿ ಅಜಯ್ ಹಿರೇಮಠ ವಿರುದ್ಧ ಈ ಹಿಂದೆ ಪ್ರಕರಣ ದಾಖಲಾದ ಬಗ್ಗೆ ಮಾಹಿತಿ ಇಲ್ಲ ಎಂದು ಎಸ್ಪಿ ತಿಳಿಸಿದ್ದಾರೆ.

ಇದನ್ನೂ ಓದಿ:ಕೊಲೆ ಮಾಡಿ ಹೆಣದ ಜೊತೆ ತ್ರಿಬಲ್ ರೈಡ್ ಹೋಗಿ ಹೆಣ ಎಸೆದು ಬಂದ ಆರೋಪಿಗಳ ಬಂಧನ

ಒಟ್ಟಾರೆ ಒಂದು ಸಣ್ಣ ವಿಚಾರಕ್ಕೆ ಒಂದೇ ಗ್ರಾಮದವರು ಗುಟಕಾ ತಿಂದು ಉಗುಳಿದನೆಂಬ ಸಣ್ಣ ವಿಚಾರಕ್ಕೆ ಗಲಾಟೆ ತೆಗೆದು ಕೊಲೆ ಮಾಡಿದ್ದು ದುರ್ದೈವ. ಮನೆಗೆ ಆಧಾರವಾಗಿದ್ದ ಯಜಮಾನನ್ನು ಕಳೆದುಕೊಂಡು ಆ ಕುಟುಂಬ ಇದೀಗ ಬೀದಿಗೆ ಬಂದಿದ್ದರೆ, ಇತ್ತ ಕೊಲೆ ಮಾಡಿದ ಪಾಪಿ ಹಿಂಡಲಗಾ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾನೆ.

ವರದಿ: ಸಹದೇವ ಮಾನೆ ಟಿವಿ9 ಬೆಳಗಾವಿ

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ