ಕೊಲೆ ಮಾಡಿ ಹೆಣದ ಜೊತೆ ತ್ರಿಬಲ್ ರೈಡ್ ಹೋಗಿ ಹೆಣ ಎಸೆದು ಬಂದ ಆರೋಪಿಗಳ ಬಂಧನ
ಬೆಂಗಳೂರಿನಲ್ಲಿ ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿದ ನಂತರ ದ್ವಿಚಕ್ರ ವಾಹನದಲ್ಲಿ ಹೆಣ ತೆಗೆದುಕೊಂಡು ಹೀಗಿ ಎಸೆದುಬಂದ ಪ್ರಕರಣ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಬೆಂಗಳೂರು: ಕೊಲೆ ಮಾಡಿ ದ್ವಿಚಕ್ರ ವಾಹನದಲ್ಲಿ ತ್ರಿಬಲ್ ರೈಡ್ ಹೋಗಿ ಮೃತದೇಹವನ್ನು ಎಸೆದು ಬಂದ ಪ್ರಕರಣ ಸಂಬಂಧ ಎಲೆಕ್ಟ್ರಾನಿಕ್ ಸಿಟಿ ಠಾಣಾ ಪೊಲೀಸರು ದಂಪತಿ ಸೇರಿದಂತೆ ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ರೀನಾ, ಗಂಗೇಶ್ ಹಾಗೂ ಬಿಜೋಯ್ ಬಂಧಿತ ಆರೋಪಿಗಳಾಗಿದ್ದಾರೆ. ರೀನಾ ಹಾಗೂ ಗಂಗೇಶ್ ಸೇರಿ ನಿಬಾಶೀಶ್ ಪಾಲ್ ಎಂಬಾತನನ್ನ ಕೊಲೆ (Murder) ಮಾಡಿದ ನಂತರ ಹೆಣ ಸಾಗಿಸಲು ಬಿಜೋಯ್ ಎಂಬಾತನ ಸಹಾಯ ಪಡೆದಿದ್ದಾರೆ ಎಂದು ತನಿಖೆ ವೇಳೆ ತಿಳಿದುಬಂದಿದೆ.
ರೀನಾ ಮತ್ತು ಗಂಗೇಶ್ ಗಂಡ ಹೆಂಡತಿಯಾಗಿದ್ದಾರೆ. ಆದರೆ ರೀನಾ ಮತ್ತು ನಿಬಾಶೀಶ್ ಪಾಲ್ ಅಕ್ರಮ ಸಂಬಂಧ ಹೊಂದಿದ್ದರು. ಒಂದು ದಿನ ರೀನಾ ಗಂಡ ಗಂಗೇಶ್ ಸ್ವಂತ ರಾಜ್ಯ ಉತ್ತರ ಪ್ರದೇಶಕ್ಕೆ ಹೋಗಿದ್ದ. ಈ ನಡುವೆ ರೀನಾಗೆ ನಿಬಾಶೀಶ್ ಕಿರುಕುಳ ಕೊಡಲು ಶುರು ಮಾಡಿದ್ದಾನೆ. ಹಣಕ್ಕಾಗಿ ಬೇರೆಯವರ ಜೊತೆ ಮಲಗಲು ರೀನಾಗೆ ಒತ್ತಾಯ ಮಾಡುತ್ತಿದ್ದ. ಹೀಗಾಗಿ ತನ್ನ ಪತಿ ಗಂಗೇಶ್ಗೆ ಕರೆ ಮಾಡಿದ ರೀನಾ, ವಾಪಸ್ ಬರುವಂತೆ ಸೂಚಿಸಿದ್ದಾಳೆ. ನಂತರ ನಡೆದಿದ್ದೇ ಮರ್ಡರ್.
ಇದನ್ನೂ ಓದಿ: ಬೆಂಗಳೂರು: ದೈಹಿಕ ಸಂಪರ್ಕಕ್ಕೆ ಒಪ್ಪಲಿಲ್ಲ ಎಂದು ಮಹಿಳೆಯ ಖಾಸಗಿ ಫೋಟೋ, ವಿಡಿಯೋ ವೈರಲ್ ಮಾಡಿದ್ದ ಆರೋಪಿ ಅರೆಸ್ಟ್
ಗಂಡನನ್ನು ಕರೆಸಿಕೊಂಡ ರೀನಾ, ನಿಬಾಶೀಶ್ ಕಿರುಕುಳವನ್ನು ಹೇಳಿಕೊಂಡಿದ್ದಾಳೆ. ಹೀಗಾಗಿ ದಂಪತಿ ಒಟ್ಟು ಸೇರಿಕೊಂಡು ನಿಬಾಶೀಶ್ ಕೊಲೆ ಮಾಡಲು ಪ್ಲಾನ್ ಹಾಕುತ್ತಾರೆ. ಅದರಂತೆ ನಿಬಾಶೀಶ್ಗೆ ಕಂಠಪೂರ್ತಿ ಕುಡಿಸಿ ಸೀರೆಯಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾರೆ. ಇದಕ್ಕೂ ಮುನ್ನ ಪಾಲ್ಗೆ ಊಟದಲ್ಲಿ ಗಾಂಜಾದ ಬೀಜವನ್ನು ಹಾಕಿ ಅಮಲು ಬರುವಂತೆ ಮಾಡಿದ್ದರು. ಅಮಲು ಬಂದ ಬಳಿಕೆ ಸೀರೆಯಿಂದ ಕುತ್ತಿಗೆಗೆ ಬಿಗಿದು ಕೊಲೆ ಮಾಡಿದ್ದಾರೆ.
ನಿಬಾಶೀಶ್ ಕೊಲೆ ನಂತರ ಹೆಣ ಸಾಗಿಸಲು ಗಂಗೇಶ್ ತನ್ನ ಸ್ನೇಹಿತ ಬಿಜೋಯ್ ಸಹಾಯ ಪಡೆದಿದ್ದಾನೆ. ಗಂಗೇಶ್ ಹಾಗೂ ಬಿಜೋಯ್ ನಿಬಾಶೀಶ್ ಮೃತದೇಹವನ್ನು ಬೈಲ್ನ ಮಧ್ಯ ಕೂರಿಸಿಕೊಂಡು ಒಂದು ಕಿಲೋ ಮೀಟರ್ ದೂರದವರೆಗೆ ತ್ರಿಬಲ್ ರೈಡ್ ಹೋಗಿ ರಸ್ತೆ ಬದಿ ಹೆಣ ಎಸೆದು ಬಂದಿದ್ದರು. ಬಳಿಕ ಆರೋಪಿಗಳು ಮನೆಯನ್ನೇ ಖಾಲಿ ಮಾಡಿ ಟಾಟಾ ಎಸಿ ಅಟೋದಲ್ಲಿ ಪರಾರಿಯಾಗಿದ್ದರು.
ಪ್ರಕರಣ ಸಂಬಂಧ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ನಿಬಾಶೀಶ್ ಮನೆಯ ಹತ್ತಿರದ ಸಿಸಿಟಿವಿಯನ್ನು ಪರಿಶೀಲನೆ ಮಾಡುತ್ತಾರೆ. ಈ ವೇಳೆ ದಂಪತಿ ವಾಹನದಲ್ಲಿ ಹೋಗುತ್ತಿರುವುದು ಕಂಡುಬಂದಿದೆ. ಹೀಗಾಗಿ ಟಾಟಾ ಎಸಿ ಡ್ರೈವರ್ನನ್ನು ಪೊಲೀಸರು ವಿಚಾರಣೆ ಮಾಡಿದಾಗ ದಂಪತಿಯನ್ನು ಶಿಕಾರಿಪುರಕ್ಕೆ ಬಿಟ್ಟು ಬಂದಿರುದಾಗಿ ಹೇಳಿದ್ದಾನೆ. ಮಾಹಿತಿ ಆಧರಿಸಿ ಕಾರ್ಯಾಚರಣೆಗೆ ಇಳಿದ ಪೊಲೀಸರು ಶಿಕಾರಿಪುರದಲ್ಲಿ ರೀನಾ ಹಾಗೂ ಗಂಗೇಶ್ನನ್ನು ಬಂಧಿಸಿ ಕರೆತಂದಿದ್ದಾರೆ. ಹೆಣ ಸಾಗಿಸಲು ನೆರವಾಗಿದ್ದ ಬಿಜೋಯ್ ಕೂಡ ಅರೆಸ್ಟ್ ಆಗಿದ್ದಾನೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:34 am, Sun, 8 January 23