ಹಿಂಡಲಗಾ ಜೈಲಿನ ಒಳಗೆ ಮೊಬೈಲ್, ಡ್ರಗ್ಸ್! ಸಿಬ್ಬಂದಿಯೇ ಅಕ್ರಮದಲ್ಲಿ ಶಾಮೀಲು?
ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಮೊಬೈಲ್ ಹಾಗೂ ಮಾದಕ ವಸ್ತುಗಳ ಸಾಗಾಟ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಅಕ್ರಮ ಚಟುವಟಿಕೆಗಳು ಬಯಲಾಗಿವೆ. ಹೊರಗಿನಿಂದ ಜೈಲಿನೊಳಗೆ ಮಾದಕ ವಸ್ತುಗಳನ್ನು ಸಾಗಿಸಲಾಗುತ್ತಿದ್ದು, ಈ ಪ್ರಕರಣದಲ್ಲಿ ಸಿಬ್ಬಂದಿಯೇ ಶಾಮೀಲಾಗಿರುವುದಾಗಿ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಈ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಡಿಐಜಿ ಹೇಳಿದ್ದಾರೆ.

ಬೆಳಗಾವಿ, ಜನವರಿ 02: ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ಎಗ್ಗಿಲ್ಲದೇ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳು ಬಹಿರಂಗವಾಗಿದೆ. ಜೈಲಿನ ಹೊರಗಿನಿಂದ ಒಳಗೆ ಮೊಬೈಲ್ ಹಾಗೂ ಮಾದಕ ವಸ್ತುಗಳನ್ನು ಎಸೆಯುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಜೈಲಿನೊಳಗಿನ ಭದ್ರತಾ ವ್ಯವಸ್ಥೆಯ ಮೇಲೆಯೇ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿವೆ.
ಸಾಕ್ಷಿ ಇದ್ದರೂ ಆರೋಪಿಗಳನ್ನು ಬಂಧಿಸಿಲ್ಲ
ಮುಸುಕು ಧರಿಸಿದ ಅಪರಿಚಿತ ವ್ಯಕ್ತಿಯೊಬ್ಬ ಜೈಲಿನೊಳಗೆ ಮೊಬೈಲ್ ಮತ್ತು ಡ್ರಗ್ಸ್ ಎಸೆಯುತ್ತಿರುವ ಮೂರು ಸಿಸಿಟಿವಿ ದೃಶ್ಯಗಳು ವೈರಲ್ ಆಗಿವೆ. ಈ ಪೈಕಿ ಒಂದು ವೀಡಿಯೋ ಒಂದು ತಿಂಗಳ ಹಿಂದೆ ನಡೆದಿದ್ದು, ಮತ್ತೊಂದು ದೃಶ್ಯ ಡಿಸೆಂಬರ್ 29ರದ್ದು ಎನ್ನಲಾಗಿದೆ. ಈ ಸಂಬಂಧ ಈಗಾಗಲೇ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ. ಆದರೆ ಅಕ್ರಮಕ್ಕೆ ಸಾಕ್ಷಿಯಾಗಿ ಸಿಸಿಟಿವಿ ಫೂಟೇಜ್ ಇದ್ದರೂ ಆರೋಪಿಯನ್ನು ಇನ್ನೂ ಬಂಧಿಸದಿರುವುದು ಟೀಕೆಗೆ ಕಾರಣವಾಗಿದೆ.
ಸಿಬ್ಬಂದಿಯೇ ಅಕ್ರಮದಲ್ಲಿ ಶಾಮೀಲಾಗಿರುವ ಶಂಕೆ
ಹಿಂಡಲಗಾ ಜೈಲಿನಲ್ಲಿ ಸಾವಿರಕ್ಕೂ ಹೆಚ್ಚು ಕೈದಿಗಳು ಇದ್ದು, ನಟೋರಿಯಸ್ ಕೈದಿಗಳ ಸಂಖ್ಯೆಯೂ ಹೆಚ್ಚಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಹಗಲಲ್ಲೇ ಅಕ್ರಮ ವಸ್ತುಗಳು ಒಳಗೆ ಹೋಗುತ್ತಿವೆ ಎಂದರೆ ಜೈಲು ಸಿಬ್ಬಂದಿಯೂ ಇದರಲ್ಲಿ ಶಾಮೀಲಾಗಿ ಇರಬೇಕು ಎಂಬ ಅನುಮಾನಗಳು ವ್ಯಕ್ತವಾಗಿವೆ.
ವಿಷಯ ಬಹಿರಂಗವಾಗುತ್ತಿದ್ದಂತೆ ಬಂದಿಖಾನೆ ಉತ್ತರ ವಲಯದ ಡಿಐಜಿ ಟಿ.ಪಿ. ಶೇಷ ಸ್ಪಷ್ಟನೆ ನೀಡಿದ್ದು, ಸಿಸಿಟಿವಿ ದೃಶ್ಯಗಳ ಕುರಿತು ತನಿಖೆ ಮುಂದುವರಿಯುತ್ತಿದೆ ಎಂದಿದ್ದಾರೆ. ಡಿಜಿ ಅಲೋಕ್ ಕುಮಾರ್ ಸೂಚನೆಯಂತೆ ಜೈಲು ತಪಾಸಣೆ ನಡೆಸಿದಾಗ 12 ಮೊಬೈಲ್, ಚಾರ್ಜರ್ ಹಾಗೂ ನಾಲ್ಕು ಸೀಮ್ ಕಾರ್ಡ್‌ಗಳು ಪತ್ತೆಯಾಗಿದ್ದವು. ಇತ್ತ ಬೆಳಗಾವಿ ಪೊಲೀಸ್ ಕಮೀಷನರ್ ಭೂಷಣ್ ಬೊರಸೆ ಜೈಲಿಗೆ ದಿಢೀರ್ ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ. ಹಿಂಡಲಗಾ ಜೈಲಿನ ಅಸಲಿ ಸ್ಥಿತಿ ಈಗ ಬಹಿರಂಗವಾಗಿದ್ದು, ಸರ್ಕಾರ ತಕ್ಷಣ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಕೇಳಿಬಂದಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 1:41 pm, Fri, 2 January 26



