ಬೆಳಗಾವಿ, ಡಿಸೆಂಬರ್ 11: ಕರ್ನಾಟಕ ಮತ್ತು ಮಹಾರಾಷ್ಟ್ರ (Karnataka Maharashtra Border) ಗಡಿ ಭಾಗದಲ್ಲಿ ವಿದ್ಯಾರ್ಥಿಗಳ ಕೊರತೆ, ಮೂಲಸೌಕರ್ಯ ಕೊರತೆ ಹಾಗೂ ಆಂಗ್ಲ ಮಾಧ್ಯಮ ಶಾಲೆಗಳಿಗೆ ಆದ್ಯತೆ ಹೆಚ್ಚುತ್ತಿರುವ ಕಾರಣ ಕನ್ನಡ ಶಾಲೆಗಳ (Kannada Medium Schools) ಸಂಖ್ಯೆ ಕಡಿಮೆಯಾಗುತ್ತಿದೆ. ವಿಶೇಷವೆಂದರೆ, ಕನ್ನಡ ಮಾಧ್ಯಮ ಶಾಲೆಗಳಿಗಿಂತ ಮರಾಠಿ ಮಾಧ್ಯಮ ಶಾಲೆಗಳ ಮೂಲಸೌಕರ್ಯ ಉತ್ತಮವಾಗಿದೆ.
ಶಿಕ್ಷಣ ಇಲಾಖೆ ಮೂಲಗಳ ಪ್ರಕಾರ, ಖಾನಾಪುರ ಮತ್ತು ನಿಪ್ಪಾಣಿ ತಾಲೂಕಿನಲ್ಲಿ 115 ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಒಂದು ಸರ್ಕಾರಿ ಪ್ರಾಥಮಿಕ ಶಾಲೆ ಇದೆ. ಆದರೆ, ಪ್ರತಿ 42 ವಿದ್ಯಾರ್ಥಿಗಳಿಗೆ ಒಂದರಂತೆ ಮರಾಠಿ ಶಾಲೆ ಇದೆ.
ಮಹಾರಾಷ್ಟ್ರ ರಾಜ್ಯದ ಗಡಿ ಪ್ರದೇಶದ ನಾಲ್ಕು ಜಿಲ್ಲೆಗಳಲ್ಲಿ 270 ಕ್ಕೂ ಹೆಚ್ಚು ಕನ್ನಡ ಮಾಧ್ಯಮ ಶಾಲೆಗಳಿವೆ. ಈ ಶಾಲೆಗಳಲ್ಲಿ 30 ಸಾವಿರಕ್ಕೂ ಹೆಚ್ಚು ಕನ್ನಡ ಮಕ್ಕಳು ಕಲಿಯುತ್ತಾರೆ. ಪ್ರಸ್ತುತ 1,150 ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದು, ಇನ್ನೂ 500 ಶಿಕ್ಷಕರ ಕೊರತೆ ಇದೆ.
ಕಳೆದ 13 ವರ್ಷಗಳಿಂದ ಸರ್ಕಾರ ಕನ್ನಡ ಮಾಧ್ಯಮ ಶಾಲೆಗಳಿಗೆ ಶಿಕ್ಷಕರನ್ನು ನೇಮಿಸಿಲ್ಲ. ಹೀಗಾಗಿ ಅನಿವಾರ್ಯವಾಗಿ ಮಕ್ಕಳು ಇಂಗ್ಲಿಷ್ ಮತ್ತು ಮರಾಠಿ ಮಾಧ್ಯಮದ ಶಾಲೆಗಳತ್ತ ಮುಖ ಮಾಡುತ್ತಿದ್ದಾರೆ.
ಚಿಕ್ಕೋಡಿ ಮತ್ತು ಬೆಳಗಾವಿ ಶೈಕ್ಷಣಿಕ ಜಿಲ್ಲೆಗಳಲ್ಲಿ ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಗಳು ಕಳಪೆ ಮೂಲಸೌಕರ್ಯ ಹೊಂದಿವೆ.
ಸರಕಾರಿ ನಿಯಮಗಳ ಪ್ರಕಾರ 10ಕ್ಕಿಂತ ಕಡಿಮೆ ಮಕ್ಕಳಿರುವ ಶಾಲೆಗಳನ್ನು ಮುಚ್ಚಲಾಗುತ್ತಿದೆ ಅಥವಾ ಬೇರೆ ಶಾಲೆಗಳೊಂದಿಗೆ ವಿಲೀನಗೊಳಿಸಲಾಗುತ್ತಿದೆ. ಈಗಾಗಲೇ ಎರಡೂ ಶೈಕ್ಷಣಿಕ ಜಿಲ್ಲೆಗಳಲ್ಲಿ 15ಕ್ಕೂ ಹೆಚ್ಚು ಶಾಲೆಗಳನ್ನು ಮುಚ್ಚಿರುವುದು ನಿಜ ಎಂಬುದನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಉಪನಿರ್ದೇಶಕ ಮೋಹನಕುಮಾರ ಹಂಚಾಟೆ ಒಪ್ಪಿಕೊಂಡಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ.
ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಕನ್ನಡ ಶಾಲೆಗಳಿಗಿಲ್ಲ ಶಿಕ್ಷಕರ ನೇಮಕಾತಿ, ಮೂಲಭೂತ ಸೌಕರ್ಯ! ನಡೆಯುತ್ತಿದೆ ವ್ಯವಸ್ಥಿತ ಸಂಚು
ಕನ್ನಡ ಮಾಧ್ಯಮ ಶಾಲೆಗಳ ಬಗ್ಗೆ ನಿರಾಸಕ್ತಿ ಮೂಡಲು ಹಲವು ಕಾರಣಗಳಿವೆ. ಕನ್ನಡ ಮಾಧ್ಯಮವು ಉದ್ಯೋಗ ನೀಡುವ ಶಿಕ್ಷಣವಾಗಿಲ್ಲ. ಇಷ್ಟೇ ಅಲ್ಲದೆ, ಶಿಕ್ಷಕರ ಕೊರತೆಯಂತಹ ಮೂಲ ಸೌಕರ್ಯಗಳ ಕೊರತೆಯಿಂದಾಗಿ ಕನ್ನಡ ಮಾಧ್ಯಮಕ್ಕೆ ಮಕ್ಕಳ ದಾಖಲಾತಿ ಕಡಿಮೆಯಾಗುತ್ತಿದೆ ಎಂಬುದು ಶಿಕ್ಷಣ ತಜ್ಞರ ಅಭಿಪ್ರಾಯವಾಗಿದೆ ಎಂದು ವರದಿ ತಿಳಿಸಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ