ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಬೇಕೇ ಬೇಕು: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್
ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಬೇಕು. ಸರ್ಕಾರ ಶೀಘ್ರವೇ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡಲಿ. ಇಲ್ಲದಿದ್ದರೆ ಮಹಾರಾಷ್ಟ್ರದಲ್ಲಿ ಮರಾಠ ಮೀಸಲಾತಿಗಾಗಿ ನಡೆದ ಪ್ರತಿಭಟನೆ ಮಾದರಿಯಲ್ಲಿ ಹೋರಾಟ ಮಾಡುತ್ತೇವೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಎಚ್ಚರಿಕೆ ನೀಡಿದ್ದಾರೆ. ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ಬೆಳಗಾವಿಯ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ಮಾಡಲಾಗಿದೆ.
ಬೆಳಗಾವಿ, ಡಿಸೆಂಬರ್ 13: ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ಬಸವ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಬೆಳಗಾವಿಯ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ಮಾಡಲಾಗುತ್ತಿದೆ. ಈ ವೇಳೆ ಪ್ರತಿಭಟನೆಯನ್ನು ಉದ್ದೇಶಿಸಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಮಾತನಾಡಿ, ಕಾಂಗ್ರೆಸ್ ಸರ್ಕಾರ ಬಂದು ಏಳು ತಿಂಗಳಾದರೂ ಸಮಾಜಕ್ಕೆ 2 ಎ ಮೀಸಲಾತಿ ಸಿಕ್ಕಿಲ್ಲ. ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಬೇಕು ಎಂದು ಆಗ್ರಹಿಸಿದ್ದಾರೆ. ಸರ್ಕಾರ ಶೀಘ್ರವೇ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡಲಿ. ಇಲ್ಲದಿದ್ದರೆ ಮಹಾರಾಷ್ಟ್ರದಲ್ಲಿ ಮರಾಠ ಮೀಸಲಾತಿಗಾಗಿ ನಡೆದ ಹೋರಾಟದ ಮಾದರಿಯಲ್ಲಿ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಯಾವುದೇ ರಾಜಕೀಯ ಆಸೆ ಆಮೀಷಗಳಿಗೆ ಬಗ್ಗದೆ ಸಮಾಜದ ಮೀಸಲಾತಿಗಾಗಿ ಸ್ವಾಮೀಜಿ ಹೋರಾಟ ಮಾಡಿಕೊಂಡು ಬಂದಿದ್ದಾರೆ. ಹಳ್ಳಿ ಹಳ್ಳಿಗಳಲ್ಲಿ ಲಿಂಗ ಪೂಜೆ ಮಾಡಿಕೊಂಡು ಹೋರಾಟ ಮಾಡಿದ್ದಾರೆ ಎಂದು ಕೂಡಲಸಂಗಮ ಸ್ವಾಮೀಜಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ: ಮತ್ತೊಂದು ಸುತ್ತಿನ ಹೋರಾಟ ಘೋಷಿಸಿದ ಸ್ವಾಮೀಜಿ
ಬಿಜೆಪಿ ಸರ್ಕಾರ ಇದ್ದಾಗಲೂ ಕೂಡ ನಾನು ಹೋರಾಟ ಮಾಡಿದ್ದೇನೆ. ಯಾವುದೇ ಸರ್ಕಾರ ಇದ್ದರೂ ನಾನು ಹೋರಾಟ ಮಾಡುತ್ತೇನೆ. ಅಧಿವೇಶನ ಮುಗಿದ ಬಳಿಕ ಬೆಂಗಳೂರಿಗೆ ಹೋಗಿ ರಾಜ್ಯ ಹಿಂದುಳಿದ ಆಯೋಗದ ಅಧ್ಯಕ್ಷರು ಸಂಬಂಧಿಸಿದ ಅಧಿಕಾರಿಗಳ ಜೊತೆಗೆ ಚರ್ಚೆ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಸಾಧಕ ಭಾದಕಗಳ ಬಗ್ಗೆ ಚರ್ಚೆ ಮಾಡಿದ ನಂತರ ಮುಂದಿನ ತೀರ್ಮಾನ ತೆಗೆದುಕೊಳ್ಳುವೆ ಎಂದಿದ್ದಾರೆ. ಈ ವಿಚಾರವಾಗಿ ಒಂದು ವಾರಗಳ ಕಾಲ ಸಮಯ ನೀಡಿ ಎಂದು ಸಿದ್ದರಾಮಯ್ಯ ಕೇಳಿದ್ದಾರೆ. ಇಷ್ಟು ವರ್ಷಗಳ ಕಾಲ ಕಾಯ್ದಿದ್ದೇವೆ ಇನ್ನೊಂದು ವಾರ ಕಾಯೋಣ. ಒಂದು ವಾರಗಳ ಅವಧಿ ಒಳಗೆ ಸಿಎಂ ಸಮಗ್ರವಾಗಿ ಚರ್ಚೆ ಮಾಡಲಿ. ಅಲ್ಲಿಯವರೆಗೆ ನಮ್ಮ ಸಮಾಜದವರು ಶಾಂತ ರೀತಿಯಿಂದ ಇರೋಣ ಎಂದು ಹೇಳಿದ್ದಾರೆ.
ಸ್ವಾಮೀಜಿಗಳ ಬಗ್ಗೆ ಜಯಮೃತ್ಯುಂಜಯ ಸ್ವಾಮೀಜಿ ವಿವಾದಾತ್ಮಕ ಹೇಳಿಕೆ
ಜಯಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ಬೆಳಗಾವಿ ಜಿಲ್ಲೆಯ ಜನರ ಒತ್ತಾಯಕ್ಕೆ ಮತ್ತೆ ಹೋರಾಟ ಶುರು ಮಾಡಿದ್ದೇವೆ. ಸಿಎಂ ಸಿದ್ದರಾಮಯ್ಯನವರು ಸ್ವಾಮೀಜಿ ಜತೆಗೆ ಚೆನ್ನಾಗಿದ್ದಾರೆ ಹೋರಾಟ ಮುಗಿತು ಅಂದರು. ಮುಖ್ಯಮಂತ್ರಿ ಎಷ್ಟೇ ಚೆನ್ನಾಗಿರಬಹುದು, ಶಾಸಕರಿದ್ದಾರೆ ಅಂದರು ನಾವು ಹೋರಾಟ ಬಿಡಲಿಲ್ಲ. 2ಡಿ ಹೋರಾಟ ಸಿಕ್ಕದೆ ಅಂತಾ ಬಂಗಾರದಂತ ಮಠ ಕಟ್ಟಿಕೊಂಡು ಆರಾಮ ಇರಬಹುದಿತ್ತು. ಉಳಿದ ಸ್ವಾಮೀಜಿಗಳಂತೆ ಶೋಷಣೆ ಮಾಡಿಕೊಂಡು ನಾನು ಆರಾಮಾಗಿರಬಹುದಿತ್ತು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: 2ಎ ಮೀಸಲಾತಿಗೆ ಆಗ್ರಹ: ಇಷ್ಟಲಿಂಗ ಪೂಜೆ ಮೂಲಕ ಇಂದಿನಿಂದ ಮತ್ತೆ ಪಂಚಮಸಾಲಿ ಸಮುದಾಯ ಹೋರಾಟ
ನಾನು ಸುಮ್ಮನೆ ಕೂಡಲಿಲ್ಲ, ಮೀಸಲಾತಿ ಸಿಗುವವರೆಗೂ ಹೋರಾಟ ಬಿಡಲ್ಲ. ಯಡಿಯೂರಪ್ಪ ಇದ್ದಾಗ, ಬೊಮ್ಮಾಯಿ ಇದ್ದಾಗ ಹೋರಾಟ ಮಾಡಿದ್ದೇವು. ಈಗ ಸಿದ್ದರಾಮಯ್ಯ ಇದ್ದಾಗ ಹೋರಾಟ ಮಾಡಿ ಅಂತಾ ಜನ ಹೇಳಿದ್ದಾರೆ. ನಿನ್ನೆ ಚರ್ಚೆ ಬಳಿಕ ಸಿಎಂ ಜತೆಗೆ ಮಾತಾಡಿದ್ದನ್ನ ಇಲ್ಲಿ ಹೇಳ್ತಿದ್ದೇನೆ. ಅಡ್ವೋಕೆಟ್ ಜನರಲ್ ಜತೆಗೆ ಮೀಟಿಂಗ್ ಕರೆಯುತ್ತೇನೆ ಅಂತಾ ಸಿಎಂ ಹೇಳಿದ್ದರು ಎಂದಿದ್ದಾರೆ.
ಸಮಾಜದ ಮಗಳಾಗಿ ಹೋರಾಟದಲ್ಲಿ ಭಾಗವಹಿಸಿದ್ದೇನೆ: ಲಕ್ಷ್ಮಿ ಹೆಬ್ಬಾಳಕರ್
ಪ್ರತಿಭಟನೆ ವೇಳೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಮಾತನಾಡಿ, ಸಮಾಜದ ಮಗಳಾಗಿ ಹೋರಾಟದಲ್ಲಿ ಭಾಗವಹಿಸಿದ್ದೇನೆ. ಮುಂದಿನ ಹೋರಾಟದಲ್ಲೂ ನಾನು ಖಂಡಿತವಾಗಿಯೂ ಭಾಗವಹಿಸುವೆ. ನಿನ್ನೆ ಸಿಎಂ ಜೊತೆ ನಡೆದ ಸಭೆಯಲ್ಲಿ ಪಕ್ಷಾತೀತವಾಗಿ ಎಲ್ಲರೂ ಮೀಸಲಾತಿಗಾಗಿ ಒತ್ತಾಯ ಮಾಡಿದ್ದೇವೆ ಎಂದು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:27 pm, Wed, 13 December 23