ಬೆಳಗಾವಿಯಲ್ಲಿ ಅಕ್ರಮ ಬಾಂಗ್ಲಾ ವಲಸಿಗರ ಭೀತಿ?!: ಬಸ್ ನಿಲ್ದಾಣದಿಂದ 20ಕ್ಕೂ ಹೆಚ್ಚು ಜನರನ್ನ ಠಾಣೆಗೆ ತಂದ ಪೊಲೀಸರು

ಬೆಳಗಾವಿಯಲ್ಲಿ ಅಕ್ರಮ ಬಾಂಗ್ಲಾದೇಶಿ ವಲಸಿಗರ ಬಗ್ಗೆ ಶಂಕೆಯ ಹಿನ್ನೆಲೆಯಲ್ಲಿ ಪೊಲೀಸರು ಭಾರಿ ಕಾರ್ಯಾಚರಣೆ ನಡೆಸಿದರು. ಕೇಂದ್ರ ಬಸ್ ನಿಲ್ದಾಣದಿಂದ 20ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದು ದಾಖಲೆ ಪರಿಶೀಲಿಸಲಾಯಿತು. ಅವರು ಪಶ್ಚಿಮ ಬಂಗಾಳದ ಕಾರ್ಮಿಕರಾಗಿದ್ದು, ಮತದಾನದ ನಂತರ ವಾಪಸ್ ಬಂದಿರುವುದು ದೃಢಪಟ್ಟಿತು. ಆಧಾರ್, ವೋಟರ್ ಐಡಿಗಳು ಅಸಲಿಯಾಗಿದ್ದು, ಬೆರಳಚ್ಚು ಪಡೆದು ಬಿಡುಗಡೆ ಮಾಡಲಾಯಿತು. ನಕಲಿ ದಾಖಲೆಗಳ ಕುರಿತು ತನಿಖೆ ಮುಂದುವರಿದಿದೆ.

ಬೆಳಗಾವಿಯಲ್ಲಿ ಅಕ್ರಮ ಬಾಂಗ್ಲಾ ವಲಸಿಗರ ಭೀತಿ?!: ಬಸ್ ನಿಲ್ದಾಣದಿಂದ 20ಕ್ಕೂ ಹೆಚ್ಚು ಜನರನ್ನ ಠಾಣೆಗೆ ತಂದ ಪೊಲೀಸರು
ಬೆಳಗಾವಿ ಅಕ್ರಮ ವಲಸಿಗರು ಪರಿಶೀಲನೆ ಮಾಡುತ್ತಿರುವ ಪೊಲೀಸರು
Image Credit source: Tv9 kannada
Edited By:

Updated on: May 23, 2026 | 3:29 PM

ಬೆಳಗಾವಿ,ಮೇ,23: ಕುಂದಾನಗರಿ ಬೆಳಗಾವಿಯಲ್ಲಿ ಅಕ್ರಮ ಬಾಂಗ್ಲಾದೇಶಿ ವಲಸಿಗರು ಬಂದಿದ್ದಾರೆ ಎಂಬ ತೀವ್ರ ಆರೋಪ ಮತ್ತು ಶಂಕೆಯ ಹಿನ್ನೆಲೆಯಲ್ಲಿ ಪೊಲೀಸರು ಭಾರಿ ಕಾರ್ಯಾಚರಣೆ ನಡೆಸಿದ್ದಾರೆ. ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಿಂದ 20ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದು ಮಾಳಮಾರುತಿ ಪೊಲೀಸ್ ಠಾಣೆಗೆ ಕರೆತಂದ ಡಿಸಿಪಿ ನಾರಾಯಣ ಭರಮನಿ ನೇತೃತ್ವದ ತಂಡ, ಅವರ ದಾಖಲೆಗಳನ್ನು ತೀವ್ರ ಪರಿಶೀಲನೆಗೆ ಒಳಪಡಿಸಿದೆ.

ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ರವಿ ಕೋಕಿತ್ಕರ್ ನೇತೃತ್ವದ ತಂಡವು, “ಹುಬ್ಬಳ್ಳಿಯಲ್ಲೂ ಕೆಲವರ ತಪಾಸಣೆಯಾಗಿದ್ದು, ಮೂರು ಬಸ್‌ಗಳಲ್ಲಿ ಅಕ್ರಮ ಬಾಂಗ್ಲಾ ವಲಸಿಗರು ನಗರಕ್ಕೆ ಬಂದಿದ್ದಾರೆ” ಎಂದು ಅನುಮಾನ ವ್ಯಕ್ತಪಡಿಸಿ ತಪಾಸಣೆಗೆ ಒತ್ತಾಯಿಸಿತ್ತು. ಈ ಹಿನ್ನೆಲೆಯಲ್ಲಿ ಹೈ ಅಲರ್ಟ್ ಆದ ಪೊಲೀಸರು ತಕ್ಷಣವೇ ಎಲ್ಲರನ್ನೂ ಮಾಳಮಾರುತಿ ಠಾಣೆಗೆ ಕರೆತಂದು ವಿಚಾರಣೆ ನಡೆಸಿದರು. ಈ ವೇಳೆ ವಶಕ್ಕೆ ಒಳಗಾದವರು, “ನಾವು ಬಾಂಗ್ಲಾದೇಶದವರಲ್ಲ, ಪಶ್ಚಿಮ ಬಂಗಾಳ ಮೂಲದವರು. ಶಹಾಪುರದಲ್ಲಿ ಅಕ್ಕಸಾಲಿಗರಾಗಿ (ಬಂಗಾರದ ಕೆಲಸ) ಕೆಲಸ ಮಾಡುತ್ತಿದ್ದೇವೆ. ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಮತದಾನ ಇದ್ದಿದ್ದರಿಂದ ಊರಿಗೆ ಹೋಗಿದ್ದೆವು, ಈಗ ವಾಪಸ್ ಕೆಲಸಕ್ಕೆ ಬಂದಿದ್ದೇವೆ” ಎಂದು ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ಶಿರಸಿಯಲ್ಲಿ ನಡುರಸ್ತೆಯಲ್ಲೇ ನಡುಕ ಹುಟ್ಟಿಸಿದ ಗ್ಯಾಂಗ್‌ವಾರ್!: 6 ಯುವಕರ ವಿರುದ್ಧ ಪ್ರಕರಣ ದಾಖಲು

ಡಿಸಿಪಿ ನಾರಾಯಣ ಭರಮನಿ ಅವರ ನೇತೃತ್ವದಲ್ಲಿ ಅಧಿಕಾರಿಗಳು ಸುಮಾರು 20ಕ್ಕೂ ಹೆಚ್ಚು ಕಾರ್ಮಿಕರ ಮೊಬೈಲ್ ಸಂಖ್ಯೆಗಳು, ಆಧಾರ್ ಕಾರ್ಡ್‌ಗಳು ಮತ್ತು ವೋಟರ್ ಐಡಿಗಳನ್ನು ಕೂಲಂಕಷವಾಗಿ ತಪಾಸಣೆ ನಡೆಸಿದ್ದಾರೆ. ಮೇಲ್ನೋಟಕ್ಕೆ ಇವೆಲ್ಲವೂ ಅಸಲಿ ದಾಖಲೆಗಳೆಂದು ಕಂಡುಬಂದ ಹಿನ್ನೆಲೆಯಲ್ಲಿ, ಹೆಚ್ಚಿನ ಸುರಕ್ಷತೆಗಾಗಿ ಎಲ್ಲರ ಹೆಬ್ಬೆರಳ ಗುರುತುಗಳನ್ನು ಪಡೆದುಕೊಂಡು ತನಿಖೆ ಮುಂದುವರಿಸಿದ್ದಾರೆ. ಯಾವುದೇ ಅಧಿಕೃತ ತಾಂತ್ರಿಕ ದೋಷ ಕಂಡುಬರದ ಕಾರಣ, ವಿಚಾರಣೆಯ ನಂತರ ಆ ಎಲ್ಲಾ ಕಾರ್ಮಿಕರನ್ನು ಅವರವರ ನಿವಾಸ ಹಾಗೂ ಕೆಲಸದ ಸ್ಥಳಗಳಿಗೆ ವಾಪಸ್ ಕಳುಹಿಸಿಕೊಡಲಾಗಿದೆ. ನಕಲಿ ದಾಖಲೆಗಳಿವೆಯೇ ಎಂಬ ಬಗ್ಗೆ ಆಂತರಿಕ ಪರಿಶೀಲನೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Sahadev Mane
Follow Us