
ಬೆಳಗಾವಿ, ಫೆಬ್ರವರಿ 22: ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಹಿರೇನಂದಿಹಳ್ಳಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಗ್ರಾಮದ ಸಮೀಪದ ಮೆಕ್ಕೆಜೋಳ ಗದ್ದೆಯಲ್ಲಿ ಕಲ್ಮೇಶ್ ಕೋಟಿ (50) ಅವರ ಶವ ಪತ್ತೆಯಾಗಿದ್ದು,ಕಿತ್ತೂರಿನ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ತುಮಕೂರಿನಲ್ಲಿ ಹೋಮ್ ಕೇರ್‌ನಲ್ಲಿ ಕೆಲಸ ಮಾಡುತ್ತಿದ್ದ ಕಲ್ಮೇಶ್, ಸುಮಾರು ಹತ್ತು ದಿನಗಳ ಹಿಂದಷ್ಟೇ ಗ್ರಾಮಕ್ಕೆ ಬಂದಿದ್ದರು. ನಾಲ್ಕು ದಿನಗಳ ಹಿಂದೆ ನಡೆದಿರುವ ಈ ಕೊಲೆ ತಡವಾಗಿ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದುಷ್ಕರ್ಮಿಗಳು ಕಲ್ಮೇಶ್ನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆಗೈದು, ಬಳಿಕ ಮರ್ಮಾಂಗ ಕತ್ತರಿಸಿ ವಿಕೃತಿ ಮೆರೆದಿರುವುದು ಬೆಳಕಿಗೆ ಬಂದಿದೆ.
ಹತ್ತು ವರ್ಷಗಳ ಹಿಂದೆ ಕಲ್ಮೇಶ್ ಪತ್ನಿ ದೂರವಾಗಿದ್ದ ಕಾರಣ ತಮ್ಮ ವೃದ್ಧ ತಾಯಿಯೊಂದಿಗೆ ವಾಸವಿದ್ದರು. ಘಟನೆ ತಿಳಿದು ಪತ್ನಿ ಹಾಗೂ ಪುತ್ರ ಗ್ರಾಮಕ್ಕೆ ಆಗಮಿಸಿದ್ದಾರೆ. ಪ್ರಕರಣ ಸಂಬಂಧ ಎಸ್‌ಪಿ ರಾಮರಾಜನ್ ಸೇರಿದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಣಕಾಸು, ಆಸ್ತಿ ಹಾಗೂ ಮಹಿಳೆ ಸಂಬಂಧಿತ ವಿಚಾರಗಳಿಗೆ ಕೊಲೆ ಆಗಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ ಚಿಕ್ಕಮಗಳೂರಿನಲ್ಲಿ ಕಾಡಾನೆ ದಾಳಿಗೆ ಮತ್ತೊಂದು ಬಲಿ! ಕೊನೆಗೂ ಸೆರೆ ಸಿಕ್ತು ಕಿಲ್ಲರ್ ಒಂಟಿ ಸಲಗ
ಇನ್ನೊಂದೆಡೆ ತಾಯಿ ನಿಧನದಿಂದ ಮನನೊಂದ ವ್ಯಕ್ತಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೆಳಗಾವಿ ತಾಲೂಕಿನ ಅಂಬೇವಾಡಿ ಗ್ರಾಮದಲ್ಲಿ ನಡೆದಿದೆ. ಬಾಬು ಪಾಂಡು ಸಾಂಬರೇಕರ (41) ಬಾವಿಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ವೇಳೆ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಾವಿಗೆ ಜಿಗಿದ ತಕ್ಷಣ ಕೇಬಲ್ ಅಡಿಯಲ್ಲಿ ಸಿಲುಕಿಕೊಂಡಿದ್ದ ಅವರನ್ನು ಗಮನಿಸಿದ ಸ್ಥಳೀಯರು ತಕ್ಷಣ ಹೆಲ್ಫ್ ಲೈನ್ ಎಮರ್ಜೆನ್ಸಿ ರೆಸ್ಕ್ಯೂ ಫೌಂಡೇಶನ್ ಮುಖ್ಯಸ್ಥ ಬಸವರಾಜ್ ಹಿರೇಮಠ ಅವರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ದೌಡಾಯಿಸಿದ ತಂಡ ಬಾವಿಯೊಳಗೆ ಇಳಿದು ಬಾಬು ಅವರನ್ನು ಸುರಕ್ಷಿತವಾಗಿ ಮೇಲಕ್ಕೆತ್ತಿತು. 15 ದಿನಗಳ ಹಿಂದೆ ಅನಾರೋಗ್ಯದಿಂದ ತಾಯಿ ಮೃತಪಟ್ಟಿದ್ದರಿಂದ ಅವರು ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:09 pm, Sun, 22 February 26