ಯಾವುದೇ ಸಮಸ್ಯೆಯಿದ್ದರೂ ಸಂಬಂಧಿಸಿದವರ ಗಮನಕ್ಕೆ ತಂದು ಪರಿಹರಿಸಿಕೊಳ್ಳಿ: ಯಡಿಯೂರಪ್ಪ ಸೂಚನೆ
ಪರಿಹಾರ ಕಾರ್ಯಗಳನ್ನು ಚುರುಕಾಗಿ ನಡೆಸಬೇಕು. ಬಾಕಿಯಿರುವ ಪರಿಹಾರ ಮೊತ್ತವನ್ನು ಶೀಘ್ರ ಬಿಡುಗಡೆ ಮಾಡಬೇಕು ಎಂದು ಯಡಿಯೂರಪ್ಪ ಸೂಚಿಸಿದರು.
ಬೆಳಗಾವಿ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭಾನುವಾರ ಬೆಳಗಾವಿ ಜಿಲ್ಲೆಯ ವಿವಿಧೆಡೆ ಸಂಚರಿಸಿ ಪ್ರವಾಹ ಪರಿಸ್ಥಿತಿಯನ್ನು ಅವಲೋಕಿಸಿದರು. ಪರಿಹಾರ ಕಾರ್ಯಗಳನ್ನು ಚುರುಕಾಗಿ ನಡೆಸಬೇಕು. ಬಾಕಿಯಿರುವ ಪರಿಹಾರ ಮೊತ್ತವನ್ನು ಶೀಘ್ರ ಬಿಡುಗಡೆ ಮಾಡಬೇಕು ಎಂದು ಸೂಚಿಸಿದರು.
ರಕ್ಷಣಾ ಕಾರ್ಯಾಚರಣೆಗಳನ್ನು ನಿರ್ವಹಿಸಲು ಹಣಕಾಸು ಸೇರಿದಂತೆ ಯಾವುದೇ ತೊಂದರೆಯಿದ್ದರೂ ತಕ್ಷಣವೇ ಸಂಬಂಧಿಸಿದವರ ಗಮನಕ್ಕೆ ತಂದು ಸರಿಪಡಿಸಿಕೊಳ್ಳಬೇಕು ಎಂದು ಜಿಲ್ಲಾಡಳಿತಕ್ಕೆ ಸೂಚನೆ ನೀಡಿದರು. ಇನ್ನು 2-3 ದಿನಗಳಲ್ಲಿ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಲಿದೆ. ಮಳೆಯೂ ಬಿರುಸಾಗುವ ಮುನ್ಸೂಚನೆಯಿದೆ. ಸಂಕಷ್ಟ ಸ್ಥಿತಿಯಲ್ಲಿರುವ ಜನರ ತುರ್ತುರಕ್ಷಣೆ ಹಾಗೂ ತಾತ್ಕಾಲಿಕ ಪುನರ್ವಸತಿಗಾಗಿ 89 ಕಾಳಜಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ಯಡಿಯೂರಪ್ಪ ಹೇಳಿದರು.
ಪ್ರವಾಹ ಸಂದರ್ಭದಲ್ಲಿ ಕೊಚ್ಚಿ ಹೋಗಿರುವ ಜಾನುವಾರುಗಳ ಕುರಿತು ಸ್ಥಳೀಯವಾಗಿ ಮಾಹಿತಿ ಸಂಗ್ರಹಿಸಿ ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ನಿರ್ದೇಶನ ನೀಡಿದರು. ಆಲಮಟ್ಟಿಯಲ್ಲಿ ಸದ್ಯ 72 ಟಿಎಂಸಿ ನೀರು ಸಂಗ್ರಹವಿದೆ. ಆದಾಗ್ಯೂ ಒಳಹರಿವು ಆಧರಿಸಿ ನೀರು ಬಿಡುಗಡೆಗೆ ಕ್ರಮ ಕೈಗೊಳ್ಳಬೇಕು. ಜಲಾಶಯಗಳಲ್ಲಿ ಕನಿಷ್ಠ ಅಗತ್ಯ ಕಾಯ್ದುಕೊಂಡು ಉಳಿದ ನೀರು ಬಿಡುಗಡೆ ಮಾಡಲಾಗುತ್ತಿದೆ. ಬೆಳಗಾವಿ ವಿಭಾಗದಲ್ಲಿ 1400 ಕಿಮೀ ರಸ್ತೆ ಹಾನಿಯಾಗಿದೆ. ಆಲಮಟ್ಟಿಯ ಇಂದಿನ ನೀರಿನ ಮಟ್ಟ 518 ಮೀಟರ್, ಜಲಾಶಯದ ಗರಿಷ್ಠ ಸಾಮರ್ಥ್ಯ 519.69 ಮೀಟರ್.
ಬೆಳಗಾವಿ ಜಿಲ್ಲೆಯಲ್ಲಿ 305 ಸೇತುವೆಗಳಿಗೆ ಹಾನಿಯಾಗಿದೆ. ಪ್ರವಾಹದಿಂದ ಆಗಿರುವ ಒಟ್ಟು ನಷ್ಟದ ಮೊತ್ತ ₹ 1200 ಕೋಟಿ. ಪರಿಹಾರ ಕಾರ್ಯಗಳನ್ನು ಕೈಗೆತ್ತಿಕೊಳ್ಳಲು ₹ 170 ಕೋಟಿ ಬಿಡುಗಡೆ ಮಾಡಬೇಕು ಎಂದು ಲೋಕೋಪಯೋಗಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಮುಖ್ಯಮಂತ್ರಿಗೆ ಮನವಿ ಮಾಡಿದರು.
ಪ್ರವಾಹದಿಂದ ಹಾನಿಗೊಳಗಾಗಿರುವ ಮನೆಗಳ ಸಮೀಕ್ಷೆಯನ್ನು ಸಮರ್ಪಕವಾಗಿ ನಡೆಸಬೇಕು. ಕಳೆದ ಬಾರಿ ಪ್ರವಾಹದಿಂದ ಹಾನಿಗೊಳಗಾದ ರಸ್ತೆಗಳು ಹಾಗೂ ಸೇತುವೆಗಳ ದುರಸ್ತಿಗೆ ಹೆಚ್ಚುವರಿ ಅನುದಾನ ಒದಗಿಸಬೇಕು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್, ಅಥಣಿ ಮತಕ್ಷೇತ್ರದಲ್ಲಿ ಹಾನಿಗೊಳಗಾಗಿರುವ ರಸ್ತೆ ದುರಸ್ತಿಗೆ ತಕ್ಷಣವೇ ಅನುದಾನ ಬಿಡುಗಡೆ ಮಾಡಬೇಕು ಎಂದು ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಮಹೇಶ್ ಕುಮಠಳ್ಳಿ ವಿನಂತಿಸಿದರು.
ಬೆಳಗಾವಿ ನಗರದ ಸುತ್ತಮುತ್ತ ನಾಲೆಗಳನ್ನು ನಿರ್ಮಿಸಬೇಕಿದೆ ಎಂದು ಶಾಸಕ ಅನಿಲ್ ಬೆನಕೆ ಅಭಿಪ್ರಾಯಪಟ್ಟರು. ಕುಡಚಿ ಮತಕ್ಷೇತ್ರದ ಶಿರವಾರ ಹಾಗೂ ಗುಂಡವಾಡ ಗ್ರಾಮಗಳ 350 ಕ್ಕೂ ಅಧಿಕ ಪರಿಶಿಷ್ಟ ಜಾತಿಯ ಕುಟುಂಬಗಳಿಗೆ ಆಶ್ರಯ ಮನೆಗಳನ್ನು ಒದಗಿಸಬೇಕು ಎಂದು ತಾಂಡ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ.ರಾಜೀವ್ ಮನವಿ ಮಾಡಿದರು. ಜ್ವರದ ಚಿಕಿತ್ಸೆಗೆ ಬಳಸುವ ಪ್ಯಾರಾಸೆಟಮಲ್ ಲಭ್ಯವಿಲ್ಲ. ಮೇವು ಸಂಗ್ರಹಣೆ ಕೂಡ ಇಲ್ಲ ಈ ಬಗ್ಗೆ ಗಮನಹರಿಸಬೇಕು ಎಂದು ಶಾಸಕಿ ಅಂಜಲಿ ನಿಂಬಾಳ್ಕರ್ ಮುಖ್ಯಮಂತ್ರಿಗಳ ಗಮನ ಸೆಳೆದರು.
(BS Yediyurappa meets distressed people in Belagavi district)
ಇದನ್ನೂ ಓದಿ: ಬಿಎಸ್ ಯಡಿಯೂರಪ್ಪ ಕಟ್ಟಿದ ಮನೆಯಲ್ಲಿ ಬೇರೆಯವರು ಇರುವುದಲ್ಲ: ಸಿಎಂ ವಿರೋಧಿ ಬಣಕ್ಕೆ ದಿಂಗಾಲೇಶ್ವರ ಸ್ವಾಮೀಜಿ ಟಾಂಗ್
ಇದನ್ನೂ ಓದಿ: CM BS Yediyurappa: ಬೇರೆ ಯಾರಿಗೂ ಸಿಗದ ಸ್ಥಾನಮಾನ ನನಗೆ ದೊರೆತಿದೆ: ಸಿಎಂ ಯಡಿಯೂರಪ್ಪ
Published On - 4:59 pm, Sun, 25 July 21