ಬೆಳಗಾವಿ: ಆನ್‌ಲೈನ್ ವಂಚಕರಿಗೆ ಶಾಕ್; ಗೋಲ್ಡ್ ಅವರ್ ಅಸ್ತ್ರ ಪ್ರಯೋಗಿಸಿದ ಪೊಲೀಸರು
ಬೆಳಗಾವಿಯಲ್ಲಿ ಸೈಬರ್ ಕ್ರೈಂ ಪ್ರಕರಣಗಳು ಹೆಚ್ಚಾಗುತ್ತಿವೆ. ಅದರಲ್ಲೂ ದೇಶ, ವಿದೇಶದ ಯಾವುದೋ ಮೂಲೆಯಲ್ಲಿ ಕುಳಿತು ಅಮಾಯಕರಿಗೆ ಟೋಪಿ ಹಾಕುತ್ತಿರುವ ವಂಚಕರ ಸಂಖ್ಯೆ ಹೆಚ್ಚಾಗಿದೆ. ಪ್ರತಿ ದಿನವು ಆನ್ಲೈನ್ನಲ್ಲಿ ಮೋಸಕ್ಕೊಳಗಾಗಿ ಜನ ಹಣ ಕಳೆದುಕೊಳ್ಳುತ್ತಿರುವ ಬಗ್ಗೆ ವರದಿಯಾಗುತ್ತಿದೆ.
ಬೆಳಗಾವಿ: ಕಳೆದೊಂದು ವರ್ಷದ ಅವಧಿಯಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಸೈಬರ್ ಕ್ರೈಂ ಪ್ರಕರಣಗಳು ಹೆಚ್ಚಾಗಿವೆ. ಇದನ್ನು ಗಮನಿಸಿ ಅಲರ್ಟ್ ಆದ ಸಿಇಎನ್ ಪೊಲೀಸರು ಆನ್‌ಲೈನ್ ವಂಚಕರ ವಿರುದ್ಧ ಗೋಲ್ಡ್ ಅವರ್ ಅಸ್ತ್ರ ಪ್ರಯೋಗ ಮಾಡಿದ್ದರು. ಸೈಬರ್ ವಂಚನೆಯಲ್ಲಿ ಬ್ಯಾಂಕ್ ಖಾತೆಯಿಂದ ಹಣ ಕಳೆದುಕೊಂಡವರಿಗೆ 2 ಕೋಟಿ 33 ಲಕ್ಷ ರೂಪಾಯಿ ಫ್ರೀಜ್ ಮಾಡಿದ್ದಾರೆ. ಆ ಮೂಲಕ ನೊಂದವರಿಗೆ ಹಣ ಮರು ಸಂದಾಯ ಕಾರ್ಯವನ್ನು ಬೆಳಗಾವಿ ಸಿಇಎನ್ ಪೊಲೀಸರ ತಂಡ ಮಾಡುತ್ತಿರುವುದು ಸಾರ್ವಜನಿಕರ ಮೆಚ್ಚುಗೆಗೆ ಕಾರಣವಾಗಿದೆ. ಅಷ್ಟಕ್ಕೂ ಎನಿದು ಗೋಲ್ಡ್ ಅವರ್ ಅಸ್ತ್ರ? ಈ ವರದಿ ಓದಿ.
ಬೆಳಗಾವಿಯಲ್ಲಿ ಸೈಬರ್ ಕ್ರೈಂ ಪ್ರಕರಣಗಳು ಹೆಚ್ಚಾಗುತ್ತಿವೆ. ಅದರಲ್ಲೂ ದೇಶ, ವಿದೇಶದ ಯಾವುದೋ ಮೂಲೆಯಲ್ಲಿ ಕುಳಿತು ಅಮಾಯಕರಿಗೆ ಟೋಪಿ ಹಾಕುತ್ತಿರುವ ವಂಚಕರ ಸಂಖ್ಯೆ ಹೆಚ್ಚಾಗಿದೆ. ಪ್ರತಿ ದಿನವು ಆನ್ಲೈನ್ನಲ್ಲಿ ಮೋಸಕ್ಕೊಳಗಾಗಿ ಜನ ಹಣ ಕಳೆದುಕೊಳ್ಳುತ್ತಿರುವ ಬಗ್ಗೆ ವರದಿಯಾಗುತ್ತಿದೆ. ಕೇವಲ ಬೆಳಗಾವಿ ಪೊಲೀಸ್ ಕಮೀಷನರ್ ಕಚೇರಿ ವ್ಯಾಪ್ತಿಯಲ್ಲಿ ಕಳೆದ ಒಂದು ವರ್ಷದಲ್ಲಿ 1309 ಸೈಬರ್ ವಂಚನೆ ದೂರುಗಳು ದಾಖಲಾಗಿವೆ.
ಬೆಳಗಾವಿ ಸಿಇಎನ್ ಪೊಲೀಸರ ಭರ್ಜರಿ ಕಾರ್ಯಾಚರಣೆ ಒಂದು ವರ್ಷದಲ್ಲಿ ಅಮಾಯಕ ಜನರು 2 ಕೋಟಿ 45 ಲಕ್ಷ 37 ಸಾವಿರ ರೂಪಾಯಿ ಹಣವನ್ನು ಆನ್ಲೈನ್ನಲ್ಲಿ ವಂಚನೆಗೊಳಗಾಗಿ ಕಳೆದುಕೊಂಡಿದ್ದರು. ಬೆಳಗಾವಿ ಸಿಇಎನ್ ಇನ್ಸ್ಪೆಕ್ಟರ್ ಬಿ.ಆರ್.ಗಡ್ಡೇಕರ ತಂಡ ಭರ್ಜರಿ ಕಾರ್ಯಾಚರಣೆ ನಡೆಸಿದೆ. ಈವರೆಗೂ ವಂಚನೆಯಾದ ಹಣದಲ್ಲಿ 2 ಕೋಟಿ 39 ಲಕ್ಷ 9 ಸಾವಿರ ರೂಪಾಯಿ ಹಣವನ್ನು ಫ್ರೀಜ್ ಮಾಡಿಸಿದ್ದಾರೆ. ಇದರಲ್ಲಿ ಈಗಾಗಲೇ ನೂರಾರು ಜನರಿಗೆ 88 ಲಕ್ಷ ರೂಪಾಯಿ ಹಣವನ್ನು ಮರಳಿ ಅವರ ಖಾತೆಗೆ ಜಮಾ ಆಗುವಂತೆ ಮಾಡಿದ್ದಾರೆ. ಇನ್ನುಳಿದ 1 ಕೋಟಿ 44 ಲಕ್ಷ 99 ಸಾವಿರ ಹಣವನ್ನು ಕಾನೂನು ಪ್ರಕ್ರಿಯೆ ಪೂರ್ಣಗೊಂಡ ಬಳಿಕ ನೊಂದವರ ಕೈಗೆ ಮತ್ತೆ ಸೇರಲಿದೆ. ಆ ಮೂಲಕ ಬೆಳಗಾವಿ ಸಿಇಎನ್ ಪೊಲೀಸರು ಸೈಬರ್ ಹಣ ವಂಚಕರ ಮೇಲೆ ಹದ್ದಿನ ಕಣ್ಣಿಟ್ಟಿದ್ದು, ಜನರೂ ಸಹ ಎಚ್ಚರದಿಂದ ಇರಲು ಪೊಲೀಸರು ಮನವಿ ಮಾಡಿದ್ದಾರೆ.
ಪ್ರತಿ ದಿನವೂ ಒಂದೊಂದು ರೀತಿಯ ಹೊಸ ಹೊಸ ಬಗೆಯ ಆನ್‌ಲೈನ್ ವಂಚನೆ ಪ್ರಕರಣ ಬೆಳಕಿಗೆ ಬರುತ್ತಿವೆ. ಅದರಲ್ಲೂ ಓಟಿಪಿ, ಓಎಲ್ಓಕ್ಸ್, ಕ್ಯೂಆರ್ಕೋಡ್, ಉದ್ಯೋಗ ವಂಚನೆ, ಗಿಫ್ಟ್, ಇನ್ಶುರೆನ್ಸ್, ಫೇಕ್ ಟೂರ್ ಪ್ಯಾಕೇಜ್, ಮೆಟ್ರಿಮೊನಿಯಲ್ ಸೈಟ್ ಸೇರಿದಂತೆ 19 ಪ್ರಕಾರದ ವಂಚನೆ ಪ್ರಕರಣಗಳನ್ನು ಬೆಳಗಾವಿ ಸಿಇಎನ್ ಪೊಲೀಸರು ಭೇದಿಸಿದ್ದಾರೆ. ಆನ್‌ಲೈನ್ ವಂಚನೆ ತಡೆಗಟ್ಟಲು ಬೆಳಗಾವಿ ಸಿಇಎನ್ ಪೊಲೀಸರು ಗೋಲ್ಡನ್ ಅವರ್ ಅಸ್ತ್ರ ಯಶಸ್ವಿ ಆಗಿದೆ. ವಂಚನೆಗೊಳಗಾದ ಮೊದಲ ಒಂದು ಗಂಟೆಯಲ್ಲಿ ಪೊಲೀಸರಿಗೆ ದೂರು ನೀಡಿದರೆ ಸಾಕು, ತಕ್ಷಣವೇ ಹಣ ವರ್ಗಾವಣೆಗೊಂಡ ಬ್ಯಾಂಕ್ ಅಕೌಂಟ್ ಫ್ರೀಜ್ ಮಾಡಿ ಮರಳಿ ಮರುಸಂದಾಯ ಆಗುವಂತೆ ಮಾಡುತ್ತಾರೆ.
ಹಾಗೇ ನೋಡಿದರೆ ರಾಜ್ಯದಲ್ಲಿಯೇ ಬೆಳಗಾವಿ ಸೈಬರ್ ಕ್ರೈಮ್ ಪೊಲೀಸರು ಆನ್‌ಲೈನ್ ವಂಚಕರಿಂದ ನೊಂದವರಿಗೆ ನ್ಯಾಯ ಒದಗಿಸುವ ಕಾರ್ಯವನ್ನು ಮಾಡಿದ್ದಾರೆ. ಅಷ್ಟೇ ಅಲ್ಲದೆ ಮಧ್ಯಪ್ರದೇಶ, ಬಿಹಾರ, ಉತ್ತರ ಪ್ರದೇಶ ಸೇರಿದಂತೆ ವಿವಿಧ ಕಡೆಗಳಿಂದಲೂ ಆರೋಪಿಗಳನ್ನು ಬಂಧಿಸಿ ಅವರಿಂದ ಹಣ ರಿಕವರಿ ಮಾಡಿಕೊಂಡು ಜೈಲಿಗಟ್ಟುವ ಕೆಲಸ ಮಾಡಿದ್ದಾರೆ. ಆನ್ಲೈನ್ನಲ್ಲಿ ಹಣ ಹೋಯ್ತು ಅಂತಿದ್ದವರಿಗೆ ಮತ್ತೆ ಹಣ ನೀಡಿ ಬೇಷ್ ಅನಿಸಿಕೊಂಡಿದ್ದಾರೆ. ಸಿಇಎನ್ ಪೊಲೀಸರ ಈ ಕಾರ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಹಣ ಸಿಗಲ್ಲ ಅಂದುಕೊಂಡವರಿಗೆ ಇದೀಗ ಮತ್ತೆ ತಾವು ಕಳೆದುಕೊಂಡಿದ್ದ ಹಣ ಸಿಕ್ಕು ಮರುಜೀವ ಬಂದಂತಾಗಿದೆ. ಇನ್ನೂ ಆನ್ಲೈನ್ನಲ್ಲಿ ಸಾಕಷ್ಟು ಜನ ವಂಚನೆಗೆ ಒಳಗಾಗುತ್ತಿದ್ದು, ಇನ್ನಾದರೂ ಸಾರ್ವಜನಿಕರು ಎಚ್ಚೇತ್ತುಕೊಳ್ಳುವ ಕೆಲಸ ಮಾಡಲಿ. ಜನರೂ ಸಹ ಎಚ್ಚರಿಕೆಯಿಂದ ಆನ್‌ಲೈನ್ ಮೂಲಕ ವ್ಯವಹರಿಸಲು ಮನವಿ ಮಾಡಿದ್ದು, ಯಾರಿಗೂ ಸಹ ಓಟಿಪಿ ಶೇರ್ ಮಾಡದಂತೆ ಹಾಗೂ ಅಪರಿಚಿತ ನಂಬರ್‌ನಿಂದ ಬಂದ ಲಿಂಕ್ ಕ್ಲಿಕ್ ಮಾಡದಂತೆ ಪೊಲೀಸರು ಮನವಿ ಮಾಡಿದ್ದಾರೆ.
ವರದಿ: ಸಹದೇವ ಮಾನೆ
ಇದನ್ನೂ ಓದಿ: ಡ್ಯಾನ್ಸ್ ಬಾರ್ಗಳಿಗೆ ಲೈಸೆನ್ಸ್ ಕೊಡಿಸುವುದಾಗಿ ಗೃಹ ಸಚಿವರ ಹೆಸರಲ್ಲಿ ವಂಚನೆ; ಆರೋಪಿ ಸಿಸಿಬಿ ವಶಕ್ಕೆ
ಒಂದು ವರ್ಷದಲ್ಲಿ 80ಕ್ಕೂ ಹೆಚ್ಚು ಆನ್‌ಲೈನ್ ವಂಚನೆ ಪ್ರಕರಣ ಪತ್ತೆ; ಬೆಳಗಾವಿ ಜನತೆಗೆ ಎಚ್ಚರಿಸಿದ ಪೊಲೀಸರು
Published On - 9:26 am, Mon, 8 November 21