ಒಂದು ವರ್ಷದಲ್ಲಿ 80ಕ್ಕೂ ಹೆಚ್ಚು ಆನ್‌ಲೈನ್ ವಂಚನೆ ಪ್ರಕರಣ ಪತ್ತೆ; ಬೆಳಗಾವಿ ಜನತೆಗೆ ಎಚ್ಚರಿಸಿದ ಪೊಲೀಸರು
ಆನ್‌ಲೈನ್ ವಂಚನೆ ತಡೆಯಲು ಸಾರ್ವಜನಿಕರೂ ಜಾಗೃತಿ ವಹಿಸುವ ಜತೆಗೆ, ಪೊಲೀಸರಿಗೆ ತಕ್ಷಣವೇ ಮಾಹಿತಿ ನೀಡಬೇಕು ಎಂದು ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ವಿಕ್ರಂ ಅಮಟೆ ಮನವಿ ಮಾಡಿಕೊಂಡಿದ್ದಾರೆ.
ಬೆಳಗಾವಿ: ಇತ್ತಿಚೀನ ದಿನಗಳಲ್ಲಿ ಆನ್‌ಲೈನ್ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿವೆ. ಬಣ್ಣ ಬಣ್ಣದ ಮಾತುಗಳನ್ನಾಡಿ ಯಾವುದೋ ಮೂಲೆಯಲ್ಲಿ ಕುಳಿತು ಆನ್‌ಲೈನ್ ಮೂಲಕವೇ ಹಣವನ್ನು ದೋಚುತ್ತಿದ್ದಾರೆ. ಅಲ್ಲದೆ ಬ್ಯಾಂಕ್ ಖಾತೆಗಳನ್ನು ಹ್ಯಾಕ್ ಮಾಡಿ ಜನರನ್ನು ವಂಚಿಸುತ್ತಿದ್ದಾರೆ. ಇಂತಹದ್ದೇ ಪ್ರಕರಣಗಳು ಸದ್ಯ ಬೆಳಗಾವಿಯಲ್ಲೂ ನಡೆಯುತ್ತಿದ್ದು, ಜಿಲ್ಲೆಯಲ್ಲಿ ಒಂದು ವರ್ಷದ ಅವಧಿಯಲ್ಲಿ ಸುಮಾರು 80 ಜನ ಮೋಸ ಹೋಗಿದ್ದಾರೆ. ದೂರದ ಆಫ್ರಿಕಾದಲ್ಲಿ ಕುಳಿತು ಗಡಿ ಜಿಲ್ಲೆಯಲ್ಲಿ ಹಣವನ್ನು ದೋಚಿದ ಪ್ರಕರಣಗಳು ಕೂಡ ಈಗ ಬೆಳಕಿಗೆ ಬಂದಿದೆ.
ಆನ್ಲೈನ್ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಂಚನೆ ನಡೆಯುತ್ತಿದ್ದು, ಇದರಿಂದ ಹುಷಾರಾಗಿರಿ ಎಂದು ಎಷ್ಟೇ ಹೇಳಿದರು ವಂಚನೆಗೊಳಗಾಗುವವರ ಸಂಖ್ಯೆ ಕಡಿಮೆಯಾಗುತ್ತಿಲ್ಲ. ಇದಕ್ಕೆ ಸಾಕ್ಷಿ ಬೆಳಗಾವಿ ಜಿಲ್ಲೆಯೊಂದರಲ್ಲಿಯೇ ವರ್ಷಕ್ಕೆ 80 ಆನ್‌ಲೈನ್ ವಂಚನೆ ಪ್ರಕರಣ ದಾಖಲಾಗಿರುವುದಾಗಿದೆ. ಅಲ್ಲದೆ ಬೆಳಗಾವಿ ಜಿಲ್ಲೆಯ ಪೊಲೀಸರು ರಾಜ್ಯದಲ್ಲೇ ಹೆಚ್ಚು ಆನ್‌ಲೈನ್ ವಂಚನೆ ಪ್ರಕರಣಗಳನ್ನು ಪತ್ತೆ ಹಚ್ಚುವುದರ ಮೂಲಕ ಸೈ ಎನಿಸಿಕೊಂಡಿದ್ದಾರೆ. ಬೆಳಗಾವಿಯಲ್ಲಿ 1 ಕೋಟಿ 65 ಲಕ್ಷಕ್ಕೂ ಅಧಿಕ ಹಣ ದೋಚಿದ್ದಾರೆ. ಈ ಪೈಕಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 29.13 ಲಕ್ಷ ಹಾಗೂ ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ 9 ಲಕ್ಷ ಹಣ ಜಪ್ತಿ ಮಾಡಿದ್ದಾರೆ.
2020-21ನೇ ಸಾಲಿನಲ್ಲಿ 49 ಪ್ರಕರಣಗಳಲ್ಲಿ ಸೈಬರ್ ವಂಚಕರು 1 ಕೋಟಿ 65 ಲಕ್ಷಕ್ಕೂ ಅಧಿಕ ಹಣ ವಂಚಿಸಿದ್ದಾರೆ. ಈ ಪೈಕಿ ನಗರದ ಸಿಇಎನ್ ಪೊಲೀಸರು 29 ಲಕ್ಷ 13 ಸಾವಿರ 303 ರೂಪಾಯಿ ಜಪ್ತಿ ಮಾಡಿಕೊಂಡು ನೊಂದವರ ಖಾತೆಗೆ ವರ್ಗಾಯಿಸಿದ್ದಾರೆ. ಓಟಿಪಿ ನಂಬರ್ ಪಡೆದು ವಂಚನೆ, ಫೇಸ್‌ಬುಕ್ ಖಾತೆ ಹ್ಯಾಕ್ ಮಾಡಿ ಹಣಕ್ಕಾಗಿ ಬೇಡಿಕೆ, ಮೆಟ್ರಿಮೊನಿಯಲ್ ವೆಬ್‌ಸೈಟ್, ಆನ್‌ಲೈನ್ ಅಸ್ಟ್ರಾಲಾಜಿ, ಹರ್ಬಲ್ ಪ್ರೊಡಕ್ಟ್, ಕೆವೈಸಿ ಅಪ್ಡೇಟ್, ಫೇಕ್ ಮಾರ್ಕೇಟಿಂಗ್ ವೆಬ್‌ಸೈಟ್ ಸೇರಿ ವಿವಿಧ ರೀತಿಯ ಸೈಬರ್ ವಂಚನೆ ಪ್ರಕರಣಗಳನ್ನು ಸಿಇಎನ್ ಪೊಲೀಸರು ಬೇಧಿಸಿದ್ದಾರೆ.
ಆನ್‌ಲೈನ್ ವಂಚನೆ ತಡೆಯಲು ಸಾರ್ವಜನಿಕರೂ ಜಾಗೃತಿ ವಹಿಸುವ ಜತೆಗೆ, ಪೊಲೀಸರಿಗೆ ತಕ್ಷಣವೇ ಮಾಹಿತಿ ನೀಡಬೇಕು ಎಂದು ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ವಿಕ್ರಂ ಅಮಟೆ ಮನವಿ ಮಾಡಿಕೊಂಡಿದ್ದಾರೆ.
ಇನ್ನೂ ನಗರ ವ್ಯಾಪ್ತಿಯಲ್ಲಿ ಈ ರೀತಿ ಆನ್ಲೈನ್ನಲ್ಲಿ ಹಣ ಎಗರಿಸಿದ್ದ ಖದೀಮರ ಪ್ರಕರಣಗಳು ಒಂದು ಕಡೆಯಾದರೆ. ಜಿಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಖಾತೆಗಳನ್ನೇ ಹ್ಯಾಕ್ ಮಾಡಿ ವಂಚನೆ ಮಾಡಿದ ಪ್ರಕರಣಗಳು ಬೆಳಕಿಗೆ ಬಂದಿವೆ. ಬೆಳಗಾವಿಯ ಜನರಲ್ ಮ್ಯಾನೇಜರ್ ಅಶೋಕ್ ಬಂಕಾಪುರೆ ಅವರ ಐಸಿಐಸಿಐ ಬ್ಯಾಂಕ್ನ ಖಾತೆ ಹ್ಯಾಕ್ ಮಾಡಿ, ದೂರದ ಆಫ್ರಿಕಾ ಹಾಗೂ ಮುಂಬೈನಲ್ಲಿ ಕುಳಿತು ಬರೋಬ್ಬರಿ 94ಲಕ್ಷ ರೂಪಾಯಿ ದೋಚಿದ್ದಾರೆ.
ಆಫ್ರಿಕಾದಲ್ಲಿ ಕುಳಿತು ಟೋನಿ ಎಂಬಾತ ಅಕೌಂಟ್ ಹ್ಯಾಕ್ ಮಾಡುತ್ತಿದ್ದ, ಮುಂಬೈನಲ್ಲಿರುವ ಇಂದ್ರೇಶ್ ಹಾಗೂ ಅಭಿಜಿಯ್ ಮಿಶ್ರಾ ಡಮ್ಮಿ ಅಕೌಂಟ್ಗಳನ್ನ ಕ್ರಿಯೆಟ್ ಮಾಡುತ್ತಿದ್ದರು. ಅಕೌಂಟ್ ಹ್ಯಾಕ್ ಮಾಡಿ ತೆಗೆದುಕೊಂಡ ಹಣವನ್ನು ಡಮ್ಮಿ ಅಕೌಂಟ್ಗಳಿಗೆ ಟೋನಿ ಟ್ರಾನ್ಸಫರ್ ಮಾಡುತ್ತಿದ್ದ. ಈ ರೀತಿ ಕೋಟ್ಯಾಂತರ ರೂಪಾಯಿ ವಂಚನೆ ಮಾಡಿದ್ದ ಗ್ಯಾಂಗ್ನ ಕೆಲವರು ಇದೀಗ ಕರ್ನಾಟಕ ಪೊಲೀಸರು ಖೆಡ್ಡಾ ತೋಡಿದ್ದಾರೆ. ಈ ಕುರಿತು ಸದಲಗಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಕೂಡಲೇ ಎಚ್ಚೇತ್ತುಕೊಂಡ ಪೊಲೀಸರು ಹ್ಯಾಕರ್ಸ್ ಬೆನ್ನು ಬಿದ್ದಿದ್ದರು ಈ ಪೈಕಿ ಮೂರು ಜನರನ್ನು ಬಂಧಿಸಿ ಜೈಲಿಗಟ್ಟುವ ಕೆಲಸ ಸದಲಗಾ ಪೊಲೀಸರು ಮಾಡಿದ್ದಾರೆ. ನೈಜಿರಿಯಾ ಮೂಲದ ಬುಜುಕಾ ಪೀಟರ್ ಚಿಗೋಜಿ, ಇಂದ್ರೇಶ್ ಪಾಂಡೆ, ಅಭಿಜಿತ್ ಮಿಶ್ರಾ ಮೂವರನ್ನು ಮುಂಬೈನಲ್ಲಿ ಬಂಧಿಸಿದ್ದಾರೆ. ಇನ್ನು ಆಫ್ರಿಕಾದಲ್ಲಿ ಕುಳಿತು ಹ್ಯಾಕ್ ಮಾಡಿ ಹಣ ಎಗರಿಸುತ್ತಿದ್ದ ವ್ಯಕ್ತಿಯ ಶೋಧ ಕಾರ್ಯ ಮುಂದುವರಿದಿದೆ.
ಮೊಬೈಲ್ಗೆ ಕರೆ ಮಾಡಿ ಓಟಿಪಿ ನಂಬರ್ ಕೇಳಿ ಹಣ ಎಗರಿಸುತ್ತಾರೆ. ಈ ಬಗ್ಗೆ ಜಾಗೃತರಾಗಿರಿ ಎಂದು ಸಾಕಷ್ಟು ಬಾರಿ ಜಾಗೃತಿ ಮೂಡಿಸಿದರೂ ಜನ ಮಾತ್ರ ಎಚ್ಚೇತ್ತುಕೊಳ್ಳುತ್ತಿಲ್ಲ. ಇತ್ತ ಖಾತೆಗಳನ್ನ ಹ್ಯಾಕ್ ಮಾಡಿ ಕಳ್ಳತನ ಮಾಡುವ ಪ್ರಕರಣಗಳು ಕೂಡ ಹೆಚ್ಚಾಗಿದ್ದು, ನಿಮಗೆ ಗೊತ್ತಿಲ್ಲದಂತೆ ನಿಮ್ಮ ಅಕೌಂಟ್ನಿಂದ ಹಣ ಡ್ರಾ ಆದ ಕೂಡಲೇ ತಕ್ಷಣ ಪೊಲೀಸ್ ಠಾಣೆಗೆ ದೂರು ಕೊಡುವ ಕೆಲಸ ಮಾಡಿ. ಆನ್ಲೈನ್ನಲ್ಲಿ ಹಣ ಕಳೆದುಕೊಂಡ ತಕ್ಷಣ ಪೊಲೀಸರಿಗೆ ದೂರು ನೀಡಿದರೆ ನಿಮ್ಮ ಹಣ ಕೊಡಿಸುವ ಪ್ರಯತ್ನ ಮಾಡಲಾಗುತ್ತದೆ ಎಂದು ಬೆಳಗಾವಿ ಎಸ್ಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.
ಇದನ್ನೂ ಓದಿ: ಆನ್‌ಲೈನ್ ಆಕ್ಸಿಜನ್ ಕಾನ್ಸಂಟ್ರೇಟರ್ ಹೆಸರಲ್ಲಿ ವಂಚನೆ; ಕೊನೆಗೂ ಉಳಿಯಲಿಲ್ಲ ನೆಲಮಂಗಲದ ಸೋಂಕಿತನ ಜೀವ
ಪೂಜೆ, ದೇವರ ಹೆಸರಿನಲ್ಲಿ ಹತ್ತಾರು ಮಹಿಳೆಯರಿಗೆ ಲಕ್ಷಾಂತರ ರೂಪಾಯಿ ವಂಚನೆ: ಮಹಿಳೆ ಪರಾರಿ