ಆರ್​ಎಸ್​ಎಸ್​ ಸಿದ್ಧಾಂತವನ್ನು ಬಿಜೆಪಿ ಭಾರತೀಯರ ಮೇಲೆ ಹೇರುತ್ತಿದೆ; ಸಿಎಂ ಸಿದ್ದರಾಮಯ್ಯ ಆರೋಪ

| Updated By: ಸುಷ್ಮಾ ಚಕ್ರೆ

Updated on: Jan 21, 2025 | 7:32 PM

ಬೆಳಗಾವಿಯಲ್ಲಿ ಬೆಳಗಾವಿಯ ಸಿಪಿಎಡ್ ಮೈದಾನದಲ್ಲಿ ನಡೆದ ಗಾಂಧಿ ಭಾರತ ಸಮಾವೇಶದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, 2013-2018ರವರೆಗೆ ನಮ್ಮ ಸರ್ಕಾರ ಅನೇಕ ಭಾಗ್ಯಗಳನ್ನು ಕೊಟ್ಟಿದೆ. ಎಲ್ಲ ಜಾತಿಯ ಬಡವರಿಗೆ ನಾವು ಯೋಜನೆಗಳನ್ನು ಕೊಟ್ಟಿದ್ದೇವೆ. ಗ್ಯಾರಂಟಿಗಳನ್ನು ಜಾರಿಗೊಳಿಸಿದರೆ ಸರ್ಕಾರ ಬೀಳುತ್ತದೆ ಎಂದು ಹೇಳಿದ್ದರು. ಆದರೆ, ಇನ್ನೂ ನಾವು ಅಧಿಕಾರದಲ್ಲಿದ್ದೇವೆ ಎಂದು ಸಮಾವೇಶದಲ್ಲಿ ಬಿಜೆಪಿ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಆರ್​ಎಸ್​ಎಸ್​ ಸಿದ್ಧಾಂತವನ್ನು ಬಿಜೆಪಿ ಭಾರತೀಯರ ಮೇಲೆ ಹೇರುತ್ತಿದೆ; ಸಿಎಂ ಸಿದ್ದರಾಮಯ್ಯ ಆರೋಪ
Karnataka Cm Siddaramaiah
Follow us on

ಬೆಳಗಾವಿ: ಸಂವಿಧಾನ ದ್ವೇಷಿಯಾಗಿರುವ ಆರ್.ಎಸ್.ಎಸ್ ಸಿದ್ಧಾಂತವನ್ನು ಬಿಜೆಪಿ ಭಾರತೀಯರ ಮೇಲೆ ಹೇರುತ್ತಿದ್ದು, ಇದನ್ನು ಹಿಮ್ಮೆಟ್ಟಿಸೋಣ. ಬಿಜೆಪಿ ಪರಿವಾರ ಭಾರತದಲ್ಲಿ ಬಹಳ ವ್ಯವಸ್ಥಿತವಾಗಿ ಒಡಕು ತರುತ್ತಿದೆ. ಭಾರತೀಯರ ನಡುವೆ ಬಿರುಕು ಮೂಡಿಸುತ್ತಾ ಭಾರತವನ್ನು ದುರ್ಬಲಗೊಳಿಸುತ್ತಿದೆ. ಬಿಜೆಪಿಯ ಈ ಪ್ರಯತ್ನವನ್ನು ನಾವು ಸೋಲಿಸಬೇಕು. ಇದಕ್ಕೆ ಗಾಂಧಿ-ಅಂಬೇಡ್ಕರ್ ನಮಗೆ ಮಾರ್ಗದರ್ಶಕರು. ಸಂವಿಧಾನ ಜಾರಿಯಾದಾಗ ಬಿಜೆಪಿ ಪರಿವಾರ ಅಂಬೇಡ್ಕರ್ ಭಾವಚಿತ್ರವನ್ನು, ಸಂವಿಧಾನವನ್ನು ಸುಟ್ಟಿತ್ತು. ಇದನ್ನು ಈ ದೇಶ, ದೇಶದ ಜನ ಸಮುದಾಯ ಯಾವತ್ತೂ ಕ್ಷಮಿಸುವುದಿಲ್ಲ, ಮರೆಯುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಳಗಾವಿಯ ಗಾಂಧಿ ಭಾರತ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

ನಮ್ಮ ಸರ್ಕಾರ ಬಂದಮೇಲೆ 5 ಗ್ಯಾರಂಟಿ ಯೋಜನೆ ಜಾರಿ ಮಾಡಿದ್ದೇವೆ. ಅದಕ್ಕಾಗಿ ಬಜೆಟ್‌ನಲ್ಲಿ 55 ಸಾವಿರ ಕೋಟಿ ರೂ. ಹಣ ತೆಗೆದಿಟ್ಟಿದ್ದೇವೆ. ಗ್ಯಾರಂಟಿ ಯೋಜನೆ ಬಗ್ಗೆ ಬಿಜೆಪಿಯವರು ಟೀಕೆ ಮಾಡಿದರು. ಆದರೆ, ನೇರವಾಗಿ ಜನರಿಗೆ ಗ್ಯಾರಂಟಿ ಯೋಜನೆ ತಲುಪಿಸಿದ್ದೇವೆ. ಅಭಿವೃದ್ಧಿಗೆ ನಾವು ಹಣವನ್ನ ಕೊಟ್ಟಿದ್ದೇವೆ. ಕಾಂಗ್ರೆಸ್ ಗಾಂಧಿಯವರ ಹಿಂದುತ್ವದಲ್ಲಿ ನಂಬಿಕೆ ಇಟ್ಟಿದೆ. ಬಿಜೆಪಿ ಯಾವಾಗಲೂ ಮಹಾತ್ಮ ಗಾಂಧಿಯನ್ನು ‘ಹಿಂದೂ ವಿರೋಧಿ’ ಎಂದು ಬಿಂಬಿಸುತ್ತಿತ್ತು. ಆದರೆ ಅದು ನೂರಕ್ಕೆ ನೂರು ಸುಳ್ಳು ಎಂದು ಸಿದ್ದರಾಮಯ್ಯ ಬೆಳಗಾವಿಯ ಸುವರ್ಣ ವಿಧಾನಸೌಧದ ಮುಂದೆ ಮಹಾತ್ಮ ಗಾಂಧಿಯವರ ಪ್ರತಿಮೆಯ ಉದ್ಘಾಟನಾ ಸಮಾರಂಭದಲ್ಲಿ ಸಿಎಂ ಹೇಳಿದರು.

ಇದನ್ನೂ ಓದಿ: ದಲಿತ ವಿರೋಧಿ ಬಿಜೆಪಿಯಿಂದ ಸಂವಿಧಾನಕ್ಕೆ ಆಪತ್ತು; ಬೆಳಗಾವಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ

ಹಲವು ಭಾಷೆ, ಹಲವು ಜಾತಿ, ಹಲವು ಧರ್ಮ‌ ಭಾರತದ ಶಕ್ತಿ. ಬಿಜೆಪಿ ಪರಿವಾರ ಗಾಂಧಿ, ಅಂಬೇಡ್ಕರ್ ಅವರನ್ನು ದ್ವೇಷಿಸುತ್ತದೆ. ನಾವು ಇಬ್ಬರ ಆಶಯಗಳನ್ನೂ ಪೀಳಿಗೆಯಿಂದ ಪೀಳಿಗೆಗೆ ದಾಟಿಸುತ್ತೇವೆ, ವಿಸ್ತರಿಸುತ್ತೇವೆ.‌ ನಾವು ಸಂವಿಧಾನವನ್ನು ರಕ್ಷಿಸಿದರೆ ಸಂವಿಧಾನ ನಮ್ಮೆಲ್ಲರನ್ನೂ ರಕ್ಷಿಸುತ್ತದೆ. ನಮಗೆ ಚುನಾವಣೆ ಗೆಲ್ಲುವುದಕ್ಕಿಂತ ನಮ್ಮ ಸಿದ್ಧಾಂತ ಗೆಲ್ಲಬೇಕು. ಅದು ಮಾತ್ರ ನಮ್ಮ ನಿಜವಾದ ಗೆಲುವು. ಗಾಂಧಿ-ಅಂಬೇಡ್ಕರ್ ಅವರ ಆಶಯಗಳು, ಮೌಲ್ಯಗಳ ಈಡೇರಿಕೆಗೆ ನಾವು ಕಾರ್ಯಕ್ರಮಗಳನ್ನು ರೂಪಿಸಿ ಜಾರಿ ಮಾಡಿದ್ದೇವೆ. ಇದಕ್ಕಾಗಿ ಬಜೆಟ್​ನಲ್ಲಿ 52 ಸಾವಿರ ಕೋಟಿಗೂ ಅಧಿಕ ಮೊತ್ತದ ಹಣವನ್ನು ನೇರವಾಗಿ ಜನರ ಖಾತೆಗೆ ಹಾಕಿ ರಾಜ್ಯದ ಜನರನ್ನು ಆರ್ಥಿಕವಾಗಿ ಸಬಲರನ್ನಾಗಿಸಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.


ಗ್ಯಾರಂಟಿಗಳ ಜೊತೆಗೆ ನಾವು ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದೇವೆ. ಕಾಂಗ್ರೆಸ್​ಗೆ ಮಾತ್ರ ಎಲ್ಲ ಧರ್ಮಗಳನ್ನು ಕೊಂಡೊಯ್ಯುವ ಶಕ್ತಿ ಇದೆ. ನಾವು ದ್ವೇಷಿಸುವ ಕೆಲಸ ಮಾಡಲ್ಲ, ಪರಸ್ಪರ ಪ್ರೀತಿಸುವ ಕೆಲಸ ಮಾಡುತ್ತದೆ. ಪ್ರಜಾಪ್ರಭುತ್ವದ ಮೇಲೆ ಬಿಜೆಪಿಗೆ ನಂಬಿಕೆ ಇಲ್ಲ. ನಮ್ಮ ಸಿದ್ಧಾಂತ ಗೆದ್ದರೇ ಸಮ ಸಮಾಜ ನಿರ್ಮಾಣ ಮಾಡಲು ಸಾಧ್ಯವಿದೆ. ಹಿಂದೂ‌ಗಳು, ಮುಸ್ಲಿಮರು ಒಟ್ಟಾಗಿ ಹೋಗಬೇಕಿದೆ ಎಂದು ಗಾಂಧಿ ಭಾರತ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಇದನ್ನೂ ಓದಿ: ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯರನ್ನು ಯಾಕೆ ಟಾರ್ಗೆಟ್ ಮಾಡಲಾಗುತ್ತಿದೆ? ಕೆಎಂ ಶಿವಲಿಂಗೇಗೌಡ

ಬಿಜೆಪಿ ಆರ್​ಎಸ್​ಎಸ್ ಸಿದ್ಧಾಂತಗಳ ವಿರುದ್ಧ ಹೋರಾಟ ಮಾಡುವುದು ಕಾಂಗ್ರೆಸ್ ಪಕ್ಷದ ಎಲ್ಲ ಕಾರ್ಯಕರ್ತರ ಕರ್ತವ್ಯ. ಆರ್​ಎಸ್​ಎಸ್​ ಸಿದ್ದಾಂತವೇ ಬಿಜೆಪಿ ಸಿದ್ದಾಂತ. ಅವರ ಸಿದ್ದಾಂತ ಒಡಕು ತಾರತಮ್ಯವಾಗಿದೆ. ಇದನ್ನು ದೇಶದಲ್ಲಿ ವ್ಯವಸ್ಥಿತವಾಗಿ ಮಾಡುತ್ತಿದ್ದಾರೆ. ಇವರ ಸಿದ್ದಾಂತವನ್ನು ಗಾಂಧೀಜಿ‌ ಅಂಬೇಡ್ಕರ್ ಮಾಡುತ್ತಿದ್ದ ಕಾರಣ ಅವರನ್ನು ಬಿಜೆಪಿ ವಿರೋಧಿಸಿಕೊಂಡು ಬಂದಿದೆ. ನಮ್ಮದು ಭಾತೃತ್ವ ದೇಶ. ಎಲ್ಲರನ್ನು ಮನುಷ್ಯರನ್ನಾಗಿ ಕಾಣಬೇಕಿರೋದು ಅವಶ್ಯ. ಬಿಜೆಪಿ ಗಾಂಧಿ ಹಾಗೂ ಅಂಬೇಡ್ಕರ್ ಅವರನ್ನು ವಿರೋಧ ಮಾಡುತ್ತಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.


ಈಗೀಗ ಅಂಬೇಡ್ಕರ್ ಅವರ ಬಗ್ಗೆ ಬಿಜೆಪಿಯವರು ಬಹಳ ಪ್ರೀತಿ ತೋರಿಸುತ್ತಿದ್ದಾರೆ. ಅವರು ಯಾವಾಗಲೂ ಅಂಬೇಡ್ಕರ್ ವಿರೋಧಿಗಳು. ನಾವು ಸಂವಿಧಾನ ರಕ್ಷಣೆ ಮಾಡಿದರೆ ಸಂವಿಧಾನ ನಮ್ಮನ್ನ ರಕ್ಷಣೆ ಮಾಡುತ್ತದೆ. ಸಂವಿಧಾನ ಜಾರಿಗೆ ಬಂದಾಗಲೇ ವಿರೋಧ ಮಾಡಿದರು. ಗೋನವಾಳಕರ, ಸಾವರ್ಕರ್ ಕೂಡ ಇದನ್ನ ವಿರೋಧಿಸಿದ್ದರು. ಗಾಂಧೀಜಿ, ಅಂಬೇಡ್ಕರ್, ನೆಹರು ಅವರ ಪ್ರತಿಮೆಯನ್ನ ದಹನ ಮಾಡಿದ್ದರು. ದೇಶದ ಎಲ್ಲಾ ಜನರಿಗೆ ಆರ್ಥಿಕ, ಸಾಮಾಜಿಕ ಸ್ವಾತಂತ್ರ್ಯ ಸಿಕ್ಕಾಗ ಮಾತ್ರ ಸ್ವಾತಂತ್ರ್ಯ ಸಿಕ್ಕಂತೆ. ಆರ್ಥಿಕವಾಗಿ, ಸಾಮಾಜಿಕವಾಗಿ ಶಕ್ತಿ ತುಂಬುವ ಕೆಲಸವನ್ನ ಕಾಂಗ್ರೆಸ್ ಸರ್ಕಾರ ಮಾಡಿದೆ ಎಂದು ಸಿಎಂ ಹೇಳಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ