ಬೆಳಗಾವಿ, ನವೆಂಬರ್ 18: ಕಾಂಗ್ರೆಸ್ ಸರ್ಕಾರವನ್ನು ಕೆಡವಲು ಪಕ್ಷದ ಶಾಸಕರಿಗೆ ಬಿಜೆಪಿ ಹಣದ ಆಮಿಷ ಒಡ್ಡುತ್ತಿದೆ ಎಂಬ ಆರೋಪ ಕರ್ನಾಟಕ ರಾಜಕಾರಣದಲ್ಲಿ ಮತ್ತೆ ಭಾರಿ ಸದ್ದು ಮಾಡಲು ಆರಂಭಿಸಿದೆ. 50 ಕೋಟಿ ರೂಪಾಯಿ ಆಫರ್ ಬಗ್ಗೆ ಸಿಎಂ ಸಿದ್ದರಾಮಯ್ಯ ಆರೋಪ ಮಾಡಿದ್ದು ಈಚೆಗೆ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಮಂಡ್ಯದಲ್ಲಿ ಕಾಂಗ್ರೆಸ್ ಶಾಸಕ ರವಿಕುಮಾರ್ ಗಣಿಗ 100 ಕೋಟಿ ರೂ. ಆಫರ್ ಹೇಳಿಕೆ ನೀಡಿದ್ದಾರೆ. ಆದರೆ, ಈ ಹೇಳಿಕೆಯಲ್ಲಿ ತಮ್ಮ ಹೆಸರು ಉಲ್ಲೇಖಿಸಿರುವುದು ನಿಜವಲ್ಲ ಎಂದು ಕಿತ್ತೂರು ಕಾಂಗ್ರೆಸ್ ಶಾಸಕ ಬಾಬಾಸಾಹೇಬ್ ಪಾಟೀಲ್ ಸ್ಪಷ್ಟಪಡಿಸಿದ್ದಾರೆ.
ಮಂಡ್ಯದಲ್ಲಿ ಮಾತನಾಡಿದ್ದ ರವಿ ಕುಮಾರ್ ಗಣಿಗ, ನಮ್ಮ ಬಳಿ ಆಪರೇಷನ್ ಕಮಲಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳಿವೆ. ಕಿತ್ತೂರು ಶಾಸಕ ಬಾಬು, ಚಿಕ್ಕಮಗಳೂರು ಶಾಸಕ ತಮ್ಮಣ್ಣರನ್ನ ಯಾಕೆ ಸಂಪರ್ಕಿಸಿದ್ದರು ಎಂದು ಪ್ರಶ್ನಿಸಿದ್ದರು.
ರವಿ ಕುಮಾರ್ ಗಣಿಗ ಹೇಳಿಕೆಗೆ ಪ್ರತಿಕ್ರಿಯಿಸಿದ ಕಿತ್ತೂರು ಕಾಂಗ್ರೆಸ್ ಶಾಸಕ ಬಾಬಾಸಾಹೇಬ್ ಪಾಟೀಲ್, ಬಿಜೆಪಿಯ ಯಾವ ನಾಯಕರು ಕೂಡ ನನ್ನನ್ನು ಈಗ ಸಂಪರ್ಕ ಮಾಡಿಲ್ಲ. ಸರ್ಕಾರದ ಆರಂಭದಲ್ಲಿ ಬಿಜೆಪಿಯಿಂದ ಆಫರ್ ಬಂದಿತ್ತು. ಆಗ ಸ್ನೇಹ, ವಿಶ್ವಾಸದ ಮೇಲೆ ಬಿಜೆಪಿಯಲ್ಲಿನ ಸ್ನೇಹಿತರು ಆಹ್ವಾನ ನೀಡಿದ್ದರು ಅಷ್ಟೆ. ಆದರೆ ಈಗ ಯಾರೂ ಸಂಪರ್ಕಿಸಿಲ್ಲ. ರವಿ ಗಣಿಗ ಯಾಕೆ ಹಾಗೇ ಹೇಳಿದ್ದಾರೋ ನನಗೆ ಗೊತ್ತಿಲ್ಲ. ನನಗೆ ಯಾವುದೇ ಆಫರ್ ಬಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ನನಗೆ ಯಾವುದೇ ದುಡ್ಡಿನ ಆಫರ್ ಬಂದಿಲ್ಲ. ರವಿಕುಮಾರ್ ಗಣಿಗ ನೀಡಿರುವ ಹೇಳಿಕೆ ಸಂಪೂರ್ಣ ಸುಳ್ಳು. ಅವರು ಯಾಕೆ ಹೀಗೆ ಹೇಳಿದ್ದಾರೆ ಎಂಬುದಾಗಿ ಅವರನ್ನೇ ಕೇಳಿ. ಅವರ ಬಳಿ ಆಡಿಯೋ, ವಿಡಿಯೋ ದಾಖಲೆ ಇದ್ದರೆ ಬಿಡುಗಡೆ ಮಾಡಲಿ ಎಂದು ಬಾಬಾಸಾಹೇಬ್ ಪಾಟೀಲ್ ಹೇಳಿದ್ದಾರೆ.
ಇದನ್ನೂ ಓದಿ: ಬಿಜೆಪಿಯಿಂದ 100 ಕೋಟಿ ರೂ. ಆಫರ್: ಕಾಂಗ್ರೆಸ್ ಶಾಸಕ ರವಿಕುಮಾರ್ ಗಣಿಗ ಮತ್ತೆ ಆರೋಪ
ಮೈಸೂರಿನ ಸೋಸಲೆ ಗ್ರಾಮದ ಬಳಿ ಕಳೆದ ಬುಧವಾರ ಮಾತನಾಡಿದ್ದ ಸಿಎಂ ಸಿದ್ದರಾಮಯ್ಯ, ನಮ್ಮ ಶಾಸಕರಿಗೆ ಬಿಜೆಪಿಯವರು 50 ಕೋಟಿ ರೂ. ಆಮಿಷವೊಡ್ಡಿದ್ದಾರೆ. ಅವರಿಗೆ ಎಲ್ಲಿಂದ ಈ ಹಣ ಬರುತ್ತದೆ? ಅವರು ನೋಟ್ ಪ್ರಿಂಟ್ ಮಾಡುತ್ತಾರಾ ಎಂದು ಪ್ರಶ್ನಿಸಿದ್ದರು. ನಮ್ಮ ಶಾಸಕರು ಈ ಆಮಿಷಕ್ಕೆ ಬಲಿಯಾಗದಿರುವ ಕಾರಣ ನನ್ನ ವ್ಯಕ್ತಿತ್ವಕ್ಕೆ ಮಸಿಬಳಿಯಲು ಯತ್ನಿಸುತ್ತಿದ್ದಾರೆ ಎಂದು ಅವರು ಹೇಳಿದ್ದರು.
ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಸಿಎಂ ಅವರ ಪಕ್ಷದ ಶಾಸಕರ ಮೇಲೆ ವಿಶ್ವಾಸ ಕಳೆದುಕೊಂಡಂತೆ ಕಾಣಿಸುತ್ತಿದೆ ಎಂದಿದ್ದರು. ಸಿದ್ದರಾಮಯ್ಯನವರು ಪ್ರಜಾಪ್ರಭುತ್ವ ವ್ಯವಸ್ಥೆಗೆ ಹಾಗೂ ಶಾಸಕರನ್ನು ಮಾರಾಟದ ವಸ್ತುಗಳಂತೆ ವ್ಯಾಖ್ಯಾನಿಸಿ ಅವರಿಗೆ ಅವಮಾನ ಮಾಡುತ್ತಿದ್ದಾರೆ. ಅವರ ಹೇಳಿಕೆ ಶಾಸಕರನ್ನು ಅಂಕೆಯಲಿಟ್ಟುಕೊಳ್ಳಲು ಆಗದೆ ಹಾಗೂ ಸುತ್ತುವರೆದಿರುವ ಭ್ರಷ್ಟಾಚಾರದ ಹಗರಣಗಳನ್ನು ಮುಚ್ಚಿಕೊಳ್ಳಲು ಹೆಣೆದಿರುವ ಹತಾಶೆಯ ಸುಳ್ಳಿನ ಕಂತೆ ಎನ್ನುವುದು ಕನಿಷ್ಠ ರಾಜಕೀಯ ಜ್ಞಾನ ಇರುವವರಿಗೂ ಅರಿವಾಗುತ್ತದೆ ಎಂದು ವಿಜಯೇಂದ್ರ ಟೀಕಿಸಿದ್ದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:10 am, Mon, 18 November 24