ನೆರೆ ಸಂತ್ರಸ್ತರಿಗೆ ತಲುಪದ ಪರಿಹಾರ; ವೀಕ್ಷಣೆಗಷ್ಟೇ ಸಿಮಿತವಾಯ್ತೇ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಬೆಳಗಾವಿ ಭೇಟಿ?
ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ಪ್ರವಾಹ ಪರಿಸ್ಥಿತಿ ಅವಲೋಕಿಸಿದರು ಅಷ್ಟೇ, ಇದರಿಂದ ಯಾವುದೇ ರೀತಿಯ ಪ್ರಯೋಜನ ಆಗಲಿಲ್ಲ ಎಂದು ನೆರೆ ಸಂತ್ರಸ್ತರು ಬೇಸರ ವ್ಯಕ್ತಪಡಿಸಿದ್ದಾರೆ.
ಬೆಳಗಾವಿ: ಮುಖ್ಯಮಂತ್ರಿಯಾಗಿದ್ದಾಗ ಯಡಿಯೂರಪ್ಪನವರು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದರು. ಆದರೆ ಇದರಿಂದಾಗಿ ಯಾವುದೇ ರೀತಿಯ ಪ್ರಯೋಜನವಾಗಿಲ್ಲ. ಬೇಕಾಬಿಟ್ಟಿ ಬಂದು, ಹೋದರು ಒಂದು ಪೈಸೆಯೂ ಪರಿಹಾರ ತುರ್ತಾಗಿ ನೀಡಲಿಲ್ಲ. ಅಲ್ಲದೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಜುಲೈ 25 ರಂದು ಬೆಳಗಾವಿ ಪ್ರವಾಸದ ವೇಳೆ ಅಂದಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಗೋವಿಂದ್ ಕಾರಜೋಳ 200 ಕೋಟಿ ಬಿಡುಗಡೆಗೆ ಒತ್ತಾಯಿಸಿದ್ದರು. ಇದೀಗ ಹೊಸದಾಗಿ ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾರೆ. ಒಂದು ಪೈಸೆಯೂ ಪರಿಹಾರ ಬಿಡುಗಡೆ ಇಲ್ಲ ಎಂದು ನೆರೆ ಸಂತ್ರಸ್ತರು ಟಿವಿ9 ಡಿಜಿಟಲ್ ಜತೆ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಜಿಲ್ಲಾಧಿಕಾರಿ ಖಾತೆಯಲ್ಲಿ ಕೇವಲ 90 ಕೋಟಿ ರೂಪಾಯಿ ಮಾತ್ರ ಇದ್ದು, ನೆರೆ ಸಂತ್ರಸ್ತರ ಸ್ಥಳಾಂತರ ಸೇರಿದಂತೆ ತುರ್ತು ಕೆಲಸಕ್ಕೂ ಈ ಹಣ ಸಾಲಲ್ಲ. ತಹಶಿಲ್ದಾರರ ಅಕೌಂಟ್‌ಗಳಲ್ಲಿ ಕೇವಲ ಹತ್ತು ಲಕ್ಷ ಮಾತ್ರ ಇದ್ದು, ಯಾವುದಕ್ಕೆ ಬಳಕೆ ಮಾಡಿಕೊಳ್ಳಬೇಕು ಅನ್ನುವ ಗೊಂದಲದಲ್ಲಿ ಅವರು ಇದ್ದಾರೆ. ಹೊಸ ಸಿಎಂ ಬರೀ ಸನ್ಮಾನ, ದೇವಸ್ಥಾನ ಓಡಾಟದಲ್ಲಿ ಬಿಜಿಯಾದರೆ, ಬೆಳಗಾವಿ ನೆರೆ ಸಂತ್ರಸ್ತರ ನೋವು ಆಲಿಸುವವರು ಯಾರು? ಇನ್ನು ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ಪ್ರವಾಹ ಪರಿಸ್ಥಿತಿ ಅವಲೋಕಿಸಿದರು ಅಷ್ಟೇ, ಇದರಿಂದ ಯಾವುದೇ ರೀತಿಯ ಪ್ರಯೋಜನ ಆಗಲಿಲ್ಲ ಎಂದು ನೆರೆ ಸಂತ್ರಸ್ತರು ಬೇಸರ ವ್ಯಕ್ತಪಡಿಸಿದ್ದಾರೆ.
ಬಿರಡಿ ಗ್ರಾಮದ ಕಾಳಜಿ ಕೇಂದ್ರದಲ್ಲಿ ನೆರೆ ಸಂತ್ರಸ್ತರ ಕಣ್ಣೀರು 2019ರಲ್ಲಿ ಪ್ರವಾಹ ಬಂದಾಗಲೂ ಪರಿಹಾರ ನೀಡಲಿಲ್ಲ. ಈಗ ಮತ್ತೆ ಪ್ರವಾಹ ಬಂದು ನಮ್ಮ ಮನೆಗಳು ಮುಳುಗಿವೆ. ಕಾಳಜಿ ಕೇಂದ್ರದಲ್ಲಿ ಊಟಕ್ಕಾಗಿ ನಾಚಿಕೆ ಬಿಟ್ಟು ಕಾಯುತ್ತಿದ್ದೇವೆ. ಸರ್ಕಾರ ನಮಗೆ ಊಟ ಕೊಡದಿದ್ದರೂ ಪರವಾಗಿಲ್ಲ. ಈ ಬಾರಿಯಾದರೂ ನಮಗೆ ಪ್ರವಾಹ ಪರಿಹಾರ ನೀಡಲಿ. ಇಲ್ಲವೇ ಬೇರೆ ಎಲ್ಲಾದರೂ ನಮಗೆ ಮನೆ ನಿರ್ಮಿಸಿಕೊಡಲಿ ಎಂದು ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಬಿರಡಿ ಗ್ರಾಮದ ಕಾಳಜಿ ಕೇಂದ್ರದಲ್ಲಿ ನೆರೆ ಸಂತ್ರಸ್ತರ ಕಣ್ಣೀರು ಹಾಕಿದ್ದಾರೆ.
ಮಕ್ಕಳನ್ನು ಕಟ್ಟಿಕೊಂಡು ಪದೇಪದೇ ಮನೆ ಬಿಡುವುದು ಕಷ್ಟ. ನಮ್ಮ ಪರಿಸ್ಥಿತಿ ಬಹಳ ಗಂಭೀರವಾಗಿದೆ ಎಂದು ಬಿರಡಿ ಗ್ರಾಮದ ಕಾಳಜಿ ಕೇಂದ್ರದಲ್ಲಿ ಸರ್ಕಾರದ ವಿರುದ್ಧ ಮಹಿಳೆಯರು ಕಣ್ಣೀರಿಟ್ಟು ಆಕ್ರೋಶ ಹೊರ ಹಾಕಿದ್ದಾರೆ.
ಇದನ್ನೂ ಓದಿ: Karnataka Breaking News LIVE: ಮಳೆ ಹಾನಿಯಿಂದ ಕಂಗೆಟ್ಟವರಿಗೆ ಪರಿಹಾರ ಒದಗಿಸಲು ಹಣದ ಕೊರತೆಯಿಲ್ಲ: ಸಿಎಂ ಬಸವರಾಜ ಬೊಮ್ಮಾಯಿ
ವರ್ಷವಾದ್ರೂ ಸಿಕ್ಕಿಲ್ಲ ಪರಿಹಾರ, ಮುರಿದು ಬಿದ್ದಿರುವ ಮನೆಯಲ್ಲೇ ಜೀವನ ಮಾಡ್ತಿದಾರೆ
Published On - 12:55 pm, Fri, 30 July 21