ಸರ್ಕಾರ ಬದಲಾಗಿದೆ: ಬೆಳಗಾವಿ ಹಿಂಡಲಗಾ ಜೈಲಿನಲ್ಲಿ ಸಾವರ್ಕರ್ ಪುಣ್ಯ ಸ್ಮರಣೆಗೆ ಜೈಲು ಅಧಿಕಾರಿಗಳ ನಿರಾಕರಣೆ
ಇಂದು ವೀರ ಸಾವರ್ಕರ್ ಅವರ ಪುಣ್ಯಸ್ಮರಣೆ. ಹೀಗಾಗಿ ಬೆಳಗಾವಿ ಹಿಂಡಲಗಾ ಜೈಲಿನಲ್ಲಿರುವ ಸಾವರ್ಕರ್ ಪೋಟೋಗೆ ಪೂಜೆ ಮಾಡಲು ಶ್ರೀರಾಮಸೇನೆ ಮತ್ತು ಬಿಜೆಪಿ ಕಾರ್ಯಕರ್ತರು ಜೈಲಿಗೆ ಹೋದಾಗ ಸಾವರ್ಕರ್ ಪುಣ್ಯಸ್ಮರಣೆಗೆ ನಿರಾಕರಿಸಲಾಗಿದೆ. ಸರ್ಕಾರ ಬದಲಾಗಿದೆ, ನಡಿರಿ ಇಲ್ಲಿಂದ ಎಂದು ಜೈಲು ಅಧಿಕಾರಿಗಳು ಹೇಳಿದ್ದು, ಇದನ್ನು ಖಂಡಿಸಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
ಬೆಳಗಾವಿ, ಫೆ.26: ಇಂದು ವೀರ ಸಾವರ್ಕರ್ (Veer Savarkar) ಅವರ ಪುಣ್ಯಸ್ಮರಣೆ ಹಿನ್ನೆಲೆ ಅವರ ಭಾವಚಿತ್ರಕ್ಕೆ ಪೂಜೆ ಮಾಡಲು ಶ್ರೀರಾಮಸೇನೆ ಮತ್ತು ಬಿಜೆಪಿ (BJP) ಕಾರ್ಯಕರ್ತರು ಬೆಳಗಾವಿ ಹಿಂಡಲಗಾ ಜೈಲಿಗೆ ಹೋದಾಗ ಜೈಲು ಅಧಿಕಾರಿಗಳು ತಡೆದಿದ್ದಾರೆ. ಅಲ್ಲದೆ, ಸರ್ಕಾರ ಬದಲಾಗಿದೆ, ನೀವು ಇಲ್ಲಿಂದ ನಡಿರೀ ಎಂದು ಜೈಲು ಅಧಿಕಾರಿಗಳು ಹೇಳಿದ್ದಾರೆ. ಇದನ್ನು ಖಂಡಿಸಿ ಕಾಂಗ್ರೆಸ್ ಸರ್ಕಾರ ಹಾಗೂ ಜೈಲು ಅಧಿಕಾರಿಗಳ ವಿರುದ್ಧ ಕಾರ್ಯಕರ್ತರು ರಸ್ತೆ ಮೇಲೆ ಕುಳಿತು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದರು.
ಹಿಂಡಲಗಾ ಜೈಲಿನ ಬಳಿಯ ರಸ್ತೆ ಬದಿಯಲ್ಲಿ ಸಾವರ್ಕರ್ ಪೋಟೋ ಇಟ್ಟು ಕಾರ್ಯಕರ್ತರು ಪೂಜೆ ಸಲ್ಲಿಸಿದರು. ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ರವಿ ಕೋಕಿತ್ಕರ್, ಬಿಜೆಪಿ ಮುಖಂಡ ಧನಂಜಯ ಜಾಧವ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಸಾವರ್ಕರ್ ಅವರು ಬೆಳಗಾವಿ ಹಿಂಡಲಗಾ ಜೈಲಿನಲ್ಲಿ 100 ದಿನಗಳ ಕಾಲ ಸೆರೆವಾಸವಿದ್ದರು. ಇದೇ ಕಾರಣಕ್ಕೆ ಸಾವರ್ಕರ್ ಪೋಟೋ ಸಹ ಹಾಕಲಾಗಿತ್ತು. ಬಿಜೆಪಿ ಸರ್ಕಾರದ ಅವಧಿಯಲ್ಲಿ ಜೈಲಿನಲ್ಲಿ ಸಾವರ್ಕರ್ ಫೋಟೋಗೆ ಪೂಜೆ ಸಲ್ಲಿಸಲಾಗಿತ್ತು. ಆದರೆ, ಈಗ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾಗಿದ್ದು, ಹಿಂಡಲಗಾ ಜೈಲಿನಲ್ಲಿರುವ ಸಾವರ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲು ಜೈಲು ಅಧಿಕಾರಿಗಳು ನಿರಾಕರಿಸಿದ್ದಾರೆ.
ಇದನ್ನೂ ಓದಿ: ‘ಸಾವರ್ಕರ್’ ಸಿನಿಮಾ ಪ್ರೋಮೋ ಬಿಡುಗಡೆ, ನಾಯಕಿ ಬಿಗ್ಬಾಸ್ ಚೆಲುವೆ
ನಿರ್ಭೀತ ಸ್ವಾತಂತ್ರ್ಯ ಹೋರಾಟಗಾರ, ಸಮಾಜ ಸುಧಾರಕ, ಬರಹಗಾರ, ನಾಟಕಕಾರ, ಕವಿ, ಇತಿಹಾಸಕಾರ, ರಾಜಕೀಯ ನಾಯಕ ಮತ್ತು ತತ್ವಜ್ಞಾನಿಯಾಗಿರುವ ವೀರ ಸಾವರ್ಕರ್ ಎಂದೇ ಖ್ಯಾತರಾಗಿರುವ ವಿನಾಯಕ ದಾಮೋದರ್ ಸಾವರ್ಕರ್ ಅವರನ್ನು 1950 ರ ಏಪ್ರಿಲ್ 4 ರಂದು ಬಂಧಿಸಿ ಹಿಂಡಲಗಾ ಜೈಲಿನಲ್ಲಿ ಇರಿಸಲಾಗಿತ್ತು. ಪಾಕಿಸ್ತಾನದ ಪ್ರಧಾನಿ ಲಿಯಾಕತ್ ಅಲಿ ದೆಹಲಿಗೆ ಆಗಮಿಸುವ ಮುನ್ನಾದಿನದಂದು ಬಂಧಿಸಲಾಗಿತ್ತು. ಅದೇ ವರ್ಷ ಜುಲೈ 13 ರಂದು ಬಿಡುಗಡೆ ಮಾಡಲಾಗಿತ್ತು.
ಸಾವರ್ಕರ್ ಅವರ ಪುತ್ರ ಬಾಂಬೆ ಹೈಕೋರ್ಟ್ಗೆ ಜುಲೈ 12 ರಂದು ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಅದರಂತೆ ವಿಚಾರಣೆ ನಡೆಸಿದ್ದ ಕೋರ್ಟ್, ಒಂದು ವರ್ಷ ರಾಜಕೀಯ ಚಟುವಟಿಕೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಮುಚ್ಚಳಿಕೆ ಬರೆಸಿ ಜೈಲಿನಿಂದ ಬಿಡುಗಡೆಗೊಳಿಸಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ