AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Assembly Session Highlight: ವಿಧಾನಸಭೆ ಕಲಾಪ ನಾಳೆ ಬೆಳಗ್ಗೆ 10.30ಕ್ಕೆ ಮುಂದೂಡಿಕೆ

Belagavi Winter Session Highlight News Updates: ಬೆಳಗಾವಿ ಚಳಿಗಾಲದ ಅಧಿವೇಶನ ಇಂದು ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಸದನದ ಒಳಗೆ ವಿಪಕ್ಷಗಳು ಮತ್ತು ಆಡಳಿತ ಪಕ್ಷದ ನಡುವೆ ವಾಕ್ಸಮರ ನಡೆಯುತ್ತಿದ್ದರೆ, ಹೊರಗೆ ವಿವಿಧ ಸಂಘಟನೆಗಳು ಪ್ರತಿಭಟನೆಯಲ್ಲಿ ನಿರತವಾಗಿವೆ.

Karnataka Assembly Session Highlight: ವಿಧಾನಸಭೆ ಕಲಾಪ ನಾಳೆ ಬೆಳಗ್ಗೆ 10.30ಕ್ಕೆ ಮುಂದೂಡಿಕೆ
ಬೆಳಗಾವಿ ಚಳಿಗಾಲದ ಅಧಿವೇಶನ
TV9 Web
| Updated By: ಗಂಗಾಧರ​ ಬ. ಸಾಬೋಜಿ|

Updated on:Dec 22, 2022 | 7:26 PM

Share

Belagavi Winter Session Live News Updates | ಬೆಳಗಾವಿ: ಚಳಿಗಾಲದ ಅಧಿವೇಶನ (Belagavi Winter Session) ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ಇಂದು ಕೂಡ ಸದನದ ಒಳಗೆ ಆಡಳಿತ ರೂಢ ಬಿಜೆಪಿ ನಾಯಕರು ಹಾಗೂ ವಿಪಕ್ಷ ನಾಯಕರ ನಡುವೆ ವಾಕ್ಸಮರ ನಡೆಯುವ ಸಾಧ್ಯತೆ ಇದೆ. ಹೊರ ಭಾಗದಲ್ಲಿ ಪಂಚಮಸಾಲಿ (Panchamasali) ಸಮುದಾಯದ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳಲಿದೆ. 2ಎ ಮೀಸಲಾತಿಗಾಗಿ ಹೋರಾಟದ ಪಾದಯಾತ್ರೆ ಇಂದು ಅಂತಿಮ ಹಂತಕ್ಕೆ ತಲುಪಿದ್ದು, ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ತೀರ್ಮಾನಿಸಲಾಗಿದೆ. ಹೀಗಾಗಿ ವಿಧಾನಸೌಧದತ್ತ ಭಾರೀ ಭದ್ರತೆ ಕಲ್ಪಿಸಲಾಗಿದೆ. ಇನ್ನೊಂದೆಡೆ 2ಎ ಮೀಸಲಾತಿಗೆ ಪಂಚಮಸಾಲಿ ಸಮುದಾಯ ಆಗ್ರಹ ವಿಚಾರವಾಗಿ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದಿಂದ ರಾಜ್ಯ ಸರ್ಕಾರಕ್ಕೆ ಮಧ್ಯಂತರ ವರದಿ ಸಲ್ಲಿಕೆಯಾಗಿದೆ.

LIVE NEWS & UPDATES

The liveblog has ended.
  • 22 Dec 2022 07:24 PM (IST)

    Karnataka Assembly Session Live: ಸುವರ್ಣಸೌಧದಲ್ಲಿ ಶಾಸಕರು ಬೂಸ್ಟರ್ ಡೋಸ್ ವ್ಯವಸ್ಥೆ

    ಬೆಳಗಾವಿಯ ಸುವರ್ಣಸೌಧದಲ್ಲಿ ಶಾಸಕರು ಹಾಗೂ ವಿಧಾನಸಭೆ ಸಚಿವಾಲಯದ ಸಿಬ್ಬಂದಿಗೆ ಸೋಮವಾರ ಬೆಳಗ್ಗೆ 10.30ರಿಂದ 5.30ರವರೆಗೆ ಬೂಸ್ಟರ್ ಡೋಸ್​ ನೀಡುವ ವ್ಯವಸ್ಥೆ ಮಾಡಲಾಗಿದೆ.

  • 22 Dec 2022 06:52 PM (IST)

    Karnataka Assembly Session Live: ಇಂಡಿ, ಚಡಚಣ ತಾಲೂಕುಗಳನ್ನು ಸೇರಿಸಿ ಜಿಲ್ಲೆ ಮಾಡುವಂತೆ ಮನವಿ

    ವಿಧಾನಸಭೆ: ರಾಜ್ಯದಲ್ಲಿ ಮತ್ತೆ ಜಿಲ್ಲೆಗಳನ್ನು ರಚಿಸುವ ಸಂದರ್ಭ ಬಂದರೆ ಇಂಡಿ, ಚಡಚಣ ತಾಲೂಕುಗಳನ್ನು ಸೇರಿಸಿ ಜಿಲ್ಲೆ ಮಾಡುವಂತೆ ಗಮನ ಸೆಳೆಯುವ ಸೂಚನಾ ಕಲಾಪ ವೇಳೆ ಇಂಡಿ ಶಾಸಕ ಯಶವಂತರಾಯ ಗೌಡ ಪಾಟೀಲ್ ಮನವಿ.

  • 22 Dec 2022 06:49 PM (IST)

    Karnataka Assembly Session Live: ವಿಧಾನಸಭೆಯಲ್ಲಿ ವಿಧೇಯಕ ಹಿಂಪಡೆದ ರಾಜ್ಯ ಸರ್ಕಾರ

    2021ನೇ ಸಾಲಿನ ಬಂಧಿಗಳ ಗುರುತಿಸುವಿಕೆ ತಿದ್ದುಪಡಿ ವಿಧೇಯಕ ಹಿಂಪಡೆದ ರಾಜ್ಯ ಸರ್ಕಾರ.

  • 22 Dec 2022 06:47 PM (IST)

    Karnataka Assembly Session Live: ಭೂಕಂದಾಯ 2ನೇ ತಿದ್ದುಪಡಿ ವಿಧೇಯಕ ಅಂಗೀಕಾರ

    ವಿಧಾನಸಭೆಯಲ್ಲಿ ಭೂಕಂದಾಯ 2ನೇ ತಿದ್ದುಪಡಿ ವಿಧೇಯಕ ಅಂಗೀಕಾರ ಮಾಡಲಾಗಿದೆ. ಭೂಕಂದಾಯ ಕಾಯ್ದೆ ಸೆಕ್ಷನ್ 95, 96ಕ್ಕೆ ತಿದ್ದುಪಡಿ ತರುವ ಮೂಲಕ ಅಂಗೀಕಾರ ಮಾಡಲಾಗಿದೆ. ಕೃಷಿಯೇತರ ಉದ್ದೇಶಕ್ಕೆ ಭೂಪರಿವರ್ತನೆ ಪ್ರಕ್ರಿಯೆ ಸರಳೀಕರಣ. ಕೃಷಿ ಭೂಮಿ ಕೈಗಾರಿಕಾ ಉದ್ದೇಶಗಳಿಗಾಗಿ ಪರಿವರ್ತಿಸಲು ಅನುಕೂಲ. ಕೃಷಿ ಭೂಮಿ ನಿವಾಸಿಗಳು ಸಂಪೂರ್ಣವಾಗಿ ಅಥವಾ ಭಾಗವಾಗಿ ವರ್ಗಾವಣೆ ಬಯಸಿದರೆ ಅಫಿಡವಿಟ್. ಭೂಮಾಲೀಕರು ಅರ್ಜಿ ಜೊತೆ ಜಿಲ್ಲಾಧಿಕಾರಿಗೆ ಅಫಿಡವಿಟ್ ಸಲ್ಲಿಸಬಹುದು. ಅರ್ಜಿ ಸ್ವೀಕರಿಸಿದ 7 ದಿನಗಳಲ್ಲಿ ಜಿಲ್ಲಾಧಿಕಾರಿ ಅನುಮೋದನೆ ನೀಡುತ್ತಾರೆ.

  • 22 Dec 2022 06:13 PM (IST)

    Karnataka Assembly Session Live: ಬಾಬ ರಾಮದೇವ್ ಸ್ವಾಮೀಜಿ ಅಲ್ಲ: ಬಿಕೆ ಹರಿಪ್ರಸಾದ್

    ಬಾಬ ರಾಮದೇವ್ ಸ್ವಾಮೀಜಿ ಅಲ್ಲ, ಅವನೊಬ್ಬ ಬ್ಯುಸಿನೆಸ್ ಮ್ಯಾನ್​ ಎಂದು ಬಿಕೆ ಹರಿಪ್ರಸಾದ್ ಹೇಳಿದರು. ಆದರೆ ಯಾವುದೋ ಜಗ್ಗಿ ವಾಸುದೇವ್​ಗೆ 100 ಕೋಟಿ ಹಣ ಕೊಡುತ್ತದೆ. ಜಗ್ಗಿ ವಾಸುದೇವ್ ಯಾರು ಅವನು ಎಂದು ಪ್ರಶ್ನಿಸಿದರು. ಹರಿಪ್ರಸಾದ್ ಮಾತಿಗೆ ರವಿಕುಮಾರ್ ಹಾಗೂ ತೇಜಸ್ವಿನಿ ಕಿಡಿ ಕಾರಿದ್ದು, ಸ್ವಾಮೀಜಿಗಳ ಬಗ್ಗೆ ಅವನು ಇವನು ಎನ್ನುವುದು ಸರಿಯಿಲ್ಲ ಎಂದರು.

  • 22 Dec 2022 05:34 PM (IST)

    Karnataka Assembly Session Live: ಸದನದಲ್ಲಿ ಖಂಡನಾ ನಿರ್ಣಯ ಮಂಡಿಸಿದ ಸಿಎಂ ಬೊಮ್ಮಾಯಿ

    ಸದನದಲ್ಲಿ ಖಂಡನಾ ನಿರ್ಣಯವನ್ನು ಸಿಎಂ ಬೊಮ್ಮಾಯಿ ಮಂಡಿಸಿದ್ದಾರೆ. ಮಹಾರಾಷ್ಟ್ರದ ನಾಯಕರ ವರ್ತನೆ ಖಂಡಿಸಿ ಖಂಡನಾ ನಿರ್ಣಯವನ್ನು ವಿಧಾನಸಭೆಯಲ್ಲಿ ಸರ್ವಾನುಮತದಿಂದ ಅಂಗೀಕಾರ ಮಾಡಲಾಗಿದೆ.

  • 22 Dec 2022 05:29 PM (IST)

    Karnataka Assembly Session Live: ಪರಿಷತ್​ನಲ್ಲಿ ಕ್ಷಮೆಯಾಚಿಸಿದ ಬಿಜೆಪಿ ಸದಸ್ಯ ರವಿಕುಮಾರ್

    ನೆಹರು ಕಾಲದ ಭ್ರಷ್ಟಾಚಾರ ಎಂಬ ಪದಕ್ಕೆ ಬಿಜೆಪಿ ಎಂಎಲ್​ಸಿ ಎನ್.ರವಿಕುಮಾರ್​ ಕ್ಷಮೆಯಾಚಿಸಿದ್ದಾರೆ. ನಂತರ ಧರಣಿ ಹಿಂಪಡೆದ ಕಾಂಗ್ರೆಸ್ ಸದಸ್ಯರು.

  • 22 Dec 2022 05:21 PM (IST)

    Karnataka Assembly Session Live: ಸಂಜಯ್ ರಾವತ್ ದೇಶ ದ್ರೋಹಿ ಎಂದ ಸಿಎಂ ಬೊಮ್ಮಾಯಿ

    ಸಂಜಯ್ ರಾವತ್ ದೇಶ ದ್ರೋಹಿ. ರಾವತ್​ ಚೀನಾ ಏಜೆಂಟ್​ ಇರಬಹುದೆಂಬ ಅನುಮಾನ ಬರುತ್ತೆ. ಸಂಜಯ್ ರಾವತ್​ ಮಾತಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. ಇದೇ ರೀತಿ ಮಾತನಾಡಿದರೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ. ಪ್ರಚೋದನೆ ಮಾಡಿದರೆ ಸೈನಿಕರ ರೀತಿಯಲ್ಲೇ ಹಿಮ್ಮೆಟ್ಟಿಸುತ್ತೇವೆ. ಮೊದಲು ಅವರ ರಾಜ್ಯದಲ್ಲಿರುವ ಜನರನ್ನು ರಕ್ಷಣೆ ಮಾಡಲಿ ಎಂದರು.

  • 22 Dec 2022 05:18 PM (IST)

    Karnataka Assembly Session Live: ಪಂಚಮಸಾಲಿಗರ ಸಮಾವೇಶದಲ್ಲಿ BJP ಶಾಸಕ ಯತ್ನಾಳ್ ಹೇಳಿಕೆ

    ಡಿ. 29ಕ್ಕೆ 2ಎ ಮೀಸಲಾತಿ ನೀಡುವುದಾಗಿ ಸಿಎಂ ಭರವಸೆ ನೀಡಿದ್ದಾರೆ. ಪಂಚಮಸಾಲಿಗರ ಸಮಾವೇಶದಲ್ಲಿ BJP ಶಾಸಕ ಯತ್ನಾಳ್ ಹೇಳಿದರು. ಸುವರ್ಣಸೌಧದ ಬಳಿಯ ರಾಘವೇಂದ್ರ ಲೇಔಟ್‌ನಲ್ಲಿ ಸಮಾವೇಶ ನಡೆಯುತ್ತಿದೆ. ಡಿ.28ರಂದು ಸರ್ವಪಕ್ಷ ಸಭೆ ಕರೆಯುವುದಾಗಿ ಸಿಎಂ ಭರವಸೆ ನೀಡಿದ್ದಾರೆ ಎಂದರು.

  • 22 Dec 2022 05:12 PM (IST)

    Karnataka Assembly Session Live: ಮಹಾರಾಷ್ಟ್ರ ಸಂಸದ ರಾವತ್​ ಮೊನ್ನೆಯಷ್ಟೇ ಜೈಲಿಗೆ ಹೋಗಿದ್ದರು

    ಮಹಾರಾಷ್ಟ್ರ ಸಂಸದ ರಾವತ್​ ಮೊನ್ನೆಯಷ್ಟೇ ಜೈಲಿಗೆ ಹೋಗಿದ್ದರು. ಈಗ ರಾವತ್ ಬಾಯಿಗೆ ಬಂದಂತೆ ಮಾತಾಡಿದ್ದಾರೆ. ನಾವು ಒಕ್ಕೂಟ ವ್ಯವಸ್ಥೆಯಲ್ಲಿದ್ದೇವೆ ಅನ್ನೋದು ರಾವತ್​​ಗೆ ಗೊತ್ತಿಲ್ವಾ? ಸಂಜಯ್ ರಾವತ್​​ಗೆ ಮಾನ ಮರ್ಯಾದೆ ಇದ್ಯಾ? ಸಂಜಯ್ ರಾವತ್​​ಗೆ ನಾಗರಿಕತೆ ಗೊತ್ತಿಲ್ಲ, ಸಂಸ್ಕೃತಿ ಗೊತ್ತಿಲ್ಲ. ನಾಗರಿಕ ಭಾಷೆಯಲ್ಲೇ ನಾವು ಉತ್ತರ ಕೊಡಬೇಕು. ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

  • 22 Dec 2022 05:06 PM (IST)

    Karnataka Assembly Session Live: ನೆಹರು ಅವರ ಹೆಸರು ತಂದಿದ್ದು ಬಹಳ ನೋವಾಯಿತು

    ಪರಿಷತ್: ನೆಹರು ಅವರ ಹೆಸರು ತಂದಿದ್ದು ಬಹಳ ನೋವಾಯಿತು. ಅವರು ದೊಡ್ಡ ನೇತಾರರು. ನೆಹರೂ ನಿಧನರಾದಾಗ, ವಾಜಪೇಯಿ ರಾಜ್ಯಸಭೆಯಲ್ಲಿ ಮಾತನಾಡಿದ್ದನ್ನು ಒಮ್ಮೆ ಓದಿ. ರವಿ ಕುಮಾರ್ ಅವರಿಗೆ ವಿನಂತಿ ಮಾಡ್ತೀನಿ. ಹಿಂದೆ ಬೆಂಕಿ ಮಹದೇವ್ ಅಂತಾ ಇದ್ರು. ಬೆಂಕಿ ರವಿಕುಮಾರ್ ಆಗ ಬೇಡಿ. ಇದನ್ನು ಇಲ್ಲಿಗೆ ನಿಲ್ಲಿಸಿ ಎಂದು ಎಚ್ ವಿಶ್ವನಾಥ್ ಮನವಿ ಮಾಡಿದರು.

  • 22 Dec 2022 05:04 PM (IST)

    Karnataka Assembly Session Live: ಅವರ ಭಾಷೆಯಲ್ಲಿ ನಾವು ಉತ್ತರ ನೀಡವು ಅಗತ್ಯವಿಲ್ಲ-ಬಿಎಸ್‌ವೈ

    ವಿಧಾನಸಭೆ: ಮಹಾರಾಷ್ಟ್ರದವರು ಮಾತಾಡಿದ ಭಾಷೆಯಲ್ಲಿ ನಾವು ಉತ್ತರಿಸಬೇಕಿಲ್ಲ. ಅವರ ಭಾಷೆಯಲ್ಲಿ ನಾವು ಉತ್ತರ ನೀಡವು ಅಗತ್ಯವಿಲ್ಲ ಎಂದು ವಿಧಾನಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.

  • 22 Dec 2022 04:20 PM (IST)

    Karnataka Assembly Session Live: ಒಳಾಂಗಣ ಪ್ರದೇಶದಲ್ಲಿ ಮಾಸ್ಕ್ ಧರಿಸುವಂತೆ ಸಲಹೆ

    ವಿದೇಶದಿಂದ ಬರುವ ಪ್ರಯಾಣಿಕರಿಗೆ ರ್‍ಯಾಂಡಮ್ ಟೆಸ್ಟ್ ಮಾಡುತ್ತೇವೆ. ಜಾಗತಿಕ ಮಟ್ಟದಲ್ಲಿ ಕೊವಿಡ್ ಸ್ಥಿತಿಗತಿ ಬಗ್ಗೆ ವರದಿ ನೀಡಿದೆ. ವರದಿ ಆಧಾರದಲ್ಲಿ ಮುಂಜಾಗ್ರತಾ ಕ್ರಮಕ್ಕೆ ಸಿಎಂ ಸೂಚನೆ ನೀಡಿದ್ದು, ಒಳಾಂಗಣ ಪ್ರದೇಶದಲ್ಲಿ ಮಾಸ್ಕ್ ಧರಿಸುವಂತೆ ಸಲಹೆ ನೀಡಿದೆ ಎಂದು ಸುವರ್ಣಸೌಧದಲ್ಲಿ ಆರೋಗ್ಯ ಸಚಿವ ಡಾ.ಸುಧಾಕರ್ ಹೇಳಿದರು.

  • 22 Dec 2022 04:16 PM (IST)

    Karnataka Assembly Session Live: ಸಂಜೆಯೊಳಗೆ ಸ್ಪಷ್ಟವಾದ ಮಾರ್ಗಸೂಚಿ ಬಿಡುಗಡೆ: ಸುಧಾಕರ್

    ಹೊಸ ವರ್ಷ, ಕ್ರಿಸ್​​ಮಸ್​ ಆಚರಣೆಗೆ ಅನುಮತಿ ನೀಡುವ ವಿಚಾರವಾಗಿ ಸಂಜೆಯೊಳಗೆ ಸ್ಪಷ್ಟವಾದ ಮಾರ್ಗಸೂಚಿ ಬಿಡುಗಡೆ ಮಾಡುತ್ತೇವೆ. ಗೈಡ್​ಲೈನ್ಸ್​ ಕುರಿತು ಸಿಎಂ ನೇತೃತ್ವದ ಸಭೆಯಲ್ಲಿ ಚರ್ಚೆಯಾಗಿದೆ ಎಂದು ಸುವರ್ಣಸೌಧದಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದರು.

  • 22 Dec 2022 04:12 PM (IST)

    Karnataka Assembly Session Live: ಎಲ್ಲರೂ ಮೂರನೇ ಡೋಸ್​​​ ಲಸಿಕೆ ಪಡೆಯಬೇಕು

    ಆದಷ್ಟು ಬೇಗ ಎಲ್ಲರೂ ಮೂರನೇ ಡೋಸ್ ತೆಗೆದುಕೊಳ್ಳಬೇಕು ಎಂದು ಸುವರ್ಣಸೌಧದಲ್ಲಿ ಆರೋಗ್ಯ ಸಚಿವ ಡಾ.ಸುಧಾಕರ್ ಹೇಳಿದರು. ಜಿಲ್ಲಾಸ್ಪತ್ರೆಗಳಲ್ಲಿ ಕೊವಿಡ್​ ಚಿಕಿತ್ಸೆ ಹಾಸಿಗೆ ಮೀಸಲಿಡಲಾಗಿದೆ. ಖಾಸಗಿ ಆಸ್ಪತ್ರೆಯಲ್ಲೂ ಕೊವಿಡ್ ಚಿಕಿತ್ಸೆಗೆ ಹಾಸಿಗೆ ಮೀಸಲಿಡಲಾಗಿದೆ. ಕೊವಿಡ್ ಕಡಿಮೆಯಾದ ಹಿನ್ನೆಲೆ ಲಸಿಕಾ ಪಡೆಯಲು ಮೀನಮೇಷ ಮಾಡಲಾಗುತ್ತಿದೆ. ಎಲ್ಲರೂ ಮೂರನೇ ಡೋಸ್​​​ ಲಸಿಕೆ ಪಡೆಯಬೇಕು ಎಂದರು.

  • 22 Dec 2022 04:10 PM (IST)

    Karnataka Assembly Session Live: ಒಕ್ಕಲಿಗ ಮೀಸಲಾತಿ ವಿಚಾರ: ಸಂಜೆ ಸಭೆ

    ಒಕ್ಕಲಿಗ ಮೀಸಲಾತಿ ಪ್ರಮಾಣ ಹೆಚ್ಚಳ ವಿಚಾರಕ್ಕೆ ಬೆಳಗಾವಿಯ ಖಾಸಗಿ ಹೋಟೆಲ್​ನಲ್ಲಿ ಸಂಜೆ 7 ಗಂಟೆಗೆ ಒಕ್ಕಲಿಗ ಸಚಿವರು, ಶಾಸಕರೊಂದಿಗೆ ಮೀಸಲಾತಿ ವಿಚಾರದಲ್ಲಿ ಮುಂದಿನ ನಿಲುವಿನ ಬಗ್ಗೆ ಸಭೆ ಮಾಡಲಾಗುವುದು.

  • 22 Dec 2022 03:46 PM (IST)

    Karnataka Assembly Session Live: ಪಂಚಮಸಾಲಿ ಮೀಸಲಾತಿ ವಿಚಾರ: ಮತ್ತೆ 10 ದಿನ ಗಡುವು ಕೇಳಿರುವ ಸಿಎಂ

    ಪಂಚಮಸಾಲಿ ಮೀಸಲಾತಿ ವಿಚಾರವಾಗಿ ಮತ್ತೆ ಹತ್ತು ದಿನಗಳವರೆಗೆ ಸಿಎಂ ಬೊಮ್ಮಾಯಿ ಗಡುವು ಕೇಳಿದ್ದಾರೆ. ನಿಮ್ಮ ಸಮಸ್ಯೆ ಬಗ್ಗೆ ಸ್ಪಷ್ಟ ನಿರ್ಧಾರ ಮಾಡುತ್ತೇನೆ. ಸಿಎಂ ಮಾತಿಗೆ ಯಾವುದೇ ಪ್ರತಿಕ್ರಿಯೆ ನೀಡದ ಪಂಚಮಸಾಲಿ ಸಮಾಜದ ನಾಯಕರು. ವೇದಿಕೆಯಲ್ಲೇ ಸಮಾಜದ ನಿರ್ಧಾರ ಹೇಳ್ತೇನೆ ಅಂತ‌ ಹೊರಟ ಮುಖಂಡರು.

  • 22 Dec 2022 03:33 PM (IST)

    Karnataka Assembly Session Live: 2ಎ ಮೀಸಲಾತಿ ಹೋರಾಟದಲ್ಲಿ ಕಳ್ಳರ ಕೈಚಳಕ

    2ಎ ಮೀಸಲಾತಿಗಾಗಿ ಪಂಚಮಸಾಲಿ ಸಮಾಜ ಬೆಳಗಾವಿ ಸುವರ್ಣಸೌಧದ ಬಳಿ ವಿರಾಟ ಸಮಾವೇಶ ಮಾಡುತ್ತಿದೆ. ಸಮಾವೇಶದಲ್ಲಿ ಬಂದಿದ್ದವರ 25 ಮೊಬೈಲ್ ಫೋನ್​ಗಳನ್ನು ಕಳ್ಳರು ಎಗರಿಸಿದ್ದಾರೆ. ಮೊಬೈಲ್ ವಾಪಸ್ ನೀಡುವಂತೆ ಆಯೋಜಕರಿಂದ ಮನವಿ ಮಾಡಲಾಗಿದೆ.

  • 22 Dec 2022 03:27 PM (IST)

    Karnataka Assembly Session Live: ಅಶೋಕ್ ಮಾತಿಗೆ ಸಿದ್ದರಾಮಯ್ಯ ತಿರುಗೇಟು

    ವಿಧಾನಸಭೆ: ಸಚಿವರು ಇಲ್ಲದ ಕಾರಣಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ ಕಾಂಗ್ರೆಸ್​ನವರೇ ಇಲ್ಲ ಎಂದು ಸಚಿವ ಅಶೋಕ್ ಹೇಳಿದರು. ಸಿದ್ದರಾಮಯ್ಯ ಅಶೋಕ್ ಮಾತಿಗೆ ತಿರುಗೇಟು ನೀಡಿದ್ದು, ಸಚಿವರು ಬರಲ್ಲ ಅಂದರೆ ಸದನ ನಡೆಸಬೇಡಿ ಎಂದ ಸಿದ್ದರಾಮಯ್ಯ. ಸ್ಪೀಕರ್ ಮಧ್ಯ ಪ್ರವೇಶ ಮಾಡಿದ್ದು, ಸದನದ ಸಮಯ ಹಾಳು ಮಾಡುವುದು ಬೇಡ. ಗಡಿ ವಿಚಾರವಾಗಿ ಚರ್ಚೆ ಮಾಡೋಣ ಎಂದರು. ಆದರೆ ಖಂಡನಾ ನಿರ್ಣಯ ತಯಾರಿಲ್ಲ ಎಂದ ಸರ್ಕಾರ. ಹೀಗಾಗಿ ಸ್ಪೀಕರ್ ಹತ್ತು ನಿಮಿಷ ಸದನ ಮುಂದೂಡಿದರು.

  • 22 Dec 2022 02:48 PM (IST)

    Assembly Session, Karnataka News Live: ಪಾದಯಾತ್ರೆ ಬಿಟ್ಟು ಮಾತುಕತೆಗೆ ಬರುವುದಿಲ್ಲವೆಂದ ಸ್ವಾಮೀಜಿ

    2ಎ ಮೀಸಲಾತಿಗಾಗಿ ಪಂಚಮಸಾಲಿ ವಿರಾಟ ಸಮಾವೇಶ ವಿಚಾರವಾಗಿ ಬಸವ ಜಯಮೃತ್ಯುಂಜಯ ಶ್ರೀಯವರನ್ನು ಸಚಿವರು ಭೇಟಿಯಾದರು. ಸಿ.ಸಿ.ಪಾಟೀಲ್, ಶಂಕರ ಪಾಟೀಲ ಮುನೇನಕೊಪ್ಪ ಅವರು ಭೇಟಿ ಮಾಡಿ ವರದಿ ಬಂದಿದೆ ಮಾತಾಡಿ ಬಗೆಹರಿಸಿಕೊಳ್ಳೋಣ ಎಂದರು. ಕಾರಿನಲ್ಲಿ ಕುಳಿತು ಸ್ವಾಮೀಜಿ ಜತೆ ಮಾತುಕತೆ ನಡೆಸಿದರು. ಈ ವೇಳೆ ಪಾದಯಾತ್ರೆ ಬಿಟ್ಟು ಮಾತುಕತೆಗೆ ಬರುವುದಿಲ್ಲವೆಂದ ಸ್ವಾಮೀಜಿ ಹೇಳಿದರು.

  • 22 Dec 2022 02:46 PM (IST)

    Assembly Session, Karnataka News Live: ಡಿಕೆಶಿ ಹೇಳಿಕೆ ವಿಚಾರದ ಬಗ್ಗೆ ಚರ್ಚೆಗೆ ಅವಕಾಶ: ಸ್ಪೀಕರ್

    ಕುಕ್ಕರ್​ ಬಾಂಬ್ ಸ್ಫೋಟ ಪ್ರಕರಣದ ಬಗ್ಗೆ ಡಿಕೆಶಿ ಹೇಳಿಕೆ ವಿಚಾರದ ಬಗ್ಗೆ ಸದನದಲ್ಲಿ ಚರ್ಚಿಸಲು ಅವಕಾಶ ನೀಡುವುದಾಗಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಭರವಸೆ ನೀಡಿದರು. ಸೋಮವಾರದ ಬಳಿಕ ಚರ್ಚೆಗೆ ಅವಕಾಶ ನೀಡುವುದಾಗಿ ಹೇಳಿದರು.

  • 22 Dec 2022 02:41 PM (IST)

    Assembly Session, Karnataka News Live: ವಿಧಾನಸಭೆಯಲ್ಲಿ ಕುಕ್ಕರ್ ಬಾಂಬ್​ ಸ್ಫೋಟ ವಿಚಾರ ಪ್ರಸ್ತಾಪ

    ಡಿಕೆಶಿ ಸದನದಲ್ಲಿ ಇಲ್ಲ, ಅವರೇ ಉತ್ತರ ನೀಡಲು ಸರಿಯಾದ ವ್ಯಕ್ತಿ ಎಂದ ಸಿದ್ದರಾಮಯ್ಯ

    ವಿಧಾನಸಭೆಯಲ್ಲಿ ಮಂಗಳೂರಿನಲ್ಲಿ ನಡೆದ ಕುಕ್ಕರ್ ಬಾಂಬ್​ ಸ್ಫೋಟ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಶಾರೀಕ್ ಬಗ್ಗೆ ನೀಡಿದ ಹೇಳಿಕೆಯನ್ನು ಪ್ರಸ್ತಾಪ ಮಾಡಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಸಿಎಂ ಕಾರ್ಯಕ್ರಮ ಗುರಿಯಾಗಿಸಿ ಬಾಂಬ್​ ತೆಗೆದುಕೊಂಡು ಹೋಗುತ್ತಿದ್ದ. ಪ್ರಾಥಮಿಕ ತನಿಖೆಯಿಂದ ಈ ವಿಷಯ ಗೊತ್ತಾಗಿದೆ. ಶಾಲಾ ಮಕ್ಕಳನ್ನು ಗುರಿಯಾಗಿಸಿ ಬಾಂಬ್ ತೆಗೆದುಕೊಂಡು ಹೋಗುತ್ತಿದ್ದ. ಅಂತಹವರ ಪರ ಮಾತಾಡಿದ್ದು ಭಯೋತ್ಪಾದನೆಗೆ ಕುಮ್ಮಕ್ಕು ಕೊಟ್ಟಂತೆ. ಈ ಬಗ್ಗೆ ಚರ್ಚೆಗೆ ಅವಕಾಶ ಕೊಡಿ ಎಂದು ಮನವಿ ಮಾಡಿದರು. ಈ ವೇಳೆ ಮಧ್ಯಪ್ರವೇಶಿಸಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಡಿಕೆಶಿ ಸದನದಲ್ಲಿ ಇಲ್ಲ, ಅವರೇ ಉತ್ತರ ನೀಡಲು ಸರಿಯಾದ ವ್ಯಕ್ತಿ, ಏನ್​ ಆಗಿದೆ ಅಂತಾ ಗೃಹ ಸಚಿವ ಆರಗ ಜ್ಞಾನೇಂದ್ರ ಉತ್ತರ ಕೊಡಲಿ ಎಂದರು. ಈ ವೇಳೆ ಡಿಕೆಶಿ ಸಹಾನುಭೂತಿ ವ್ಯಕ್ತಪಡಿಸಿಲ್ಲ ಎಂದ ಕಾಂಗ್ರೆಸ್ ಸದಸ್ಯರು ಹೇಳಿದರು. ನಂತರ ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರ ನಡುವೆ ವಾಗ್ವಾದ ನಡೆಯಿತು.

  • 22 Dec 2022 02:34 PM (IST)

    Assembly Session, Karnataka News Live: ಸಿಎ ನೇತೃತ್ವದಲ್ಲಿ ನಡೆಯುತ್ತಿರುವ ಸಚಿವ ಸಂಪುಟ ಸಭೆ

    ಹಲವು ವಿಚಾರಗಳ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ

    ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಬೆಳಗಾವಿಯ ಸುವರ್ಣಸೌಧದಲ್ಲಿ ಸಚಿವ ಸಂಪುಟ ಸಭೆ ನಡೆಯುತ್ತಿದೆ. ಡಿಜೆ ಹಳ್ಳಿ ಗಲಭೆಗೆ ಸಂಬಂಧಿಸಿದ, ಮ್ಯಾಜಿಸ್ಟ್ರೇಟ್ ವರದಿ, ಹಳೆಯ ವಾಹನಗಳಿಗೆ ಗೇಟ್ ಪಾಸ್ ನೀಡುವ ಬಗ್ಗೆ, ಹೊಸ ಸ್ಕ್ರಾಪಿಂಗ್ ನೀತಿಗೆ ಅನುಮೋದನೆ, ಹೊಸ ಭೂಕಂದಾಯ ತಿದ್ದುಪಡಿ ವಿಧೇಯಕದ ಚರ್ಚೆ, ಅನಧಿಕೃತ ಪ್ಲಾಂಟೇಶನ್ ಸಕ್ರಮೀಕರಣ ಕಾಯ್ದೆ ಕುರಿತು ಚರ್ಚೆ,  ಖಾಸಗಿ ವೈದ್ಯಕೀಯ ಸಂಸ್ಥೆ ತಿದ್ದುಪಡಿ ವಿಧೇಯಕದ ಚರ್ಚೆ ನಡೆಯುವ ಸಾಧ್ಯತೆ ಇದೆ. ಬೆಂಗಳೂರು‌ ಮೆಟ್ರೋ‌ ಯೋಜನೆಗೆ ಅನುದಾನ, 14133 ಕೋಟಿ ಅನುದಾನಕ್ಕೆ ಒಪ್ಪಿಗೆ, ನಗರನೀರು ಸರಬರಾಜು ಯೋಜನೆ ಅನುಷ್ಠಾನ, 3740 ಕೋಟಿ ಯೋಜನಾವೆಚ್ಚಕ್ಕೆ ಅನುಮೋದನೆ, ಸಾರಿಗೆ ಸಂಸ್ಥೆಗಳಿಗೆ 630 ಹೊಸ ಬಸ್ ಖರೀದಿ, 269 ಕೋಟಿ ವೆಚ್ಚಕ್ಕೆ ಒಪ್ಪಿಗೆ, ಉಡುಪಿ, ಕನಕಪುರ, ನೆಲಮಂಗಲ ಬಸ್ ನಿಲ್ದಾಣ, ಒಟ್ಟು 107 ಕೋಟಿ ಅನುದಾನಕ್ಕೆ ಸಮ್ಮತಿ, ಶಾಲೆ, ಕಾಲೇಜು‌ ಪೀಠೋಪಕರಣ ಖರೀದಿಗೆ ಒಪ್ಪಿಗೆ, 100 ಕೋಟಿ ಖರ್ಚು ವೆಚ್ಚಕ್ಕೆ ಅನುಮೋದನೆ ವಿಚಾರವಾಗಿ ಚರ್ಚೆ ನಡೆಯುವ ಸಾಧ್ಯತೆ ಇದೆ.

  • 22 Dec 2022 02:26 PM (IST)

    Assembly Session, Karnataka News Live: ಸಮಾವೇಶಕ್ಕೆ ಬರೋರ ವಾಹನಗಳನ್ನ ತಡೆಯುತ್ತಿರುವ ಪೊಲೀಸರು

    ಪಂಚಮಸಾಲಿ ಸಮಾವೇಶಕ್ಕೆ ಬರುವ ವಾಹನಗಳನ್ನ ಪೊಲೀಸರು ತಡೆಯುತ್ತಿದ್ದಾರೆ. ಇದು ಸರಿಯಲ್ಲ. ವಾಹನಗಳನ್ನ ಬಿಟ್ಟು ಕಳುಹಿಸಿ ಅಂತ ಸಮುದಾಯದ ಮುಖಂಡರೊಬ್ಬರಿಂದ ಎಚ್ಚರಿಕೆ ನೀಡಲಾಗಿದೆ. ವೇದಿಕೆ ಮೇಲೆಯೇ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಗಿದ್ದು, ವಾಹನಗಳನ್ನು ಬಿಡದಿದ್ದರೆ ಸುವರ್ಣಸೌಧ ಮುತ್ತಿಗೆ ಹಾಕಬೇಕಾಗುತ್ತದೆ ಅಂತ ಎಚ್ಚರಿಕೆ ನೀಡಿದರು.

  • 22 Dec 2022 02:22 PM (IST)

    Assembly Session, Karnataka News Live: ಪಂಚಮಸಾಲಿ ಸಮುದಾಯದ ಸಚಿವರು, ಶಾಸಕರ ಜತೆ ಸಿಎಂ ಸಭೆ

    2ಎ ಮೀಸಲಾತಿಗೆ ಪಂಚಮಸಾಲಿ ಸಮುದಾಯ ಹೋರಾಟ ವಿಚಾರವಾಗಿ  ಸಮುದಾಯದ ಸಚಿವರು, ಶಾಸಕರ ಜತೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಸಭೆ ನಡೆಸಿದರು. ಸಂಪುಟ ಸಭೆಗೂ ಮುನ್ನ ಪ್ರತ್ಯೇಕವಾಗಿ ಸಭೆ ನಡೆಸಿದರು. ಸಚಿವರಾದ ಸಿ.ಟಿ.ಪಾಟೀಲ್, ಶಂಕರ ಪಾಟೀಲ​ ಮುನೇನಕೊಪ್ಪ, ಶಾಸಕರಾದ ಬಸವನಗೌಡ ಪಾಟೀಲ್ ಯತ್ನಾಳ್​, ಅರವಿಂದ ಬೆಲ್ಲದ್, ಸಿದ್ದು ಸವದಿ ಜತೆ ಚರ್ಚೆ ನಡೆಸಿ ಮೀಸಲಾತಿ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸುವುದಾಗಿ ಭರವಸೆ ನೀಡಿದರು. ಈ ವೇಳೆ ಶಾಸಕ ಯತ್ನಾಳ್​ ಮನವೊಲಿಸುವ ಪ್ರಯತ್ನವನ್ನು ಬೊಮ್ಮಾಯಿ ಮಾಡಿದರು. ಸಂಪುಟ ಸಭೆ ಬಳಿಕ ಮತ್ತೊಮ್ಮೆ ಯತ್ನಾಳ್ ಜೊತೆ ಸಿಎಂ ಮಾತುಕತೆ ಸಾಧ್ಯತೆ ಇದೆ.

  • 22 Dec 2022 01:46 PM (IST)

    Assembly Session, Karnataka News Live: ಎಸ್ಸಿ ಎಸ್ಟಿ ಹಿತಿಸಕ್ತಿಯಿಂದ ನಾವು ಏನು ಮಾಡಬೇಕೊ ಅದಕ್ಕೆ ಬದ್ದ: ಮಾಧುಸ್ವಾಮಿ

    ಕಾಂಗ್ರೆಸ್ ನವರಿಗೆ ಹೊಟ್ಟೆ ಹುರಿ‌ ಎಂದ ರವಿಕುಮಾರ್, ಸುಮ್ಮನೆ ಇರಪ್ಪ ರವಿ ,ಬೆಂಕಿ ಹಾಕ್ತಿಯಲ್ಲ ಎಂದ ಸಭಾಪತಿ

    ವಿಧಾನ ಪರಿಷತ್: ಎಸ್ಸಿ ಎಸ್ಟಿ ಹಿತಿಸಕ್ತಿಯಿಂದ ನಾವು ಏನು ಮಾಡಬೇಕೊ ಅದಕ್ಕೆ ಬದ್ದವಾಗಿದ್ದೇವೆ. ಇದರಲ್ಲಿ ರಾಜಕೀಯ ಉದ್ದೇಶವಿಲ್ಲ ಎಂದು ಕಾನೂನು ಸಚಿವ ಮಾಧುಸ್ವಾಮಿ ಹೇಳಿದರು. ಎರಡು ಬಾರಿ ಸರ್ವಪಕ್ಷ ಸಭೆ ಮಾಡಿದ್ದೇವೆ. ಶೆಡ್ಯೂಲ್ 9ಕ್ಕೆ ಸೇರಿಸುವಂತೆ ಮಾಡಿ ಎಂದು ಒತ್ತಾಯಿಸಿದರು. ಕೇಂದ್ರ ಸರ್ಕಾರಕ್ಕೆ ಕಳುಹಿಸಿದರೆ ಇದು ಆಗುವುದಿಲ್ಲ. ಸರ್ಕಾರವೇ ಆದೇಶ ಹೊರಡಿಸಬೇಕೆಂದು ಹೇಳಿದವರು ನಿವೇ ಎಂದರು. ನಾಗಮೋಹನ್ ದಾಸ್ ಸಮಿತಿ ನಾವು ಮಾಡಿಲ್ಲ. ಆ ಸಮಿತಿಯ ವರದಿಯನ್ನ ಜಾರಿಗೊಳಿಸುವಂತೆ ಒತ್ತಾಯಿಸಿದ್ರು. ಅದರಂತೆ ನಾವು ಮಾಡಿದ್ದೇವೆ, ಮೀಸಲಾತಿಯನ್ನ ಹೆಚ್ಚಿಸಿದ ಮೇಲೆ ಎಲ್ಲೊ ಒಂದು ಕಡೆ ಅವರ ವಿಷಯ ಕೆಳಗೆ ಹೊಯ್ತೋನೊ. 30 ವರ್ಷ ತಮ್ಮ ಜೊತೆ ಇದ್ದವರು ಈಗ ನಿಧಾನವಾಗಿ ಜಾರಿ ಹೊಗುತ್ತಿದ್ದಾರೆ ಎಂಬ ಭಯ ಆತಂಕ ಆಯ್ತೇನೋ? ನಾವು ಮೀಸಲಾತಿ ನೀಡಲು ಎಲ್ಲ ಪ್ರಯತ್ನ ಮಾಡುತ್ತೇವೆ ಎಂದರು. ಇದಕ್ಕೆ ಸಭಾಪತಿ, ಬೇರೆ ರೀತಿಯಲ್ಲಿ ಚರ್ಚೆಗೆ ಅವಕಾಶ ಕೊಡುತ್ತೇನೆ ಎಂದರು. ಈ ವೇಳೆ ಮಧ್ಯಪ್ರವೇಶಿಸಿದ ರವಿಕುಮಾರ್, ಕಾಂಗ್ರೆಸ್ ನವರಿಗೆ ಹೊಟ್ಟೆ ಹುರಿ‌ ಎಂದರು. ಇದಕ್ಕೆ ಸುಭಾಪತಿ, ಸುಮ್ಮನೆ ಇರಪ್ಪ ರವಿ ,ಬೆಂಕಿ ಹಾಕ್ತಿಯಲ್ಲ ಎಂದರು.

  • 22 Dec 2022 01:41 PM (IST)

    Assembly Session, Karnataka News Live: ಚೀನಾದಿಂದ ರಾಜ್ಯಕ್ಕೆ ಬರುವ ವಿಮಾನ ರದ್ದು ಮಾಡಬೇಕು: ಸಿದ್ದರಾಮಯ್ಯ

    ಬೂಸ್ಟರ್ ಡೋಸ್ ಕಡ್ಡಾಯ ಮಾಡಿ ಎಂದ ಸಿದ್ದು

    ವಿಧಾನಸಭೆ: ಕೊವಿಡ್​ ಬಗ್ಗೆ ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ ಸಿದ್ದರಾಮಯ್ಯ, ಚೀನಾದಿಂದ ರಾಜ್ಯಕ್ಕೆ ಬರುವ ವಿಮಾನ ರದ್ದು ಮಾಡಬೇಕು, ಕೇಂದ್ರ ಸರ್ಕಾರದ ಜೊತೆ ಚರ್ಚಿಸಿ ವಿಮಾನಯಾನ ರದ್ದು ಮಾಡಿ, ಆರೋಗ್ಯ ಸಚಿವರು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದರು. ಈ ವೇಳೆ ಮಧ್ಯಪ್ರವೇಶ ಮಾಡಿದ ಬಿಜೆಪಿ ಶಾಸಕ ಕೆ.ಎಸ್​.ಈಶ್ವರಪ್ಪ, ಈಗಾಗಲೇ ನಮ್ಮ ರಾಜ್ಯಕ್ಕೆ ಬಂದು ಹೋಗಿದೆ ಎಂದರು. ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಿ ಎಂದು ಜೆಡಿಎಸ್ ಶಾಸಕ ಬಂಡೆಪ್ಪ ಕಾಶೆಂಪೂರ್ ಹೇಳಿದರು. ಇದಕ್ಕೆ ಉತ್ತರಿಸಿದ ಆರೋಗ್ಯ ಸಚಿವ ಡಾ,ಕೆ.ಸುಧಾಕರ್, ಕೊವಿಡ್ ಸಂಬಂಧ ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಸಭೆ ಇದೆ. ಯಾವೆಲ್ಲಾ ಕ್ರಮ ತೆಗೆದುಕೊಳ್ಳಬೇಕು ಎಂದು ಚರ್ಚೆ ಮಾಡುತ್ತೇವೆ. ಕೇಂದ್ರ ಸರ್ಕಾರ ಕೊಡುವ ಮಾರ್ಗಸೂಚಿಯನ್ನೂ ಅನುಸರಿಸುತ್ತೇವೆ ಎಂದರು. ಈ ವೇಳೆ ಬೂಸ್ಟರ್ ಡೋಸ್ ಕಡ್ಡಾಯ ಮಾಡಿ ಎಂದು ಸಿದ್ದರಾಮಯ್ಯ ಹೇಳಿದರು.

  • 22 Dec 2022 01:38 PM (IST)

    Assembly Session, Karnataka News Live: ಯಾರು ಯಾರು ಎಷ್ಟು ಗಳಿಸಿಕೊಂಡಿದ್ದರು ಅದರ ಬಗ್ಗೆಯೂ ಚರ್ಚೆಗೆ ಅವಕಾಶ ಕೊಡಿ: ರವಿಕುಮಾರ್

    ಸುಳ್ಳನ್ನು ಸಾವಿರ ಸಲ ಹೇಳುವ ತರಬೇತಿ ನಾಗಪುರದಿಂದ ಪಡೆದುಕೊಂಡು ಬಂದಿದ್ದಾರೆ ಎಂದ ಹರಿಪ್ರಸಾದ್

    ವಿಧಾನ ಪರಿಷತ್: ಯಾರು ಯಾರು ಎಂಪಿ ಆಗಿದ್ದರು, ಯಾರು ಯಾರು ಎಷ್ಟು ಗಳಿಸಿಕೊಂಡಿದ್ದರು ಅದರ ಬಗ್ಗೆಯೂ ಚರ್ಚೆಗೆ ಅವಕಾಶ ಕೊಡಿ ಎಂದು ರವಿ ಕುಮಾರ್ ಹೇಳಿದರು. ಯಾರೇ ಏನು ಬೇಕಾದರೂ ಮಾತಾಡಬಹುದು, ರಮೇಶ್ ಕುಮಾರ್ ಭ್ರಷ್ಟಾಚಾರ ಮಾಡಿದ್ದೇವೆ ಅಂತ ಹೇಳಿಲ್ಲ. ಸುಳ್ಳನ್ನು ಸಾವಿರ ಸಲ ಹೇಳುವ ತರಬೇತಿ ನಾಗಪುರದಿಂದ ಪಡೆದುಕೊಂಡು ಬಂದಿದ್ದಾರೆ. ಇವರೆಲ್ಲ ಹಾವಿನಪುರ ವಿಷ ಜಂತುಗಳು ಎಂದು ಕಾಂಗ್ರೆಸ್ ಎಂಎಲ್​ಸಿ ಬಿ.ಕೆ. ಹರಿಪ್ರಸಾದ್ ಹೇಳಿದರು. ಇದಕ್ಕೆ ರವಿಕುಮಾರ್, ನೀವು ಇಟಲಿಯಿಂದ ಗುಲಾಮರಾಗಿದ್ದೀರಾ? ಎಂದು ಪ್ರಶ್ನಿಸಿದರು.

  • 22 Dec 2022 01:34 PM (IST)

    Assembly Session, Karnataka News Live: ತುಂಗಭದ್ರಾ ಜಲಾಶಯದಲ್ಲಿ ಶೇ 30ರಷ್ಟು ಹೂಳು ತುಂಬಿದೆ: ಸಿಎಂ

    ಆಂಧ್ರ ಸಿಎಂ ಜೊತೆಗೆ 2-3 ಬಾರಿ ಮಾತುಕತೆ ನಡೆಸಿದ್ದೇನೆ ಎಂದ ಬೊಮ್ಮಾಯಿ

    ತುಂಗಭದ್ರಾ ಜಲಾಶಯದಲ್ಲಿ ಶೇ 30ರಷ್ಟು ಹೂಳು ತುಂಬಿದೆ ಎಂದು ವಿಧಾನ ಪರಿಷತ್​ನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. ಸದಸ್ಯ ವೈ. ಎಂ. ಸತೀಶ್ ಪ್ರಶ್ನೆಗೆ ಉತ್ತರಿಸಿದ ಅವರು, ಈ ಹಿಂದೆ ನಾನು ಜಲಸಂಪನ್ಮೂಲ ಸಚಿವನಾಗದ್ದಾಗ ಹೈಡ್ರಾಲಿಕ್ ಯಂತ್ರ ಬಳಸಿ ಹೂಳು ತಗೆಯಲು ಪ್ರಯತ್ನ‌ ಮಾಡಿದ್ದೇವೆ. ಆದರೆ ಅದು ಬೇರೆ ಬೇರೆ ಕಾರಣಗಳಿಂದ ಸಾಧ್ಯವಾಗಿರಲಿಲ್ಲ. ಹೀಗಾಗಿ ಹೂಳು ತುಂಬಿದ 30 ಟಿಎಂಸಿ ನೀರು ಸದ್ಬಳಕೆ ಮಾಡಿಕೊಳ್ಳಲು ಸಮಾನಾಂತರ ಆಣೆಕಟ್ಟು ಕಟ್ಟಬೇಕಾಗಿದೆ. ಕೊಪ್ಪಳ ಜಿಲ್ಲೆ ನವಲಿ ಬಳಿ ಜಾಗೆ ಗುರುತಿಸಿದ್ದೇವೆ. ಆದರೆ ಅಂತಾರಾಜ್ಯ ವಿಷಯವಾಗಿರುವುದರಿಂದ ಪಕ್ಕದ ರಾಜ್ಯ ಆಂಧ್ರ ಹಾಗೂ ತೆಲಂಗಾಣ ಜೊತೆ ಮಾತುಕತೆ ಮಾಡಬೇಕಾಗಿದೆ. ಆಂಧ್ರ ಸಿಎಂ ಜೊತೆಗೆ 2-3 ಬಾರಿ ಮಾತುಕತೆ ನಡೆಸಿದ್ದೇನೆ. ನಮ್ಮ ರಾಜ್ಯದ ತಾಂತ್ರಿಕ ಪರಿಣಿತರು, ಇಂಜಿನಿಯರ್​ಗಳು ಹಾಗೂ ಆಂಧ್ರದ ಅಧಿಕಾರಿಗಳು ಸಮಾಲೋಚನೆ ನಡೆಸಿದ್ದಾರೆ. ಅವರ ಇಂಜಿನಿಯರ್​ಗಳ ಉನ್ನತ ನಿಯೋಗ ನಾವು ಆಣೆಕಟ್ಟು ಕಟ್ಟುವ ಸ್ಥಳಕ್ಕೆ ಭೇಟಿ ಕೊಟ್ಟಿದ್ದಾರೆ. ಶೀಘ್ರವೇ ಈ ವಿಷಯಕ್ಕೆ ಸಂಬಂಧಿಸಿದಂತೆ ಸರ್ವಪಕ್ಷ ಸಭೆ ಕರೆಯುತ್ತೇನೆ. ಸಭೆಗೆ ತಾಂತ್ರಿಕ, ನೀರಾವರಿ ತಜ್ಞರನ್ನೂ ಆಹ್ವಾನಿಸುತ್ತೇವೆ. ರಾಜ್ಯದ ಹಿತದೃಷ್ಟಿಯಿಂದ ನಾವು ಏನೂ ಕ್ರಮ ಕೈಗೊಳ್ಳಬೇಕು ಚರ್ಚಿಸುತ್ತೇವೆ. ನಮ್ಮ ರಾಜ್ಯಕ್ಕೆ ನಿಗದಿ ಪಡಿಸಿದ ಸಂಪೂರ್ಣ ನೀರು ಬಳಸಿಕೊಳ್ಳುವುದು ನಮ್ಮ ಆದ್ಯತೆಯಾಗಿದೆ. ಪಕ್ಕದ ರಾಜ್ಯದೊಂದಿಗೆ ಸಾಮರಸ್ಯ ಕಾಪಾಡಿಕೊಳ್ಳುವುದು ಕೂಡ ಮುಖ್ಯ ಎಂದರು.

  • 22 Dec 2022 01:19 PM (IST)

    Assembly Session, Karnataka News Live: ಕುಲಪತಿಗಳ ಹಗರಣ, ಸರ್ಕಾರ ಯಾವ ತಪ್ಪು ಮಾಡಿಲ್ಲವೆಂದ ಮಾಧುಸ್ವಾಮಿ

    ಯಪ್ಪಾ ಶಿವಶಿವಾ ಎಂದ ಹರಿಪ್ರಸಾದ್

    ವಿಧಾನ ಪರಿಷತ್: ಪ್ರತಾಪ್ ಸಿಂಹ ಕುಲಪತಿಗಳ ಹಗರಣದ ಕುರಿತು ಹೇಳಿಕೆ ಬಗ್ಗೆ ಚರ್ಚೆಗೆ ಅವಕಾಶ ನೀಡುವಂತೆ ಕಾಂಗ್ರೆಸ್ ಪಟ್ಟು ಹಿಡಿದಿದೆ. ಇದಕ್ಕೆ ಸಚಿವ ಜೆ.ಸಿ.ಮಾಧುಸ್ವಾಮಿ ನಿರಾಕರಣೆ ಮಾಡಿದರು. ಎಲ್ಲೋ ಟಿವಿಯಲ್ಲಿ ಪೇಪರ್​​ನಲ್ಲಿ ಬಂತು ಅಂತ ಚರ್ಚೆಗೆ ಅವಕಾಶ ನೀಡುವುದು ಸರಿಯಲ್ಲ. ಅಂತಹ ಯಾವ ತಪ್ಪನ್ನು ನಮ್ಮ ಸರ್ಕಾರ ಮಾಡಿಲ್ಲ ಎಂದರು. ಇದಕ್ಕೆ ಯಪ್ಪಾ ಶಿವಶಿವಾ ಎಂದು ಹರಿಪ್ರಸಾದ್ ಹೇಳಿದರು.

  • 22 Dec 2022 01:16 PM (IST)

    Assembly Session, Karnataka News Live: ಮೀಸಲಾತಿ ಹೆಚ್ಚಳ, ಕಾಂಗ್ರೆಸ್ ವಿರುದ್ಧ ಕೋಟ ಶ್ರೀನಿವಾಸ್ ಪೂಜಾರಿ ವಾಗ್ದಾಳಿ

    ಕಾಂಗ್ರೆಸ್, ಬಿಜೆಪಿ ಸದಸ್ಯರ ನಡುವೆ ಮಾತಿನ ಚಕಮಕಿ

    ವಿಧಾನಪರಿಷತ್​ನಲ್ಲಿ ಮೀಸಲಾತಿ ಹೆಚ್ಚಳ ವಿಚಾರದ ಚರ್ಚೆ ನಡೆಯುತ್ತಿದ್ದು, ಮೀಸಲಾತಿ ಪ್ರಮಾಣ ಹೆಚ್ಚಿಸಿದ್ದರಿಂದ ಕಾಂಗ್ರೆಸ್​ ಹೆದರಿಕೊಂಡಿದೆ ಎಂದು ಕಾಂಗ್ರೆಸ್ ವಿರುದ್ಧ ಸಚಿವ ಕೋಟ ಶ್ರೀನಿವಾಸ ಪೂಜಾರಿ ವಾಗ್ದಾಳಿ ನಡೆಸಿದರು. ನಿಮ್ಮ ಕಾಲದಲ್ಲೇ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡಬೇಕಿತ್ತು ಎಂದರು. ಈ ವೇಳೆ ಮೀಸಲಾತಿ ಹೆಚ್ಚಳದ ಪರವಾಗಿಯೇ ಇದ್ದೇವೆ ಎಂದು ಕಾಂಗ್ರೆಸ್​ ನಾಯಕರು ಹೇಳಿದರು. ಅಲ್ಲದೆ ಕಾಂಗ್ರೆಸ್, ಬಿಜೆಪಿ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.

  • 22 Dec 2022 01:14 PM (IST)

    Assembly Session, Karnataka News Live: ವಿಧಾನ ಸಭೆಯಲ್ಲಿ ಕೋವಿಡ್ ಚರ್ಚೆ

    ಯಾವುದೇ ದೇಶದಲ್ಲಿ ಆದರೂ ನಾವು ಗಂಭೀರವಾಗಿ ತೆಗೆದುಕೊಂಡಿದ್ದೇವೆ ಎಂದ ಸಿಎಂ

    ವಿಧಾನಸಭೆಯಲ್ಲಿ ಕೋವಿಡ್ ಕುರಿತು ಚರ್ಚೆ ನಡೆಯಿತು. ಈ ವೇಳೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಯಾವುದೇ ದೇಶದಲ್ಲಿ ಆದರೂ ನಾವು ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಬೂಸ್ಟರ್ ಡೋಸ್ ಬಗ್ಗೆ ಜನರಿಗೆ ಇನ್ನೂ ಆಸಕ್ತಿ ಬಂದಿಲ್ಲ. ತಡೆಯುವ ಕ್ರಮಗಳ ಬಗ್ಗೆ ಇಂದು ಸಭೆ ಕರೆಯಲಾಗಿದೆ. ಸಭೆಯಲ್ಲಿ ತಜ್ಞರು ಕೂಡಾ ಪಾಲ್ಗೊಳ್ಳುತ್ತಾರೆ. ಕ್ರಮ ತೆಗೆದುಕೊಂಡಾಗ ಎಲ್ಲರೂ ಸಹಕರಿಸಿದರೆ ಬರುವಂತಹ ಸಾವು ನೋವುಗಳನ್ನು ತಡೆಗಟ್ಟಬಹುದು ಎಂದರು.

  • 22 Dec 2022 01:12 PM (IST)

    Assembly Session, Karnataka News Live: ಹಸುಗಳ ಚರ್ಮಗಂಟು ರೋಗ ಸಮಸ್ಯೆ ಬಗ್ಗೆ ಸಿದ್ದರಾಮಯ್ಯ ಪ್ರಶ್ನೆ

    ಹಸು ಪೂಜೆ ಮಾಡಿ ಫೋಟೋ ತೆಗೆಸಿಕೊಂಡರೆ ಹಸು ಸಂರಕ್ಷಣೆ ಆಗುತ್ತಾ? ಎಂದ ಸಿದ್ದು

    ವಿಧಾನಸಭೆ: ಹಸುಗಳ ಚರ್ಮಗಂಟು ರೋಗ ಸಮಸ್ಯೆ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಅವರು ಶೂನ್ಯವೇಳೆಯಲ್ಲಿ ಸಚಿವರನ್ನು ಪ್ರಶ್ನಿಸಿದರು. ಗೋವುಗಳಿಗೆ ಖಾಯಿಲೆ ಹೆಚ್ಚಾಗಿದೆ. ಆರು ತಿಂಗಳುಗಳಿಂದ ಲಸಿಕೆ ಹಾಕುವ ಕೆಲಸ ಮಾಡುತ್ತಾ ಇದ್ದಾರೆ. ಗಂಟು ರೋಗಕ್ಕೆ ಈಗ ಲಸಿಕೆ ಸರಿಯಾಗಿ ಸಿಗುತ್ತಿಲ್ಲ. 21,305 ಸಾವಿರ ಪ್ರಾಣಿಗಳು ಸತ್ತಿವೆ. ಒಂದು ತಿಂಗಳಿಂದೀಚೆಗೆ ಹತ್ತು ಸಾವಿರ ಸತ್ತಿವೆ. ಪಶುಸಂಗೋಪನೆ ಇಲಾಖೆ ಸತ್ತು ಹೋಗಿದ್ಯಾ? ಏನು ಕೆಲಸ ಮಾಡುತ್ತಿದೆ? ಹಸು ಪೂಜೆ ಮಾಡಿ ಫೋಟೋ ತೆಗೆಸಿಕೊಂಡರೆ ಹಸು ಸಂರಕ್ಷಣೆ ಆಗುತ್ತಾ? ಎಂದು ಪ್ರಶ್ನಿಸಿದರು.

  • 22 Dec 2022 01:00 PM (IST)

    Assembly Session, Karnataka News Live: ಚಿರತೆಗೆ ಬೇಕಾದ ಆಹಾರ ಕಾಡಿನಲ್ಲಿ ಸಿಗುತ್ತಿಲ್ಲ: ಆರಗ ಜ್ಞಾನೇಂದ್ರ

    ಸದನದ ಗಂಭೀರ ಭಾವನೆಗಳನ್ನು ತಿಳಿಸುವಂತೆ ಸ್ಪೀಕರ್ ಸೂಚನೆ

    ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕಿನಲ್ಲಿ ಚಿರತೆ ಹಾವಳಿ ವಿಚಾರವಾಗಿ ವಿಧಾನಸಭೆಯಲ್ಲಿ ಶಾಸಕ ಅಶ್ವಿನ್ ಕುಮಾರ್ ಪ್ರಶ್ನೆಗೆ ಉತ್ತರಿಸಿದ ಗೃಹಸಚಿವ ಆರಗ ಜ್ಞಾನೇಂದ್ರ, ​ನನಗೆ ತಿಳಿದ ಪ್ರಕಾರ ಚಿರತೆ ಬೇಕಾದ ಆಹಾರ ಕಾಡಿನಲ್ಲಿ ಸಿಗುತ್ತಿಲ್ಲ. ಚಿರತೆಗಳ ಸಂಖ್ಯೆ ಜಾಸ್ತಿಯಾಗಿ ಆಹಾರ ಸಿಗುತ್ತಿಲ್ಲ. ಅರಣ್ಯ ಇಲಾಖೆ ಚಿರತೆ ಸೆರೆ ಹಿಡಿದು ಆಹಾರ ಸಿಗುವ ಕಡೆ ಬಿಡಬೇಕು. ಈ ಬಗ್ಗೆ ಖಂಡಿತವಾಗಿ ಅರಣ್ಯ ಇಲಾಖೆಯನ್ನು ಎಚ್ಚರಿಸಲಾಗುವುದು. ಚಿರತೆ ಸೆರೆ ಹಿಡಿದು ದೂರ ಸ್ಥಳಕ್ಕೆ ಸಾಗಿಸುವ ಕೆಲಸ ಮಾಡುತ್ತೇವೆ ಎಂದರು. ಈ ವೇಳೆ ಮಧ್ಯಪ್ರವೇಶಿಸಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಮುಖ್ಯಮಂತ್ರಿಯವರ ಬಳಿಯೇ ಇಲಾಖೆ ಇದೆ. ತಾವು ಸಿಎಂಗೆ ಸದನದ ಗಂಭೀರ ಭಾವನೆಗಳನ್ನು ತಿಳಿಸಿ. ಸಕ್ಕರೆ ಕಾರ್ಖಾನೆಯವರು ಕಬ್ಬು ಕಟಾವು ಮಾಡಿಕೊಂಡು ಹೋಗುತ್ತಿಲ್ಲ. ಅದರಿಂದಾಗಿ ಚಿರತೆ ಮರಿ ಹಾಕಿ ಅದರ ಹಾವಳಿ ಜಾಸ್ತಿಯಾಗುತ್ತದೆ ಎಂದು ಅವರ ವಾದ. ಕಬ್ಬು ಕಟಾವು ಮಾಡಲು ಹೇಳಿ ಅದರಿಂದ ಚಿರತೆ ಹಾವಳಿ ಕಡಿಮೆ ಆಗುತ್ತದೆ ಎಂದರು. ಇದರ ಗಂಭೀರತೆಯನ್ನು ಮುಖ್ಯಮಂತ್ರಿಯವರಿಗೆ ತಿಳಿಸುತ್ತೇನೆ ಎಂದು ಗೃಹಸಚಿವರು ಹೇಳಿದರು.

  • 22 Dec 2022 12:54 PM (IST)

    Assembly Session, Karnataka News Live: ಅವಧಿ ಮುಗಿದ ಕೋವಿಡ್ ಪತ್ತೆ ಬಳಸುವ ಪರಿಕರಗಳ ಬಳಕೆ

    ವಿಧಾನ ಪರಿಷತ್: ಕೋವಿಡ್ ಪತ್ತೆ ಬಳಸುವ ಪರಿಕರಗಳ ಅವಧಿ ಮುಗಿದಿದೆ, ಆದರೂ ಅವುಗಳನ್ನೇ ಬಳಸುತ್ತಿದ್ದಾರೆ ಎಂಬ ವಿಚಾರವನ್ನು ಹರೀಶ್ ಕುಮಾರ್ ಅವರು ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಿದರು. ಇದಕ್ಕೆ ಉತ್ತರಿಸಿದ ಸಭಾ ನಾಯಕ ಕೋಟ ಶ್ರೀನಿವಾಸ್ ಪೂಜಾರಿ, 3.55 ಲಕ್ಷ ಕಿಟ್ ಅವಧಿ ಮುಗಿದಿದೆ. ಮರು ಬಳಕೆ‌ಮಾಡಲು ICMR ನಿಂದ ಅನುಮತಿ ಪಡೆಯಬೇಕು ಎಂದರು. ನಾಳೆಯೇ ಉತ್ತರ ಕೊಡಿಸಿ, ಯಾಕೆಂದರೆ ಮಾಧ್ಯಮಗಳಲ್ಲಿ ಬರುತ್ತಾ ಇದೆ. ಜನರಲ್ಲಿ ಆತಂಕವಿದೆ ಎಂದ ಸಭಾಪತಿ ಬಸವರಾಜ ಹೊರಟ್ಟಿ ಸೂಚಿಸಿದರು.

  • 22 Dec 2022 12:47 PM (IST)

    Assembly Session, Karnataka News Live: ವಿಧಾನಸಭೆಯಲ್ಲಿ ಸಚಿವ, ಶಾಸಕರ ನಡುವೆ ಚಿರತೆ ‘ಘರ್ಜನೆ’

    ವಿಧಾನಸಭೆ: ಚಿರತೆ ಹಾವಳಿ ಬಗ್ಗೆ ಟಿ. ನರಸೀಪುರ ಶಾಸಕ ಅಶ್ವಿನ್ ಕುಮಾರ್ ಅವರು ಶೂನ್ಯವೇಳೆಯಲ್ಲಿ ಪ್ರಸ್ತಾಪಿಸಿದರು. ಟಿ. ನರಸೀಪುರದಲ್ಲಿ ಚಿರತೆ ಹಾವಳಿ ಹೆಚ್ಚಾಗಿದೆ. ಮಂಜುನಾಥ್, ಮೇಘನಾ, ಸತೀಶ್ ಹಾಗೂ ನಿಂಗೇಗೌಡ ಎಂಬುವರ ಮೇಲೆ ದಾಳಿ ಮಾಡಿದೆ. ಟಿ. ನರಸೀಪುರದಲ್ಲಿ ಚಿರತೆ ಹಾವಳಿ ಹೆಚ್ಚಾಗಿ ಜನ ಆತಂಕದಲ್ಲಿದ್ದಾರೆ. ಕಬ್ಬು ಕಟಾವಿನ ವೇಳೆ ಮರಿ ಹಾಕಿದ್ದು, ಕಟಾವು ಮಾಡಲು ಬಿಡುತ್ತಿಲ್ಲ ಎಂದರು. ಈ ವೇಳೆ ವರುಣಾ ಶಾಸಕ ಯತೀಂದ್ರ ಸಿದ್ದರಾಮಯ್ಯ ಅವರು ಮಧ್ಯಪ್ರವೇಶಿಸಿ, ನಮ್ಮ ಕ್ಷೇತ್ರದಲ್ಲಿ ಕೂಡ ಚಿರತೆ ಹಾವಳಿ ಹೆಚ್ಚಾಗಿದೆ ಎಂದರು. ಇದಕ್ಕೆ ಹಾಸ್ಯ ಚಟಾಕಿ ಹಾರಿಸಿದ ಸ್ಪೀಕರ್, ಡಾಕ್ಟ್ರೆ ನಿಮ್ಮ ಕ್ಷೇತ್ರದ ಚಿರತೆ ಬೇರೆ, ನಮ್ಮ ಕ್ಷೇತ್ರದ ಚಿರತೆ ಬೇರೆ ಅಂತ ಇದೆಯಾ ಎಂದರು. ಈ ವೇಳೆ ಅಶ್ವಿನ್ ಮಾತನಾಡಿ, ಕುರಿ, ಕೋಳಿ, ದನಗಳ ಮೇಲೆ ದಾಳಿ ಮಾಡಿದರೆ ಸಮಸ್ಯೆ ಇರಲಿಲ್ಲ. ಆದರೆ ಅವುಗಳು ನೇರವಾಗಿ ಮನುಷ್ಯರ ಮೇಲೆ ದಾಳಿ ಮಾಡುತ್ತಿದ್ದು, ಸರ್ಕಾರ ಪರಿಹಾರ ಒದಗಿಸಬೇಕು ಎಂದರು. ಮಾಗಡಿ ಶಾಸಕ ಮಂಜುನಾಥ್ ಮಧ್ಯಪ್ರವೇಶಿಸಿ, ಅರಣ್ಯ ಇಲಾಖೆಯಲ್ಲಿ ಬೋನ್‌ಗಳ ಕೊರತೆ ಇದೆ. ಎರಡು ಮೂರು ಬೋನ್ ಮಾತ್ರ ಇದೆ. ಚಿರತೆ ಅಂದಾಗ ಒಂದು ಕಡೆಯಿಂದ ಮತ್ತೊಂದು ಕಡೆಗೆ ಬೋನ್ ತೆಗೆದುಕೊಂಡು ಹೋಗಿ ಇಡುತ್ತಾರೆ. ಮೂವತ್ತು, ನಲವತ್ತು ಬೋನ್ ಮಾಡಿಸುವಂತೆ ಮನವಿ ಮಾಡಿದರು. ಇದು ಇಡೀ ಸದನದ ಸಮಸ್ಯೆಯಾಗಿದೆ. ಇದು ಗಂಭೀರ ಸಮಸ್ಯೆಯಾಗಿದ್ದು, ಮನುಷ್ಯರ ಮೇಲೆ ದಾಳಿ ಮಾಡುತ್ತಿದೆ. ಸಮಸ್ಯೆ ಜೊತೆ ಪರಿಹಾರ ಹುಡುಕಬೇಕಿದೆ ಎಂದು ಸ್ಪೀಕರ್ ಹೇಳಿದರು. ಈ ವೇಳೆ ಮಾತನಾಡಿದ ಸಂಡೂರು ಶಾಸಕ ತುಕಾರಾಮ್, ಹಿಂದೆ ಕರಡಿ ದಾಳಿ ಹೆಚ್ಚಾದಾಗ ದರೋಜಿಯಲ್ಲಿ ಕರಡಿದಾಮ ಮಾಡಿದರು. ಹೀಗಾಗಿ ಚಿರತೆ ಧಾಮ ಮಾಡಿ, ಎಲ್ಲಾ ಚಿರತೆಗಳನ್ನು ಅಲ್ಲಿಯೇ ಬಿಡಿ ಎಂದರು. ಈ ವೇಳೆ ಸ್ಪೀಕರ್, ಆನೆಗೆ ಏನು ಮಾಡೋಣ‌ ಎಂದು‌ ಪ್ರಶ್ನಿಸಿದರು.

  • 22 Dec 2022 12:39 PM (IST)

    Assembly Session, Karnataka News Live: ಸಿಟಿ ರವಿ ಪಕ್ಕ ಕುಳಿದ ರಮೇಶ ಜಾರಕಿಹೊಳಿ

    ಮುಂದೆ ಕುಳಿತುಕೊಳ್ಳುವಂತೆ ಈಶ್ವರಪ್ಪಗೆ ಬಿಎಸ್​ವೈ ಸೂಚನೆ

    ವಿಧಾನಸಭೆ: ಕಲಾಪ ಆರಂಭವಾದ ಮೊದಲ ದಿನದಿಂದ ಗೈರಾಗಿದ್ದ ರಮೇಶ್ ಜಾರಕಿಹೊಳಿ ಇಂದು ಹಾಜರಾಗಿದ್ದು, ಸದನದ ಒಳಗೆ ಬಂದು ನೇರವಾಗಿ ನಾಲ್ಕನೇ ಸಾಲಿನ ಆಸನದಲ್ಲಿ ಶಾಸಕ ಸಿ.ಟಿ. ರವಿಗೆ ಹಸ್ತಲಾಘವ ಮಾಡಿ ಪಕ್ಕದಲ್ಲಿ ಆಸೀನರಾದರು. ರಮೇಶ್ ಜಾರಕಿಹೊಳಿ ಸದನಕ್ಕೆ ಹಾಜರಾಗುವ ವೇಳೆ ಸದನದಲ್ಲಿ ಡಿ.ಕೆ. ಶಿವಕುಮಾರ್ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ಅನುಪಸ್ಥಿತರಿದ್ದರು. ಇದಾದ ಐದು ನಿಮಿಷಕ್ಕೆ ಕೆ.ಎಸ್.ಈಶ್ವರಪ್ಪ ಅವರು ಸದನಕ್ಕೆ ಆಗಮಿಸಿ ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಮಾತನಾಡಿಸಿದ ಕೆಲವು ಕ್ಷಣ ನಗುತ್ತಾ ಮಾತನಾಡಿದರು. ಅಲ್ಲದೆ ಮುಂದೆ ಕುಳಿತುಕೊಳ್ಳುವಂತೆ ಯಡಿಯೂರಪ್ಪ ಅವರು ಸೂಚಿಸಿದರು. ನಂತರ ನಾಲ್ಕನೇ ಸಾಲಿನಲ್ಲಿನ ಈಶ್ವರಪ್ಪ ಅವರು ಆಸನರಾದರು.

  • 22 Dec 2022 12:35 PM (IST)

    Assembly Session, Karnataka News Live: ಮಧ್ಯಂತರ ವರದಿ ವಿಚಾರ, ಕಾನೂನು ತಜ್ಞರ ಅಭಿಪ್ರಾಯ ಕೇಳಲು ಮುಂದಾದ ಸರ್ಕಾರ

    2ಎ ಮೀಸಲಾತಿಗಾಗಿ ಪಂಚಮಸಾಲಿ ಸಮುದಾಯ ಹೋರಾಟ ವಿಚಾರದಲ್ಲಿ ಹಿಂದುಳಿದ ವರ್ಗಗಳ ಆಯೋಗದಿಂದ ಮಧ್ಯಂತರ ವರದಿ ಸಲ್ಲಿಸಿದ ಹಿನ್ನಲೆ ರಾಜ್ಯ ಸರ್ಕಾರ, ಕಾನೂನು ತಜ್ಞರ ಅಭಿಪ್ರಾಯ ಕೇಳಲು ಮುಂದಾಗಿದೆ. ಎಜಿ ಪ್ರಭುಲಿಂಗ ನಾವದಗಿಗೆ ಮಧ್ಯಂತರ ವರದಿ ರವಾನಿಸಲಾಗಿದೆ. ನಿನ್ನೆ ಸಂಜೆ ವಿಟಿಯು ಗೆಸ್ಟ್​ಹೌಸ್​ನಲ್ಲಿ ನಾವದಗಿ ಅವರು ಮುಖ್ಯಮಂತ್ರಿಯವರನ್ನು ಭೇಟಿಯಾಗಿದ್ದರು. ಇಂದು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರು ಜಯಪ್ರಕಾಶ್ ಹೆಗ್ಡೆ ಅವರು ಸಿಎಂ ಬೊಮ್ಮಾಯಿ ಭೇಟಿಯಾದರು. ಸಂಜೆ ಬಂದು ಭೇಟಿಯಾಗುವಂತೆ ಮುಖ್ಯಮಂತ್ರಿಯವರು ಸೂಚಿಸಿದರು.

  • 22 Dec 2022 12:32 PM (IST)

    Assembly Session, Karnataka News Live: ಪಂಚಮಸಾಲಿ ಪ್ರತಿಭಟನಾ ಸ್ಥಳಕ್ಕೆ ಸಚಿವರ ಭೇಟಿ

    ಸಚಿವ ಸಿ.ಸಿ ಪಾಟೀಲ್ ಹಾಗೂ ಶಂಕರ್ ಮುನೇನಕೊಪ್ಪ ಅವರು ಪಂಚಮಸಾಲಿ ಮೀಸಲಾತಿಗಾಗಿ ಪ್ರತಿಭಟನೆ ನಡೆಯುತ್ತಿರುವ ಸ್ಥಳಕ್ಕೆ ಸರ್ಕಾರದ ಪ್ರತಿನಿಧಿಗಳಾಗಿ ತೆರಳಿದರು.

  • 22 Dec 2022 12:31 PM (IST)

    Assembly Session, Karnataka News Live: ಕತ್ತಿ ಹಿಡಿದು ಸಮಾವೇಶಕ್ಕೆ ಬಂದ ಮಹಿಳೆಯರು

    ಬೆಳಗಾವಿಯಲ್ಲಿ ಲಿಂಗಾಯತ ಪಂಚಮಶಾಲಿ ವಿರಾಟ ಸಮಾವೇಶಕ್ಕೆ ಮಹಿಳೆಯರು ಕತ್ತಿ ಹಿಡಿದು ಆಗಮಿಸಿದರು. ಕಿತ್ತೂರು ರಾಣಿ ಚೆನ್ನಮ್ಮ ಕತ್ತಿ ಹಿಡಿದು ಆಗಮಿಸಿದ ಮಹಿಳೆಯರಿಗೆ ಜನರು ಅದ್ದೂರಿ ಸ್ವಾಗತ ಕೋರಿದರು, ಈ ವೇಳೆ ಜಯಘೋಷವೂ ಮೊಳಗಿತು.

  • 22 Dec 2022 12:29 PM (IST)

    Assembly Session, Karnataka News Live: ಹಿಂದೂ ತಳವಾರ ಸಮುದಾಯಕ್ಕೆ ಜಾತಿ ಸರ್ಟೀಪಿಕೇಟ್ ನೀಡುತ್ತಿಲ್ಲ; ತಳವಾರ ಸಾಬಣ್ಣ ಅಸಮಾಧಾನ

    ಹಿಂದೂ ತಳವಾರ ಸಮುದಾಯಕ್ಕೆ ಜಾತಿ ಸರ್ಟೀಪಿಕೇಟ್ ನೀಡುತ್ತಿಲ್ಲ ಎಂದು ವಿಧಾನ ಪರಿಷತ್ ಶೂನ್ಯವೇಳೆ ತಳವಾರ ಸಾಬಣ್ಣ ಅವರು ಪ್ರಸ್ತಾಪ ಮಾಡಿದರು. ಹಿಂದೂ ತಳವಾರ ಸಮುದಾಯಕ್ಕೆ ಜಾತಿ ಪ್ರಮಾಣ ಪತ್ರ ನೀಡಬೇಕೆಂದು ಸಿಎಂ ಆದೇಶ ಮಾಡಿರುತ್ತಾರೆ. ಆದರೂ ಹಿಂದೂ ತಳವಾರ ಸಮುದಾಯ ಬಗ್ಗೆ ತಹಶೀಲ್ದಾರರು ಸರ್ಟಿಫಿಕೇಟ್ ನೀಡದಂತೆ ಒತ್ತಡವಿದೆ ಎನ್ನುತ್ತಾರೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಉತ್ತರ ನೀಡಬೇಕು ಎಂದರು. ಇದಕ್ಕೆ ಉತ್ತರಿಸಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ, ತಳವಾರ ಸಮುದಾಯ ಎಸ್‌ಟಿ ಸಮುದಾಯಕ್ಕೆ ಸೇರಿಸಿ ಆದೇಶ ಮಾಡಲಾಗಿದೆ. ತಳವಾರ ಪರಿವಾರಕ್ಕೆ ಎಸ್‌ಟಿ ಸರ್ಟಿಫಿಕೇಟ್ ನೀಡಬೇಕೆಂದು ನಾವು ಸೂಚನೆ ನೀಡುತ್ತೇವೆ ಎಂದರು.

  • 22 Dec 2022 12:22 PM (IST)

    Assembly Session, Karnataka News Live: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಿದರೆ ಹೋರಾಟ

    ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಎಚ್ಚರಿಕೆ

    2ಎ ಮೀಸಲಾತಿಗೆ ಆಗ್ರಹಿಸಿ ಪಂಚಮಸಾಲಿ ಸಮುದಾಯದ ಹೋರಾಟಕ್ಕೆ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ವಿರೋಧ ವ್ಯಕ್ತಪಡಿಸಿದೆ. ಅವೈಜ್ಞಾನಿಕವಾಗಿ, ರಾಜಕೀಯ ಒತ್ತಡಕ್ಕೆ ಮಣಿಯಬಾರದು. ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಿದರೆ ಹೋರಾಟ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಎಚ್ಚರಿಕೆ ನೀಡಿದೆ.

  • 22 Dec 2022 12:21 PM (IST)

    Assembly Session, Karnataka News Live: ಸಚಿವ ಸ್ಥಾನ ಸಿಗದಿದ್ದಕ್ಕೆ ಶಾಸಕ ರೇಣುಕಾಚಾರ್ಯ ಅಸಮಾಧಾನ

    ಮಾಜಿ ಸಚಿವರಾದ ಈಶ್ವರಪ್ಪ, ರಮೇಶ್ ಜಾರಕಿಹೊಳಿ ನಂತರ ಇದೀಗ ಸಿಎಂ ರಾಜಕೀಯ ಕಾರ್ಯದರ್ಶಿಯೂ ಆಗಿರುವ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರು ಸಚಿವ ಸ್ಥಾನ ಸಿಗದ ವಿಚಾರವಾಗಿ ಅಸಮಾಧಾನ ಹೊರಹಾಕಿದ್ದಾರೆ. ನಾನು ಹಿರಿಯ ಶಾಸಕ, ನನಗೂ ಸಂಪುಟದಲ್ಲಿ ಅವಕಾಶ ಕೊಡಲಿ. ರಮೇಶ್​ ಜಾರಕಿಹೊಳಿ, ಕೆ.ಎಸ್.ಈಶ್ವರಪ್ಪಗೂ ಸಚಿವ ಸ್ಥಾನ ಕೊಡಲಿ. ಅದೇ ರೀತಿ ಹೊಸ ಮುಖಗಳಿಗೂ ಸಂಪುಟದಲ್ಲಿ ಅವಕಾಶ ಕೊಡಿ. ಈ ಹಿಂದೆ ನಾನು ಅಬಕಾರಿ ಖಾತೆಯನ್ನ ಚೆನ್ನಾಗಿ ನಿಭಾಯಿಸಿದ್ದೆ ಎಂದರು.

  • 22 Dec 2022 11:59 AM (IST)

    Assembly Session, Karnataka News Live: ಕಾಡಾನೆ ದಾಳಿ ಬಗ್ಗೆ ಎಂ.ಕೆ.ಪ್ರಾಣೇಶ್ ಪ್ರಶ್ನೆ

    ವಿಧಾನ ಪರಿಷತ್: ಕಾಡಾನೆ ದಾಳಿ ಬಗ್ಗೆ ಹಂಗಾಮಿ ಉಪ ಸಭಾಪತಿ ಎಂ.ಕೆ ಪ್ರಾಣೇಶ್ ಪ್ರಶ್ನಿಸಿದ್ದು, ಕಾಡಾನೆ ದಾಳಿ ತಡೆಯಲು ಸರ್ಕಾರದ ಕ್ರಮಗಳೇನು? ಕಾಡಾನೆ ದಾಳಿಯಿಂದ ಮೃತಪಟ್ಟವರ ಕುಟುಂಬಗಳಿಗೆ ಸರ್ಕಾರದ ಪರಿಹಾರವೇನು? ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಸಚಿವ ಆರ್.ಅಶೋಕ್, ರಕ್ಷಿತಾರಣ್ಯಗಳಲ್ಲಿ ಕೆರೆ ನಿರ್ಮಾಣ, ಬೇಲಿ ನಿರ್ಮಾಣ, ಆನೆ ತಡೆ ಕಂದಕ, ಸೋಲಾರ್ ಬೇಲಿ ನಿರ್ಮಾಣ ಮಾಡಿದ್ದೇವೆ. ಆನೆ ಹಿಮ್ಮೆಟ್ಟಿಸುವ ತಂಡಗಳನ್ನು ಮಾಡಿದ್ದೇವೆ ಎಂದರು.

  • 22 Dec 2022 11:51 AM (IST)

    Assembly Session, Karnataka News Live: ನೋ ಕಮೆಂಟ್ಸ್ ಎಂದು ರಮೇಶ್ ಜಾರಕಿಹೊಳಿ

    ಸಿಎಂ ಬೊಮ್ಮಾಯಿ ಮತ್ತು ಪಕ್ಷದ ಮೇಲೆ ನಮಗೆ ನಂಬಿಕೆ: ಈಶ್ವರಪ್ಪ

    ಸದನಕ್ಕೆ ಆಗಮಿಸುವ ಮುನ್ನ ಕೆ.ಎಸ್​​.ಈಶ್ವರಪ್ಪ ಮತ್ತು ರಮೇಶ್ ಜಾರಕಿಹೊಳಿ ರಹಸ್ಯ ಮಾತುಕತೆ ನಡೆಸಿದರು. ಬೆಳಗಾವಿಯ ಖಾಸಗಿ ಹೋಟೆಲ್​ನಲ್ಲಿ ರಮೇಶ್, ಈಶ್ವರಪ್ಪ ಅವರು ಸುಮಾರು ಐದು ನಿಮಿಷಗಳ ಕಾಲ ಚರ್ಚೆ ನಡೆಸಿದರು. ಎಲ್ಲ ಶಾಸಕರು, ಸಚಿವರು ಅಧಿವೇಶನಕ್ಕೆ ತೆರಳಿದ ಬಳಿಕ ಈ ಚರ್ಚೆ ನಡೆಸಿದರು. ಆದರೆ ತಮ್ಮೊಳಗೆ ನಡೆದ ಚರ್ಚೆಯ ಗುಟ್ಟಿನ ಬಗ್ಗೆ ಇಬ್ಬರು ನಾಯಕರು ಬಾಯಿಬಿಟ್ಟಿಲ್ಲ. ಈ ಬಗ್ಗೆ ಏನು ಹೇಳಲ್ಲ ನೋ ಕಮೆಂಟ್ಸ್ ಎಂದು ರಮೇಶ್ ಜಾರಕಿಹೊಳಿ ಟಿವಿ9ಗೆ ಪ್ರತಿಕ್ರಿಯಿಸಿದರು. ಇನ್ನೊಂದೆಡೆ, ಬಿಜೆಪಿ ವಿಶ್ವಾಸದ ಮೇಲೆ ನಂಬಿಕೆ ಇಟ್ಟುಕೊಂಡಿರುವ ಪಾರ್ಟಿ. ಸಿಎಂ ಬೊಮ್ಮಾಯಿ ಮತ್ತು ಪಕ್ಷದ ಮೇಲೆ ನಮಗೆ ನಂಬಿಕೆ ಇದೆ. ಹಾಗಾಗಿ ಇಂದು ಸದನಕ್ಕೆ ಹಾಜರಾಗುತ್ತಿದ್ದೇವೆ ಎಂದು ಈಶ್ವರಪ್ಪ ಹೇಳಿದ್ದಾರೆ. ನಮ್ಮ ಮೇಲೆ ಬಂದಿದ್ದ ಆರೋಪದ ಕ್ಲೀನ್​ಚಿಟ್​​ ಸಿಕ್ಕಾಗಿದೆ. ಕ್ಲೀನ್​ ಚಿಟ್​ ಸಿಕ್ಕರೂ ಯಾಕೆ ಸಂಪುಟಕ್ಕೆ ಸೇರಿಸಿಕೊಂಡಿಲ್ಲ. ಈ ಬಗ್ಗೆ ರಾಜ್ಯದ ಜನರು, ಕಾರ್ಯಕರ್ತರು ಪ್ರಶ್ನೆ ಮಾಡುತ್ತಿದ್ದಾರೆ ಎಂದು ಸುವರ್ಣಸೌಧದಲ್ಲಿ ಹೇಳಿಕೆ ನೀಡಿದರು.

  • 22 Dec 2022 11:46 AM (IST)

    Assembly Session, Karnataka News Live: ಸದನಕ್ಕೆ ಈಶ್ವರಪ್ಪ, ರಮೇಶ್ ಎಂಟ್ರಿ

    ವಿಧಾನಸಭೆ ಕಲಾಪಕ್ಕೆ ಮಾಜಿ ಸಚಿವರಾದ ಕೆ.ಎಸ್.ಈಶ್ವರಪ್ಪ ಹಾಗೂ ರಮೇಶ್ ಜಾರಕಿಹೊಳಿ ಅವರು ಹಾಜರಾಗಿದ್ದಾರೆ. 3 ದಿನಗಳಿಂದ ಇಬ್ಬರು ಶಾಸಕರು ಸದನಕ್ಕೆ ಗೈರಾಗಿದ್ದರು.

  • 22 Dec 2022 11:24 AM (IST)

    Assembly Session, Karnataka News Live: ಸಚಿವರನ್ನು ಹುಡುಕಿ ಕರೆತನ್ನಿ: ಮುಖ್ಯ ಸಚೇತಕರಿಗೆ ಸ್ಪೀಕರ್ ಸೂಚನೆ

    ವಿಧಾನಸಭೆ ಪ್ರಶ್ನೋತ್ತರ ಕಲಾಪ ಆರಂಭಗೊಂಡಿದೆ. ಪ್ರಶ್ನೋತ್ತರ ಕಲಾಪದ ವೇಳೆ ಸಚಿವರ ಗೈರಿಗೆ ಸ್ಪೀಕರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬೈಲಹೊಂಗಲ ಶಾಸಕ ಮಹಾಂತೇಶ್ ಕೌಜಲಗಿ ಪ್ರಶ್ನೆ ವೇಳೆ ಉತ್ತರ ನೀಡಬೇಕಿದ್ದ ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣ ಅನುಪಸ್ಥಿತಿ ಹೊಂದಿದ್ದು, ಎಲ್ಲಿದ್ದಾರೆ ಸಚಿವರು ಎಂದು ಸಭಾಪತಿ ಕೇಳಿದರು. ಇಲ್ಲೇ ಇದ್ದಾರೆ, ಬರುತ್ತಾರೆ ಎಂದು ಸರ್ಕಾರದ ಕಡೆಯಿಂದ ಉತ್ತರ ನೀಡಲಾಗಿದೆ. ಇಲ್ಲೇ ಎಲ್ಲೋ ಇದ್ದಾರಂತೆ ನೋಡಿ, ಹುಡುಕಿಕೊಂಡು ಬನ್ನಿ ಅವರನ್ನು ಎಂದು ಸರ್ಕಾರಿ ಮುಖ್ಯ ಸಚೇತಕರಿಗೆ ಸ್ಪೀಕರ್ ಸೂಚಿಸಿದರು.

  • 22 Dec 2022 11:19 AM (IST)

    Assembly Session, Karnataka News Live: ಸಂಪುಟ ಸಭೆಯಲ್ಲಿ ಮೀಸಲಾತಿ ಘೋಷಿಸುವ ಭರವಸೆ ಇದೆ: ಬೆಲ್ಲದ್​

    2ಎ ಮೀಸಲಾತಿಗಾಗಿ ಪಂಚಮಸಾಲಿ ಸಮುದಾಯ ಹೋರಾಟ ವಿಚಾರವಾಗಿ ಮಾತನಾಡಿದ ಬಿಜೆಪಿ ಶಾಸಕ ಅರವಿಂದ ಬೆಲ್ಲದ್, ಸಿಎಂ ಬಸವರಾಜ ಬೊಮ್ಮಾಯಿ ಮೇಲೆ ನಮಗೆ ನಂಬಿಕೆಯಿದೆ. ಸಂಪುಟ ಸಭೆಯಲ್ಲಿ ಮೀಸಲಾತಿ ಘೋಷಿಸುವ ಭರವಸೆ ಇದೆ ಎಂದರು. ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡಬಾರದು ಎಂಬ ವಿರೋಧದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಒಂದು ಮನೆ ಅಂದ ಮೇಲೆ ಭಿನ್ನಾಭಿಪ್ರಾಯ ಸಹಜ. ಎಲ್ಲರೂ ಅವರ ಅವರ ಅಭಿಪ್ರಾಯ ತಿಳಿಸಿದ್ದಾರೆ. ನಮಗೆ ಸರ್ಕಾರದ ಮೇಲೆ ಭರವಸೆ ಇದೆ. ಇಲ್ಲದಿದ್ದರೆ ನಮ್ಮ ಮುಂದೆ ನಡೆ ಎಲ್ಲರಿಗೂ ತಿಳಿದಿದೆ ಎಂದರು.

  • 22 Dec 2022 11:09 AM (IST)

    Assembly Session, Karnataka News Live: ಸರ್ಕಾರ ಎಲ್ಲರಿಗೂ ಚಾಕಲೇಟ್ ಕೊಡ್ತಿದೆ: ಡಿಕೆಶಿ

    2ಎ ಮೀಸಲಾತಿಗಾಗಿ ಪಂಚಮಸಾಲಿ ಸಮುದಾಯದ ಗಡುವಿನ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಾತನಾಡಿ, ಮೀಸಲಾತಿ ಸಂಬಂಧ ಸುಪ್ರೀಂ ಕೋರ್ಟ್ ಆದೇಶಗಳಿವೆ. ಆದರೆ ಸರ್ಕಾರ ಎಲ್ಲರಿಗೂ ಚಾಕಲೇಟ್ ಕೊಡುತ್ತಿದೆ ಎಂದು ಕಿಚಾಯಿಸಿದರು. 2ಎ ಮೀಸಲಾತಿ ವಿಚಾರದ ಬಗ್ಗೆ ಪಕ್ಷದಲ್ಲಿ ಚರ್ಚೆ ಮಾಡುತ್ತೇವೆ. ಆ ಸಮುದಾಯದವರು ಬಂದು ಭೇಟಿಯಾಗಿದ್ದಾರೆ. ಒಕ್ಕಲಿಗರು ಮೀಸಲಾತಿ ಕೇಳಿದ್ದಾರೆ. ಸರ್ಕಾರ ಈ ಬಗ್ಗೆ ಸ್ಪಷ್ಟಪಡಿಸಲಿ. ಸಮಾಜದ ಹಿಂದುಳಿದ ವರ್ಗಗಳಿಗೆಲ್ಲಾ ಪಾಲು ಸಿಗಬೇಕು. ಆದರೆ ಬೇಕು, ಬೇಡ ಅಂತ ಹೇಳಲ್ಲ ಎಂದರು.

  • 22 Dec 2022 11:06 AM (IST)

    Assembly Session, Karnataka News Live: ಇಂದು ಮಧ್ಯಾಹ್ನ ಸಚಿವ ಸಂಪುಟ ಸಭೆ

    ಪ್ರತಿಭಟನಾ ಸ್ಥಳಕ್ಕೆ ಸಿಎಂ ಭೇಟಿ ಸಾಧ್ಯತೆ

    ಇಂದು ಮಧ್ಯಾಹ್ನ ಬೆಳಗಾವಿಯ ಸುವರ್ಣ ಸೌಧದಲ್ಲಿ ಸಚಿವ ಸಂಪುಟ ಸಭೆ ನಡೆಯಲಿದ್ದು, ಹಿಂದುಳಿದ ವರ್ಗಗಳ ಆಯೋಗದ ಮಧ್ಯಂತರ ವರದಿ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ. ಶಿಫಾರಸುಗಳೊಂದಿಗೆ ಪೂರ್ಣ ವರದಿ ಸಲ್ಲಿಸುವಂತೆ ಆಯೋಗಕ್ಕೆ ಸೂಚನೆ ನೀಡುವ ಸಾಧ್ಯತೆಯೂ ಇದೆ. ಈಗಾಗಲೇ ಆಯೋಗವು 16 ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಮಧ್ಯಂತರ ವರದಿ ಸಲ್ಲಿಸಿದೆ. ಪೂರ್ಣ ವರದಿ ಸಲ್ಲಿಸಲು ಇನ್ನೂ 15 ಜಿಲ್ಲೆಗಳಲ್ಲಿ ಅಧ್ಯಯನ ಬಾಕಿ ಇದೆ. ಹೀಗಾಗಿ ಇಂದಿನ ಸಂಪುಟ ಸಭೆಯಲ್ಲಿ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಸಂಬಂಧ ತಾತ್ಕಾಲಿಕ ಸಮಾಧಾನಪಡಿಸುವ ನಿಟ್ಟಿನಲ್ಲಿ ಸರ್ಕಾರ ಹೆಜ್ಜೆ ಇರಿಸುವ ಸಾಧ್ಯತೆ ಇದೆ. ಸಂಪುಟ ಸಭೆ ಬಳಿಕ ಖುದ್ದು ಸಿಎಂ ಪ್ರತಿಭಟನಾಕಾರರ ಬಳಿ ಹೋಗಿ ಮಾತನಾಡುವ ಸಾಧ್ಯತೆಯೂ ಇದೆ.

  • 22 Dec 2022 11:02 AM (IST)

    Assembly Session, Karnataka News Live: ಪಂಚಮಸಾಲಿಯವರಿಗೆ ನ್ಯಾಯ ಕೊಡ್ತಾರೆ ನಮ್ಮ ಮುಖ್ಯಮಂತ್ರಿ: ಆಶೋಕ್ ಭರವಸೆ

    ಪಂಚಮಸಾಲಿ ಹೋರಾಟ ವಿಚಾರವಾಗಿ ನಿನ್ನೆ ಮುಖ್ಯಮಂತ್ರಿಗಳು ಸುದೀರ್ಘ ಚರ್ಚೆ ಮಾಡಿದ್ದಾರೆ. ಕಾನೂನು ಇಲಾಖೆಯಿಂದ ಮಾಹಿತಿ ಪಡೆದಿದ್ದಾರೆ. ನಮ್ಮ ಮುಖ್ಯಮಂತ್ರಿಯವರು ಪಂಚಮಸಾಲಿಯವರಿಗೆ ನ್ಯಾಯ ಕೊಡುತ್ತಾರೆ ಎಂದು ಸಚಿವ ಆರ್.ಅಶೋಕ್ ಹೇಳಿದರು. ಒಕ್ಕಲಿಗ ಸಮುದಾಯಕ್ಕೂ ಮೀಸಲಾತಿ ಬೇಡಿಕೆ ಇದೆ. ನಾವು‌ ನಿನ್ನೆ ಒಕ್ಕಲಿಗ ಶಾಸಕರು ಸಭೆ ಮಾಡಿದ್ದೇವೆ. ಇಂದು ಒಂದು ಸಭೆ ಮಾಡುತ್ತೇವೆ. ಒಕ್ಕಲಿಗ ಸಮುದಾಯಕ್ಕೆ ಮೀಸಲಾತಿ ಕೇಳುವುದು ನ್ಯಾಯಯುತವಾಗಿದೆ. ನಾವೆಲ್ಲರು ಅದರ ಪರ ಇದ್ದೇವೆ. ಮುಖ್ಯಮಂತ್ರಿಯವರ ಜೊತೆ ಚರ್ಚಿಸಿ ಮೀಸಲಾತಿ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದರು.

  • 22 Dec 2022 10:58 AM (IST)

    Assembly Session, Karnataka News Live: ಪಂಚಮಸಾಲಿ ಸಮುದಾಯವನ್ನ ಪ್ರತ್ಯೇಕ ಪಂಗಡವಾಗಿ ಗುರುತಿಸುವ ಸಾಧ್ಯತೆ

    ಪಂಚಮಸಾಲಿ 2A ಮೀಸಲಾತಿ ವಿಚಾರವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಿನ್ನೆ ರಾತ್ರಿ ಅಡ್ವೋಕೇಟ್ ಜನರಲ್ ಅವರನ್ನು ಕರೆಸಿ ಮಾತುಕತೆ ನಡೆಸಿದರು. ಪಂಚಮಸಾಲಿ ಸಮುದಾಯದ ಬೇಡಿಕೆ ಬಗ್ಗೆ ಕಾನೂನಾತ್ಮಕವಾಗಿ ಚರ್ಚೆ ನಡೆಸಲಾಗಿದೆ. ಸಂಪುಟ ಸಭೆಯಲ್ಲಿ ಮೀಸಲಾತಿ ವಿಚಾರ ಚರ್ಚೆ ಹಿನ್ನಲೆ ಅಡ್ವೋಕೇಟ್ ಜನರೆಲ್ ಅವರಿಂದಲೂ ಮಾಹಿತಿ ಪಡೆಯಲಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ 2A ಮೀಸಲಾತಿ ನೀಡುವುದು ಅಸಾಧ್ಯ. ಪಂಚಮಸಾಲಿ ಸಮುದಾಯಕ್ಕೆ 2A ನೀಡಿದರೆ ಇತರ ಹಿಂದುಳಿದ ಸಮುದಾಯಗಳು ಸಿಟ್ಟಾಗುವ ಸಾಧ್ಯತೆ ಇದೆ. ಈ ಹಿನ್ನಲೆಯಲ್ಲಿ ಪಂಚಮಸಾಲಿ ಸಮುದಾಯವನ್ನ ಪ್ರತ್ಯೇಕ ಪಂಗಡವಾಗಿ ಗುರುತಿಸುವ ಸಾಧ್ಯತೆಯ ಬಗ್ಗೆ ಚರ್ಚೆ ನಡೆದಿದ್ದು, ಹಾಲಿ ಇರುವ 3B ಬದಲಾಗಿ ಇನ್ನಿತರ ರೀತಿಯಲ್ಲಿ ಮೀಸಲಾತಿ ನೀಡಲು ಸಾಧ್ಯವೇ ಎಂಬ ಬಗ್ಗೆ ಚರ್ಚೆ ನಡೆಸಲಾಗಿದೆ.

  • 22 Dec 2022 10:53 AM (IST)

    Assembly Session, Karnataka News Live: ಪರಿಷತ್ ಉಪ ಸಭಾಪತಿ ಚುನಾವಣೆಗೆ ನಾಮಪತ್ರ ಸಲ್ಲಿಸಿದ ಬಿಜೆಪಿಯ ಪ್ರಾಣೇಶ್

    ವಿಧಾನ ಪರಿಷತ್ ಉಪ ಸಭಾಪತಿ ಸ್ಥಾನಕ್ಕೆ ಚುನಾವಣೆ ಹಿನ್ನಲೆ ಬಿಜೆಪಿಯ ಎಂ.ಕೆ.ಪ್ರಾಣೇಶ್ (M.K.Pranesh) ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಸಚಿವರಾದ ಗೋವಿಂದ ಕಾರಜೋಳ, ಕೋಟ ಶ್ರೀನಿವಾಸ ಪೂಜಾರಿ, ಜೆ.ಸಿ.ಮಾಧುಸ್ವಾಮಿ ಹಾಗೂ ಭಾರತಿ ಶೆಟ್ಟಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಮತ್ತಿತರರೊಂದಿಗೆ ಆಗಮಿಸಿ ಪರಿಷತ್ ಕಾರ್ಯದರ್ಶಿಗೆ ನಾಮಪತ್ರ ಸಲ್ಲಿಸಿದರು. ಪರಿಷತ್ ಉಪ ಸಭಾಪತಿ ಚುನಾವಣೆ ನಾಳೆ ನಡೆಯಲಿದೆ.

  • 22 Dec 2022 10:48 AM (IST)

    Assembly Session, Karnataka News Live: ಮೀಸಲಾತಿ ಘೋಷಿಸಿದರೆ ಸನ್ಮಾನ, ಇಲ್ಲವಾದರೆ ಮುತ್ತಿಗೆ: ಶ್ರೀ

    ಮಧ್ಯಂತರ ವರದಿ ಸಲ್ಲಿಕೆ ಆಗಿರುವುದು ಖುಷಿ ತಂದಿದೆ. ಮಧ್ಯಂತರ ವರದಿನೋ. ಪೂರ್ಣ ವರದಿನೋ ಸಿಎಂ ಕ್ಯಾಬಿನೆಟ್​ನಲ್ಲಿ ಅನುಮೋದನೆ ಮಾಡಬೇಕು, ಮುಖ್ಯಮಂತ್ರಿಯವರು ವರದಿಯನ್ನ ಪಡೆದುಕೊಂಡು ಮೀಸಲಾತಿ ಘೋಷಣೆ ಮಾಡಬೇಕು. ಮುಖ್ಯಮಂತ್ರಿ ಮೇಲೆ ನಮಗೆ ಭರವಸೆ ಇದೆ, ಮೀಸಲಾತಿ ಘೋಷಣೆ ಮಾಡುತ್ತಾರೆ. ಪಾದಯಾತ್ರೆಗೂ ಮುನ್ನ ಸಭೆ ಮಾಡಿದ್ದೇವೆ, ಘೋಷಣೆ ಮಾಡಿದರೆ ಸನ್ಮಾನ ಮಾಡುತ್ತೇವೆ, ಇಲ್ಲವಾದರೆ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ ಎಂದು ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.

  • 22 Dec 2022 10:45 AM (IST)

    Assembly Session, Karnataka News Live: ಅಂತಿಮ‌ ಹಂತದ ಹೋರಾಟಕ್ಕೆ ನಾವು ಅಣಿಯಾಗಿದ್ದೇವೆ: ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್​

    ನಮ್ಮ ಸಮುದಾಯಕ್ಕೆ 2ಎ ಮೀಸಲಾತಿ ಸಿಕ್ಕೇ ಸಿಗುತ್ತದೆ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್​ ಹೇಳಿದರು. ಬೆಳಗಾವಿ ಜಿಲ್ಲೆ ಹಿರೇಬಾಗೇವಾಡಿಯಲ್ಲಿ ಮಾತನಾಡಿದ ಅವರು, ಪ್ರಜಾಪ್ರಭುತ್ವದಲ್ಲಿ ಎಲ್ಲಾ ಸಮುದಾಯಕ್ಕೂ ಹೋರಾಟ ಮಾಡುವ ಹಕ್ಕಿದೆ. ಮೀಸಲಾತಿ ಘೋಷಣೆಗೆ ಯಾಕೆ ವಿಳಂಬ ಮಾಡುತ್ತಿದ್ದಾರೋ ಗೊತ್ತಿಲ್ಲ. ಮೀಸಲಾತಿ ಘೋಷಣೆ ಮಾಡದಿದ್ದರೆ ಸರ್ಕಾರಕ್ಕೆ ಜನರೇ ಪಾಠ ಕಲಿಸುತ್ತಾರೆ. ಇವತ್ತು ಅಂತಿಮ‌ ಹಂತದ ಹೋರಾಟಕ್ಕೆ ನಾವು ಅಣಿಯಾಗಿದ್ದೇವೆ ಎಂದರು.

  • 22 Dec 2022 10:42 AM (IST)

    Assembly Session, Karnataka News Live: ಪಂಚಮಸಾಲಿ ಹೋರಾಟ, ಪೊಲೀಸರಿಂದ ಮುಂಜಾಗ್ರತಾ ಕ್ರಮ

    ಪಂಚಮಸಾಲಿ ಸಮಾವೇಶ ಮತ್ತು ಪಾದಯಾತ್ರೆಗೆ ಭಾರಿ ಪೊಲೀಸ್ ಬಂದೋಬಸ್ತ್ ವಿಚಾರವಾಗಿ ಟಿವಿ9 ಜೊತೆ ಮಾತನಾಡಿದ ನಗರ ಪೊಲೀಸ್ ಆಯುಕ್ತ ಡಾ.ಬೋರಲಿಂಗಯ್ಯ, ಪಾದಯಾತ್ರೆಯೂದ್ದಕ್ಕೂ ಪೊಲೀಸರು ಬಂದೋಬಸ್ತ್ ಮಾಡಿಕೊಳ್ಳಲಿದ್ದಾರೆ. ಐದು ಜನ ಎಸ್‌ಪಿ ನೇತೃತ್ವದಲ್ಲಿ ಪಾದಯಾತ್ರೆ ಮತ್ತು ಸಮಾವೇಶದ ಬಂದೋಬಸ್ತ್ ಮಾಡಿಕೊಳ್ಳಲಿದ್ದಾರೆ. ಸಮಾವೇಶಕ್ಕೆ 1500ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಿದ್ದೇವೆ. ಧಾರವಾಡ ಸೇರಿದಂತೆ ಹೊರಗಡೆ ಜಿಲ್ಲೆಯಿಂದ ಹೆಚ್ಚುವರಿ ಸಿಬ್ಬಂದಿ ಕರೆಯಿಸಿಕೊಂಡಿದ್ದೇವೆ. ಪಾರ್ಕಿಂಗ್ ವ್ಯವಸ್ಥೆ, ಸಂಚಾರ ವ್ಯವಸ್ಥೆ ಸೇರಿದಂತೆ ಎಲ್ಲ ಕಡೆ ಬಂದೋಬಸ್ತ್ ಮಾಡಿಕೊಂಡಿದ್ದೇವೆ. ಸುವರ್ಣ ಸೌಧ ಮುತ್ತಿಗೆ ಕುರಿತು ಆಯೋಜಕರ ಜತೆಗೆ ಮಾತನಾಡಿದ್ದೇವೆ. ಯಾವುದೇ ಅಹಿತಕರ ಘಟನೆ ಆಗದಂತೆ ಮುಂಜಾಗ್ರತಾ ವಹಿಸಲಾಗುವುದು ಎಂದರು.

  • 22 Dec 2022 10:36 AM (IST)

    Assembly Session, Karnataka News Live: ಪಂಚಮಸಾಲಿ ವಿರಾಟ ಪಂಚ ಶಕ್ತಿ ಮಹಾಸಮಾವೇಶಕ್ಕೂ ಮುನ್ನ ಮುಖಂಡರಿಂದ ಸಭೆ

    ಪಂಚಮಸಾಲಿ ವಿರಾಟ ಪಂಚ ಶಕ್ತಿ ಮಹಾಸಮಾವೇಶ ಹಿನ್ನಲೆ ಸಮಾವೇಶ ಅರಂಭಕ್ಕೂ ಮುನ್ನ ಹಿರೇಬಾಗೇವಾಡಿಯಿಂದ ಸುವರ್ಣಸೌಧದವರೆಗೂ ಪಾದಯಾತ್ರೆ ನಡೆಯಲಿದೆ. ಪಾದಯಾತ್ರೆ ಆರಂಭಕ್ಕೂ ಮುನ್ನ ಪಂಚಮಸಾಲಿ ಮುಖಂಡರು ಹಿರೇಬಾಗೇವಾಡಿಯ ಅಡಿವೇಶ ಇಟಗಿಯವರ ಮನೆಯಲ್ಲಿ ಸಭೆ ನಡೆಸಿದ್ದು, ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ. ಶಾಸಕರಾದ ಬಸವನಗೌಡ ಪಾಟೀಲ ಯತ್ನಾಳ್, ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಅರವಿಂದ ಬೆಲ್ಲದ್, ಪ್ರಕಾಶ್ ಹುಕ್ಕೇರಿ, ಈರಣ್ಣ ಕಡಾಡಿ, ಎಬಿ ಪಾಟೀಲ್, ಶಶಿಕಾಂತ ನಾಯಕ. ವೀಣಾ ಕಾಶಪ್ಪನವರ್, ಎಚ್ ಎಸ್ ಶಿವಶಂಕರ್ ಅವರು ಭಾಗಿಯಾದರು. ಸಮಾವೇಶ ನಡೆಸುವ ಕುರಿತು ಸಮಾಜದ ಮುಖಂಡರೊಂದಿಗೆ ಸಭೆ ನಡೆಸಲಾಗಿದ್ದು, ಸರ್ಕಾರದ ನಡೆಯ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಯಿತು.

  • 22 Dec 2022 10:34 AM (IST)

    Assembly Session, Karnataka News Live: ಬಸವೇಶ್ವರ ವೃತ್ತದಲ್ಲಿ ಪೊಲೀಸ್ ಬಂದೋಬಸ್ತ್

    2ಎ ಮೀಸಲಾತಿಗೆ ಆಗ್ರಹಿಸಿ ಪಂಚಮಸಾಲಿ ಸಮುದಾಯವು ಬೃಹತ್ ಪಾದಯಾತ್ರೆ ನಡೆಸಲಾಗುತ್ತಿದ್ದು, ಬೆಳಗಾವಿ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಸಜ್ಜಾಗಿದ್ದಾರೆ. ಪಾದಯಾತ್ರೆ ಆರಂಭವಾಗುವ ಬಸವೇಶ್ವರ ವೃತ್ತದಲ್ಲಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದ್ದು, ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಡಾ.ಬೋರಲಿಂಗಯ್ಯ ಭೇಟಿ ನೀಡಿ ಭದ್ರತೆ ಪರಿಶೀಲನೆ ನಡೆಸಿದ್ದಾರೆ. ಪಾದಯಾತ್ರೆಯುದ್ದಕ್ಕೂ ಪೊಲೀಸರು ಜತೆಗೆ ಇರುವಂತೆ ಸೂಚನೆ ನೀಡಿದ್ದು, ಡ್ರೋಣ್ ಕಣ್ಗಾವಲು ಇಡುವಂತೆಯೂ ಆಯುಕ್ತರು ಸೂಚಿಸಿದ್ದಾರೆ.

Published On - Dec 22,2022 10:22 AM