
ಬೆಳಗಾವಿ, ಸೆಪ್ಟೆಂಬರ್ 24: ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಖಜಾನೆಯಲ್ಲಿರುವ ನೂರಾರು ಕೋಟಿ ರೂ ಇದೀಗ ರಾಜ್ಯ ಸರ್ಕಾರದ ಗಮನ ಸೆಳೆದಿದೆ. ವಿಟಿಯು ಬಳಿ ಇರುವ ಸುಮಾರು 610 ಕೋಟಿ ರೂ ಪೈಕಿ 250 ಕೋಟಿ ರೂ ಬೆಂಗಳೂರಿನ ಯುವಿಸಿಇ ಅಭಿವೃದ್ಧಿಗೆ ನೀಡುವಂತೆ ರಾಜ್ಯ ಸರ್ಕಾರ ಪತ್ರ ಬರೆದಿದೆ. ಆದರೆ, ಸರ್ಕಾರದ ಈ ಮನವಿಯನ್ನ ವಿಟಿಯು ಆಡಳಿತ ಮಂಡಳಿ ನಯವಾಗಿ ತಿರಸ್ಕರಿಸಿದೆ.
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಖಜಾನೆಯಲ್ಲಿರುವ 610 ಕೋಟಿ ರೂ ಮೇಲೆ ಈಗ ಸರ್ಕಾರದ ಕಣ್ಣು ಬಿದ್ದಿದೆಯಾ ಎಂಬ ಅನುಮಾನ ಮೂಡುತ್ತಿದೆ. ಇದೇ ಹಣ ರಾಜ್ಯ ಸರ್ಕಾರ ಮತ್ತು ವಿಶ್ವವಿದ್ಯಾಲಯದ ನಡುವೆ ಚರ್ಚೆಗೆ ಕಾರಣವಾಗಿದೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ವಿಟಿಯು ಕುಲಪತಿ ಪ್ರೊ. ವಿದ್ಯಾಶಂಕರ್ ಅವರಿಗೆ ಪತ್ರ ಬರೆದಿದ್ದಾರೆ. ಬೆಂಗಳೂರಿನ ಯುವಿಸಿಇ ಅಭಿವೃದ್ಧಿ ಕಾರ್ಯಗಳಿಗೆ 250 ಕೋಟಿ ರೂ ನೀಡುವಂತೆ ಪತ್ರದಲ್ಲಿ ಮನವಿ ಮಾಡಲಾಗಿದೆ.
ಇದನ್ನೂ ಓದಿ: ವಿಟಿಯು ಸಿಂಡಿಕೇಟ್ ಸದಸ್ಯನಿಂದಲೇ ಪರೀಕ್ಷಾ ಗೋಲ್ಮಾಲ್! ಕಾನೂನು ಪರೀಕ್ಷೆಗಾಗಿ ಅನಾರೋಗ್ಯದ ನಾಟಕ
ಸರ್ಕಾರದ ಸ್ವಾಮ್ಯದಲ್ಲಿರುವ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಿಂದಲೇ ಈ ಹಣವನ್ನ ಕೇಳಿರುವುದು ಇದೀಗ ಚರ್ಚೆಗೆ ಕಾರಣವಾಗಿದೆ. ಹಾಗಾದರೆ ವಿಟಿಯು ಬಳಿ ಇಷ್ಟು ದೊಡ್ಡ ಮೊತ್ತದ ಹಣ ಬಂದಿದ್ದು ಹೇಗೆ ಎಂಬ ಪ್ರಶ್ನೆ ಮೂಡುತ್ತದೆ. ಇದಕ್ಕೆ ಹಲವು ವರ್ಷಗಳ ಹಿಂದಿನ ಆದಾಯ ತೆರಿಗೆ ಇಲಾಖೆಯ ಕ್ರಮವೇ ಪ್ರಮುಖವಾಗಿದೆ. 2014ರಲ್ಲಿ ವಿಟಿಯು ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿತ್ತು. ತೆರಿಗೆ ಪಾವತಿ ಮತ್ತು ತೆರಿಗೆ ವಿನಾಯಿತಿಗೆ ಸಂಬಂಧಿಸಿದ ವಿಚಾರದಲ್ಲಿ ಸುಮಾರು 400 ಕೋಟಿ ರೂ ಜಪ್ತಿ ಮಾಡಲಾಗಿತ್ತು.
ವಿಟಿಯು ಮೇಲೆ 2014ರಲ್ಲಿ ದಾಳಿ ನಡೆದಾಗ ತೆರಿಗೆ ಕಟ್ಟಿಲ್ಲ ಎಂದು ಹಣ ಜಪ್ತಿ ಮಾಡಿದ್ದ ಐಟಿ. ಆದರೆ ಸರ್ಕಾರದ ಶಿಕ್ಷಣ ಸಂಸ್ಥೆಗಳಿಗೆ ತೆರಿಗೆ ಕಟ್ಟಲು ವಿನಾಯಿತಿ ಇದೆ ಎಂದು ವಾದಿಸಿತ್ತು. ವಿಟಿಯು ಪರವಾಗಿ ತೆರಿಗೆ ವಿನಾಯಿತಿಗೆ ಸಂಬಂಧಿಸಿದ 12ಎ ಅರ್ಜಿ ಸೇರಿ ಸಾಕಷ್ಟು ದಾಖಲೆಗಳನ್ನು ಆದಾಯ ತೆರಿಗೆ ಇಲಾಖೆಗೆ ಸಲ್ಲಿಸಲಾಗಿತ್ತು. ನಂತರ ದಾಖಲೆಗಳ ಪರಿಶೀಲನೆಯ ಬಳಿಕ ಬಡ್ಡಿ ಸೇರಿದಂತೆ ಸುಮಾರು 610 ಕೋಟಿ ರೂ ವಿಶ್ವವಿದ್ಯಾಲಯಕ್ಕೆ ಐಟಿ ಇಲಾಖೆ ಮರಳಿದೆ.
ಇನ್ನೂ ಸುಮಾರು 90 ಕೋಟಿ ರೂ ಆದಾಯ ತೆರಿಗೆ ಇಲಾಖೆಯಿಂದ ಬರಬೇಕಿದೆ. 610 ಕೋಟಿ ರೂ ವಿಶ್ವವಿದ್ಯಾಲಯದ ಖಾತೆಗೆ ಬಂದ ಬೆನ್ನಲ್ಲೇ ಈ ಹಣದಲ್ಲಿ 250 ಕೋಟಿ ರೂ ನೀಡುವಂತೆ ಸರ್ಕಾರದಿಂದ ಮನವಿ ಬಂದಿದೆ. ಆದರೆ, ವಿಟಿಯು ಆಡಳಿತ ಮಂಡಳಿ ಸರ್ಕಾರದ ಮನವಿಯನ್ನ ಸಮ್ಮತಿಸಿಲ್ಲ. ಇದೇ ವೇಳೆ, ವಿಟಿಯು ಕುಲಪತಿ ಪ್ರೊ. ವಿದ್ಯಾಶಂಕರ್ 500 ಕೋಟಿ ರೂ ಫಿಕ್ಸೆಡ್ ಡೆಪಾಸಿಟ್ನಲ್ಲಿ ಇರಿಸಿದ್ದಾರೆ. ಈ ಠೇವಣಿಯಿಂದ ಬರುವ ಬಡ್ಡಿ ಹಣವನ್ನು ಮುಂದಿನ ವರ್ಷಗಳಲ್ಲಿ ವಿಶ್ವವಿದ್ಯಾಲಯದ ಸಿಬ್ಬಂದಿ ವೇತನ ಸೇರಿದಂತೆ ಹಣಕಾಸಿನ ಅಗತ್ಯಗಳಿಗೆ ಬಳಸುವ ಉದ್ದೇಶವಿದೆ ಎಂದು ವಿಟಿಯು ಆಡಳಿತದ ನಿಲುವು. ಸರ್ಕಾರದಿಂದ ನಿಯಮಿತ ಅನುದಾನ ದೊರೆಯದ ಸಂದರ್ಭದಲ್ಲೂ ವಿಶ್ವವಿದ್ಯಾಲಯ ಆರ್ಥಿಕವಾಗಿ ಸ್ವಾವಲಂಬಿಯಾಗಿರಬೇಕು ಎಂಬ ಉದ್ದೇಶದಿಂದ ಈ ಯೋಜನೆ ರೂಪಿಸಲಾಗಿದೆ.
ಒಂದೆಡೆ ವಿಶ್ವವಿದ್ಯಾಲಯದ ಹಣವನ್ನು ಅಭಿವೃದ್ಧಿ ಕಾರ್ಯಗಳಿಗೆ ಬಳಸುವಂತೆ ಸರ್ಕಾರದ ಮನವಿ ಮಾಡಿದರೆ, ಮತ್ತೊಂದೆಡೆ ವಿಶ್ವವಿದ್ಯಾಲಯದ ಭವಿಷ್ಯದ ಹಣಕಾಸಿನ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಹಣವನ್ನು ಉಳಿಸಿಕೊಳ್ಳುವ ನಿಲುವು ವಿಟಿಯು ಆಡಳಿತ ಮಂಡಳಿ ಹೊಂದಿದೆ. ಈ ಹಣದ ಕುರಿತು ಸರ್ಕಾರದ ಮುಂದಿನ ನಡೆ ಏನು, ವಿಟಿಯು ಆಡಳಿತ ತನ್ನ ನಿಲುವನ್ನು ಮುಂದುವರಿಯುತ್ತದೆಯೇ ಎನ್ನುವುದನ್ನ ಕಾದು ನೋಡಬೇಕಿದೆ. ವಿವಿಗಳಿಗೆ ಹಣ ಕೊಟ್ಟು ಅಭಿವೃದ್ಧಿ ಪಡಿಸಬೇಕಿರುವ ಸರ್ಕಾರ ಇದೀಗ ವಿವಿಯಿಂದ ಹಣ ಕೇಳಿದ್ದು, ಸಾಕಷ್ಟು ಕುತೂಹಲ ಹುಟ್ಟು ಹಾಕುವಂತೆ ಮಾಡಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.