2 ಸಾವಿರ ರೂಪಾಯಿ ಸಾಲ ಮರು ಪಾವತಿಸಿಲ್ಲ ಎಂದು ಹಾಡಹಗಲೇ ವೃದ್ಧನ ಕತ್ತು ಸೀಳಿ ಬರ್ಬರ ಹತ್ಯೆ

Belagavi Crime: ಆತ ಕಟ್ಟಡ ಕಾರ್ಮಿಕನಾಗಿ ಕೆಲಸ ಮಾಡ್ತಿದ್ದ. ಊರಲ್ಲಿ ಹೆಂಡತಿ ಮಕ್ಕಳನ್ನು ಬಿಟ್ಟು ತಂಗಿ ಮನೆ ಹತ್ತಿರ ಬಾಡಿಗೆ ಮನೆಯಲ್ಲಿ ವಾಸವಿದ್ದ. ಬೆಳ್ಳಂಬೆಳಗ್ಗೆ ಮನೆಯಿಂದ ಹೊರಗೆ ಹೋದವ ಜನನಿಬಿಡ ಪ್ರದೇಶದಲ್ಲಿ ರಕ್ತದ ಮಡುವಿನಲ್ಲಿ ಹೆಣವಾಗಿ ಬಿದ್ದಿದ್ದ.

2 ಸಾವಿರ ರೂಪಾಯಿ ಸಾಲ ಮರು ಪಾವತಿಸಿಲ್ಲ ಎಂದು ಹಾಡಹಗಲೇ ವೃದ್ಧನ ಕತ್ತು ಸೀಳಿ ಬರ್ಬರ ಹತ್ಯೆ
ಮಹಾದೇವ ಮಾರುತಿ ಜಾಧವ್

ಬೆಳಗಾವಿ: ನಗರದ ವಡಗಾವಿಯ ಯಳ್ಳೂರು ಕ್ರಾಸ್ ಬಳಿ ಭೀಕರ ಹತ್ಯೆ ನಡೆದಿದೆ. ಮೂಲತಃ ಬೆಳಗಾವಿ ತಾಲೂಕಿನ ಅಂಬೇವಾಡಿ ಗ್ರಾಮದ ನಿವಾಸಿ ಮಹಾದೇವ ಮಾರುತಿ ಜಾಧವ್ ಎಂಬ 55 ವರ್ಷ ವಯಸ್ಸಿನ ವೃದ್ಧನ ಕತ್ತು ಸೀಳಿ ಕೊಲೆ ಮಾಡಲಾಗಿದೆ. ಈತ ಬೆಳಗಾವಿ ನಗರದಲ್ಲಿ ಕಟ್ಟಡ ಕಾರ್ಮಿಕನಾಗಿ ಕೆಲಸ ಮಾಡ್ತಿದ್ದ. ಹೆಂಡತಿ ಮಕ್ಕಳನ್ನು ಊರಲ್ಲೇ ಬಿಟ್ಟು ಬೆಳಗಾವಿಯ ಭರತ್ ನಗರದಲ್ಲಿ ತಂಗಿಯ ಮನೆಯ ಪಕ್ಕದಲ್ಲೇ ಇರೋ ಬಾಡಿಗೆ ರೂಮ್ನಲ್ಲಿದ್ದ. ತಾನಾಯ್ತು ತನ್ನ ಕೆಲಸ ಆಯ್ತು ಅಂತಾ ಇದ್ದ ಮಹಾದೇವ ಜಾಧವ್ ನಿನ್ನೆ ಕೆಲಸಕ್ಕೆ ರಜೆ ಇದೆ, ಹೊರಗೆ ಹೋಗಿ ಬರ್ತೀನಿ ಅಂತಾ ತಂಗಿಗೆ ಹೇಳಿ ತೆರಳಿದ್ದ. ಹೀಗೆ ಹೋಗಿದ್ದ ಆತ ಮನೆಯಿಂದ ಸ್ವಲ್ಪ ದೂರದಲ್ಲೇ ಇರುವ ವಡಗಾವಿಯ ಯಳ್ಳೂರು ಕ್ರಾಸ್ ಬಳಿ ಆಟೋ ನಿಲ್ದಾಣದ ಹತ್ತಿರ ರಕ್ತದ ಮಡುವಿನಲ್ಲಿ ಹೆಣವಾಗಿ ಬಿದ್ದಿದ್ದ. ರಕ್ತದ ಮಡುವಿನಲ್ಲಿ ಬಿದ್ದವನನ್ನು ನೋಡಿ ಸಾರ್ವಜನಿಕರೇ ಶಾಕ್ ಆಗಿದ್ರು. ಬರ್ಬರ ಹತ್ಯೆ ಬಗ್ಗೆ ಮಹದೇವ ಜಾಧವ್ ಅಳಿಯ ಪೊಲೀಸರಿಗೆ ಕಂಪ್ಲೆಂಟ್ ಕೊಟ್ಟಿದ್ದು, ಪೊಲೀಸರು ತಕ್ಷಣ ತನಿಖೆ ಕೈಗೆತ್ತಿಕೊಂಡಿದ್ರು.

ಹೀಗೆ ಪ್ರಕರಣದ ತನಿಖೆ ಕೈಗೆತ್ತಿಕೊಂಡ ಪೊಲೀಸರಿಗೆ ಹತ್ಯೆ ನಡೆಸಿದ ಆರೋಪಿಯನ್ನು ಪತ್ತೆಹಚ್ಚಲು ಹೆಚ್ಚು ಸಮಯ ಬೇಕಾಗಿರಲಿಲ್ಲ. ಈ ಕೊಲೆ ನಡೆದಿದ್ದು ಕ್ಷುಲ್ಲಕ ಕಾರಣಕ್ಕೆ ಅನ್ನೋದು ಪ್ರಾಥಮಿಕ ತನಿಖೆಯಲ್ಲೇ ಗೊತ್ತಾಗಿದೆ. ಅಸಲಿಗೆ ಮಹಾದೇವ ಜಾಧವ್ ಜೊತೆ ಕೆಲಸ ಮಾಡ್ತಿದ್ದ ಸೂರಜ್ ಎಂಬಾತನ ಬಳಿ ಎರಡು ಸಾವಿರ ರೂಪಾಯಿ ಹಣ ಸಾಲ ಪಡೆದಿದ್ದನಂತೆ. ಎರಡು ಸಾವಿರ ರೂಪಾಯಿ ವಾಪಸ್ ನೀಡುವಂತೆ ಕೇಳಿದರೂ ಕೊಡ್ತಿರಲಿಲ್ವಂತೆ. ಇಂದು ಬೆಳಗ್ಗೆ ಯಳ್ಳೂರು ಕ್ರಾಸ್ ಬಳಿ ತೆರಳುತ್ತಿದ್ದ ಮಹಾದೇವ ಜಾಧವ್ ಬಳಿ ಸೂರಜ್ ತಾನು ನೀಡಿದ ಹಣ ವಾಪಾಸ್ ನೀಡುವಂತೆ ಕೇಳಿದ್ದಾನಂತೆ. ಈ ವೇಳೆ ಇಬ್ಬರ ಮಧ್ಯೆ ವಾಗ್ವಾದ ನಡೆದು ಜಗಳವಾಗಿದೆ. ಇದು ವಿಕೋಪಕ್ಕೆ ತಿರುಗಿ ಸೂರಜ್ ತನ್ನ ಬಳಿ ಇದ್ದ ರೇಡಿಯಮ್ ಕಟರ್‌ನಿಂದ ಮಹಾದೇವ ಜಾಧವ್ ಕತ್ತು ಸೀಳಿ ಪರಾರಿಯಾಗಿದ್ದಾನೆ. ಈ ವೇಳೆ ಸ್ಥಳದಲ್ಲೇ ಕುಸಿದು ಬಿದ್ದ ಮಹಾದೇವ ಜಾಧವ್ ವಿಲವಿಲ ಒದ್ದಾಡಿ ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾನೆ.

ಅದೇನೇ ಇರಲಿ ಕೇವಲ 2ಸಾವಿರ ರೂಪಾಯಿಗಾಗಿ ವ್ಯಕ್ತಿಯ ಹತ್ಯೆ ನಡೆದಿರೋದು ಜನ ಬೆಚ್ಚಿಬೀಳುವಂತೆ ಮಾಡಿದೆ. ಹೆಂಡತಿ, ಮಕ್ಕಳನ್ನು ಹಳ್ಳಿಯಲ್ಲಿ ಬಿಟ್ಟು ನಗರಪ್ರದೇಶಕ್ಕೆ ಬಂದು ದುಡಿಯುತ್ತಿದ್ದ ಮನೆಯೊಡೆಯನ ಕಳೆದುಕೊಂಡ ಬಡ ಕುಟುಂಬ ಕಂಗಾಲಾಗಿದೆ.

ಇದನ್ನೂ ಓದಿ: ಫೀಲ್ಡಿಗಿಳಿದ ನೆಲಮಂಗಲ ಪೊಲೀಸರು: ಕಡಬಗೆರೆ ಸೀನ, ಬೆತ್ತನಗೆರೆ ಮಂಜ ಸೇರಿದಂತೆ ನೂರಾರು ರೌಡಿಗಳು ಅಂದರ್; 9 ಗಂಟೆಗೆ ಪರೇಡ್

Click on your DTH Provider to Add TV9 Kannada