ಬೆಳಗಾವಿ, ಅಕ್ಟೋಬರ್ 27: ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ (Laxman Savadi) ಪುತ್ರ ಸುಮಿತ್ ಹುಲಿ ಉಗುರಿನ ಪೆಂಡೆಂಟ್ ಧರಿಸಿದ ಆರೋಪ ಕೇಳಿಬಂದಿದೆ. ಸದ್ಯ ಈ ಕುರಿತಾಗಿ ಸವದಿ ಹಿರಿಯ ಪುತ್ರ ಚಿದಾನಂದ ಹೇಳಿಕೆ ನೀಡಿದ್ದು, ನನ್ನ ಸಹೋದರನ ಬಳಿ ಇರೋದು ಪ್ಲಾಸ್ಟಿಕ್ ಉಗುರು. ಮದುವೆ ಸಮಾರಂಭದಲ್ಲಿ ಸುಮಿತ್ ಗೆಳೆಯರು ಉಡುಗೊರೆ ಕೊಟ್ಟಿದ್ದಾರೆ. ಅದನ್ನು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಹಸ್ತಾಂತರ ಮಾಡುತ್ತೇವೆ ಎಂದು ಹೇಳಿದ್ದಾರೆ.
ಜಿಲ್ಲೆಯ ಅಥಣಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾನೂನಿಗಿಂತ ಯಾರೂ ದೊಡ್ಡವರಲ್ಲ, ತನಿಖೆಗೆ ಸಹಕರಿಸುತ್ತೇವೆ. ಈ ಭಾಗದಲ್ಲಿ ಹುಲಿ ಉಗುರೆಂದು ಧರಿಸುವುದು ಒಂದು ರೀತಿ ಶೋಕಿ. ಇದು ಪ್ಲಾಸ್ಟಿಕ್ನಿಂದ ಮಾಡಿರುವ ಹುಲಿ ಉಗುರಿನ ಆಕೃತಿ ಆಗಿದೆ ಎಂದಿದ್ದಾರೆ.
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬೆನ್ನೆಲ್ಲೇ ಇದೀಗ ಲಕ್ಷಣ್ ಸವದಿ ಕುಟುಂಬಕ್ಕೂ ಹುಲಿ ಉಗುರು ಸಂಕಷ್ಟ ಶುರುವಾಗಿದೆ. ಲಕ್ಷ್ಮಣ್ ಸವದಿ ದ್ವಿತೀಯ ಪುತ್ರ ಸುಮಿತ್ ಕೊರಳಲ್ಲಿ ಹುಲಿ ಉಗುರು ಮಾದರಿ ಪೆಂಡೆಂಟ್
ಧರಿಸಿದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಕಳೆದ ವರ್ಷ ಸುಮಿತ್ ಸವದಿ ಮದುವೆ ಸಮಾರಂಭ ವೇಳೆ ಹುಲಿ ಉಗುರು ಮಾದರಿಯ ಪೆಂಡೆಂಟ್ ಧರಿಸಿದ ಫೋಟೋ ಇದೀಗ ವೈರಲ್ ಆಗಿದೆ. ಹಾಗಾಗಿ ಲಕ್ಷ್ಮಣ್ ಸವದಿ ನಿವಾಸಕ್ಕೂ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಬಹುದು.
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅಳಿಯನ ಕೊರಳಲ್ಲೂ ಹುಲಿ ಉಗುರಿನ ಲಾಕೆಟ್ ಧರಿಸಿರುವ ಫೋಟೋ ಕೂಡ ವೈರಲ್ ಆಗಿತ್ತು. ಈ ಕುರಿತಾಗಿ ಹುಬ್ಬಳ್ಳಿಯಲ್ಲಿ ಮಾತನಾಡಿರುವ ಲಕ್ಷ್ಮೀ ಹೆಬ್ಬಾಳಕರ್ ಅಳಿಯ ರಜತ್ ಉಳ್ಳಾಗಡ್ಡಿ ಮಠ, ನನ್ನ ಕಡೆ ಇರುವುದು ಸಿಂಥೆಟಿಕ್ ಮಾದರಿಯ ಹುಲಿ ಉಗುರು. ಮದುವೆ ಸಮಯದಲ್ಲಿ ಫೋಟೋ ಶೂಟ್ಗಾಗಿ ನಾನು ಹಾಕೊಂಡಿದ್ದು ನಿಜ. ಇದುವರೆಗೂ ಯಾವ ಅಧಿಕಾರಿಗಳು ನನ್ನ ಸಂಪರ್ಕ ಮಾಡಿಲ್ಲ. ಆಕಸ್ಮಾತ್ ಅರಣ್ಯ ಅಧಿಕಾರಿಗಳು ಕೇಳಿದರೆ ನಾನು ಹುಲಿ ಉಗುರು ಕೊಡಲು ಸಿದ್ದ ಎಂದಿದ್ದಾರೆ.
ಇದನ್ನೂ ಓದಿ: ಫ್ಯಾಷನ್ಗಾಗಿ ಹುಲಿ ಉಗುರು, ಇತರೆ ವಸ್ತು ಬಳಕೆ ಸರಿಯಲ್ಲ: ಎಂಎಲ್ಸಿ ಬಿಕೆ ಹರಿಪ್ರಸಾದ್
ನನಗೆ ನೋಟಿಸ್ ಸರ್ವ್ ಆಗಿಲ್ಲ, ಆಕಸ್ಮಾತ್ ನೋಟಿಸ್ ಕೊಟ್ಟರೆ ನಾನು ತನಿಖೆಗೆ ಸಹಕರಸುತ್ತೇನೆ. ಕಾನೂನು ಬಾಹಿರ ನಡುವಳಿಕೆ ಮಾಡಿಲ್ಲ. ಮದುವೆ ಸಮಯದಲ್ಲಿ ಸಿಂಥೆಟಿಕ್ ಹಾಕಿಕೊಂಡಿದ್ದು ಗೊತ್ತಿದ್ದೋ ಗೊತ್ತಿಲ್ಲದೋ ತಪ್ಪಾಗಿದೆ ಎಂದಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.