ಕೊರೊನಾ ಕಾಟದಿಂದ ರೊಟ್ಟಿ ಜಾತ್ರೆ ಬಂದ್ ಆಗಿತ್ತು; ಈ ಬಾರಿ ಬಗೆ ಬಗೆಯ ಭರ್ಜರಿ ರೊಟ್ಟಿಗಳ ಸಮಾರಾಧನೆ ನಡೆದಿದೆ! ಎಲ್ಲಿ?

TV9kannada Web Team

TV9kannada Web Team | Edited By: sadhu srinath

Updated on: Jan 21, 2023 | 6:57 PM

ಜಾತಿ ಭೇದಭಾವ ಮಾಡದೇ ಭಾಷೆ ಭೇದವಿಲ್ಲದೆ ಎರಡು ರಾಜ್ಯದ ಭಕ್ತರು ಸೇರಿಕೊಂಡು ಆಚರಣೆ ಮಾಡುವುದೇ ಈ ಯಲ್ಲಾಲಿಂಗ ದೇವರ ಜಾತ್ರೆ. ಒಂದು ವರ್ಷ ದಾಸೋಹ ಕಾಯಕಕ್ಕೆ ಆಗುವಷ್ಟು ರೊಟ್ಟಿಯನ್ನ ಇಲ್ಲಿ ತಂದು ಅರ್ಪಣೆ ಮಾಡ್ತಾರೆ ಅಂದ್ರೇ ಅದು ಮಠದ ಶಕ್ತಿ.

ಕೊರೊನಾ ಕಾಟದಿಂದ ರೊಟ್ಟಿ ಜಾತ್ರೆ ಬಂದ್ ಆಗಿತ್ತು; ಈ ಬಾರಿ ಬಗೆ ಬಗೆಯ ಭರ್ಜರಿ ರೊಟ್ಟಿಗಳ ಸಮಾರಾಧನೆ ನಡೆದಿದೆ! ಎಲ್ಲಿ?
ಕೊರೊನಾ ಕಾಟದಿಂದ ರೊಟ್ಟಿ ಜಾತ್ರೆ ಬಂದ್ ಆಗಿತ್ತು; ಈ ಬಾರಿ ಬಗೆ ಬಗೆಯ ಭರ್ಜರಿ ರೊಟ್ಟಿಗಳ ಸಮಾರಾಧನೆ! ಎಲ್ಲಿ?

ಕೊವಿಡ್ ಕಾಟದ (Coronavirus) ಸಮ್ಮುಖದಲ್ಲಿ ನಾಲ್ಕು ವರ್ಷದಿಂದ ಬಂದ್ ಆಗಿದ್ದ ಯಲ್ಲಾಲಿಂಗ ದೇವರ ಜಾತ್ರೆ ಅದ್ದೂರಿಯಾಗಿ ಶುಕ್ರವಾರ ಆರಂಭವಾಗಿದೆ. ಐದು ದಿನಗಳ ಕಾಲ ನಡೆಯುವ ಈ ಜಾತ್ರೆಗೆ ನಿನ್ನೆಯಿಂದ ಅದ್ದೂರಿ ಚಾಲನೆ ಸಿಕ್ಕಿದೆ. ರಾಜ್ಯದಲ್ಲೇ ವಿಶೇಷ ಎನ್ನುವಂತೆ ಇಲ್ಲಿ ರೊಟ್ಟಿ ತಂದು ಜಾತ್ರೆ ಮಾಡುವ (Rotti Jatre) ಮೂಲಕ ದಾಸೋಹ ಕಾಯಕಕ್ಕೆ ಭಕ್ತರು ಸಾಕ್ಷಿಯಾಗ್ತಾರೆ. ಅಷ್ಟಕ್ಕೂ ಈ ರೊಟ್ಟಿ ಜಾತ್ರೆ ನಡೆಯೋದು ಎಲ್ಲಿ ಅಂತೀರಾ ಈ ಸ್ಟೋರಿ ನೋಡಿ. ತಲೆಯ ಮೇಲೆ ರೊಟ್ಟಿ ಗಂಟು ಹೊತ್ತು ಬರುವ ಸಾವಿರಾರು ಮಹಿಳೆಯರು, ಭಕ್ತರು ತಂದ ಜೋಳದ ರೊಟ್ಟಿ, ಗೋವಿನ ಜೋಳ‌ದ ರೊಟ್ಟಿ, ಸಜ್ಜಿ ರೊಟ್ಟಿ, ಬದನೆಕಾಯಿ ಪಲ್ಯ, ಅನ್ನ ಸಾಂಬಾರ್ ಒಂದು ಕಡೆ ಜಮಾವಣೆ ಮಾಡಿಡುತ್ತಾರೆ. ಯಲ್ಲಾಲಿಂಗನ ಅಜ್ಜನ ಜಾತ್ರೆಗೆ ಹರಿದು ಬಂದ ಸಾವಿರಾರು ಭಕ್ತರ ದೃಶ್ಯ ಕಂಡು ಬಂದಿದ್ದು ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮುಗಳಖೋಡ ಪಟ್ಟಣದಲ್ಲಿರುವ ಯಲ್ಲಾಲಿಂಗ ದೇವಸ್ಥಾನದಲ್ಲಿ (Yella Linga Temple, Mugalkhod). ಇಲ್ಲಿ ಪ್ರತಿವರ್ಷ ದಾಸೋಹ ಕಾಯಕ ಉಳಿದು ಮುಂದುವರೆಯಲಿ ಅಂತಾ ರೊಟ್ಟಿ ಜಾತ್ರೆ ಮಾಡುತ್ತಾರೆ. ಆದ್ರೆ ಕಳೆದ ನಾಲ್ಕು ವರ್ಷದಿಂದ ಯಲ್ಲಾಲಿಂಗ ದೇವರ ಜಾತ್ರೆ ಆಗಿರಲಿಲ್ಲ. ಕೊವಿಡ್ ಹಾಗೂ ಕೃಷ್ಣಾ ನದಿ ಪ್ರವಾಹ ಬಂದ ಕಾರಣ ಮಾಡದ ಜಾತ್ರೆಯನ್ನ ಈ ಬಾರಿ ಮಠದ ಪೀಠಾಧಿಪತಿಯಾದ ಮುರಘರಾಜೇಂದ್ರ ಸ್ವಾಮೀಜಿ ನೇತೃತ್ವದಲ್ಲಿ ನಡೆಸಲಾಗುತ್ತಿದೆ.

ಇನ್ನು 37ನೇ ಯಲ್ಲಾಲಿಂಗ ದೇವರ ಪುಣ್ಯಸ್ಮರಣೆ ಕಾರ್ಯಕ್ರಮ ನಿಮಿತ್ತ ಜಾತ್ರೆಯನ್ನ ನಡೆಸಲಾಗುತ್ತಿದೆ. ನಿನ್ನೆಯಿಂದ ಅದ್ದೂರಿಯಾಗಿ ಜಾತ್ರೆಗೆ ಚಾಲನೆ ಸಿಕ್ಕಿದ್ದು ನಿನ್ನೆ ಒಂದೇ ದಿನ ಸಾವಿರಾರು ಭಕ್ತರು ಒಂದು ಲಕ್ಷಕ್ಕೂ ಅಧಿಕ ರೊಟ್ಟಿಗಳನ್ನ ತಂದು ದಾಸೋಹಕ್ಕೆ ನೀಡಿದ್ದಾರೆ. ಬೆಳಗಾವಿ ಸೇರಿದಂತೆ ಮಹಾರಾಷ್ಟ್ರದ ಕೆಲವು ಭಾಗಗಳಿಂದಲೂ ಭಕ್ತರು ಈ ಜಾತ್ರೆ ಬರುತ್ತಿದ್ದು ಹೀಗೆ ಬರುವಾಗ ಜೋಳದ ಅಥವಾ ಗೋವಿನ ಜೋಳದ ರೊಟ್ಟಿಯನ್ನ ತಮಗೆ ಶಕ್ತಿ ಇದ್ದಷ್ಟು ಐದರಿಂದ ಸಾವಿರ ವರೆಗೂ ತೆಗೆದುಕೊಂಡು ಬರುತ್ತಾರೆ. ಕೆಲವು ಗ್ರಾಮಗಳಲ್ಲಿ ಇಡೀ ಊರ ಜನರೇ ಒಟ್ಟಾಗಿ ಒಂದು ಕಡೆ ರೊಟ್ಟಿಯನ್ನ ಮಾಡಿ ಟ್ರ್ಯಾಕ್ಟರ್‌ನಲ್ಲಿ ತುಂಬಿಕೊಂಡು ಬಂದು ಮಠಕ್ಕೆ ನೀಡ್ತಾರೆ‌. ನಾಲ್ಕು ವರ್ಷದ ನಂತರ ಯಲ್ಲಾಲಿಂಗ ದೇವರ ಜಾತ್ರೆ ನಡೆಯುತ್ತಿದ್ದು ಬಹಳ ಅದ್ದೂರಿಯಾಗಿ ಜಾತ್ರೆ ಮಾಡುತ್ತಿದ್ದೇವೆ ಅಂತಾ ಭಕ್ತರು ತಮ್ಮ ಖುಷಿ ವ್ಯಕ್ತಪಡಿಸುತ್ತಿದ್ದಾರೆ.

ಇನ್ನೂ ರೊಟ್ಟಿಯನ್ನ ಭಕ್ತರು ಸುಮ್ಮನೆ ಮಠಕ್ಕೆ ತರುವುದಿಲ್ಲ ಹೀಗೆ ರೊಟ್ಟಿ ತರಲು ಕೂಡ ಕಾರಣವಿದೆ. ಕೆಲವು ಭಕ್ತರು ಜಾತ್ರೆಗೆ ಬಂದಾಗ ಯಲ್ಲಾಲಿಂಗ ದೇವರಿಗೆ ಹರಕೆ ಕಟ್ಟಿಕೊಂಡಿರುತ್ತಾರೆ. ಕುಟುಂಬಕ್ಕೆ ಒಳಿತಾಗಲಿ ಅಂತಾ, ಶಿಕ್ಷಣದಲ್ಲಿ ಮಕ್ಕಳ ಭವಿಷ್ಯ ಉಜ್ವಲ ಆಗಲಿ ಅಂತಾ, ಮಕ್ಕಳಾಗದಿದ್ದವರು ಮಕ್ಕಳಾಗಲಿ ಅಂತಾ ಹೀಗೆ ನಾನಾ ರೀತಿ ಹರಕೆ ಕಟ್ಟಿಕೊಂಡು ಅದು ಈಡೇರಿದ ಬಳಿಕ ದೇವರಿಗೆ ರೊಟ್ಟಿ ತಂದು ಅರ್ಪಣೆ ಮಾಡುತ್ತಾರೆ. ಇನ್ನು ಐದು ದಿನ ನಡೆಯುವ ಈ ಜಾತ್ರೆಗೆ ದೂರದ ಊರುಗಳಿಂದ ಬರುವ ಭಕ್ತರಿಗೆ ದಾಸೋಹ ವ್ಯವಸ್ಥೆ ಕೂಡ ಮಾಡಲಾಗಿರುತ್ತೆ. ಯಾವುದೇ ಜಾತಿ ಭೇದ ಭಾವ ಇಲ್ಲದೆ ಎಲ್ಲರೂ ಒಟ್ಟಾಗಿ ಕೂಡಿಕೊಂಡು ಜಾತ್ರೆ ಮಾಡುತ್ತಿದ್ದು ಜಾತ್ರೆಗೆ ಸಾಂಕೇತಿಕವಾಗಿ ಶುಕ್ರವಾರ ಚಾಲನೆ ನೀಡಿದ್ದೇವೆ ಅಂತಾ ಡಾ. ಮುರುಘರಾಜೇಂದ್ರ ಸ್ವಾಮೀಜಿ ಹೇಳಿದ್ದಾರೆ.

ಒಟ್ಟಾರೆ ಜಾತಿ ಭೇದಭಾವ ಮಾಡದೇ ಭಾಷೆ ಭೇದವಿಲ್ಲದೆ ಎರಡು ರಾಜ್ಯದ ಭಕ್ತರು ಸೇರಿಕೊಂಡು ಆಚರಣೆ ಮಾಡುವುದೇ ಈ ಯಲ್ಲಾಲಿಂಗ ದೇವರ ಜಾತ್ರೆ. ಒಂದು ವರ್ಷ ದಾಸೋಹ ಕಾಯಕಕ್ಕೆ ಆಗುವಷ್ಟು ರೊಟ್ಟಿಯನ್ನ ಇಲ್ಲಿ ತಂದು ಅರ್ಪಣೆ ಮಾಡ್ತಾರೆ ಅಂದ್ರೇ ಅದು ಮಠದ ಶಕ್ತಿ. ಎನೇ ಆಗಲಿ ಜಾತ್ರೆಯ ಜತೆಗೆ ರೊಟ್ಟಿಯ ಜಾತ್ರೆ ನಡೆಯುವುದೂ ಕೂಡ ವಿಶೇಷವಾಗಿದೆ…

ವರದಿ: ಸಹದೇವ ಮಾನೆ, ಟಿವಿ 9, ಬೆಳಗಾವಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada