ಅನಗೋಳದಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಧ್ವಂಸ ಪ್ರಕರಣ; ಹಾನಿಯಾಗಿದ್ದ ರಾಯಣ್ಣ ಪುತ್ಥಳಿ ಸರಿಪಡಿಸಿ ಮರುಪ್ರತಿಷ್ಠಾಪನೆ
ಸಂಗೊಳ್ಳಿ ರಾಯಣ್ಣ ಪುತ್ಥಳಿ ಸರಿಪಡಿಸಿ ಪೊಲೀಸರು, ಸ್ಥಳೀಯರಿಗೆ ಹಿಂತಿರುಗಿಸಿದ್ದಾರೆ. ಸದ್ಯ ಸ್ಥಳೀಯರು ಸಂಗೊಳ್ಳಿ ರಾಯಣ್ಣ ಪ್ರತಿಮೆ ಪ್ರತಿಷ್ಠಾಪಿಸಿ, ಹಾಲಿನ ಅಭಿಷೇಕ ಮಾಡಿದ್ದಾರೆ.
ಬೆಳಗಾವಿ: ಅನಗೋಳದಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಧ್ವಂಸ ಪ್ರಕರಣಕ್ಕೆ ಸಂಬಂಧಪಟ್ಟಂತೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಹೀಗಾಗಿ ಇಂದು (ಡಿಸೆಂಬರ್ 19) ಹಾನಿಯಾಗಿದ್ದ ರಾಯಣ್ಣ ಪುತ್ಥಳಿ ಸರಿಪಡಿಸಿ ಮೊದಲಿದ್ದ ಸ್ಥಳದಲ್ಲಿಯೇ ಮರುಪ್ರತಿಷ್ಠಾಪನೆ ಮಾಡಲಾಗಿದೆ. ಸಂಗೊಳ್ಳಿ ರಾಯಣ್ಣ ಪುತ್ಥಳಿ (sangolli rayanna statue) ಸರಿಪಡಿಸಿ ಪೊಲೀಸರು, ಸ್ಥಳೀಯರಿಗೆ ಹಿಂತಿರುಗಿಸಿದ್ದಾರೆ. ಸದ್ಯ ಸ್ಥಳೀಯರು ಸಂಗೊಳ್ಳಿ ರಾಯಣ್ಣ ಪ್ರತಿಮೆ ಪ್ರತಿಷ್ಠಾಪಿಸಿ, ಹಾಲಿನ ಅಭಿಷೇಕ ಮಾಡಿದ್ದಾರೆ. ಅಲ್ಲದೇ ಜೈ ಜೈ ರಾಯಣ್ಣ, ಜೈ ಜೈ ಚನ್ನಮ್ಮ ಎಂದು ಘೋಷಣೆ ಕೂಗಿದ್ದಾರೆ. ಸುಮಂಗಲೆಯರು ಪ್ರತಿಮೆಗೆ ಮಂಗಳಾರತಿ ಮಾಡಿದ್ದಾರೆ. ಸ್ಥಳದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ಮಾಡಲಾಗಿದೆ. ಸದ್ಯ ಮೂರ್ತಿ ಪ್ರತಿಷ್ಠಾಪನೆ ಕಾರ್ಯ ಮುಕ್ತಾಯವಾಗಿದ್ದು, ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಸಂಗೊಳ್ಳಿ ರಾಯಣ್ಣ ಪ್ರತಿಮೆ ಧ್ವಂಸ ಪ್ರಕರಣ ಬೆಳಗಾವಿಯಲ್ಲಿ ಎಂಇಎಸ್ ಕಾರ್ಯಕರ್ತರು ಸಂಗೊಳ್ಳಿ ರಾಯಣ್ಣ ಪ್ರತಿಮೆ (ಡಿಸೆಂಬರ್ 18) ದ್ವಂಸ ಮಾಡಿದ ಘಟನೆಯಿಂದ ರಾಜ್ಯದಲ್ಲಿ ಪರಿಸ್ಥತಿ ಉದ್ವಗ್ನಗೊಂಡಿತ್ತು. ಶುಕ್ರವಾರ ರಾತ್ರಿ ಎಂಇಎಸ್ ಕಾರ್ಯಕರ್ತರು ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆಯನ್ನು ದ್ವಂಸಗೊಳಿಸಿದ್ದರು. ಈ ಸಂಬಂಧ ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಹಿನ್ನಲೆಯಲ್ಲಿ ಕನ್ನಡಪರ ಹೋರಾಟಗಾರರು ತೀವ್ರ ಪ್ರತಿಭಟನೆ ನಡೆಸುತ್ತಿದ್ದಾರೆ. ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಬೆಂಗಳೂರಿನಲ್ಲಿ ಮರಾಠಿ ಜನ ವಾಸಿಸುವ ಕಾಲೋನಿ ಸೇರಿದಂತೆ ಎಲ್ಲೆಡೆ ಪೊಲೀಸರನ್ನು ನಿಯೋಜನೆ ಮಾಡಿ ಬಂದೋಬಸ್ತ್ ಮಾಡಲು ಸೂಚನೆ ನೀಡಲಾಗಿತ್ತು.
ಸಂಗೊಳ್ಳಿ ರಾಯಣ್ಣ ಪ್ರತಿಮೆ ಧ್ವಂಸ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಜಕೀಯ ಮುಖಂಡರ ಪ್ರತಿಕ್ರಿಯೆ
ಡಿಕೆ ಶಿವಕುಮಾರ್ ಪ್ರತಿಕ್ರಿಯೆ ಸಂಗೊಳ್ಳಿ ರಾಯಣ್ಣ ಪುತ್ಥಳಿ ದ್ವಂಸ ಪ್ರಕರಣಕ್ಕೆ ಸಂಬಂಧಸಿ ಡಿಕೆ ಶಿವಕುಮಾರ್ ಮಾತನಾಡಿ, ಕೆಲ ಪುಂಡರು ಈ ಕೆಲಸ ಮಾಡಿದ್ದಾರೆ, ಎಂಇಎಸ್ ಅವರು ಈ ಕೆಲಸ ಮಾಡಿದ್ದಾರೆ ಅಂತ ನಾನು ಹೇಳಲ್ಲ ಈ ಬಗ್ಗೆ ತನಿಖೆಯಾಗಬೇಕು. ಸಂಗೋಳ್ಳಿರಾಯಣ್ಣ ನಮ್ಮ ದೇಶದ ಸ್ವಾತಂತ್ರ್ಯ ಹೋರಾಟಗಾರರು, ಕೆಲ ಪೊಲೀಸರಿಂದ ನೈತಿಕ ಪೊಲೀಸ್ ಗಿರಿ ಅವಕಾಶ ಸಿಕ್ಕಿದೆ ಎಂಬ ವಿಚಾರವಿದೆ ಅದನ್ನು ಈಗ ಚರ್ಚೆ ಮಾಡುವುದು ಬೇಡ ಕರ್ನಾಟಕ ಶಾಂತಿಯ ತೋಟ ಅದನ್ನೆಲ್ಲ ನಾವು ಉಳಿಸಬೇಕು ಎಂದು ದೊಡ್ಡಬಳ್ಳಾಪುರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಸಿದ್ದರಾಮಯ್ಯ ಪ್ರತಿಕ್ರಿಯೆ ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ದ್ವಂಸಗೊಳಿಸಿದ್ದರ ಬಗ್ಗೆ ಇದು ದೇಶ ದ್ರೋಹದ ಕೃತ್ಯ–ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ದೊಡ್ಡಬಳ್ಳಾಪುರದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಈ ಬಗ್ಗೆ ಮಾತನಾಡಿದ್ದು,,ಸಂಗೊಳ್ಳಿ ರಾಯಣ್ಣ ಈ ದೇಶದ ಸ್ವಾಭಿಮಾನಿ, ದೇಶ ಭಕ್ತ. ಇಂತಹ ಘಟನೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ಇದನ್ನೂ ಓದಿ:
Published On - 1:40 pm, Sun, 19 December 21