‘ಫರ್ಜಿ’ ವೆಬ್ ಸೀರೀಸ್ ನೋಡಿ ಖೋಟಾ ನೋಟ್ ದಂಧೆ; ಈ ಗ್ಯಾಂಗ್ ಪೊಲೀಸ್ ಖೆಡ್ಡಾಗೆ ಬಿದ್ದಿದ್ದೆ ರಣರೋಚಕ
ಕರ್ನಾಟಕ-ಮಹಾರಾಷ್ಟ್ರ ಗಡಿಯಲ್ಲಿ ಖೋಟಾ ನೋಟ್ ದಂಧೆ ಜೋರಾಗಿದೆ. ರಾತ್ರೋ ರಾತ್ರಿ ದುಡ್ಡು ಮಾಡುವ ಕುಳಗಳಿಗೆ ಈ ‘ಫರ್ಜಿ ಗ್ಯಾಂಗ್’ ಟಾರ್ಗೆಟ್ ಮಾಡುತ್ತಿತ್ತು. ಫರ್ಜಿ ವೆಬ್ ಸೀರೀಸ್ ನೋಡಿ ದಂಧೆಗಿಳಿದಿದ್ದ ಗ್ಯಾಂಗ್, ಹಿಂಡಲಗಾ ಜೈಲು ಪಾಲಾಗಿದ್ದೆ ರಣರೋಚಕ. ಇದೇ ಪ್ರಕರಣದಲ್ಲಿ ಖಾಕಿ ಶಾಮೀಲ್ ಆಗಿರೋ ಮಾತುಗಳು ಕೇಳಿ ಬರುತ್ತಿದ್ದು, ಈ ದಂಧೆಯ ಇನ್ನಷ್ಟು ಕರಾಳ ಸತ್ಯ ಪೊಲೀಸ್ ತನಿಖೆಯಿಂದ ಬಯಲಿಗೆ ಬರಬೇಕಿದೆ.
ಬೆಳಗಾವಿ, ಜು.03: ಇತ್ತಿಚೇಗೆ ಓಟಿಟಿಯಲ್ಲಿ ಧೂಳೆಬ್ಬಿಸಿದ ಶಾಹೀದ್ ಕಪೂರ್ ಹಾಗೂ ವಿಜಯ್ ಸೇತುಪತಿ ಅಭಿನಯದ ‘ಫರ್ಜಿ’ ವೆಬ್ ಸೀರಿಸ್(Farzi web series) ಯಾರ ನೋಡಿಲ್ಲ ಹೇಳಿ. ಅದೇ ವೆಬ್ ಸೀರಿಸ್ ನೋಡಿಕೊಂಡೇ ಕರ್ನಾಟಕ-ಮಹಾರಾಷ್ಟ್ರ ಗಡಿಯಲ್ಲಿಈ ಗ್ಯಾಂಗ್ ಹುಟ್ಟಿಕೊಂಡಿತ್ತು. ಹಣ ಮಾಡುವ ದುರಾಸೆಗೆ ಬಿದ್ದು ಖೋಟಾ ನೋಟ್ ಪ್ರಿಂಟ್ ಮಾಡ್ತಿದ್ದ ಗ್ಯಾಂಗ್, ಕಡೆಗೂ ಖಾಕಿ ಖೆಡ್ಡಾಗೆ ಬಿದ್ದಿದೆ. ಈ ಫರ್ಜಿ ಗ್ಯಾಂಗ್ ಹೆಡೆಮುರಿ ಕಟ್ಟುವಲ್ಲಿ ಬೆಳಗಾವಿ ಜಿಲ್ಲೆಯ ಗೋಕಾಕ್ ಪೊಲೀಸರು ಯಶಸ್ವಿಯಾಗಿದ್ದಾರೆ.
ಈ ಗ್ಯಾಂಗ್ನ ಪ್ರಮುಖ ಆರೋಪಿ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಅರಬಾವಿ ಗ್ರಾಮದವನು. ಈ ಗ್ರಾಮದಿಂದ ಕೆಲವೇ ಕಿಲೋ ಮೀಟರ್ ಅಂತರದಲ್ಲಿ ಮಹಾಲಿಂಗಪುರ ಪಟ್ಟಣ ಬರುತ್ತದೆ. ಜೂನ್ .29ರಂದು ಬೆಳಗಾವಿ ಜಿಲ್ಲೆಯ ಗೋಕಾಕ್ ನಾಕಾದಿಂದ ಕಡಬಗಟ್ಟಿ ಮಾರ್ಗವಾಗಿ ಬೆಳಗಾವಿಗೆ ಬಿಳಿ ಬಣ್ಣದ ಸ್ವಿಫ್ಟ್ ಕಾರಿನಲ್ಲಿ ಖೋಟಾ ನೋಟು ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಗೋಕಾಕ್ ಗ್ರಾಮೀಣ ಪೊಲೀಸರಿಗೆ ಬಂದಿತ್ತು. ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಪೊಲೀಸರು, ಸುಮಾರು 33 ಲಕ್ಷದ 96 ಸಾವಿರ ಮೌಲ್ಯದ 500 ರೂಪಾಯಿ ಮುಖ ಬೆಲೆಯ 6,792 ನೋಟುಗಳು, 100 ರೂಪಾಯಿ ಮುಖಬೆಲೆಯ 305 ಖೋಟಾ ನೋಟುಗಳು ಸಿಕ್ಕಿದ್ದವು.
ಇದನ್ನೂ ಓದಿ:ಬೆಂಗಳೂರು: ಯೂಟ್ಯೂಬ್ ನೋಡಿ ನಕಲಿ ನೋಟು ತಯಾರಿ ಮಾಡುತ್ತಿದ್ದವನನ್ನ ಬಂಧಿಸಿದ ಪೊಲೀಸರು
ಈ ಪ್ರಕರಣದ ಬೆನ್ನು ಬಿದ್ದ ಪೊಲೀಸರು ಕೂಡಲೇ ಕಾರಿನಲ್ಲಿದ್ದವರನ್ನ ಠಾಣೆಗೆ ತಂದು ವರ್ಕೌಟ್ ಮಾಡಿದಾಗ ಖೋಟಾ ನೋಟು ಪ್ರಿಂಟ್ ಮಾಡುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಮೂಡಲಗಿ ತಾಲೂಕಿನ ಅರಬಾವಿ ಅನ್ವರ್ ಯಾದವಾಡ ಮನೆ ಮೇಲೆ ದಾಳಿ ಮಾಡಿದಾಗ ನೋಟ್ ಪ್ರಿಂಟ್ ಮಾಡುವ ಸಾಮಾಗ್ರಿಗಳು ಸಿಕ್ಕಿವೆ. ಆರು ಆರೋಪಿಗಳ ವಶಕ್ಕೆ ಪಡೆದು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಒಳ್ಳೆಯ ಕ್ವಾಲಿಟಿ ಪೇಪರ್, ಪ್ರಿಂಟಿಂಗ್ ಮಷಿನ್, ಬೈಂಡಿಂಗ್ ಮಷಿನ್, ಕಲರ್, ಶೈನಿಂಗ್ ಸ್ಟಿಕರ್, ಕಟರ್ ಬ್ಲೇಡ್, ಸ್ಕ್ರೀನಿಂಗ್ ಬೋರ್ಡ್ ಸಿಕ್ಕಿದ್ದು, 500 ಹಾಗೂ 100 ರೂಪಾಯಿ ಮುಖ ಬೆಲೆಯ ನೋಟ್ ಪ್ರಿಂಟ್ ಮಾಡುತ್ತಿರುವ ಅಂಶ ಬೆಳಕಿಗೆ ಬಂದಿದೆ. ಇನ್ನು ಪ್ರಕರಣದಲ್ಲಿ ಅರಬಾವಿಯ ನಿವಾಸಿ ಅನ್ವರ್ ಯಾದವಾಡ್, ಮಹಾಲಿಂಗಪುರದ ನಿವಾಸಿಗಳಾದ ಸದ್ದಾಂ ಯಡಹಳ್ಳಿ, ರವಿ ಹ್ಯಾಗಾಡಿ, ದುಂಡಪ್ಪ ಒಣಶೆಣವಿ, ವಿಠ್ಠಲ್ ಹೊಸಕೋಟೆ, ಮಲ್ಲಪ್ಪ ಕುಂಬಾಳಿಯನ್ನು ಬಂಧಿಸಿ ಹೆಚ್ಚಿನ ವಿಚಾರಣೆ ಕೈಗೊಂಡಿದ್ದಾರೆ.
ಇನ್ನು ಖೋಟಾ ನೋಟು ಪ್ರಿಂಟ್ ಮಾಡುತ್ತಿದ್ದ ಈ ಗ್ಯಾಂಗ್ ಒಂದು ಲಕ್ಷ ಮೌಲ್ಯದ ಅಸಲಿ ನೋಟುಗಳನ್ನು ಪಡೆದು ಮೂರರಿಂದ ಆರು ಲಕ್ಷ ಖೋಟಾ ನೋಟುಗಳನ್ನು ನೀಡುತ್ತಿದ್ದರಂತೆ. ಕತ್ತಲೆಯಲ್ಲಿ ಪ್ರಿಂಟ್ ಮಾಡಿ ಹಣ ದುಪ್ಪಟ್ಟು ಮಾಡಿಕೊಳ್ಳಬೇಕು ಎನ್ನುವವರನ್ನು ಹುಡುಕಿ ಡಬಲ್ ಹಣ ಮಾಡಿಕೊಡುತ್ತೇವೆ ಎಂದು ನಂಬಿಸಿ ಅಸಲಿ ನೋಟಿಟ್ಟು, ಒಳಗೆ ಈ ನಕಲಿ ನೋಟುಗಳನ್ನಿಟ್ಟು ವ್ಯವಹಾರ ಮಾಡುತ್ತಿದ್ದರು. ಅಸಲಿ ನೋಟು ಸಿಗ್ತಿದ್ದಂತೆ ಅಲ್ಲಿಂದ ಈ ಟೀಮ್ ಎಸ್ಕೇಪ್ ಆಗು್ತ್ತಿತ್ತು. ಈ ರೀತಿ ಸಾಕಷ್ಟು ಜನರಿಗೆ ಮೋಸ ಮಾಡಿದ್ದು, ಆದರೆ ಯಾರು ಠಾಣೆ ಮೆಟ್ಟಿಲೇರಿಲ್ಲ. ಎರಡು ವರ್ಷಗಳಿಂದ ಈ ದಂಧೆ ಮಾಡಿಕೊಂಡು ಬಂದಿರುವ ಗ್ಯಾಂಗ್, ಸಾಕಷ್ಟು ಜನರಿಗೆ ವಂಚನೆ ಮಾಡಿರುವ ಸಾಧ್ಯತೆ ಇದ್ದು, ಅದನ್ನ ಕೂಡ ತನಿಖೆ ನಡೆಸಲಾಗುತ್ತಿದೆ.
ಬೆಳಗಾವಿ-ಮಹಾರಾಷ್ಟ್ರ ಗಡಿಯಲ್ಲಿ ಒಂದೇ ವರ್ಷದಲ್ಲಿ ಎರಡನೇ ಪ್ರಕರಣ ಇದಾಗಿದ್ದು, ಈ ಕೇಸ್ ಹಿಂದೆ ಮತ್ತ್ಯಾರಾದರೂ ಇದ್ದಾರಾ ಎನ್ನೋದನ್ನ ಕೂಡ ಸದ್ಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಒಟ್ಟಿನಲ್ಲಿ ಖೋಟಾ ನೋಟ್ ದಂಧೆಯ ಅಸಲಿ ಮುಖವಾಡ ಬಿಚ್ಚಿಡಲು ಫರ್ಜಿ ವೆಬ್ ಸೀರೀಸ್ ಮೂಲಕ ಅನಾವಣಗೊಳಿಸಿದ್ರೆ. ಅದೇ ವೆಬ್ ಸೀರೀಸ್ ನೋಡಿ ಗ್ಯಾಂಗ್ ಕಟ್ಟಿಕೊಂಡು ಖೋಟಾ ನೋಟು ದಂಧೆ ಮಾಡ್ತಿದ್ದು, ಪೊಲೀಸರಿಗೂ ಅಚ್ಚರಿಯೂಂಟು ಮಾಡಿದೆ. ಈ ಗ್ಯಾಂಗ್‌ಗೆ ಪೊಲೀಸರು ಸಹ ಸಾಥ್ ನೀಡುತ್ತಿದ್ದರೂ ಎಂಬ ಆರೋಪ ಕೇಳಿ ಬಂದಿದೆ. ಪೊಲೀಸರು ಭಾಗಿಯಾಗಿದರೂ ಅವರನ್ನು ಬಿಡಲ್ಲ ಎಂದು ಎಸ್ಪಿ ಹೇಳಿದ್ದು, ಪೊಲೀಸ್ ತನಿಖೆಯಲ್ಲಿ ಇನ್ನಷ್ಟು ಸತ್ಯ ಬಯಲಿಗೆ ಬರಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ