ಬೆಳಗಾವಿ: ಪುರಾಣದಲ್ಲಿ ಕೃಷ್ಣನ ಬಾಯಲ್ಲಿ ತಾಯಿ ದೇವಕಿ ಬ್ರಹ್ಮಾಂಡವನ್ನೇ ಕಂಡಳು. ಆದರೆ ಈ ಕಲಿಯುಗದಲ್ಲಿ ಭಕ್ತನ ಗಂಟಲಲ್ಲಿ ಪುಟ್ಟ ಕೃಷ್ಣ ವಿಗ್ರಹ ರೂಪದಲ್ಲಿ ಹೋಗಿ ಸಿಕ್ಕಿ ಹಾಕಿಕೊಂಡಿದ್ದಾನೆ. 45 ವರ್ಷದ ವ್ಯಕ್ತಿಯ ಗಂಟಲಲ್ಲಿ ಕೃಷ್ಣನ ಪುಟ್ಟ ವಿಗ್ರಹ(Krishna Idol) ಪತ್ತೆಯಾಗಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಆತ ದೇವರ ಭಕ್ತ ಎಂದಿನಂತೆ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾನೆ. ಇದಾದ ಬಳಿಕ ಪುಟ್ಟ ಕೃಷ್ಣನ ವಿಗ್ರಹಕ್ಕೆ ಪೂಜೆ ಸಲ್ಲಿಸಿ ತೀರ್ಥದಲ್ಲಿರಿಸಿದ್ದಾನೆ. ಕೆಲ ನಿಮಿಷಗಳ ಬಳಿಕ ತೀರ್ಥವನ್ನ ಕುಡಿದು ಬಿಟ್ಟಿದ್ದಾನೆ. ಆದ್ರೆ ಆ ತೀರ್ಥದಲ್ಲಿ ಹಾಕಿದ್ದ ವಿಗ್ರಹವನ್ನು ಗಮನಿಸದೆ ಅಚಾತುರ್ಯ ನಡೆದಿದ್ದು ವ್ಯಕ್ತಿಯ ಗಂಟಲಿಗೆ ಹೋಗಿ ವಿಗ್ರಹ ಸಿಕ್ಕಿ ಹಾಕಿಕೊಂಡಿದೆ.
ಬೆಳಗಾವಿ ನಗರದಲ್ಲಿ 45 ವರ್ಷದ ವ್ಯಕ್ತಿ ತೀರ್ಥದ ಜೊತೆಗೆ ಕೃಷ್ಣನ ಪುಟ್ಟ ವಿಗ್ರಹ ಕೂಡ ನುಂಗಿ ಫಜಿತಿ ಮಾಡಿಕೊಂಡಿದ್ದಾರೆ. ವಿಗ್ರಹ ನುಂಗುತ್ತಿದ್ದಂತೆ ಕೆಲವೇ ಗಂಟೆಗಳಲ್ಲಿ ಗಂಟಲು ಊದಿಕೊಂಡು ನೋವು ಕಾಣಿಸಿಕೊಳ್ಳಲಾರಂಭಿಸಿದೆ. ಆರಂಭದಲ್ಲಿ ಆತನಿಗೂ ಏನು ನುಂಗಿದ್ದೇನೆ ಅನ್ನೋ ವಿಚಾರ ಕೂಡ ಗೊತ್ತಿರುವುದಿಲ್ಲ, ಕೂಡಲೇ ಬೆಳಗಾವಿಯ ಕೆಎಲ್ಇ ಆಸ್ಪತ್ರೆಗೆ ದಾಖಲಾಗಿದ್ದಾನೆ. ತಪಾಸಣೆ ಮಾಡಿದ ವೈದ್ಯರು ಎಕ್ಸರೇ ಮಾಡಿದಾಗ ಗಂಟಲಿನಲ್ಲಿ ಕೃಷ್ಣನಿರುವುದು ಗೊತ್ತಾಗಿದೆ.
ಕಂಠದಲ್ಲಿದ್ದ ಕೃಷ್ಣ, ಯಶಸ್ವಿ ಶಸ್ತ್ರಚಿಕಿತ್ಸೆ ಮೂಲಕ ವಿಗ್ರಹ ಹೊರತೆಗೆದ ವೈದ್ಯರು 45 ವರ್ಷದ ವ್ಯಕ್ತಿಯ ಗಂಟಲಿನಲ್ಲಿ ಕೃಷ್ಣನ ವಿಗ್ರಹ ಇರುವುದು ಗೊತ್ತಾಗಿ ವೈದ್ಯರು ಅಲರ್ಟ್ ಆಗಿದ್ದಾರೆ. ಎಕ್ಸರೆಯನ್ನ ಗಮನಿಸಿ ಯಾವ ರೀತಿ ಮತ್ತು ಯಾವ ಜಾಗದಲ್ಲಿ ವಿಗ್ರಹ ಇದೆ ಅನ್ನೋದನ್ನ ಗಮನಿಸಿದ್ದಾರೆ. ಕೃಷ್ಣನ ಮೂರ್ತಿಯ ಎಡಗಾಲು ವ್ಯಕ್ತಿಯ ಆಹಾರ ನಾಳದಲ್ಲಿ ಸಿಲುಕಿದೆ ಎಂಬುವುದನ್ನು ಎಂಡೋಸ್ಕೋಪ್ ಮುಖಾಂತರ ದೃಢಪಡಿಸಿಕೊಂಡಿದ್ದಾರೆ. ಈ ಶಸ್ತ್ರ ಚಿಕಿತ್ಸೆ ವೈದ್ಯರಿಗೆ ಕೂಡ ಸವಾಲಾಗಿ ಮಾರ್ಪಟ್ಟಿತ್ತು. ಸ್ವಲ್ಪ ಯಾಮಾರಿದ್ರೂ ಧ್ವನಿ ಪೆಟ್ಟಿಗೆಗೂ ಮತ್ತು ಅನ್ನನಾಳಕ್ಕೂ ತೊಂದರೆ ಆಗುತ್ತಿತ್ತು. ಆದ್ರೇ ವೈದ್ಯರು ಸರಿಯಾಗಿ ಪ್ಲ್ಯಾನ್ ಮಾಡಿಕೊಂಡು ಆಪರೇಷನ್ ಗಿಳಿದು ಇದೀಗ ಇಎನ್ ಟಿ ವಿಭಾಗದ ವೈದ್ಯರು ಯಶಸ್ವಿ ಶಸ್ತ್ರ ಚಿಕಿತ್ಸೆ ಮಾಡಿ ಗಂಟಲಿನಲ್ಲಿ ಸಿಲುಕಿದ್ದ ಕೃಷ್ಣನ ವಿಗ್ರಹವನ್ನು ಹೊರ ತೆಗೆದಿದ್ದಾರೆ. ಸದ್ಯ ವ್ಯಕ್ತಿ ಗುಣಮುಖರಾಗುತ್ತಿದ್ದು ಚಿಕಿತ್ಸೆ ಮುಂದುವರೆದಿದೆ ಇನ್ನೊಂದು ವಾರದಲ್ಲಿ ಆಸ್ಪತ್ರೆಯಿಂದ ಬಿಡುಗಡೆ ಕೂಡ ಆಗಲಿದ್ದಾರೆ ಅಂತಾ ವೈದ್ಯರು ತಿಳಿಸಿದ್ದಾರೆ. ಇದನ್ನೂ ಓದಿ: CWG 2022: ಕಾಮನ್ವೆಲ್ತ್ ಕ್ರೀಡಾಕೂಟಕ್ಕೆ ಭಾರತ ಮಹಿಳಾ ಹಾಕಿ ತಂಡ ಪ್ರಕಟ; ರಾಣಿ ರಾಂಪಾಲ್ ಅಲಭ್ಯ
ವೈದ್ಯರ ಕಾರ್ಯಕ್ಕೆ ಮೆಚ್ಚುಗೆ ಅಷ್ಟಕ್ಕೂ ಇಲ್ಲಿ ಶಸ್ತ್ರ ಚಿಕಿತ್ಸೆ ಮಾಡಿ ಕೃಷ್ಣನ ವಿಗ್ರಹವನ್ನ ಹೊರತೆಗೆದ ವೈದ್ಯರಿಗೆ ಇದೀಗ ವ್ಯಕ್ತಿಯ ಕುಟುಂಬಸ್ಥರು ಹಾಗೂ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಕೆಎಲ್ಇ ಆಸ್ಪತ್ರೆಯ ಇಎನ್ ಟಿ ವಿಭಾಗದ ವೈದ್ಯರಾದ ಡಾ.ಪ್ರೀತಿ ಹಜಾರೆ, ಡಾ.ವಿನಿತಾ ಮೆಡಗುಡ್ಡಮಠ, ಅರವಳಿಕೆ ವೈದ್ಯ ಡಾ. ಚೈತನ್ಯ ಕಾಮತ್ ಸೇರಿದಂತೆ ಇತರ ಶುಶ್ರೂಷೆಯರ ಸಹಾಯದಿಂದ ರೋಗಿಯ ಗಂಟಲಿನಲ್ಲಿರುವ ಕೃಷ್ಣನ ವಿಗ್ರಹವನ್ನು ಶಸ್ತ್ರ ಚಿಕಿತ್ಸೆ ಮೂಲಕ ಹೊರತೆಗೆದು ಯಶಸ್ವಿಯಾಗಿದ್ದಾರೆ. ಶಸ್ತ್ರಚಿಕಿತ್ಸೆ ನೆರವೇರಿಸಿದ ವೈದ್ಯರ ತಂಡವನ್ನು ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ, ಆಡಳಿತ ಮಂಡಳಿ ಸದಸ್ಯರು, ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಎಂ.ವಿ ಜಾಲಿ ಅಭಿನಂದಿಸಿದ್ದಾರೆ.
ವರದಿ: ಸಹದೇವ ಮಾನೆ, ಟಿವಿ9 ಬೆಳಗಾವಿ