ಯಾವುದೇ ತೀರ್ಮಾನ ಕೈಗೊಳ್ಳದ ಸರ್ಕಾರಕ್ಕೆ ಕಬ್ಬು ಬೆಳೆಗಾರರಿಂದ ಮತ್ತೊಂದು ಎಚ್ಚರಿಕೆ ಸಂದೇಶ
ಸರ್ಕಾರದ ವಿರುದ್ಧ ರೈತರು ನಿಗಿ ನಿಗಿ ಅಂತಿದ್ದಾರೆ. 9 ದಿನಗಳಿಂದ ಬೆಳಗಾವಿಯಲ್ಲಿ ಹೊತ್ತಿ ಉರಿಯುತ್ತಿರುವ ಕಬ್ಬಿನ ಜ್ವಾಲೆ ಜಿಲ್ಲೆ ಜಿಲ್ಲೆಗೂ ವ್ಯಾಪಿಸಿದೆ. ಯಾವುದೇ ತೀರ್ಮಾನ ಕೈಗೊಳ್ಳದ ಸರ್ಕಾರಕ್ಕೆ ಕಬ್ಬು ಬೆಳೆಗಾರರಿಂದ ಮತ್ತೊಂದು ಎಚ್ಚರಿಕೆ ಸಂದೇಶ ನೀಡಲಾಗಿದೆ. ಪುಣೆ-ಬೆಂಗಳೂರು ಹೆದ್ದಾರಿ ಬಂದ್ ಮಾಡಿ ಧರಣಿ ಮಾಡುವುದಾಗಿ ಹಸಿರು ಸೇನೆ ರೈತ ಸಂಘದ ರಾಜ್ಯಾಧ್ಯಕ್ಷ ಚೂನಪ್ಪ ಪೂಜಾರಿ ಹೇಳಿದ್ದಾರೆ.

ಬೆಳಗಾವಿ, ನವೆಂಬರ್ 07: ಕಳೆದ 9 ದಿನಗಳಿಂದ ಬೆಳಗಾವಿಯಲ್ಲಿ (Belagavi) ಕಬ್ಬು ಬೆಳೆಗಾರರು ಹೋರಾಟ (Sugarcane Farmers’ protest) ನಡೆಸುತ್ತಿದ್ದಾರೆ. ಕಬ್ಬಿಗೆ ಬೆಂಬಲ ಬೆಲೆ ನಿಗದಿ ಮಾಡುವಂತೆ ಹೋರಾಟ ತೀವ್ರಗೊಳ್ಳುತ್ತಿದ್ದಂತೆ ಇತ್ತ ಸರ್ಕಾರ ಸಭೆ ಮೇಲೆ ಸಭೆ ಮಾಡಿದೆ. ಯಾವುದೇ ತೀರ್ಮಾನ ಕೈಗೊಳ್ಳದ ಸರ್ಕಾರಕ್ಕೆ ಇದೀಗ ಕಬ್ಬು ಬೆಳೆಗಾರರು ಮತ್ತೊಂದು ಎಚ್ಚರಿಕೆ ಸಂದೇಶ ನೀಡಿದ್ದಾರೆ. ನಾಳೆ ಒಂದು ದಿನ ಟೈಮ್ ಇದೆ, ಅಷ್ಟರಲ್ಲಿ ಘೋಷಣೆ ಮಾಡಲಿ. ಇಲ್ಲದಿದ್ರೆ ನಾಡಿದ್ದು ಪುಣೆ-ಬೆಂಗಳೂರು ಹೆದ್ದಾರಿ ಬಂದ್ ಮಾಡಿ ಧರಣಿ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಹಸಿರು ಸೇನೆ ರೈತ ಸಂಘದ ರಾಜ್ಯಾಧ್ಯಕ್ಷ ಚೂನಪ್ಪ ಪೂಜಾರಿ ಹೇಳಿದ್ದಿಷ್ಟು
ಈ ಕುರಿತಾಗಿ ಟಿವಿ9ಗೆ ಹಸಿರು ಸೇನೆ ರೈತ ಸಂಘದ ರಾಜ್ಯಾಧ್ಯಕ್ಷ ಚೂನಪ್ಪ ಪೂಜಾರಿ ಹೇಳಿಕೆ ನೀಡಿದ್ದು, ಸಿಎಂ ಅವರ ಜೊತೆಗೆ ಮಾತಾಡಿ ನಮ್ಮ ಬೇಡಿಕೆ ಹೇಳಿದ್ದೇವೆ. ಪ್ರತಿ ಟನ್ ಕಬ್ಬಿಗೆ 3,500 ರೂ ಕೊಡಬೇಕು ಅಂತಾ ಹೇಳಿದ್ದೇನೆ. ಸಕ್ಕರೆ ಕಾರ್ಖಾನೆಯವರು ಒಪ್ಪುತ್ತಿಲ್ಲ ಅಂತಾ ಸಿಎಂ ಹೇಳಿದರು. ನೀವು ಒಪ್ಪಿಸಿ ಇಲ್ಲದಿದ್ದರೆ ಸರ್ಕಾರದಿಂದ 1 ಸಾವಿರ ಕೋಟಿ ರೂ. ಕೊಡಿ ಅಂತಾ ಹೇಳಿದ್ದೇನೆ ಎಂದರು.
ಇದನ್ನೂ ಓದಿ: ಬೆಳಗಾವಿ: ಪೊಲೀಸರ ಮೇಲೆ ಕಲ್ಲು ತೂರಾಟ; ವಾಹನಗಳ ಸ್ಥಿತಿ ಹೇಗಾಗಿದೆ ನೋಡಿ
ಇನ್ನು ಕಲ್ಲುತೂರಾಟ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕಲ್ಲು ತೂರಾಟ ನಡೆಸಿದವರು ನಮ್ಮ ರೈತರಲ್ಲ. ರಸ್ತೆ ತಡೆದವರು ನಮ್ಮವರು. ಆದರೆ ಕಲ್ಲು ತೂರಿದವರು ನಮ್ಮವರಲ್ಲ. ಕಲ್ಲು ತೂರಾಟದಲ್ಲಿ ಪೊಲೀಸರಿಗೆ ಗಾಯವಾಗಿದೆ ಕ್ಷಮಿಸಿ ಎಂದು ರಾಜ್ಯಾಧ್ಯಕ್ಷ ಚೂನಪ್ಪ ಪೂಜಾರಿ ಹೇಳಿದ್ದಾರೆ.
ಬೆಳಗಾವಿ ಎಸ್ಪಿ ಭೀಮಾಶಂಕರ ಗುಳೇದ್ ಹೇಳಿದ್ದಿಷ್ಟು
ಟಿವಿ9ಗೆ ಬೆಳಗಾವಿ ಎಸ್ಪಿ ಭೀಮಾಶಂಕರ ಗುಳೇದ್ ಹೇಳಿಕೆ ನೀಡಿದ್ದು, ಹತ್ತರಗಿ ಟೋಲ್ ಬಳಿ ಕಲ್ಲು ತೂರಾಟವಾಗಿದ್ದು ದುರದೃಷ್ಟಕರ. ರೈತರು ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತಿದ್ದರು. ಕೆಲವು ಕಿಡಿಗೇಡಿಗಳು ಕಲ್ಲುತೂರಾಟ ನಡೆಸಿದ್ದಾರೆ. ಲಾಠಿಚಾರ್ಜ್ ಮಾಡದಂತೆ ಸಿಬ್ಬಂದಿಗೆ ಸೂಚನೆ ನೀಡಿದ್ದೆವು. ಕಲ್ಲು ತೂರಾಟದಲ್ಲಿ ನಮ್ಮ 6 ಸಿಬ್ಬಂದಿಗೆ ಗಾಯವಾಗಿದೆ. ಪುಣೆ-ಬೆಂಗಳೂರು ಹೆದ್ದಾರಿ ಸಂಚಾರಕ್ಕೆ ಮುಕ್ತವಾಗಿದೆ. ಏನೆಲ್ಲಾ ಹಾನಿಯಾಗಿದೆ ಎಂದು ಪರಿಶೀಲನೆ ಮಾಡುತ್ತಿದ್ದೇವೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:32 pm, Fri, 7 November 25



