ಯುವ ಗಾಯಕನ ಕೊಲೆ, ಕೇವಲ 5000 ಹಣಕ್ಕೆ ಉತ್ತರ ಕರ್ನಾಟಕ ಜನಪದ ಹಾಡುಗಾರ ದುರಂತ ಅಂತ್ಯ

ಕೇವಲ ಐದು ಸಾವಿರ ರೂಪಾಯಿಗಾಗಿ ಯುವ ಗಾಯಕನೊಬ್ಬನನ್ನು ಬರ್ಬರವಾಗಿ ಕೊಂದಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ತನ್ನದೇ ಆದ ಯೂಟ್ಯೂಬ್ ಚಾನೆಲ್‌ನಲ್ಲಿ ಹಾಡುಗಳನ್ನು ಕಂಪೋಸ್ ಮಾಡಿ ಪ್ರಕಟಿಸುತ್ತಿದ್ದ ಮಾರುತಿ, ಇತ್ತೀಚೆಗೆ ಜನಪ್ರಿಯತೆಯನ್ನು ಸಂಪಾದಿಸಿದ್ದ. ಆದರೆ, ಇದೀಗ ಜನಮಾನಸದಲ್ಲಿ ಗಾಯಕ ಉಳಿಯುತ್ತಿದ್ದಾನೆ ಎನ್ನುವ ಸಮಯದಲ್ಲಿಯೇ ಆತನ ಜೀವವನ್ನೇ ದುಷ್ಕರ್ಮಿಗಳು ಬಲಿಪಡೆದುಕೊಂಡಿದ್ದಾರೆ.

ಯುವ ಗಾಯಕನ ಕೊಲೆ, ಕೇವಲ 5000 ಹಣಕ್ಕೆ ಉತ್ತರ ಕರ್ನಾಟಕ ಜನಪದ ಹಾಡುಗಾರ ದುರಂತ ಅಂತ್ಯ
Maruthi Budihal
Edited By:

Updated on: Jul 13, 2025 | 11:38 AM

ಬೆಳಗಾವಿ (ಜುಲೈ.13): ಕೇವಲ ಐದು ಸಾವಿರ ರೂಪಾಯಿಗಾಗಿ ಯುವ ಗಾಯಕನೊಬ್ಬನನ್ನು (Singer) ಬರ್ಬರವಾಗಿ ಕೊಂದಿರುವ ಘಟನೆ ಬೆಳಗಾವಿ (Belagavi) ಜಿಲ್ಲೆಯ ರಾಯಬಾಗ ತಾಲೂಕಿನ ಬೂದಿಹಾಳ ಗ್ರಾಮದ ಬಳಿ ನಡೆದಿದೆ. ಮಾರುತಿ ಅಡಿವೆಪ್ಪ ಲಠ್ಠೆ (22) ಹತ್ಯೆಯಾದ ಯುವ ಹಾಡುಗಾರ. ಮಾರುತಿ ತನ್ನ ಸ್ನೇಹಿತನೊಂದಿಗೆ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಈರಪ್ಪ ಆ್ಯಂಡ್ ಗ್ಯಾಂಗ್ ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಕೊಚ್ಚಿ, ಬಳಿಕ ಕಾರು ಹಾಯಿಸಿ ಭೀಕರವಾಗಿ ಹತ್ಯೆ ಮಾಡಿದ್ದಾರೆ. ಉತ್ತರ ಕರ್ನಾಟಕ ((uttara karnataka )ಶೈಲಿಯಲ್ಲಿ ಹಾಡುಗಳನ್ನು ರಚಿಸಿ ಹಾಡುತ್ತಿದ್ದ ವಿಶಿಷ್ಟ ಪ್ರತಿಭಾಶಾಲಿ ಗಾಯಕ. ತನ್ನದೇ ಆದ ಯೂಟ್ಯೂಬ್ ಚಾನೆಲ್‌ನಲ್ಲಿ ಹಾಡುಗಳನ್ನು ಕಂಪೋಸ್ ಮಾಡಿ ಪ್ರಕಟಿಸುತ್ತಿದ್ದ ಮಾರುತಿ, ಇತ್ತೀಚೆಗೆ ಜನಪ್ರಿಯತೆಯನ್ನು ಸಂಪಾದಿಸಿದ್ದ. ಆದರೆ, ಇದೀಗ ಕೇವಲ ಐದೇ ಐದು ಸಾವರ ರೂಪಾಯಿಗೆ ಸಿಂಗರ್​​ ಮಾರುತಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದು, ಉತ್ತರ ಕರ್ನಾಟಕ ಸಂಗೀತ ಪ್ರೇಮಿಗಳಿಗೆ ಆಘಾತ ತಂದಿದೆ.

ಆರೋಪಿ ಈರಪ್ಪ ಅಕ್ಕಿವಾಟೆ ಬಳಿ 50 ಸಾವಿರ ರೂಪಾಯಿ ಸಾಲ ಪಡೆದಿದ್ದ ಮಾರುತಿ, ಕಬ್ಬಿನ ಕಟಾವು ಮಾಡುವ ಗ್ಯಾಂಗ್‌ನಲ್ಲಿ ಕೆಲಸ ಮಾಡುವ ನಿಟ್ಟಿನಲ್ಲಿ ಹಣ ಪಡೆದಿದ್ದ. ಒಂದಷ್ಟು ದಿನಗಳ ಕಾಲ ಕೆಲಸ ಮಾಡಿದ್ದ ಮಾರುತಿ 45 ಸಾವಿರ ರೂಪಾಯಿ ವಾಪಸ್ ಕೊಟ್ಟಿದ್ದ. ನಂತರ ತನ್ನ ಹಾಡುಗಳಿಗೆ ಭಾರೀ ಡಿಮ್ಯಾಂಡ್ ಬಂದ ಹಿನ್ನೆಲೆಯಲ್ಲಿ ಕಬ್ಬು ಕಟಾವು ಮತ್ತು ಕಾರ್ಖಾನೆಗೆ ಸಾಗಣೆ ಮಾಡುವ ಗ್ಯಾಂಗ್‌ನ ಕೆಲಸವನ್ನು ಬಿಟ್ಟು ಸಂಗೀತದ ಕಡೆಗೆ ಹೆಚ್ಚಿನ ಗಮನ ಹರಿಸುತ್ತಿದ್ದ. ಇದಕ್ಕೆ ಈರಪ್ಪನ ಕೆಂಗಣ್ಣಿಗೆ ಗುರಿಯಾಗಿತ್ತು. ಅಲ್ಲದೇ ಬಾಕಿ ಹಣ ವಾಪಸ್ ನೀಡದಕ್ಕೂ ಆಕ್ರೋಶಗೊಂಡಿದ್ದ ಈರಪ್ಪ ಗ್ಯಾಂಗ್ ಕಟ್ಟಿಕೊಂಡು ಹೋಗಿ ಮಾರುತಿಯನ್ನು ಬರ್ಬರವಾಗಿ ಹತ್ಯೆ ಮಾಡಿದೆ. ಮಾರಕಾಸ್ತ್ರಗಳಿಂದ ಕೊಚ್ಚಿ, ಬಳಿಕ ಮಾರುತಿ ಮೇಲೆ ಕಾರು ಹಾಯಿಸಿ ಭೀಕರವಾಗಿ ಹತ್ಯೆ ಮಾಡಿದ್ದಾರೆ.

ಇನ್ನು ಮಾರುತಿಗೆ ಕಾರು ಹರಿಸಿದ ದುಷ್ಕರ್ಮಿಗಳ ಕಾರು ಕೂಡ ಪಲ್ಟಿಯಾಗಿದ್ದು, ಕೆಲವರು ಗಾಯಗೊಂಡಿದ್ದಾರೆ. ಈ ವೇಳೆ ಆರೋಪಿ ಈರಪ್ಪ ಅಕ್ಕಿವಾಟೆಗೆ ಗೋಕಾಕ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಯಬಾಗ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ 11 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಈಗಾಗಲೇ ಸಿದ್ದರಾಮ ವಡೆಯರ್ ಹಾಗೂ ಆಕಾಶ್ ಪೂಜಾರಿಯನ್ನ ಬಂಧಿಸಿರುವ ಪೊಲೀಸರು, ಇತರರಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಸಹದೇವ್​ ಮಾನೆ

ಸಹದೇವ ಯಲ್ಲಪ್ಪ ಮಾನೆ. ಹುಟ್ಟಿದ್ದು ಧಾರವಾಡ ತಾಲೂಕಿನ ಗುಳೇದಕೊಪ್ಪ ಗ್ರಾಮ. ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಕಳೆದ 12 ವರ್ಷದಿಂದ ಟಿವಿ ಮಾಧ್ಯಮದಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ. 2014ರಲ್ಲಿ ಬೀದರ್ ಜಿಲ್ಲೆಯಿಂದ ವೃತ್ತಿ ಜೀವನ ಪ್ರಾರಂಭ ಮಾಡಿ ಕಲಬುರಗಿ, ಹುಬ್ಬಳ್ಳಿಯಲ್ಲಿ ಕೆಲಸ ಮಾಡಿ ಸದ್ಯ ‘ಟಿವಿ9’ ಕನ್ನಡ ಸುದ್ದಿ ವಾಹಿನಿಯಲ್ಲಿ 9ವರ್ಷಗಳಿಂದ ಬೆಳಗಾವಿ ಜಿಲ್ಲೆಯಲ್ಲಿ ಹಿರಿಯ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಬೀದರ್ ಜಿಲ್ಲೆಯಲ್ಲಿ ಅತ್ಯುತ್ತಮ ಜಿಲ್ಲಾ ವರದಿಗಾರ ಪ್ರಶಸ್ತಿ ಪಡೆದಿದ್ದು, ಗಡಿ ಜಿಲ್ಲೆ ಬೆಳಗಾವಿಯಲ್ಲಿ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಕೂಡ ದೊರೆತಿದೆ. ರೈತರ ಸಮಸ್ಯೆಗಳತ್ತ ಬೆಳಕು ಚೆಲ್ಲುವ ವರದಿ ಸೇರಿ ಗಡಿ ಸಮಸ್ಯೆ, ಕ್ರೈಮ್, ಪ್ರವಾಹ ಪರಿಸ್ಥಿತಿ, ನೆರೆಯ ಮಹಾರಾಷ್ಟ್ರ, ಗೋವಾದಲ್ಲಿನ ಬೆಳವಣಿಗೆ ಕುರಿತು ವರದಿ ಮಾಡುತ್ತಿರುವುದು ವಿಶೇಷ.

Read More
Loading...
Unable to load recommendations.
Follow Us