ಬೆಂಗಳೂರು, ಜುಲೈ 4: ಇಡೀ ಬೆಂಗಳೂರಿಗೆ(Bengaluru) ಶಾಕ್ ನೀಡಿದ್ದ ಬೇಗೂರು ಅಪಾರ್ಟ್‌ಮೆಂಟ್ ಅಸ್ಥಿಪಂಜರ ಪತ್ತೆ ಪ್ರಕರಣಕ್ಕೆ (Apartment Skeleton Case) ಈಗ ದೊಡ್ಡ ತಿರುವು ದೊರೆತಿದೆ. ಖಾಸಗಿ ಆಸ್ಪತ್ರೆಯಲ್ಲಿ ನಡೆದ ಅಸ್ಥಿಪಂಜರದ ಪರೀಕ್ಷೆಯಲ್ಲಿ ಮಹತ್ವದ ವಿಚಾರಗಳು ಬೆಳಕಿಗೆ ಬಂದಿವೆ. ಪತ್ತೆಯಾಗಿರುವ ಅಸ್ಥಿಪಂಜರ ಪುರುಷನದ್ದು ಎಂದು ಗೊತ್ತಾದ ಬೆನ್ನಲ್ಲೇ ಅನೇಕ ಪರೀಕ್ಷೆಗಳನ್ನು ನಡೆಸಲಾಯಿತು. ಈ ವೇಳೆ, ಮೂಳೆಗಳ ಮೇಲೆ ಯಾವುದೇ ಗಾಯದ ಗುರುತು ಪತ್ತೆಯಾಗದ ಹಿನ್ನೆಲೆ ಇದು ಕೊಲೆಯಲ್ಲ ಎಂಬ ವರದಿ ಬಂದಿದೆ.
ಅಸ್ಥಿಪಂಜರ ಪತ್ತೆಯಾದಗಿನಿಂದಲೂ ಕೊಲೆಯ ಅನುಮಾನ ಹೆಚ್ಚಾಗಿತ್ತು. ಆದರೆ ಪ್ರಾಥಮಿಕ ಪರೀಕ್ಷೆಯಲ್ಲಿ, ಕೊಲೆಯಲ್ಲ ಎಂಬುದು ಗೊತ್ತಾಗಿದೆ.
ಇದನ್ನೂ ಓದಿ: RTO ಕಣ್ತಪ್ಪಿಸಿ ಓಡಾಡ್ತಿದ್ದ ಐಷರಾಮಿ ಕಾರು ಸೀಜ್
ಬೇಗೂರು ಪೊಲೀಸರು 2016ರ ನಂತರ ನಾಪತ್ತೆಯಾದವರ ಕೇಸ್ಗಳ ಪರಿಶೀಲನೆಗೆ ಮುಂದಾಗಿದ್ದಾರೆ. ಯಾಕೆಂದರೆ, 2016ರಲ್ಲಿ ಅಪಾರ್ಟ್‌ಮೆಂಟ್ ಕಾಮಗಾರಿ ಪೂರ್ಣಗೊಂಡಿದ್ದು, ಅದರ ನಿರ್ಮಾಣದ ಕೊನೆ ಹಂತದಲ್ಲಿ ಇಂಗುಗುಂಡಿ ನಿರ್ಮಾಣವಾಗುತ್ತದೆ. ಹೀಗಾಗಿ 2016ರಲ್ಲಿ ಬೇಗೂರು ಸುತ್ತಮುತ್ತ ಕಾಣೆಯಾದ ಪುರುಷರ ಕೇಸ್ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಡಿಎನ್ಎ ವರದಿ ಬಂದ ನಂತರ ಕಾಣೆಯಾಗದವರ ಸಂಬಂಧಿಕರ ಡಿಎನ್ಎಗೆ ಹೋಲಿಕೆ ಮಾಡಿ ಮೃತನ ಮಾಹಿತಿ ಪತ್ತೆಮಾಡಲಾಗುತ್ತದೆ. ಈ ಎಲ್ಲ ಬೆಳವಣಿಗೆಗಳಿಂದಾಗಿ ಇದೀಗ ಅಸ್ಥಿಪಂಜರದ ಪ್ರಕರಣ ಮತ್ತಷ್ಟು ಕುತೂಹಲ ಹುಟ್ಟಿಸಿದೆ.
ವರದಿ:ಪ್ರದೀಪ್ ಚಿಕ್ಕಾಟಿ, ಬೆಂಗಳೂರು