RTO ಕಣ್ತಪ್ಪಿಸಿ ಓಡಾಡ್ತಿದ್ದ ಐಷರಾಮಿ ಕಾರು ಸೀಜ್: 1.58 ಕೋಟಿ ಟ್ಯಾಕ್ಸ್ ಕಟ್ಟಲು ಸಂಜೆಯೇ ಡೆಡ್‌ಲೈನ್
ಕೋಟಿ ಕೋಟಿ ರೂಪಾಯಿ ತೆರಿಗೆ ವಂಚಿಸಿ ಬೆಂಗಳೂರಿನಲ್ಲಿ ಜಾಲಿಯಾಗಿ ಓಡಾಡಿಕೊಂಡಿದ್ದ ಐಷರಾಮಿ ಕಾರು ಇದೀಗ ಆರ್ ಟಿಓ ಕೈಗೆ ಸಿಕ್ಕಿಬಿದ್ದಿದೆ. ಹೊರ ರಾಜ್ಯದ ಪಾಸಿಂಗ್ ಹೊಂದಿರುವ ಈ ಐಷರಾಮಿ ಕಾರು ಕೋಟ್ಯಾಂತರ ರೂಪಾಯಿ ಟ್ಯಾಕ್ಸ್ ಕಟ್ಟದೇ ಬೆಂಗಳೂರಿನಲ್ಲಿ ಓಡಾಡುತ್ತಿತ್ತು. ಈಗ ಸಿಕ್ಕಿಬಿದ್ದಿದ್ದು, ಬರೋಬ್ಬರಿ 1.58 ಕೋಟಿ ರೂಪಾಯಿ ತೆರಿಗೆ ಕಟ್ಟಲು ಸಂಜೆವರೆಗೆ ಡೆಡ್ ಲೈನ್ ನೀಡಲಾಗಿದೆ. ಹಾಗಾದ್ರೆ, ಕೋಟ್ಯಾಂತರ ರೂ. ಟ್ಯಾಕ್ಸ್ ಕಟ್ಟಬೇಕಿರುವ ಕಾರು ಯಾವುದು? ಇದರ ಬೆಲೆ ಎಷ್ಟು ಎನ್ನುವ ವಿವರ ಇಲ್ಲಿದೆ.

ಬೆಂಗಳೂರು, (ಜುಲೈ 03): ಕೋಟಿ ಕೋಟಿ ರೂಪಾಯಿ ತೆರಿಗೆ ವಂಚಿಸಿ ಬೆಂಗಳೂರಿನಲ್ಲಿ ಓಡಾಡಿಕೊಂಡಿದ್ದ ಐಷಾರಾಮಿ ಫೆರಾರಿ ಕಾರು (Ferrari Car) ಮಾಲೀಕನಿಗೆ ಆರ್‌ಟಿಓ ಅಧಿಕಾರಿಗಳು (RTO Officers) ಬಿಸಿ ಮುಟ್ಟಿಸಿದ್ದಾರೆ. 1.58 ಕೋಟಿ ಬಾಕಿ ತೆರಿಗೆ ಪಾವತಿಸಲು ಇಂದು (ಜುಲೈ 03) ಸಂಜೆ ವರೆಗೆ ಡೆಡ್‌ಲೈನ್ ನೀಡಿದ್ದಾರೆ. ಸುಮಾರು ಏಳುವರೆ ಕೋಟಿ ಮೌಲ್ಯದ ಈ ಫೆರಾರಿ ಕಾರು ಮಹಾರಾಷ್ಟ್ರ ರಿಜಿಸ್ಟ್ರೇಷನ್ ಹೊಂದಿದ್ದು, ತೆರಿಗೆ ಪಾವತಿಸದೇ ಮಾಲೀಕ ಓಡಾಡಿಕೊಂಡಿದ್ದ. ಆದ್ರೆ, ನಿನ್ನೆ(ಜುಲೈ 02) ಬೆಂಗಳೂರಿನ ಲಾಲ್ ಬಾಗ್ ಬಳಿ ಆರ್‌ಟಿಓ ಅಧಿಕಾರಿ ಈ ಕಾರು ಹಿಡಿದು ತಪಾಸಣೆ ಮಾಡಿದಾಗ ಟ್ಯಾಕ್ಸ್ ಪಾವತಿಸದಿರುವುದು ಬೆಳಕಿಗೆ ಬಂದಿದೆ. ಸದ್ಯ ಈ ಫೆರಾರಿ ಕಾರು ಆರ್ ಟಿಓ ಅಧಿಕಾರಿಗಳ ಸುಪರ್ಧಿಯಲ್ಲಿದ್ದು, ಟಾಕ್ಸ್ ಕಟ್ಟಲು ಮಾಲೀಕನಿಗೆ ಇಂದು (ಜುಲೈ 03) ಸಂಜೆ ತನಕ ಕಾಲಾವಕಾಶ ನೀಡಲಾಗಿದೆ.
ಮಹಾರಾಷ್ಟ್ರ ರಿಜಿಸ್ಟ್ರೇಷನ್ ಹೊಂದಿದ ಕಾರು ಇದಾಗಿದೆ. ಮಹಾರಾಷ್ಟ್ರದಲ್ಲಿ 20 ಲಕ್ಷ ರೂ. ತೆರಿಗೆ ಪಾವತಿಸಿ 2023ರ ಸೆಪ್ಟೆಂಬರ್‌ನಿಂದಲೂ ಕರ್ನಾಟಕದಲ್ಲಿ ಅನಧಿಕೃತವಾಗಿ ಓಡಾಟ ನಡೆಸುತ್ತಿದ್ದ. ಕಾರಿನ ಅನಧಿಕೃತ ಓಡಾಟದ ಬಗ್ಗೆ ಆರ್‌ಟಿಓಗೆ ಟ್ರಾಫಿಕ್ ಪೊಲೀಸರು (Bengaluru Traffic Police) ಮಾಹಿತಿ ನೀಡಿದ್ದರು. ಬುಧವಾರ (ಜು.2) ಬೆಂಗಳೂರಿನ ಲಾಲ್ ಬಾಗ್ ಬಳಿ ಕಾರನ್ನು ತಡೆಹಿಡಿದ ಆರ್‌ಟಿಓ ಅಧಿಕಾರಿಗಳು ತಪಾಸಣೆ ನಡೆಸಿದಾಗ ತೆರಿಗೆ ವಂಚನೆ ಮಾಡಿರುವುದು ಬೆಳಕಿಗೆ ಬಂದಿದಿದೆ.
ಇದನ್ನೂ ಓದಿ: ಬೆಂಗಳೂರಲ್ಲಿ ಆರ್‌ಟಿಒ ಅಧಿಕಾರಿಗಳ ಭರ್ಜರಿ ಕಾರ್ಯಾಚರಣೆ: ತೆರಿಗೆ ಪಾವತಿಸದ 30 ಐಷಾರಾಮಿ ಕಾರುಗಳು ಸೀಜ್
ನಂತರ ಕಾರನ್ನು ವಶಕ್ಕೆ ಪಡೆದ ಅಧಿಕಾರಿಗಳು ಜಯನಗರ 5ನೇ ಬ್ಲಾಕ್‌ನಲ್ಲಿರುವ ಮಾಲೀಕನ ನಿವಾಸದ ಮುಂದೆಯೇ ಮನೆ ಮುಂದೆಯೇ ಕಾರು ನಿಲ್ಲಿಸಿದ್ದಾರೆ. ಟ್ಯಾಕ್ಸ್ ಕಟ್ಟಲು ಕಾರು ಮಾಲೀಕರು ಸಮಯಾವಕಾಶ ಕೇಳಿದ್ದಾರೆ. ಈ ಹಿನ್ನೆಲೆ ಅಧಿಕಾರಿಗಳು ಸ್ಥಳದಲ್ಲೇ ಇದ್ದು ತೆರಿಗೆ ಪಾವತಿಸಲು ಸಂಜೆ ವರೆಗೆ ಕಾಲಾವಕಾಶ ನೀಡಿದ್ದಾರೆ.ಒಂದು ವೇಳೆ ಸಂಜೆ ವೇಳೆಗೆ 1.58 ಕೋಟಿ ತೆರಿಗೆ ಕಟ್ಟದೇ ಇದ್ದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ಅಲ್ಲಿಯ ತನಕ ಕಾರು ಆರ್‌ಟಿಓ ಅಧಿಕಾರಿಗಳ ಸುಪರ್ದಿಯಲ್ಲೇ ಇರಲಿದೆ ಎಂದು ಆರ್‌ಟಿಓ ಅಧಿಕಾರಿಗಳು ತಿಳಿಸಿದ್ದಾರೆ.
ಇದೊಂದೇ ಕಾರು ಅಲ್ಲ. ಬೆಂಗಳೂರು, ಮೈಸೂರು ಸೇರಿದಂತೆ ಇತರೆ ದೊಡ್ಡ ದೊಡ್ಡ ನಗರಗಳಲ್ಲಿ ಹೊರ ರಾಜ್ಯಗಳಲ್ಲಿ ಖರೀದಿಸಿ ತೆರಿಗೆ ಕಟ್ಟದೇ ಕರ್ನಾಟಕದಲ್ಲಿ ಓಡಾಡಿಸುತ್ತಿದ್ದಾರೆ. ಈಗಾಗಲೇ ಬೆಂಗಳೂರು, ಮೈಸೂರಿನಲ್ಲಿ ಆರ್‌ಟಿಓ ಅಧಿಕಾರಿಗಳು ತಪಾಸಣೆಗಿಳಿದಾಗ ಸಾಕಷ್ಟು ಐಷರಾಮಿಗಳು ತೆರಿಗೆ ವಂಚಿಸಿ ಓಡಾಡುತ್ತಿರುವುದು ಕಂಡುಬಂದಿವೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



